ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಗ್ಗಲಿ

ವಿಕಿಸೋರ್ಸ್ದಿಂದ

ಕಗ್ಗಲಿ : ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ಅಕೇಸಿಯ ಕ್ಯಾಟಿಚೂ ಎಂಬ ಪ್ರಭೇದದ ಮರ. ಇದಕ್ಕೆ ಕಚ್ಮರ ಎಂಬ ವಾಣಿಜ್ಯನಾಮವೂ ಉಂಟು. ತಮಿಳಿನಲ್ಲಿ ಇದನ್ನು ಕರಂಗಲಿ ಎನ್ನುತ್ತಾರೆ. ಇದು ಅತಿಯಾಗಿ ತೇವವುಳ್ಳ ಪ್ರದೇಶಗಳನ್ನು ಬಿಟ್ಟು ನಾನಾ ತರಹೆಯ ನೆಲಗಳಲ್ಲಿ ಸಾಧಾರಣವಾಗಿ ತೋಪುಗಳಾಗಿ ಬೆಳೆಯುತ್ತದೆ. ಬಿಸಿಲಿದ್ದಷ್ಟೂ ಈ ಗಿಡ ಚೆನ್ನಾಗಿ ಬೆಳೆಯುತ್ತದೆ. ಮರ ಮಧ್ಯ ಪ್ರಮಾಣದ್ದು. ಕೊಂಬೆಗಳಲ್ಲಿ ಬಗ್ಗಿದ ಮೊನಚಾದ ಮುಳ್ಳುಗಳಿವೆ. ತೊಗಟೆ ಬೂದುಗಪ್ಪು, ಮಂದ. ಬಿಸಿಲುಕಾಲದಲ್ಲಿ ಕೆಲಕಾಲ ಎಲೆ ಉದುರಿ. ಮೇ ತಿಂಗಳ ಸುಮಾರಿಗೆ ಹೊಸ ಚಿಗುರು ಬಂದು ಅದರೊಂದಿಗೇ ಬಿಳಿಯ ಹೂಗೊಂಚಲು ಮೂಡುತ್ತವೆ. ಕಾಯಿಗಳು ಡಿಸೆಂಬರಿನಲ್ಲಿ ಮಾಗುತ್ತವೆ. ಕಡಿದಾಗ ಸಾಧಾರಣವಾಗಿ ಮತ್ತೆ ಚಿಗುರುವುದು. ಬೇರುಸಸಿಗಳು ಕಂಡುಬರುತ್ತವೆ. ಬುಡದ ತೊಗಟೆಯನ್ನು ಮುಳ್ಳುಹಂದಿಗಳು ಕಡಿದು ಅನೇಕ ಗಿಡಗಳನ್ನು ಹಾಳು ಮಾಡುತ್ತವೆ. ಸ್ವಾಭಾವಿಕ ಪುನರುತ್ಪತ್ತಿ ಮೆಕ್ಕಲು ಮಣ್ಣಿನ ನದೀಪಾತ್ರಗಳಲ್ಲಿ ವಿಶೇಷ. ಬೀಜಗಳನ್ನು ಬಿತ್ತಿಯೂ ಮರಗಳನ್ನು ಬೆಳೆಸಬಹುದು. ಇದರಿಂದ ದೊರಕುವ ಮುಖ್ಯ ಉತ್ಪನ್ನ ತಾಂಬೂಲದೊಂದಿಗೆ ಉಪಯೋಗಿಸುವ ಕಾಚು (ನೋಡಿ- ಕಾಚು). ಇದರ ಚೌಬೀನೆ ಬಹುಗಟ್ಟಿಯಾಗಿದ್ದು ನೇಗಿಲು, ದೋಣಿಗಳ ಅಡಿಗಟ್ಟು, ಆಯುಧಗಳ ಹಿಡಿ-ಇವುಗಳಿಗೆ ಉಪಯುಕ್ತವಾಗಿದೆ. (ಎ.ಕೆ.ಎಸ್.)