ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಬನ್

ವಿಕಿಸೋರ್ಸ್ದಿಂದ

ಕಂಬನ್ : ತಮಿಳುನಾಡಿನ ಪ್ರಮುಖ ಕವಿಗಳ ಸಾಲಿನಲ್ಲಿ ಮೊದಲಿಗನೆನಿಸಿದವ. ರಾಮಾಯಣದ ಕರ್ತೃ. ಕಾಲ 9ನೆಯ ಅಥವಾ 12ನೆಯ ಶತಮಾನವೆಂದೂ ಅಭಿಪ್ರಾಯಭೇದವಿದೆ. ಈ ಹೆಸರು ಕವಿಗೆ ಹೇಗೆ ಬಂತೆಂಬುದನ್ನು ಹಲವು ರೀತಿಯಲ್ಲಿ ವಿವರಿಸುತ್ತಾರೆ. ಕಾಳಿಕಾಲಯದ ಧ್ವಜಸ್ತಂಭದಡಿಯಲ್ಲಿ ಅನಾಥಶಿಶುವಾಗಿ ಬಿದ್ದಿದ್ದ ಈತನನ್ನು ಉದಾರಿಯೊಬ್ಬ ಸ್ವೀಕರಿಸಿ ಬೆಳೆಸಿದುದರಿಂದ ಈ ಹೆಸರು ಬಂತೆಂದು ಕೆಲವರು ಹೇಳುತ್ತಾರೆ. ಕಾಂಚೀಪುರದ ದೇವರ ಹೆಸರಾದ ಏಕಂಬನ್ ಎಂಬುದೇ ಕಂಬನ್ ಎಂದಾಯಿತೆಂದು ಮತ್ತೆ ಕೆಲವರು ಹೇಳುತ್ತಾರೆ. ಕಂಬಂಗೊಲ್ಲೈ-ಎಂದರೆ ನವಣೆಯ ಹೊಲವನ್ನು ಕಾದುಕೊಂಡಿದ್ದುದರಿಂದ ಕಂಬನ್ ಎಂಬ ಹೆಸರು ಬಂತೆಂದು ಇನ್ನು ಕೆಲವರು ಹೇಳುತ್ತಾರೆ. ಕವಿ ಚೋಳ ನಾಡಿನ ತಿರುವಳಂದೂರಿನಲ್ಲಿ ಉವಚ್ಚರ್ (ಒಂದು ನೀಚಕುಲ) ಎಂಬ ಜಾತಿಗೆ ಸೇರಿದವನೆಂದು ಪ್ರತೀತಿ, ತಂದೆಯ ಹೆಸರು ಆದಿತ್ತರ್ ಎಂದು ಕೆಲವರ ಊಹೆ, ಇವನನ್ನು ಸಲಹಿದ ಉದಾರಿ ತಿರುವೆಣ್ಣೈನಲ್ಲೂರಿಗೆ ಸೇರಿದ ಜಡೆಯಪ್ಪ. ಸಲಹಿದವನಿಗೆ ತನ್ನ ಕೃತಜ್ಞತೆಯನ್ನು ತೋರಿಸುವುಕ್ಕಾಗಿ, ಕಾವ್ಯದಲ್ಲಿ ಕವಿ ಸಾವಿರ ಪದ್ಯಗಳಿಗೊಮ್ಮೆ ಆತನ ಹೆಸರನ್ನು ಸೂಚಿಸಿ ಹೊಗಳಿದ್ದಾನೆ. ಕಂಬನ್ ವೈಷ್ಣವ ಸಂಪ್ರದಾಯಕ್ಕೆ ಸೇರಿದವನಾದರೂ ಇತರ ಧರ್ಮಗಳನ್ನು ಕಿಂಚಿತ್ತೂ ಹೀನೈಸಿಲ್ಲ. ಕಂಬನ ಮಗನೇ ಅಂಬಿಕಾಪತಿ, ಇವನೂ ಕವಿಯೇ, ಕೊನೆಯಲ್ಲಿ ಕಂಬನ್ ರಾಮನಾಥಪುರ ಜಿಲ್ಲೆಯ ನಾಟ್ಟರಸನ್ಕೋಟೆಯೆಂಬಲ್ಲಿ ಕಾಲವಾದನೆಂದು ತಿಳಿಯುತ್ತದೆ. ಆ ಊರಿನಲ್ಲಿ ಕವಿಯ ಸಮಾಧಿಯಿದೆ. ಸಂಸ್ಕೃತದಲ್ಲಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣವನ್ನು ಕಂಬನ್ ತಮಿಳಿನಲ್ಲಿ ಬರೆದಿದ್ದಾನೆ. ಇಡೀ ಕಾವ್ಯದಲ್ಲಿ 10 ಸಾವಿರಕ್ಕಿಂತ ಮೇಲ್ಪಟ್ಟು ಪದ್ಯಗಳಿವೆ. ಇದು ಶ್ರೀರಂಗಂನಲ್ಲಿ ಪ್ರಕಟವಾಯಿತು. ಈ ಕಾವ್ಯಕ್ಕೆ ವಾಲ್ಮೀಕಿ ರಾಮಾಯಣ ಆಧಾರವಾಗಿದ್ದರೂ ತಮಿಳು ಸಂಪ್ರದಾಯ, ರೀತಿನೀತಿಗಳಿಗನುಸಾರವಾದ ಅನೇಕ ಮಾರ್ಪಾಟುಗಳೂ ಸನ್ನಿವೇಶ ಮತ್ತು ವ್ಯಕ್ತಿಚಿತ್ರಣದಲ್ಲಿ ವ್ಯತ್ಯಾಸಗಳೂ ಆಗಿರುವುದನ್ನು ಗಮನಿಸಬೇಕಾಗುತ್ತದೆ. ಬಿಲ್ಲನ್ನು ಮುರಿಯುವ ಮೊದಲೇ ರಾಮ ಸೀತೆಯನ್ನು ನೋಡುತ್ತಾನಲ್ಲದೆ ಪರಸ್ಪರರಿಗೆ ಪ್ರೇಮವಂಕುರಿಸುತ್ತದೆ-ಎಂಬ ಅಂಶವನ್ನು ನೋಡಬಹುದು. ಇದು ವಾಲ್ಮೀಕಿ ರಾಮಾಯಣದಲ್ಲಿಲ್ಲ. ಹಾಗೆಯೇ ಸೀತೆಯನ್ನು ರಾವಣ ಕದ್ದುಕೊಂಡೊಯ್ಯುವಾಗ ಅವನು ಅವಳನ್ನು ಸ್ಪರ್ಶಿಸದೆ, ಪರ್ಣಶಾಲಾಸಮೇತ ಎತ್ತಿಕೊಂಡು ಹೋದನೆಂಬುದು ಸಹ ಮುಖ್ಯಮಾರ್ಪಾಡು. ಮಾಯಾಜನಕ ವೃತ್ತಾಂತ, ಹಿರಣ್ಯವಧೆಯ ಸಂದರ್ಭಗಳು ಕವಿ ಮಾಡಿಕೊಂಡ ಹೊಸ ಕಲ್ಪನೆಗಳು. ಗುಹ ತಾರೆಯರಂಥ ಪಾತ್ರಗಳನ್ನು ಕವಿ ಉತ್ತಮಗೊಳಿಸಿದ್ದಾನೆ. ಒಟ್ಟಿನಲ್ಲಿ ಕಂಬರಾಮಾಯಣ ತಮಿಳಿನಲ್ಲಿ ಅತ್ಯಂತ ಉತ್ತಮ ಕಾವ್ಯ. ಗುಣದಲ್ಲೂ ಗಾತ್ರದಲ್ಲೂ ಹಿರಿದಾದುದೆಂಬ ಹೊಗಳಿಕೆಗೆ ಪಾತ್ರವಾಗಿದೆ. ಕಾವ್ಯ ಲಕ್ಷಣಗಳನ್ನೆಲ್ಲ ಚೆನ್ನಾಗಿ ಕಲಿತ ಕಂಬನ್ ತನ್ನ ಕಾವ್ಯದಲ್ಲಿ ಅವನ್ನು ಸರಿಯಾಗಿ ಹೊಂದಿಸುತ್ತಾನೆ. ಸಂಸ್ಕೃತಭಾಷಾಪರಿಚಯ, ಲೋಕಾನುಭವ, ಆಳವಾದ ಪಾಂಡಿತ್ಯ ಮತ್ತು ಉತ್ಸಾಹಗಳನ್ನುಳ್ಳವ ಕಂಬನ್, ಪಾತ್ರಗಳಿಗೆ ಸಂದರ್ಭಗಳಿಗೆ ತಕ್ಕಂತೆ. ಸಹಜತೆಯನ್ನು ಮಾತಿನಲ್ಲಿ, ದೃಶ್ಯದಲ್ಲಿ, ಛಂದಸ್ಸಿನ ಮಾಧುರ್ಯದಲ್ಲಿ, ತಂದಿರುವುದನ್ನು ಕಾವ್ಯದುದ್ದಕ್ಕೂ ಕಾಣಬಹುದು. ರಚನೆಯಲ್ಲಿ ಆಳವಾದ ಅರ್ಥ, ನಯ, ನಾಜೂಕು, ಇಂಪಾದ ಛಂದೋಲಯ, ಅರ್ಥಸ್ಪಷ್ಟತೆ, ಸಂಕ್ಷಿಪ್ತತೆ, ರಸಪುರ್ಣತೆ, ಸುಂದರ ಉಪಮೆಗಳ ಮೇಳ-ಇವುಗಳಿಂದ ಹೊಮ್ಮುವ ಕಾವ್ಯಸೌಂದರ್ಯದ ಉತ್ಕರ್ಷವನ್ನು ಕಾಣುತ್ತೇವೆ. ಸನ್ನಿವೇಶ ಸಂದರ್ಭಗಳನ್ನು ವರ್ಣಿಸುವುದರಲ್ಲಿ ಕಂಬನ್ ಅಪ್ರತಿಮ. ಕಾವ್ಯದುದ್ದಕ್ಕೂ ನಾಟಕೀಯತೆ ಎದ್ದು ಕಾಣುತ್ತದೆ. ಸಹೋದರಪ್ರೇಮ, ಪತಿವ್ರತಾಮಹಿಮೆ, ಶಿಷ್ಟರ ಉನ್ನತಿ, ದುಷ್ಟರ ಅವನತಿ. ದೈವಭಕ್ತಿ-ಇವನ್ನೆಲ್ಲ ಕಾವ್ಯದಲ್ಲಿ ಕವಿ ಎತ್ತಿಹಿಡಿದಿದ್ದಾನೆ. ಇಂಥ ಗುಣ ಗಳಿರುವುದರಿಂದಲೇ ಕಂಬನನ್ನು ಕವಿಚಕ್ರವರ್ತಿ ಎಂದು ಜನಸಾಮಾನ್ಯರೂ ಪಂಡಿತರೂ ಕೊಂಡಾಡುತ್ತಾರೆ. ವಿದ್ಯೆಯಲ್ಲಿ ಕಂಬನ್ ಬಲ್ಲಿದನೆಂಬುದಕ್ಕೆ ಕಂಬರ್ ವೀಟ್ಟು ಕಟ್ಟುತರಿಯುಂ ಕವಿಪಾಡುಂ-ಎಂದರೆ ಕಂಬನ ಮನೆಯ ಕೈಮಗ್ಗವೂ ಕವಿತೆಯನ್ನು ಹಾಡುವುದು-ಎಂಬ ನಾಣ್ಣುಡಿ ಸಾಕ್ಷಿಯಾಗಿದೆ. ತಮಿಳಿಗೆ ಗತಿ ಇಬ್ಬರೇ-ಒಬ್ಬ ಕಂಬನ್, ಇನ್ನೊಬ್ಬ ತಿರುವಳ್ಳುವರ್-ಎಂಬ ಜನಪ್ರಶಂಸೆ ಸಾರ್ಥಕವಾದುದಾಗಿದೆ. ಎಲ್ಲರೂ ಇಲ್ಲವೆನ್ನದವ ರಾಗಬೇಕು, ಅತುಳೈಶ್ವರ್ಯವನ್ನು ಹೊಂದಿದವರಾಗಬೇಕು-ಇಂಥ ಸುಖದಿಂದ ಬಾಳುವ ಜನರಿರುವ ನಾಡಿನ ಕನಸು ಕಾಣುತ್ತಾನೆ-ಕಂಬನ್.

ಉಳುವವರ ಹಿರಿಮೆಯನ್ನು ಏರ್ ಎಳುವದು-ಎಂಬ ತನ್ನ ಎಪ್ಪತ್ತು ಹಾಡುಗಳಲ್ಲಿಯೂ ಬೇಸಾಯಗಾರರು ಎಂಥ ಉಪಕಾರಿಗಳು ಎಂಬುದನ್ನು ತಿರುಕ್ಕೈವಳಕ್ಕಂ ಎಂಬ ಗ್ರಂಥದಲ್ಲಿಯೂ ಕಂಬನ್ ತೋರಿಸಿದ್ದಾನೆ. ಮತ್ತೆ ನಮ್ಮಾಳ್ವಾರರನ್ನು ಹೊಗಳುವ ಶಡಗೋಪರಂತಾದಿ, ಸರಸ್ವತಿಯನ್ನು ಸ್ತುತಿಸುವ ಸರಸ್ವತಿ ಅಂತಾದಿ ಎಂಬ ಗ್ರಂಥಗಳನ್ನೂ ಅಲ್ಲದೆ ಇತರ ಕವಿತೆಗಳನ್ನೂ ಈತ ರಚಿಸಿದ್ದಾನೆ. ಪುಗಳ್ ಕಂಬನ್ ಪಿರಂದ ತಮಿಳ್ನಾಡ್ (ಶ್ರೇಷ್ಠ ಕವಿ ಕಂಬನುದಿಸಿದ ತಮಿಳುನಾಡು) ಎಂಬ ಕವಿತೆಯನ್ನೂ ನಾವು ತಿಳಿದ ಕವಿಗಳಲ್ಲಿ ಕಂಬನಂಥ ಕವಿಗಳು ಭೂಮಿಯಲ್ಲಿ ಎಲ್ಲಿಯೂ ಹುಟ್ಟಲಿಲ್ಲ-ಎಂದರ್ಥ ಬರುವ ಮತ್ತೊಂದು ಹಾಡನ್ನೂ ಕವಿ ಭಾರತಿಯವರು ರಚಿಸಿದ್ದಾರೆ. ಕಂಬನ್ ಭಾರತದ ಇತರ ಶ್ರೇಷ್ಠ ಕವಿಗಳ ಅಗ್ರಸಾಲಿನಲ್ಲಿ ಸೇರತಕ್ಕವನಾಗಿದ್ದಾನೆ. (ಎಸ್.ಪಿ.ಟಿ.)