ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಡಗರಿಗೆ
ಕಂಡಗರಿಗೆ : ಮೀಲಿಯೇಸೀ ಕುಟುಂಬಕ್ಕೆ ಸೇರಿದ ಸಿಡ್ರೆಲ್ಲ ಟೂನ ಅಥವಾ ಟೂನ ಸಿಲಿಯೇಟ ಎಂಬ ವೈಜ್ಞಾನಿಕ ಹೆಸರುಳ್ಳ ದೊಡ್ಡ ಮರ. ಮಂಡುಕರಿಕೆ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ರೆಡ್ ಸಿಡಾರ್ ಎನ್ನುತ್ತಾರೆ. ಪ್ರಮುಖವಾಗಿ ಹಿಮಾಲಯದ ಅರಣ್ಯಗಳಲ್ಲಿ 4,000' ಎತ್ತರದವರೆಗೂ ಹರಡಿರುವ ಇದು ಬಂಗಾಲ, ಅಸ್ಸಾಂ ಮತ್ತು ಪಶ್ಚಿಮಘಟ್ಟಗಳಲ್ಲೂ ಕಾಣಬರುತ್ತದೆ. ಮೈಸೂರು ರಾಜ್ಯದಲ್ಲಿ ಕೊಡಗಿನ ಕಾಫಿತೋಟಗಳಲ್ಲಿ ಇದನ್ನು ಬೆಳೆಸಿರುವುದನ್ನು ನೋಡಬಹುದು. ಇದು ತೇವಪುರಿತ ಗೋಡುಮಣ್ಣಿನ ನೆಲದಲ್ಲಿ ಮತ್ತು ವರ್ಷಕ್ಕೆ 45"-160" ಮಳೆಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದು, ವಾತಾವರಣದ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ತಡೆದುಕೊಳ್ಳುವ ಶಕ್ತಿ ಇದಕ್ಕೆ ಇದೆ.
ಸು. 70'-100' ಎತ್ತರಕ್ಕೆ ಬೆಳೆಯುವ ಈ ಮರಕ್ಕೆ 6'-10' ದಪ್ಪದ ಕಾಂಡವಿದೆ. ಎಲೆಗಳು ಬೇವಿನ ಎಲೆಯಂತೆ, ಜೋಡಣೆ ಪರ್ಯಾಯ ರೀತಿಯದು, ಚಳಿಗಾಲದಲ್ಲಿ ಉದುರಿಹೋಗುತ್ತವೆ. ಫೆಬ್ರವರಿ-ಏಪ್ರಿಲ್ ತಿಂಗಳುಗಳು ಹೂ ಬಿಡುವ ಕಾಲ. ಹೂಗಳು ದ್ವಿಲಿಂಗಿಗಳು. ಬಣ್ಣ ಬಿಳಿ, ಸಣ್ಣ ರೆಂಬೆಗಳ ತುದಿಯಲ್ಲಿನ ಸಂಕೀರ್ಣ ಪುಷ್ಪಗುಚ್ಛದಲ್ಲಿ ಜೋಡಣೆಗೊಂಡಿವೆ. ಪುಷ್ಪದಳ ಐದು. ಬಿಡಿಬಿಡಿಯಾಗಿವೆ. ಕೇಸರಗಳೂ 4-6, ಬಿಡಿಯಾಗಿವೆ. ಕೆಲವೊಮ್ಮೆ ಬರಡು ಕೇಸರಗಳೂ ಇರುವುದುಂಟು. ಅಂಡಾಶಯ ಉಚ್ಚಸ್ಥಾನದ್ದು; ಅಂಡಕಗಳಿವೆ. ಕಾಯಿ ಸಂಪುಟ (ಕ್ಯಾಪ್ಸ್ಯುಲ್) ಮಾದರಿಯದು. ಬೀಜಗಳು ಬಲು ಸಣ್ಣವು (ಸು. 15,300 ಬೀಜಗಳು ಕೇವಲ ಒಂದು ಔನ್ಸು ತೂಗುತ್ತವೆ). ಸಹಜವಾಗಿ ಬೀಜ ಮೊಳೆಯುವುದು ತುಂಬ ಕಡಿಮೆ. ಶೇಖರಿಸಿ ನರ್ಸರಿಗಳಲ್ಲಿ ಬಿತ್ತಿದರೆ ಸು.70%ರಷ್ಟು ಬೀಜಗಳು ಮೊಳೆತು ಸಸಿಗಳಾಗುತ್ತವೆ.
ಕಂಡಗರಿಗೆಯ ರಸಕಾಷ್ಠ (ಸ್ಯಾಪ್ವುಡ್) ಸ್ವಲ್ಪ ಕೆಂಪು ಅಥವಾ ಬೂದುಮಿಶ್ರಿತ ಬಿಳಿ ಬಣ್ಣದ್ದು. ಚೇಗು (ಹಾರ್ಟ್ವುಡ್) ಹೊಸದಾಗಿ ಕತ್ತರಿಸಿದಾಗ ಕೆಂಪು ಬಣ್ಣದ್ದಾಗಿದ್ದು ಕ್ರಮೇಣ ಕಂದು ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಹಗುರ ನೆರ ಕಣ ವಿನ್ಯಾಸ ಮತ್ತು ಮಧ್ಯಮದರ್ಜೆಯ ಗಡುಸುಳ್ಳದ್ದು. ಇದನ್ನು ಪೀಠೋಪಕರಣ, ಮೇಲ್ಚಾವಣಿ, ಬಾಗಿಲು, ಟೀ ಪೆಟ್ಟಿಗೆಗಳು ಮುಂತಾದವನ್ನು ಮಾಡಲೂ ನೆಲದ ಮೇಲೆ ಹಾಸಲೂ ಉಪಯೋಗಿಸುತ್ತಾರೆ. ಹೂಗಳಲ್ಲಿ ನಿಕ್ಟ್ಯಾಂತಿನ್ ಎಂಬ ಕೆಂಪುಬಣ್ಣದ ವಸ್ತು ಹಾಗೂ ಫ್ಲೇವೋನ್ ಮತ್ತು ಫ್ಲೇವೊನಾಲ್ ಎಂಬ ಬಣ್ಣಗಳೂ ಇವೆ. ಬಂಗಾಳದಲ್ಲಿ ಹೂಗಳಿಂದ ಗುನಾರಿ ಎಂಬ ಬಣ್ಣವನ್ನು ತಯಾರಿಸುತ್ತಾರೆ. ಅಲ್ಲದೆ ಅವನ್ನು ಕುಸುಬೆ ಹೂ ಮತ್ತು ಅರಿಸಿನಗಳ ಜೊತೆಯಲ್ಲಿ ಸೇರಿಸಿ ಬಸಂತಿ ಎಂಬ ಗಂಧಕದ ಹಳದಿ ಬಣ್ಣವನ್ನು ಪಡೆಯಬಹುದು. ಆಯುರ್ವೇದ ಔಷಧ ಪದ್ಧತಿಯಲ್ಲಿ ಕಂಡಗರಿಗೆಯ ಉಪಯೋಗ ಉಂಟು. ಇದರ ತೊಗಟೆಗೆ ಬಂಧಕ (ಆಸ್ಟ್ರಿಂಜೆಂಟ್) ಮತ್ತು ಕಾಲಿಕ ಜ್ವರರೋಧಕ (ಆ್ಯಂಟಿಪೀರಿಯಾಡಿಕ್) ಗುಣಗಳಿವೆ. ಇದನ್ನು ಎಳೆಯಕೂಸುಗಳಿಗೆ ಬರುವ ಆಮಶಂಕೆಯ ನಿವಾರಣೆಗೂ ವ್ರಣಗಳ ಬಾಹ್ಯಲೇಪನಕ್ಕೂ ಬಳಸುತ್ತಾರೆ. (ಎಸ್.ಆರ್.ಜಿ.)