ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಡಪ ಶ್ರೇಣಿಗಳು

ವಿಕಿಸೋರ್ಸ್ದಿಂದ

ಕಡಪ ಶ್ರೇಣಿಗಳು : ಭಾರತದ ಭೂ ಇತಿಹಾಸದಲ್ಲಿ ಆರ್ಷೇಯ ಕಲ್ಪವಾದ ಮೇಲೆ (ಎಂದರೆ 1,850 ದಶಲಕ್ಷ ವರ್ಷ ಪ್ರಾಚೀನ ಕಾಲ) ಈಗಿನ ಕಡಪ ಕರ್ನೂಲ್ ಜಿಲ್ಲಾ ಭಾಗಗಳು, ವಿಂಧ್ಯಪರ್ವತ ಪ್ರದೇಶ, ಬೆಳಗಾಂ, ಬಿಜಾಪುರ ಜಿಲ್ಲೆಗಳು ಮುಂತಾದ ಪ್ರದೇಶಗಳಲ್ಲಿ ಶಿಲಾನಿಕ್ಷೇಪಗಳು ಉಂಟಾದವು. ಈ ಕಾಲದ ಹೆಸರು ಪುರಾಣಕಲ್ಪ. ಇದರಲ್ಲಿ ಆದಿಪುರಾಣಕಲ್ಪ ಮತ್ತು ಅಂತ್ಯಪುರಾಣಕಲ್ಪವೆಂಬ ಎರಡು ವಿಭಾಗಗಳಿವೆ. ಆದಿಪುರಾಣಕಲ್ಪವೇ ಕಡಪಶ್ರೇಣಿಯೆಂದೂ ಹೆಸರುವಾಸಿಯಾಗಿದೆ. ಈ ಶಿಲಾಶ್ರೇಣಿಯನ್ನು ಮೊದಲು ಡಬ್ಲ್ಯು. ಕಿಂಗ್ ಎಂಬಾತ ಆಂಧ್ರಪ್ರದೇಶದಲ್ಲಿರುವ ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿ ಪರಿಶೋಧಿಸಿದ. ಇದರ ವ್ಯಾಪ್ತಿ ಸು. 19884 ಚ ಕಿಮೀಗಳು. ಇದು ಅರ್ಧಚಂದ್ರಾಕಾರವಾಗಿ ಹಬ್ಬಿದೆ. ಉಬ್ಬಿರುವ ಭಾಗ ಪಶ್ಚಿಮದಲ್ಲಿದೆ. ಈ ಪ್ರದೇಶದ ಬಹುಭಾಗದಲ್ಲಿನ ಶಿಲಾಸಮುದಾಯ ಕಡಪಶ್ರೇಣಿಗಳ ಗುಂಪಿಗೆ ಸೇರಿದೆ.

ಶಿಲಾಸಂಯೋಜನೆ[ಸಂಪಾದಿಸಿ]

ಕಡಪ ಶಿಲಾಸಮುದಾಯ ಗಟ್ಟಿಯಾದ ಜೇಡುಶಿಲೆ ಸ್ಲೇಟುಗಳು ಮತ್ತು ಸುಣ್ಣಕಲ್ಲುಗಳಿಂದ ಕೂಡಿದೆ. ಜೇಡುಶಿಲೆ ರೂಪಾಂತರಗೊಂಡು ಪದರಪದರಗಳಾಗಿ ಸೀಳುಗಳನ್ನೊಳಗೊಂಡು ಸ್ಲೇಟು ಶಿಲೆಯಾಗಿದೆ. ಆದರೆ ಫಿಲ್ಲೈಟ್ ಮತ್ತು ಶಿಸ್ಟ್‌ ಕಲ್ಲುಗಳಷ್ಟು ರೂಪಾಂತರ ಪಡೆದಿಲ್ಲ. ಮರಳು ಶಿಲೆಗಳು ರೂಪಾಂತರಗೊಂಡು ಕ್ವಾಟ್ಜೆರ್ೖಟ್ ಶಿಲೆಗಳಾಗಿವೆ. ಇವುಗಳಲ್ಲದೆ ಜ್ವಾಲಾಮುಖಜ ಶಿಲೆಗಳೂ ಈ ಶಿಲಾಸಮುದಾಯಗಳ ಮಧ್ಯಭಾಗದಲ್ಲಿ ಅಲ್ಲಲ್ಲಿ ರೂಪುಗೊಂಡಿವೆ. ಕೆಳ ಕಡಪಶಿಲಾಸಮುದಾಯ ಧಾರವಾಡ ಶಿಲಾಸಮುದಾಯದ ಶಿಥಿಲೀಕರಣದಿಂದ ಬೇರ್ಪಟ್ಟು ಸಂಚಿತವಾದ ಜಾಸ್ಟರ್ ಮತ್ತು ಚರ್ಟ್ಗಳ ಉರುಟು ಕಲ್ಲುಗಳಿಂದಾಗಿದೆ. ಇದು ಹೆಚ್ಚಾಗಿ ಧಾರವಾಡ ಶಿಲೆಗಳನ್ನೇ ಹೋಲುತ್ತದೆ. ಇವುಗಳ ಮೇಲ್ಭಾಗದಲ್ಲಿ ರೂಪುಗೊಂಡಿರುವ ಜೇಡುಶಿಲೆ ಮತ್ತು ಸುಣ್ಣಶಿಲೆಗಳು ರೂಪಾಂತರದಿಂದ ವಿಂಧ್ಯ ಶಿಲೆಗಳನ್ನು ಹೋಲುತ್ತವೆ. ಪುರಾಣಕಲ್ಪದ ಅನಂತರ ಪರ್ಯಾಯ ದ್ವೀಪಭಾಗದಲ್ಲಿ ಯಾವ ರೀತಿಯ ಗಣನೀಯವಾದ ಭೂಚಲನೆಯೂ ಆಗಿಲ್ಲವಾದ್ದರಿಂದ ಕಡಪಶಿಲೆಗಳ ಇಳಿವೋರೆ ಬಲು ಕಡಿಮೆ. ಆದರೆ ಪುರ್ವ ಭಾಗದಲ್ಲಿ ಪುರ್ವಘಟ್ಟಗಳ ಭಾಗಗಳಿರುವುದರಿಂದ ಅಲ್ಲಿ ಶಿಲೆಗಳು ಚಲನೆಗಳಿಗೊಳಗಾದ ರಚನೆಗಳನ್ನು ತೋರಿಸುತ್ತವೆ.

ಈ ಅಗಾಧ ಶಿಲಾಸಮುದಾಯದಲ್ಲಿ ಎಲ್ಲೂ ಜೀವಾವಶೇಷದ ಕುರುಹೇ ಇಲ್ಲ. ಕಡಪಶಿಲಾಸಮುದಾಯ ನಿಜವಾದ ಜಲಜಶಿಲೆಗಳಾಗಿರುವುದರಿಂದ ಅವುಗಳಲ್ಲಿ ಸಮಾಧಿಗೊಂಡ ಅಥವಾ ಹೂತುಹೋದ ಜೀವರಾಶಿಗಳನ್ನು ರಕ್ಷಿಸಲು ಅವು ಯೋಗ್ಯವಾಗಿವೆ. ಅಲ್ಲದೇ ಹೀಗೆ ಸಮಾಧಿಗೊಂಡಿರಬಹುದಾದ ಜೀವಾವಶೇಷಗಳನ್ನು ನಾಶ ಮಾಡಿರುವ ಭೂಚಲನೆ ಅಥವಾ ರಾಸಾಯನಿಕ ಬದಲಾವಣೆಗಳಾವುವೂ ಇವುಗಳಲ್ಲಿ ಕಂಡುಬರುವುದಿಲ್ಲ. ಹೀಗಿದ್ದರೂ ಈ ಶಿಲಾಸಮುದಾಯದಲ್ಲಿ ಜೀವಾವಶೇಷಗಳೇ ಇಲ್ಲದಿರುವುದಕ್ಕೆ ಕಾರಣವನ್ನು ವಿವರಿಸುವುದು ಬಲು ಕಷ್ಟದ ಕೆಲಸ. ಈ ಕಲ್ಪದಲ್ಲಿ ಜೀವಾವಶೇಷಗಳೇ ಇರಲಿಲ್ಲವೆಂದು ಹೇಳೋಣವೆಂದರೆ ಇವುಗಳಾದ ಮೇಲೆ ಸಂಚಯನಗೊಂಡ ಕ್ಯಾಂಬ್ರಿಯನ್ ಕಲ್ಪದ ಶಿಲೆಗಳಲ್ಲಿ ಜೀವಾವಶೇಷಗಳು ಹೇರಳವಾಗಿ ದೊರೆಯುತ್ತವೆ; ಮತ್ತು ಇವು ಆದಿಜೀವರಾಶಿಯಂತೆ ಕಾಣುವುದಿಲ್ಲ.

ಕಡಪ ಸಮುದಾಯದ ಆರ್ಥಿಕ ಖನಿಜ ನಿಕ್ಷೇಪಗಳು : ಕಡಪ ಶಿಲಾಸಮುದಾಯದಲ್ಲಿ ಕೆಲವು ಉಪಯುಕ್ತ ಶಿಲೆಗಳೂ ಆರ್ಥಿಕ ಖನಿಜ ನಿಕ್ಷೇಪಗಳೂ ಇವೆ. ಕರ್ನೂಲ್ ಜಿಲ್ಲೆಯ ಮರ್ಕಾಪುರ ಎಂಬ ಸ್ಥಳದಲ್ಲಿ ಸ್ಲೇಟ್ ಕಲ್ಲುಗಳನ್ನು (ಕಡಪ ಕಲ್ಲು) ಒಡೆದು ತೆಗೆಯುತ್ತಾರೆ. ಮರಳುಶಿಲೆಗಳನ್ನು ಕಟ್ಟಡದ ಕಲ್ಲುಗಳಾಗಿ ಉಪಯೋಗಿಸುತ್ತಾರೆ. ಕೆಲವು ಕಡೆಗಳಲ್ಲಿ ಸುಣ್ಣದ ಶಿಲೆಯನ್ನು ಕಟ್ಟಡದ ಕಲ್ಲುಗಳಾಗಿ ಉಪಯೋಗಿಸುತ್ತಾರೆ. ವೇಮಪಲ್ಲಿ ಪ್ರದೇಶದಲ್ಲಿ ಸುಣ್ಣಶಿಲೆಯಲ್ಲಿ ಟ್ರ್ಯಾಪ್ಶಿಲೆ ಸರಣವಾಗಿರುವುದರಿಂದ ಕ್ರೈಸೋಟೈಲ್ ಜಾತಿಯ ಕಲ್ನಾರು ಉತ್ಪನ್ನವಾಗಿದೆ; ಮತ್ತು ಈ ಪ್ರದೇಶದಲ್ಲಿ ಬೆರೈಟೀಸ್ ಖನಿಜ ರೂಪುಗೊಂಡಿದೆ. ಇವೆರಡನ್ನೂ ಈ ಪ್ರದೇಶದಲ್ಲಿ ಗಣಿ ಕೆಲಸ ಮಾಡಿ ಹೊರತೆಗೆಯುತ್ತಿದ್ದಾರೆ. ಪುಲಿವೆಂದ್ಲ ಮತ್ತು ಅಗ್ನಿಗೊಂಡಲಗಳ ಹತ್ತಿರ ತಾಮ್ರದ ಅದಿರು ಪತ್ತೆಯಾಗಿದೆ. ಅಲ್ಲಿ ಇದು ತಕ್ಕಷ್ಟು ಪ್ರಮಾಣದಲ್ಲಿ ಸಿಗುವುದೆಂದು ತಿಳಿದುಬಂದಿದೆ. ಅಲ್ಲಲ್ಲಿ ಸ್ವಲ್ಪ ಸೀಸದ ಅದಿರೂ ದೊರೆಯುವುದು. (ಎಂ.ಆರ್.ಎಸ್.)