ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಬದಕಡ ಯೋಜನೆ
ಕಂಬದಕಡ ಯೋಜನೆ : ಇದು ಕಾವೇರಿ ನದಿಯ ನೀರನ್ನು ಬಳಸಿಕೊಳ್ಳುವ ಒಂದು ಯೋಜನೆ. ಸು. 2,500 ಎಕರೆ ಜಮೀನಿಗೆ ಪುರೈಸುವ ಯೋಜನೆ ವೆಚ್ಚ ಸು.190 ಲಕ್ಷ ರೂಪಾಯಿ. ಇದರ ಬದಲಾಗಿ ಇನ್ನೆರಡು ಯೋಜನೆಗಳನ್ನು ಸೂಚಿಸಬೇಕೆಂದು ಸರ್ಕಾರ ಆದೇಶವಿತ್ತಿತು. ಹೊಸಪಟ್ಟಣದ ಕಾವೇರಿ ನೀರಾವರಿ ಯೋಜನೆ ಇವುಗಳಲ್ಲೊಂದು. ಇದನ್ನೇ ಕೆಲವೊಮ್ಮೆ ಕಂಬದಕಡ ಯೋಜನೆಯೆಂದು ಕರೆಯುವುದುಂಟು. ಸೋಮವಾರಪೇಟೆ ತಾಲ್ಲೂಕಿನ ಹೊಸಪಟ್ಟಣದ ಬಳಿ ಕಾವೇರಿ ನದಿಗೆ ಒಂದು ಕಟ್ಟೆ ಕಟ್ಟಿ ಸು. 5,110 ದಶಲಕ್ಷ ಘನ ಅಡಿ ನೀರನ್ನು ಶೇಖರಿಸುವುದು ಇದರ ಉದ್ದೇಶ. ಈ ಕಟ್ಟೆಯ ಬಲದಂಡೆ ಕಾಲುವೆಯ ನೀರು ಸು. 4,200 ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿ, ಕೊನೆಗೆ ಹಾರಂಗಿ ನೀರಾವರಿ ಯೋಜನೆಯ ಬಲಭಾಗದ ಶಾಖೆಯ ಕಾಲುವೆಯನ್ನು ಸೇರಿ ಸು. 15,800 ಎಕರೆ ಅಧಿಕ ಪ್ರಮಾಣದ ಭೂಮಿಗೆ ನೀರನ್ನೊದಗಿಸುವುದು. ಸು.4,200 ಎಕರೆಗಳಲ್ಲಿ ಬೆಳೆಯುವ, ವರ್ಷಕ್ಕೆ ಎರಡು ಬತ್ತದ ಬೆಳೆ ಮತ್ತು ಸು. 15,800 ಎಕರೆಗಳಲ್ಲಿ ಕಬ್ಬಿನ ಬೆಳೆ-ಈ ಯೋಜನೆಯಿಂದ ನೀರಿನ ಸೌಲಭ್ಯವನ್ನು ಪಡೆಯುವುವು. ಈ ಯೋಜನೆಯ ಒಟ್ಟು ವೆಚ್ಚ ಸು. 500 ಲಕ್ಷ ರೂಪಾಯಿ.
ಈ ಕಟ್ಟೆ ಗುಡ್ಡೆಹೊಸೂರಿನಿಂದ ಸು. 8 ಕಿಮೀ ದೂರದ ಹೊಸಪಟ್ಟಣದ ಬಳಿ ಇದೆ. ಕುಶಾಲನಗರದಿಂದ ಇಲ್ಲಿಗೆ ಸು. 12 ಕಿಮೀ ದೂರ. ಕಟ್ಟೆಯ ಉದ್ದ 4,975' ಅಡಿ 1516 ಮೀ ನದಿಯ ತಳಭಾಗದಿಂದ ಕಟ್ಟೆಯ ಎತ್ತರ ಸು. 25.6 ಮೀ ಇದರ ಜಲ ಶೇಖರಣಾ ಸಾಮಥರ್ಯ್ ಸು. 6,100 ದಶಲಕ್ಷ ಘನ ಅಡಿಗಳು. ಜಲಾಶಯ ಸು. 5,057 ಎಕರೆಯಷ್ಟು ಭೂಮಿಯನ್ನು ಆವರಿಸುವುದು. ಇದರಲ್ಲಿ 2,304 ಎಕರೆ ಖಾಸಗೀ ಆಸ್ತಿಯೂ ಸು. 2,753 ಕಾಡುಪ್ರದೇಶವೂ ಸೇರಿವೆ. ಕರ್ನಾಟಕದ ಪಾಲಿನ ಕಾವೇರಿ ನದಿಯ ನೀರಿನಲ್ಲಿ ಸು. 5,650 ದಶಲಕ್ಷ ಘನ ಅಡಿ ನೀರು ಇಲ್ಲಿ ಬಳಕೆ ಆಗುವುದು. (ಕೆ.ಸಿ.ಜಿ.)