ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಚ್

ವಿಕಿಸೋರ್ಸ್ ಇಂದ
Jump to navigation Jump to search

ಕಚ್ : ಗುಜರಾತ್ ರಾಜ್ಯದ ಒಂದು ಜಿಲ್ಲೆ. ಇದನ್ನು ಕಛ್ ಎಂದೂ ಕರೆಯುವುದುಂಟು. ಸ್ಥೂಲವಾಗಿ ಉತ್ತರ ಆಕ್ಷಾಂಶ 22ಂ 47' ನಿಂದ 24ಂ ಮತ್ತು ಪುರ್ವರೇಖಾಂಶ 68ಂ 15' ನಿಂದ 71ಂ 11'ಗಳ ನಡುವೆ ಹರಡಿರುವ ಪರ್ಯಾಯದ್ವೀಪ. ವಿಸ್ತೀರ್ಣ : 45,652 ಚಕಿಮೀ, ಜನಸಂಖ್ಯೆ : 15,83,225, ಜನಸಾಂದ್ರತೆ : ಚ ಕಿಮೀಗೆ 35 ಜನರು. ಇದರ ನಡುಭಾಗ ಉಬ್ಬು. ಇದನ್ನು ಸುತ್ತುವರಿದಿರುವ ಕಚ್ ರಣದ ತಗ್ಗುನೆಲ ಮಳೆಗಾಲದಲ್ಲಿ ನೀರಿನಿಂದಾವೃತವಾಗಿರುತ್ತದೆ. ಉತ್ತರದ್ದು ಮಹಾರಣ್; ದಕ್ಷಿಣದಲ್ಲಿರುವುದು ಸಣ್ಣ ರಣ್. ಪಶ್ಚಿಮದಲ್ಲಿ ಅಗಲವಾಗಿ ಪುರ್ವಕ್ಕೆ ಕಿರಿದಾಗುವ ನಗ್ನೀಕೃತ ಬೆಟ್ಟಗಳ ಸಾಲೊಂದು ಈ ಜಿಲ್ಲೆಯ ನಡುವೆ ಹಾಯುತ್ತದೆ. ಈ ಜಿಲ್ಲೆಯ ಮುಖ್ಯಪಟ್ಟಣವಾದ ಭುಜ್ಗೆ 32 ಕಿಮೀ ದೂರದಲ್ಲಿರುವ ದಿನೋಧರ್ ಅತ್ಯಂತ ಎತ್ತರದ ಬೆಟ್ಟ (388 ಮೀ) ಪಚ್ಚಂ ದ್ವೀಪ ಇನ್ನೂ ಎತ್ತರ (465 ಮೀ). ಕೇಂದ್ರದ ದಿಣ್ಣೆಯ ಪ್ರದೇಶ ಬಂಜರುನೆಲ. ಉತ್ತರ ದಕ್ಷಿಣ ಭಾಗಗಳನ್ನು ಇದು ಪ್ರತ್ಯೇಕಿಸುತ್ತದೆ. ಮಳೆ ಬಲು ಕಡಿಮೆ. ಬೆಟ್ಟಗಳ ಬುಡದ ಬಳಿ ಕಟ್ಟಲಾಗಿರುವ ಸಣ್ಣ ಕೆರೆಗಳು ಸಾಗುವಳಿಗೆ ನೀರೊದಗಿಸುತ್ತವೆ. ಈ ಪ್ರದೇಶದ ಜನಸಂಖ್ಯೆ ಬಲು ವಿರಳ. ಕರಾವಳಿಯ ತಗ್ಗುನೆಲ ವೈವಿಧ್ಯಮಯ. ಉತ್ತರಕ್ಕೂ ದಕ್ಷಿಣಕ್ಕೂ ಹರಿಯುವ ನದಿಗಳು ನೆಲವನ್ನು ಅಲ್ಲಲ್ಲಿ ಕೊರೆದಿವೆ. ಸಮುದ್ರದ ಬಳಿಯ ನೆಲ ಬೀಳು ಬಿದ್ದಿದೆ. ಉತ್ತರದ ನದಿಗಳು ಸಮುದ್ರ ತಲುಪಲಾರದೆ ನೆಲದಲ್ಲೆ ಇಂಗಿಹೋಗುತ್ತವೆ. ಕರಾವಳಿಯಲ್ಲಿ ಅಲ್ಲಲ್ಲಿ ಜೌಗುನೆಲವನ್ನೂ ಮರಳಗುಡ್ಡೆಗಳನ್ನೂ ಕಾಣಬಹುದು.

ಉತ್ತರದ ಕರಾವಳಿಯ ತಗ್ಗುನೆಲ ಈಚೆಗೆ ಸಮುದ್ರದಿಂದ ಮೇಲೆದ್ದಿರಬೇಕು. ಇದು ತ್ರಿಕೋಣಾಕಾರವಾಗಿದೆ. ವರ್ಷಕ್ಕೆ 30 ಸೆಂ ಮಳೆಯೂ ಆಗದ ಈ ಪ್ರದೇಶ ಬಂಜರು. ಕೆಲಭಾಗಗಳಲ್ಲಿ ನೀರು ನಿಂತಿದೆ. ವ್ಯವಸಾಯ ಬಲು ಕಡಿಮೆ. ಪಶುಪಾಲನೆಯೇ ಜನರ ಮುಖ್ಯ ಉದ್ಯೋಗ. ಮೇವು ನೀರುಗಳ ಅಭಾವದಿಂದ ಹೈನು ಉದ್ಯೋಗವನ್ನು ಬೆಳೆಯಿಸುವುದಾಗಿಲ್ಲ. ಆದರೂ ಇವರು ಮಾರಾಟಕ್ಕಾಗಿ ಒಳ್ಳೆಯ ತಳಿಯ ದನಗಳನ್ನು ಸಾಕುತ್ತಾರೆ. ಚರ್ಮ ಹದಗಾರಿಕೆ, ಪಾದರಕ್ಷೆ ತಯಾರಿಕೆ ಮುಂತಾದ ಕಸಬುಗಳಲ್ಲಿ ನಿರತರಾದ ಕೆಲವರು ಇಲ್ಲಿದ್ದಾರೆ. ಇಲ್ಲಿಯ ಜನ ಸಿಂಧಿನಿಂದ ವಲಸೆ ಬಂದವರು. ಇವರ ಸಾಮಾಜಿಕ ಕಟ್ಟಳೆಗಳೂ ಸಂಪ್ರದಾಯಗಳೂ ಗುಜರಾತಿನ ಉಳಿದ ಭಾಗದವರವಕ್ಕಿಂತ ಭಿನ್ನ. ಕಚ್ನ ನೈಋತ್ಯ ಕರಾವಳಿಯ ಉದ್ದ ಸು. 230 ಕಿಮೀ ಇದು ಕೋರಿಕಡಲಚಾಚಿನಿಂದ ಹಿಡಿದು ಪುರ್ವದಲ್ಲಿರುವ ಕಾಂಡ್ಲದ ವರೆಗೆ ಹಬ್ಬಿದೆ. ಕೋರಿಕಡಲಚಾಚಿನ ದಕ್ಷಿಣದಲ್ಲಿರುವ ಕರಾವಳಿ ನೆಲವೂ ಪಶ್ಚಿಮಭಾಗವೂ ಸಮುದ್ರದಿಂದ ಈಚೆಗೆ ಮೇಲೆದ್ದ ಪ್ರದೇಶ. ಹಲವಾರು ಸಣ್ಣ ಪುಟ್ಟ ನದಿಗಳು ನೆಲವನ್ನೆಲ್ಲ ಕೊರೆದಿವೆ. ಕೊರೆಯದೆ ಉಳಿದಿರುವ ಪ್ರದೇಶದಲ್ಲಿ ಮಾತ್ರ ವ್ಯವಸಾಯ ಸಾಧ್ಯ, ಕಮರಿಗಳಿಗೆ ಅಲ್ಲಲ್ಲಿ ಕಟ್ಟೆ ಕಟ್ಟಿ ನೀರು ಶೇಖರಿಸಲಾಗಿದೆ. ನದಿ ಕಣಿವೆಗಳಲ್ಲಿ ಅಲ್ಲಲ್ಲಿ ವ್ಯವಸಾಯಕ್ಕಾಗಿ ಬಾವಿಗಳನ್ನೂ ತೋಡಲಾಗಿದೆ. ಇಲ್ಲೂ ಜನವಸತಿ ವಿರಳವೆಂದೇ ಹೇಳಬೇಕು. ಕಚ್ನ ದಕ್ಷಿಣದ ಮೈದಾನಪ್ರದೇಶ ಆರ್ಥಿಕವಾಗಿ ಹೆಚ್ಚು ಮುಂದುವರಿದಿದೆ. ಇದನ್ನು ಕಾಥಿಯವಾಡ್ ಮತ್ತು ಗುಜರಾತ್ ಬಂiÀÄಲುಗಳಿಗೆ ಹೋಲಿಸಬಹುದು. ಉತ್ತರ-ದಕ್ಷಿಣವಾಗಿ ಅನೇಕ ನದಿಗಳು ಈ ಪ್ರದೇಶದಲ್ಲಿ ಹರಿಯುತ್ತವೆ. ನೆಲ ಮಟ್ಟಸ; 30 ಕಿಮೀ ದೂರಕ್ಕೆ 80 ಮೀನಷ್ಟು ಮಾತ್ರ ಏರುತ್ತದೆ. ಇದು ಅಷ್ಟೇನೂ ನಗ್ನೀಕೃತವಾಗಿಲ್ಲ. ಕಚ್ನ ಉಳಿದ ಭಾಗಗಳಿಗಿಂತ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಆದ್ದರಿಂದ ವ್ಯವಸಾಯೋತ್ಪನ್ನ ಇಲ್ಲಿ ಹೆಚ್ಚು. ಮಳೆಗಾಲದಲ್ಲಿ ಹುಲ್ಲು ಬೆಳೆಯುತ್ತದೆ. ಆದ್ದರಿಂದ ದನಕರುಗಳ ಮೇವಿಗೆ ತೊಂದರೆಯಿಲ್ಲ. ಉಳಿದ ಭಾಗಗಳಿಗಿಂತ ಇಲ್ಲಿ ಜನಸಾಂದ್ರತೆ ಹೆಚ್ಚು ಇಡೀ ಜಿಲ್ಲೆಯ ಜನಸಾಂದ್ರತೆ ಚ ಕಿಮೀಗೆ 35 ಮಂದಿಯಾದರೆ ಇಲ್ಲಿಯ ತಾಲ್ಲೂಕುಗಳಾದ ಮಾಂಡ್ವಿ, ಮುಂಡ್ರ ಮತ್ತು ಅಂಜಾರ್ಗಳಲ್ಲಿ ಕ್ರಮವಾಗಿ 75, 63 ಮತ್ತು 78 ಮಂದಿ. ಕಚ್ನ ಆರು ಪಟ್ಟಣಗಳ ಪೈಕಿ ಐದು ಇಲ್ಲಿವೆ. ಮಾಂಡ್ವಿ (42,355), ಮುಂಡ್ರ (1293), ಅಂಜಾರ್ (68343), ಕಾಂಡ್ಲ (14695) ಮತ್ತು ಗಾಂಧೀಧಾಮ್ (151693) ಈ ಪಟ್ಟಣಗಳು. ಕಾಂಡ್ಲ ಮತ್ತು ಗಾಂಧೀಧಾಮ್ಗಳು ಈಚಿನವು. ಕಾಂಡ್ಲ ಮುಖ್ಯ ಬಂದರು. ಭಾರತದ ವಿಭಜನೆಯಾದಾಗ (1947) ಸಿಂಧ್ನಿಂದ ಭಾರತಕ್ಕೆ ಬಂದ ಜನ ಗಾಂಧೀಧಾಮದಲ್ಲಿ ವಸತಿ ಹೊಂದಿದ್ದಾರೆ. ಮಾಂಡ್ವಿ ಮಧ್ಯಮ ಗಾತ್ರದ ಬಂದರು.

ಜೋಳ, ಬಾರ್ಲಿ, ಗೋದಿ, ದ್ವಿದಳಧಾನ್ಯಗಳು, ಹತ್ತಿ ಇಲ್ಲಿ ಬೆಳೆಯುತ್ತವೆ. ಜಿಪ್ಸಮ್, ಸುಣ್ಣಕಲ್ಲು ಮತ್ತು ಅಮೃತಶಿಲೆ ಮುಖ್ಯ ಖನಿಜಗಳು. ಭುಜ್ ಜಿಲ್ಲಾ ಮುಖ್ಯಪಟ್ಟಣ. ಜನಸಂಖ್ಯೆ 136429 (2001). ಇದು ಅಹಮದಾಬಾದಿನಿಂದ ಪಶ್ಚಿಮಕ್ಕೆ 305 ಕಿಮೀ ದೂರದಲ್ಲಿದೆ, ಪಶ್ಚಿಮ ರೈಲ್ವೆಯ ದೆಹಲಿ-ಮುಂಬಯಿ ಮಾರ್ಗದೊಂದಿಗೆ ಭುಜ್ಗೆ ಸಂಬಂಧ ಕಲ್ಪಿಸಲಾಗಿದೆ.

ಮಾಂಡ್ವಿಯಲ್ಲಿರುವ ಅರಮನೆ ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯ. ಚಿನ್ನದ ಕುಸುರಿ, ರೇಷ್ಮೆ ಹತ್ತಿ ಕಸೂತಿ ಮುಖ್ಯ ಕರಕೌಶಲಗಳು. ಕಡಲ ಕರೆಯ ಜನ ಒಳ್ಳೆಯ ನಾವಿಕರು.

ಕಚ್ ಜಿಲ್ಲೆಯ ಪ್ರಾಚೀನ ಇತಿಹಾಸವೇನೆಂಬುದು ಗೊತ್ತಾಗಿಲ್ಲ. ಇಲ್ಲಿ ಶಿಲಾಯುಗದ ಅವಶೇಷಗಳಿಲ್ಲದಿದ್ದರೂ ದೇಶಲ್ಪುರ ಮತ್ತು ತೋಡಿಯಟಿಂಬೊಗಳಲ್ಲಿ ಹರಪ್ಪ ನಾಗರಿಕತೆಯ ಅವಶೇಷಗಳು ದೊರಕಿವೆ. ಆಮೇಲಿನ ಕಾಲಕ್ಕೆ ಸಂಬಂಧಿಸಿದಂತೆ ಇದ್ದಿರಬಹುದಾದ ಅವಶೇಷಗಳ ಬಗ್ಗೆ ಮಾಹಿತಿಗಳು ತಿಳಿದುಬಂದಿಲ್ಲ.

13ನೆಯ ಶತಮಾನದಲ್ಲಿ ಸಿಂಧ್ನಿಂದ ಓಡಿಬಂದ ನಮ್ಮ ರಜಪುತರಿಗೆ ಕಚ್ನ ಚಾವಡ ರಜಪುತರು ಆಶ್ರಯ ನೀಡಿದರು. ಆದರೆ ಸು. 1320ರಲ್ಲಿ ಇವರು ತಮ್ಮ ಆಶ್ರಯದಾತರನ್ನೇ ಉರುಳಿಸಿ ಅಧಿಕಾರ ಗಳಿಸಿದರು. 1540-1760ರ ವರೆಗೆ ಎಲ್ಲ ರಜಪುತರೂ ಒಂದಾಗಿ ಆಳಿದರು. ಆಮೇಲೆ ಸ್ವಲ್ಪ ಕಾಲ ಇದು ಸಿಂಧಿನ ಮುಸ್ಲಿಮರ ಆಕ್ರಮಣಕ್ಕೆ ತುತ್ತಾಗಿತ್ತು. 1813ರಲ್ಲಿ ರಜಪುತನೊಬ್ಬ ಮತ್ತೆ ಇದನ್ನು ವಶಪಡಿಸಿಕೊಂಡ. 1815ರಲ್ಲಿ ಬ್ರಿಟಿಷರು ರಣ್ ಪ್ರದೇಶವನ್ನು ಆಕ್ರಮಿಸಿ, ದೊರೆಯಾದ ಮಹಾರಾವ್ ಭಾರ್ಮೂಲ್ಜಿಯೊಂದಿಗೆ ಒಪ್ಪಂದ ಮಾಡಿಕೊಂಡರು. ಅಂಜಾರ್ ಬ್ರಿಟಿಷರಿಗೆ ಸೇರಿತು. 1819ರಲ್ಲಿ ಈ ರಾಜನ ಪದಚ್ಯುತಿಯಾಗಿ ಇವನ ಮಗನಾದ ಎರಡನೆಯ ರಾವ್ ದೇಸಾಲ್ಜಿಗೆ ಪಟ್ಟ ಕಟ್ಟಲಾಯಿತು. ಬ್ರಿಟಿಷ್ ಆಳ್ವಿಕೆಯಲ್ಲಿ ಮೊದಲು ಇದು ಮುಂಬಯಿ ಪ್ರಾಂತ್ಯದ ಗವರ್ನರ ಆಡಳಿತಕ್ಕೆ ಒಳಪಟ್ಟಿತ್ತು. ಆಮೇಲೆ ಇದನ್ನು ಏಜೆನ್ಸಿಯ ಆಡಳಿತಕ್ಕೆ ವಹಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದು ಕೇಂದ್ರಾಡಳಿತ ಪ್ರದೇಶವಾಗಿದ್ದು, 1956ರಲ್ಲಿ ಮುಂಬಯಿ ರಾಜ್ಯದ ಜಿಲ್ಲೆಯಾಗಿ, 1960ರಲ್ಲಿ ಗುಜರಾತ್ ರಾಜ್ಯಕ್ಕೆ ಸೇರಿತು. (ಎಂ.ಜಿ.ಬಿ.; ಬಿ.ಕೆ.ಜಿ.)