ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಠೀರವ
ಕಂಠೀರವ : 1919ರ ಏಪ್ರಿಲ್ ಒಂದನೆಯ ತಾರೀಖು ಯುಗಾದಿ ದಿನದಂದು ಮಂಗಳೂರಿನಿಂದ ಪ್ರಕಟವಾದ ವಾರಪತ್ರಿಕೆ. ಕೆಲಕಾಲ ದ್ವೈವಾರ ಪತ್ರಿಕೆಯಾಗಿ ನಡೆದು (1933-53) 1967ರ ನವೆಂಬರ್ ತಿಂಗಳಲ್ಲಿ ನಿಂತುಹೋಯಿತು.
ಬೋಳಾರು ವಿಠಲರಾಯರು ಇದರ ಪ್ರಥಮ ಸಂಪಾದಕರು ಹಾಗೂ ಪ್ರಕಾಶಕರು. ಪ್ರಾರಂಭಕಾಲದಲ್ಲಿ ಸಂಪಾದಕ ವಿಭಾಗಕ್ಕೆ ಹುರುಳಿ ಭೀಮರಾಯರು, ಕಡೆಕಾರು ಗೋಪಾಲಕೃಷ್ಣರಾಯರು, ಬೆನಗಲ್ ರಾಮರಾಯರು, ಡಿ.ಕೆ. ಭಾರದ್ವಾಜರು ಬರೆಯುತ್ತಿದ್ದರು. ಮೊದಲಿನಿಂದಲೂ ಸಂಪಾದಕೀಯವನ್ನು ಬರೆಯುತ್ತಿದ್ದ ಹುರುಳಿ ಭೀಮರಾಯರೇ 1943ರಲ್ಲಿ ಸಂಪಾದಕತ್ವವನ್ನು ವಹಿಸಿಕೊಂಡರು.
ಪತ್ರಿಕೆ ಪ್ರಾರಂಭವಾದಾಗ ಮಂಗಳೂರಿನ ಧರ್ಮಪ್ರಕಾಶ ಮುದ್ರಣಾಲಯದಲ್ಲಿ ಅಚ್ಚಾಯಿತು. ಮುಂದೆ 1923ರಿಂದ 1938ರ ವರೆಗೆ ಸರಸ್ವತಿ ಪ್ರಿಂಟಿಂಗ್ ವಕ್ರ್ಸ್ ಲಿಮಿಟೆಡ್ ಮುದ್ರಣಾಲಯದಲ್ಲಿ ಅಚ್ಚಾಗುತ್ತಿದ್ದು 1939ರಲ್ಲಿ ಒಂದು ವರ್ಷ ಮಾತ್ರ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಿನಲ್ಲಿ ಮುದ್ರಣಗೊಂಡಿತು. ಬಳಿಕ 1941ರಿಂದ ಆಚೆ ಮಂಗಳೂರು ಪ್ರೆಸ್ಸಿನಲ್ಲಿ ಮುದ್ರಣವಾಗತೊಡಗಿತು. 1943ರಿಂದ ಮಂಗಳೂರು ಪ್ರೆಸ್ಸಿನ ಒಡೆಯರಾದ ಎಂ.ಬಾಬುರಾಯ ಪ್ರಭು ಕಂಠೀರವದ ಪ್ರಕಾಶಕರಾದರು.
ಹದಿನಾರು ಪುಟಗಳು ಪತ್ರಿಕೆಯಾಗಿ ಹೊರಟ ಕಂಠೀರವ ಜನಪ್ರಿಯವಾಗಿ ಅಭಿವೃದ್ಧಿಗೊಂಡು ಒಂದು ಕಾಲಕ್ಕೆ ಮೂವತ್ತೆರಡು ಪುಟಗಳ ಪತ್ರಿಕೆಯಾಯಿತು.
ಕಳೆದ ವಾರ, ಅದಿಷ್ಟು ಇದಿಷ್ಟು, ಅದೂ ಇದೂ ಎಲ್ಲವೂ-ಎಂಬ ಒಂದಲ್ಲ ಒಂದು ಶೀರ್ಷಿಕೆಯಲ್ಲಿ ವಾರದ ವಿಶೇಷ ವಿಚಾರಗಳು; ಮಧ್ಯಪುಟದಲ್ಲಿ ಸಂಪಾದಕೀಯದ ಬಳಿಕ ವಿದೇಶ, ಹಿಂದೂದೇಶ, ಕರ್ಣಾಟಕ, ದಕ್ಷಿಣಕನ್ನಡ ಮತ್ತು ತಾಲ್ಲೂಕುಗಳ ವಾರ್ತಾಸಂಗ್ರಹ; ದಾಸಯ್ಯನ ಜೋಳಿಗೆ, ಮಿಸ್ಟರ್ ತಿಪ್ಪಯ್ಯನ ಡೈರಿ, ಮಹಮ್ಮದ್ ಸಾಹೇಬನ ಸೂಕ್ತಗಳು, ಗುಂಡನ ಗಜೇಟು ಎಂಬ ಶೀರ್ಷಿಕೆಗಳಲ್ಲಿ ಹುರುಳಿ ಭೀಮರಾಯರು ವ್ಯಂಗ್ಯಲೇಖನಗಳನ್ನು ಬರೆಯುತ್ತಿದ್ದರು. ಈ ಶೀರ್ಷಿಕೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದು ಪತ್ರಿಕೆಯ ಕೊನೆಯ ದಿನಗಳಲ್ಲಿ ಗುಂಡನ ಗಜೇಟು ಎಂಬ ಶೀರ್ಷಿಕೆಯು ಮಾತ್ರ ಉಳಿಯಿತು. ಇವುಗಳಲ್ಲದೆ ಆಗಾಗ್ಗೆ ವ್ಯಕ್ತಿಪರಿಚಯಗಳೂ ಸಣ್ಣಕಥೆಗಳೂ ಕವನಗಳೂ ಧಾರಾವಾಹಿ ಕಾದಂಬರಿಗಳೂ ಪ್ರಕಟವಾಗುತ್ತಿದ್ದುವು. ಪತ್ರವ್ಯವಹಾರ ಎಂಬ ವಿಭಾಗ ಯಾವಾಗಲೂ ಇರುತ್ತಿತ್ತು. ದ್ವೈವಾರಪತ್ರಿಕೆಯಾದಾಗ ಶುಕ್ರವಾರದ ಸಂಚಿಕೆಯಲ್ಲಿ ವಿಶೇಷ ಲೇಖನ ಮತ್ತು ಪತ್ರವ್ಯವಹಾರಗಳಿಗಿಂತ ವಾರ್ತೆಗೇ ಹೆಚ್ಚಿನ ಪ್ರಾಶಸ್ತ್ಯವಿತ್ತು.
1919ರಲ್ಲಿ ಪ್ರಾರಂಭವಾಗುವಾಗ ಮೊದಲ ಪುಟದ ಮೇಲ್ಗಡೆಯಲ್ಲಿ ಕಂಠೀರವ ಎಂಬ ಹೆಸರಿನ ಇಕ್ಕಡೆಗಳಲ್ಲಿ ಯೂನಿಯನ್ ಜಾಕ್ ಎಂಬ ಬ್ರಿಟಿಷ್ ಸಾಮ್ರಾಜ್ಯಧ್ವಜವನ್ನೆತ್ತಿ ಹಿಡಿದ ಸಿಂಹಗಳು ಕುಳಿತ ಚಿತ್ರವಿತ್ತು. ಅದರ ಕೆಳಗಡೆಯಲ್ಲಿ ಸಂಸ್ಕೃತ ಕನ್ನಡಗಳಲ್ಲಿ ಕೆಳಗಿನ ಸೂಕ್ತಿಯಿತ್ತು.
ಶ್ರೀಮದ್ಭೂಮಿತಲೇಷು ಭಾರತಮಹೀಭಾಗಃ ಪ್ರಶಾಸನ್ಮಹೀ ಪಾಲೇಷ್ವಾಂಗಲನಾಯಕೋ ನರಕುಲವ್ರಾತೇಷು ಚಾರ್ಯಾನ್ವಯಃ ಶಸ್ತಸ್ತದ್ವದಮೀಸು ಸಂವ್ಯವಹೃತಿ ಪ್ರಾಗಲ್ಭ್ಯ ಮತ್ತೋ„ನ್ವಹಂ ಜೀಯಾದ್ವಿಶ್ವಜನೀನ ವೃತ್ತಿಚ ತುರಶ್ಯ್ರೀಕಂಠಕಂಠೀರವಃ ನರರ ಕುಲಗಳೊಳಾರ್ಯವಂಶವು, ಧರೆಯ ದೇಶಗಳೊಳಗೆ ಭಾರತ, ಅರಸುತನಗಳೊಳಾಂಗ್ಲರೊಡೆತನ, ನುಡಿಗಳೊಳು ಮೆರೆವಾ ತಿರುಳುಗನ್ನಡವೊದಕ್ಕೊಂದೊಪ್ಪಿರುವ ತೆರ, ಕಂಠೀರವನು ಮೆರೆ ದಿರಲಿ ವಂಶಕೆ ಧರೆಗೆ ಅರಸಗೆ ನುಡಿಗೆ ಸೊಬಗೆನಿಸೀ
ಇದಲ್ಲದೆ ಮಧ್ಯಪುಟದಲ್ಲಿ ಸಂಪಾದಕೀಯದ ಮೇಲ್ಗಡೆ ಪತ್ರಿಕೆಯ ಹೆಸರಿನ ಕೆಳಗೆ
ವಿನಾ ನವಾರುಣಂ ನದೀನಾಯತೇ ನಿಶಾ ನವಾನಿಲಂ ವಿನಾ ಶಿಶಿರೋ ನ ಪುಷ್ಪವಾನ್
ಎಂದು ಮೊದಲಾಗುವ ಒಂದು ಶ್ಲೋಕವಿತ್ತು. ಮುಂದೆ ದೇಶದ ರಾಜಕೀಯ ವಾತಾವರಣಕ್ಕನುಗುಣವಾಗಿ ಕಂಠೀರವ ತನ್ನ ಧೋರಣೆಯನ್ನು ಬದಲಾಯಿಸಿಕೊಂಡಾಗ ಸಿಂಹಗಳು ಹಿಡಿದಿದ್ದ ಆಂಗ್ಲ ಸಾಮ್ರಾಜ್ಯಧ್ವಜ ಬಿದ್ದುಹೋಗಿ ಬರೇ ಸಿಂಹಗಳೆರಡು ಮಾತ್ರ ಉಳಿದುವು. ಅದರೊಂದಿಗೆ ಸಂಸ್ಕೃತ ಕನ್ನಡ ಶ್ಲೋಕಗಳೂ ಮಾಯವಾದುವು.
ಈ ಪತ್ರಿಕೆಯಲ್ಲಿ ಮೊದಮೊದಲು ಪಂಜೆ ಮಂಗೇಶರಾವ್, ಮಂಜೇಶ್ವರ ಗೋವಿಂದ ಪೈ, ಎಂ.ಎನ್.ಕಾಮತ್, ಉಳ್ಳಾಲ, ಮಂಗೇಶರಾವ್ ಮುಂತಾದವರು ಬರೆಯುತ್ತಿದ್ದರು. ಅನಂತರ ಜೆ.ವಾಮನಭಟ್ಟ, ಕಡೆಂಗೋಡ್ಲು ಶಂಕರ ಭಟ್ಟ, ಕುಡ್ಪಿ ವಾಸುದೇವ ಶೆಣೈ, ಬಿ. ಶಂಕರಭಟ್ಟ ಮುಂತಾದವರೂ ಬರೆಯುತ್ತಿದ್ದರಲ್ಲದೆ ಜಿಲ್ಲೆಯ ಹೊರಗಿನ ವಿದ್ವಾಂಸರು ವಿಶೇಷ ಲೇಖನಗಳನ್ನೂ ಬರೆಯುತ್ತಿದ್ದರು. ಕಂಠೀರವ ದಸರಾ ವಿಶೇಷ ಸಂಚಿಕೆಗಳನ್ನೂ ರಾಜ್ಯೋತ್ಸವ ವಿಶೇಷ ಸಂಚಿಕೆಗಳನ್ನೂ ಪ್ರಕಟಿಸಿದೆ.
ಸ್ಪಷ್ಟವಾದ ಹಾಗೂ ತೀಕ್ಷ್ಣವಾದ ಸಂಪಾದಕೀಯಕ್ಕಾಗಿ ಕಂಠೀರವ ಪ್ರಸಿದ್ಧವಾಗಿತ್ತು. ಅದರಲ್ಲಿನ ಪತ್ರವ್ಯವಹಾರ ಅದೇ ರೀತಿಯಲ್ಲಿ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಿತ್ತು. ತನ್ನ ಧೋರಣೆ ಹಾಗೂ ಬರೆಹಗಳಿಗಾಗಿ ಕೆಲಕಾಲ ಅಂದಿನ ಮೈಸೂರು ಸಂಸ್ಥಾನದಲ್ಲಿ ಈ ಪತ್ರಿಕೆ ಬಹಿಷ್ಕಾರಕ್ಕೊಳಗಾಗಿತ್ತು.
ಕರ್ಣಾಟಕ ಏಕೀಕರಣ ಎಂಬ ಸಂಪಾದಕೀಯದ (23-5-1933) ಒಂದು ವಾಕ್ಯ ಹೀಗಿದೆ: ಹಲವು ಸರ್ಕಾರಗಳ ಆಡಳಿತಕ್ಕೆ ಒಳಪಟ್ಟು ಯಾವ ಮುಖಂಡ ಮಹನೀಯರ ಬೆಂಬಲವೂ ಇಲ್ಲದ ನಮ್ಮ ಅನಾಥ ದರಿದ್ರಕರ್ಣಾಟಕ ಈ ಮಹತ್ಕಾರ್ಯವನ್ನು ಸಾಧಿಸುವುದೆಂದರೆ ಸ್ವಪ್ನಪ್ರಾಯವಲ್ಲವೇ ಎಂದು ಹಲವರು ತಿಳಿಯಬಹುದಾದರೂ ಕನ್ನಡಿಗರು ತಮ್ಮ ನಿದ್ರಾವಸ್ಥೆಯಿಂದ ಎಚ್ಚೆತ್ತು ಏಕೀಕರಣ ಸದ್ಯದಲ್ಲೇ ಸಾಧಿಸದಿದ್ದರೂ ಅದು ಸಮೀಪಗತವಾಗುವುದರಲ್ಲಿ ಸಂದೇಹವಿಲ್ಲ.
1964 ಗಣರಾಜ್ಯೋತ್ಸವದ ದಿನದಂದು ದೀಕ್ಷಾದಿನವೆಂದು ಬರೆದ ಅಗ್ರಲೇಖನದ ಭಾಗ ಒಂದು ಹೀಗಿದೆ : ಈವೊತ್ತು ನಮ್ಮದು ಪ್ರಜಾರಾಜ್ಯ. ಅದನ್ನು ಉಳಿಸಿ ಬೆಳೆಸಲು, ಆ ಕರ್ತವ್ಯ ಸಾಧಿಸಲು ನಾವು ಇಂದು ದೀಕ್ಷಾಬದ್ಧರಾಗಬೇಕಾಗಿದೆ. ಕಷ್ಟ ಕಾರ್ಪಣ್ಯ, ದುಃಖ ಯಾತನೆ, ಲೋಕಕ್ಕೆಲ್ಲ ಇರುವಂತೆ ನಮಗೂ ತಪ್ಪಿದ್ದಲ್ಲ. ಅದೇನಿದ್ದರೂ ಅದು ವ್ಯಕ್ತಿಗೂ ಸಮಾಜಗಳಿಗೂ ಅನ್ವಯಿಸುವಂಥದು. ರಾಷ್ಟ್ರ ಅಂಥ ವ್ಯಕ್ತಿಗಳಿಗೂ ಸಮಾಜಗಳಿಗೂ ಅತಿ ಹೆಚ್ಚಿನದು. ಆ ರಾಷ್ಟ್ರ ಕಲ್ಯಾಣವಾದರೇನೇ ಆ ರಾಷ್ಟ್ರದ ಮತ್ತು ಸಮಾಜದ ಹಿತಸಾಧನೆಯಾಗುತ್ತದೆ. ಇದಕ್ಕೆ ಬೇರೆ ದಾರಿಯಿಲ್ಲ. ಅಂತಲೇ ನಾವು ಇಂದು ರಾಷ್ಟ್ರ ಉದ್ಧಾರದ ದಿಸೆಯಲ್ಲಿ ಕೆಲಕೆಲವು ದೀಕ್ಷಾಕ್ರಮಗಳನ್ನು ಕೈಕೊಳ್ಳಲೇಬೇಕಾಗುವುದು. (ಪಿ.ಕೆ.ಎನ್.)