ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂದಕ
ಗೋಚರ
ಕಂದಕ : ಅಗಲ ಕಿರಿದಾಗಿ, ಕಡಿದಾದ ಬದಿಗಳಿರುವ, ಆಳವಾದ ಮತ್ತು ಉದ್ದವಾದ ಕಾಲುವೆ (ಟ್ರೆಂಚ್). ಅಗಲದಲ್ಲಿಯೂ ವಿಸ್ತಾರದಲ್ಲಿಯೂ ಕಣಿವೆಗಿಂತ ಚಿಕ್ಕದು. ಕಂದಕಗಳು ನೈಸರ್ಗಿಕವಾಗಿರಬಹುದು-ಸಮುದ್ರತಳಗಳಲ್ಲಿ. ಗುಡ್ಡ ಪ್ರದೇಶಗಳಲ್ಲಿ ಇರುವಂತೆ; ಬೆಟ್ಟದ ನೆತ್ತಿಯಲ್ಲಿರುವ ಕೋಟೆ ಕೊತ್ತಳಗಳಿಗೆ ಸಹಜ ಕಂದಕಗಳೇ ಕಾಪು ನೀಡುತ್ತವೆ. ಯುದ್ಧ ಮತ್ತು ಗಣಿ ಉದ್ಯಮಗಳಲ್ಲಿ ಮನುಷ್ಯ ತನಗೆ ಬೇಕಾದೆಡೆ ಕಂದಕಗಳನ್ನು ನಿರ್ಮಾಣಮಾಡಿಕೊಂಡಿರುವುದೂ ಉಂಟು. ಭೂಮೇಲ್ಮೈ ಅಥವಾ ಅದರ ಹತ್ತಿರ ಸಿಗಬಹುದಾದ ಅದಿರನ್ನು ಪತ್ತೆ ಮಾಡಿ ಅದರ ಮೌಲ್ಯ ಮೂಲ ಮತ್ತು ವಿಸ್ತಾರಗಳನ್ನು ಕಂಡುಹಿಡಿಯಲು ಸರಣಿಯಲ್ಲಿ ಕಂದಕ ತೋಡುತ್ತಾರೆ. ಆಧುನಿಕ ಅಗೆಯುವ ಯಂತ್ರಗಳಿಂದ ತೋಡುವ ಕೆಲಸ ಈಚೆಗೆ ಸುಲಭವಾಗಿದೆ. (ನೋಡಿ-ಅಗೆಯುವ-ಯಂತ್ರಗಳು) ಯುದ್ಧಕಾರ್ಯದಲ್ಲಿ ಕಂದಕದ ಪ್ರಯೋಜನವನ್ನು ತಿಳಿಯಲು (ನೋಡಿ-ಕಂದಕ-ಯುದ್ಧ). (ಟಿ.ಟಿ.)