ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಡಬತ್ತದ ಹುಲ್ಲು

ವಿಕಿಸೋರ್ಸ್ದಿಂದ

ಕಂಡಬತ್ತದ ಹುಲ್ಲು : ಏಕದಳ ಸಸ್ಯ ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ತೃಣಸಸ್ಯ; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು. ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು. ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. ಭಾರತದ ಪ್ರಸ್ಥಭೂಮಿ ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು ಹುಲ್ಲುಗಾವಲುಗಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.

ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು ದನಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು ಮೈಸೂರಿನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. ಕ್ಷಾಮ ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ. (ಎಸ್.ಆರ್.ಜಿ.)