ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಡಲ ಬಾಣ

ವಿಕಿಸೋರ್ಸ್ದಿಂದ

ಕಡಲ ಬಾಣ : ಲಾಲಿಗೊ ಜಾತಿಯ ಹಲವಾರು ಶಿರಪಾದಿ ಮೃದ್ವಂಗಿಗಳ ಸಾಮಾನ್ಯ ಹೆಸರು (ಸೀ ಆರೊ). ಇದರಲ್ಲಿ ಲಾಲಿಗೊ ಪೀಲಿ ಮತ್ತು ಲಾಲಿಗೊ ಒಪಾಲೆಸೆನ್ಸ್‌ ಎಂಬೆರಡು ಮುಖ್ಯ ಪ್ರಭೇದಗಳಿವೆ. ಇವುಗಳಲ್ಲಿ ಮೊದಲನೆಯದು ಅಟ್ಲಾಂಟಿಕ್ ಸಾಗರ ತೀರಪ್ರದೇಶದ ನೋವ ಸ್ಕೋಷಿಯದಿಂದ ಹಿಡಿದು ಫ್ಲಾರಿಡದವರೆಗೆ ಹರಡಿದೆ. ದೇಹದ ಉದ್ದ ಸು. 8", ವ್ಯಾಸ ಸು. 2". ಎರಡನೆಯದು ಚೀನದ ಸಾಗರದಲ್ಲಿ ಕಂಡುಬರುತ್ತದೆ. ಇವೆರಡರಲ್ಲೂ ದೇಹದ ಮುಂತುದಿಯಲ್ಲಿರುವ ತಲೆಯಲ್ಲಿ ಎಂಟು ಬಾಹುಗಳೂ ಎರಡು ಪರಿಗ್ರಾಹಿ ಬಾಹುಗಳೂ ಇವೆ. ನೀರಿನಲ್ಲಿ ಈಜುವಾಗ ಬಾಹುಗಳು ಮುಂಚಾಚಿಕೊಳ್ಳುವುದರಿಂದ ಈ ಪ್ರಾಣಿ ಬಾಣವನ್ನು ಹೋಲುತ್ತದೆ. ಆದ್ದರಿಂದಲೇ ಈ ಪ್ರಾಣಿಗೆ ಈ ಹೆಸರು. ಲಾ. ಒಪಾಲೆಸೆನ್ಸ್‌ ಚೀನೀಯರಲ್ಲಿ ರುಚಿಕರ ಆಹಾರವೆನಿಸಿದೆ. (ಬಿ.ಎನ್.ಬಿ.)