ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಡೂರು
ಕಡೂರು : ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪುರ್ವಭಾಗದಲ್ಲಿರುವ ಒಂದು ತಾಲ್ಲೂಕು ಕೇಂದ್ರ. ಪುರಸಭೆ ಇರುವ ಪಟ್ಟಣ. ಜನಸಂಖ್ಯೆ 200,802 (2001) ಹಾಗೂ ಪಟ್ಟಣದ ಜನಸಂಖ್ಯೆ 1,01,022 (2001). ಉ.ಅ. 13032' ಮತ್ತು ಪು.ರೇ. 7604'ನಲ್ಲಿರುವ ಈ ಪಟ್ಟಣದ ಮೂಲಕ ಬೆಂಗಳೂರು-ಪುಣೆ ರೈಲು ಮಾರ್ಗವೂ ಬೆಂಗಳೂರು-ಶಿವಮೊಗ್ಗ ರಸ್ತೆಯೂ ಹಾದುಹೋಗುತ್ತವೆ. ಜಿಲ್ಲೆಯ ಮುಖ್ಯ ಪಟ್ಟಣವಾದ ಚಿಕ್ಕಮಗಳೂರು ಇದಕ್ಕೆ ನೈಋತ್ಯದಲ್ಲಿ 40 ಕಿಮೀ ದೂರದಲ್ಲಿದೆ.
1863-65ರ ವರೆಗೆ ಇದು ಜಿಲ್ಲಾ ಮುಖ್ಯಪಟ್ಟಣವಾಗಿತ್ತು. ಆಗ ಕಡೂರೆಂದೇ ಈ ಜಿಲ್ಲೆಯ ಹೆಸರು. 1875ರ ವರೆಗೂ ಇದು ಕಡೂರು ತಾಲ್ಲೂಕಿನ ಕೇಂದ್ರವಾಗಿತ್ತು. ಆಗ ಇದು ಬಾಣಾವರ ತಾಲ್ಲೂಕಿನಲ್ಲಿ ಸೇರಿತ್ತು. ಮತ್ತೆ (1882) ಇದಕ್ಕೆ ತಾಲ್ಲೂಕು ಕೇಂದ್ರದ ಸ್ಥಾನ ಲಭ್ಯವಾಯಿತಲ್ಲದೆ, ಅನಂತರ (1886) ಇದರ ಹೆಸರೇ ಈ ತಾಲ್ಲೂಕಿಗೂ ಬಂತು.
ಪ್ರಾಚೀನಕಾಲದಲ್ಲಿ ಇದು ಜೈನರ ಕ್ಷೇತ್ರವಾಗಿದ್ದು ಗಂಗ ಸಾಮ್ರಾಜ್ಯಕ್ಕೆ ಅಧೀನವಾಗಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ಅನಂತರ ಇದು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. 14ನೆಯ ಶತಮಾನದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಎಮ್ಮೆದೊಡ್ಡಿ ಗುಡ್ಡದ ಸುತ್ತಣ ಪ್ರದೇಶವನ್ನು ಮಾದನಾಯಕನೆಂಬ ಸಾಮಂತನಿಗೆ ಕೊಡಲಾಯಿತು. ಈಗಿನ ಕಡೂರು ಪಟ್ಟಣ ಇರುವ ಸ್ಥಳದಲ್ಲಿ ಆಗ ನಾರ್ಣಪುರ ಅಗ್ರಹಾರವಿತ್ತಂತೆ. ಮಾದನಾಯಕ ಒಮ್ಮೆ ಇತ್ತ ಮೃಗಾಯಾವಿಹಾರಕ್ಕಾಗಿ ಬಂದಿದ್ದಾಗ ಈ ಬಳಿಯಲ್ಲಿ ಕಡವೆಯೊಂದು ನಾಯಕನ ಬೇಟೆನಾಯಿಗಳನ್ನು ಅಟ್ಟಿಸಿಕೊಂಡು ಬಂತಂತೆ. ನಾಯಕ ಇಲ್ಲೊಂದು ಕೋಟೆ ಕಟ್ಟಿಸಿದ. ಈ ಊರಿಗೆ ಕಡವೆಯ ಊರು ಅಥವಾ ಕಡೂರು ಎಂಬ ಹೆಸರು ಬಂದದ್ದು ಹೀಗೆ.
ಕಡೂರಿನ ಕೋಟೆಯೊಳಗೆ ಕೊಳದ ಬಳಿ ಇರುವ ಆಂಜನೇಯ ದೇವಸ್ಥಾನ ಹಳೆಯದು. ಈ ದೇವಸ್ಥಾನದ ಮೊಗಸಾಲೆಯ ನಾಲ್ಕು ಕಂಬಗಳು ಬಲು ಸುಂದರವಾಗಿವೆ. ಇವು ಯಾವುದೋ ಹೊಯ್ಸಳ ದೇವಸ್ಥಾನದ ಭಾಗವಾಗಿದ್ದಿರಬೇಕು. ಪುರಾಣದ ದೃಶ್ಯಗಳನ್ನು ಕೆತ್ತಲಾಗಿರುವುದು ಈ ಕಂಬಗಳ ವೈಶಿಷ್ಟ್ಯ. ಇಂಥ ಕೆತ್ತನೆಗಳು ಸಾಮಾನ್ಯವಾಗಿ ಹೊಯ್ಸಳ ಶೈಲಿಯ ದುಂಡು ಕಂಬಗಳ ಮೇಲೆ ಇರುವುದಿಲ್ಲ. ಇವು ಸಾಮಾನ್ಯವಾಗಿ ದ್ರಾವಿಡ ದೇವಸ್ಥಾನಗಳ ಚಚ್ಚೌಕ ಕಂಬಗಳ ಮೇಲಿರುವುದುಂಟು.
ಕಡೂರು ರೈಲ್ವೆನಿಲ್ದಾಣ ಪುಟ್ಟದಾದರೂ ಪ್ರಾಮುಖ್ಯ ಪಡೆದಿದೆ. ಬೀರೂರು ರೈಲ್ವೆ ಜಂಕ್ಷನ್ ಇಲ್ಲಿಗೆ 7 ಕಿಮೀ ದೂರದಲ್ಲಿದೆ. ಮಂಗಳೂರು ಕಡೆಯಿಂದ ಮುಂಬಯಿಗೆ ಪ್ರಯಾಣ ಮಾಡುವವರು ಸಾಮಾನ್ಯವಾಗಿ ಈ ಮಾರ್ಗವಾಗಿ ಪ್ರಯಾಣ ಮಾಡುತ್ತಾರೆ. ಇಲ್ಲಿಂದ ರಾಜ್ಯದ ನಾನಾ ಭಾಗಗಳಿಗೆ ರಸ್ತೆಸಾರಿಗೆ ಸೌಕರ್ಯವಿದೆ.
ಕಡೂರಿನ ಸುತ್ತಮುತ್ತ ಇರುವ ಬಂಡೆಗಳಿಂದ ಚಪ್ಪಡಿ ತೆಗೆಯಲಾಗುತ್ತಿದೆ. ಇಲ್ಲೊಂದು ಹೆಂಚು ಕಾರ್ಖಾನೆ ಇದೆ. ಕಡೂರು ಈ ಜಿಲ್ಲೆಯ ಮಲೆನಾಡಿನ ಹೆಬ್ಬಾಗಿಲಿನಂತಿರುವುದರಿಂದ ಜಿಲ್ಲೆಯ ವ್ಯಾಪಾರದ ಒಂದು ಭಾಗ ನಡೆಯುವುದು ಇದರ ಮೂಲಕ. ತಾಲ್ಲೂಕು: ಕಡೂರು ತಾಲ್ಲೂಕಿನ ವಿಸ್ತೀರ್ಣ 1414 ಚಕಿಮೀ. ಜನಸಂಖ್ಯೆ: 2,89,406 (2001) ಬಿದರೆ ಬೀರೂರು, ಹಿರೇನಲ್ಲೂರು, ಕಡೂರು, ಸಕ್ಕರೆಪಟ್ಟಣ, ಯಗಟಿ-ಇವು ಈ ತಾಲ್ಲೂಕಿನ ಹೋಬಳಿಗಳು. ಬೀರೂರು, ಕಡೂರು, ಸಕ್ಕರೆಪಟ್ಟಣ, ಹುಲಿಕೆರೆ, ನಿಡಗಟ್ಟ, ಬಿದರೆ, ಯರದಕೆರೆ, ಆಸಂದಿ ಮತ್ತು ಹಿರಿಯೂರು ದೊಡ್ಡ ಸ್ಥಳಗಳು. 64 ಪಂಚಾಯಿತಿಗಳೂ 104ಕ್ಕೂ ಹೆಚ್ಚು ಸಹಕಾರ ಸಂಘಗಳೂ ಇರುವ ತಾಲ್ಲೂಕಿನಲ್ಲಿ ಹರಿಜನ-ಗಿರಿಜನರಿಗಾಗಿ ಸ್ಥಾಪಿತವಾಗಿರುವ ಸಹಕಾರ ಸಂಘ ಉಲ್ಲೇಖಾರ್ಹವಾದದ್ದು.
ಕಡೂರು ತಾಲ್ಲೂಕು ಹಿಂದೆ ಆಗಿಂದಾಗ್ಗೆ ಬದಲಾವಣೆಗೆ ಒಳಪಟ್ಟಿತು. ಬಲು ಹಿಂದೆ ಕಡೂರು, ಯಗಟಿ, ಗರುಡನಗಿರಿ ಮತ್ತು ಬಾಣಾವರ ತಾಲ್ಲೂಕುಗಳಿದ್ದುವೆಂದೂ ಕಡೂರು ಯಗಟಿಗಳು ಇಕ್ಕೇರಿ ರಾಜ್ಯಕ್ಕೆ ಸೇರಿದ್ದುವೆಂದೂ ಹೇಳಲಾಗಿದೆ. ಇವನ್ನು ಮೈಸೂರು ದೊರೆಗಳು ವಶಪಡಿಸಿಕೊಂಡು ತರೀಕೆರೆಯ ಪಾಳೆಯಗಾರನಿಗೆ ಕೊಟ್ಟರು. ಹೈದರ್ ಇವನ್ನು ಮತ್ತೆ ಮೈಸೂರಿಗೆ ಸೇರಿಸಿಕೊಂಡ. 1835ರಲ್ಲಿ ಯಗಟಿಯನ್ನು ಕಡೂರಿಗೆ ಸೇರಿಸಲಾಯಿತು. 1876ರಲ್ಲಿ ಕಡೂರು ಬಾಣಾವರಗಳನ್ನು ಒಂದೇ ತಾಲ್ಲೂಕಾಗಿ ಮಾಡಿ ಅದನ್ನು ಬಾಣಾವರವೆಂದೇ ಕರೆಯಲಾಯಿತು; ಬಾಣಾವರವೇ ತಾಲ್ಲೂಕಿನ ಮುಖ್ಯಸ್ಥಳವೂ ಆಯಿತು. 1882ರಲ್ಲಿ ಮತ್ತೆ ಕಡೂರು ತಾಲ್ಲೂಕು ಕೇಂದ್ರವಾಯಿತು. 1886ರಲ್ಲಿ ಅರಸೀಕೆರೆ ತಾಲ್ಲೂಕು ಆದಾಗ ಕಡೂರು ತಾಲ್ಲೂಕನ್ನು ಪುನರ್ರಚಿಸಲಾಯಿತು. ಚಿಕ್ಕಮಗಳೂರು ತಾಲ್ಲೂಕಿನ ಸಕ್ಕರೆಪಟ್ಟಣವನ್ನು ಕಡೂರಿಗೆ ಸೇರಿಸಿ ಹಳೆಯ ಬಾಣಾವರ ತಾಲ್ಲೂಕಿನ ಭಾಗವನ್ನೂ ಬಾಣಾವರವನ್ನೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿಗೆ ವರ್ಗಾಯಿಸಲಾಯಿತು. ಕಡೂರು ತಾಲ್ಲೂಕಿನ ಪಶ್ಚಿಮಕ್ಕೆ ಬಾಬಾಬುಡನ್ ಪರ್ವತಶ್ರೇಣಿಯ ಪುರ್ವದ ಕವಲುಗಳು ಹರಡಿವೆ. ದಕ್ಷಿಣದಲ್ಲಿ ಜಾವಗಲ್ಲಿನಿಂದ ಗರುಡನಗಿರಿಯವರೆಗೆ ಇನ್ನೊಂದು ಶ್ರೇಣಿಯುಂಟು. ತೊಟ್ಟಿಲಿನಂತಿರುವ ಈ ತಾಲ್ಲೂಕಿನ ನಡುಭಾಗದಲ್ಲಿ ಈಶಾನ್ಯಾಭಿಮುಖವಾಗಿ ಹರಿಯುವ ನದಿಯೇ ವೇದಾವತಿ. ವೇದಾ ಮತ್ತು ಅವತಿ ನದಿಗಳಿಂದ ಕೂಡಿ ವೇದಾವತಿ ಯಾಗುವ ಈ ನದಿಯನ್ನು ಯಗಟಿಯ ಬಳಿ ಕೂಡುವ ಇನ್ನೊಂದು ತೊರೆಯ ಹೆಸರು ಜಾವಗಲ್ ಹಳ್ಳ, ವೇದಾ, ಅವತಿಗಳೆರಡೂ ಬಾಬಾಬುಡನ್ ಪರ್ವತದಲ್ಲಿ ಹುಟ್ಟುತ್ತವೆ. ವೇದಾನದಿ ಅಯ್ಯನಕೆರೆಯನ್ನೂ ಅವತಿ ನದಿ ಮದಗಕೆರೆಯನ್ನೂ ಕೂಡಿ ಮುಂದೆ ಸಾಗುತ್ತವೆ. ಈ ಎರಡೂ ವಿಷ್ಣು ಸಮುದ್ರವೂ ಈ ಸುತ್ತಿನ ಅತಿದೊಡ್ಡ ಕೆರೆಗಳು. ವೇದ ಮತ್ತು ಅವತಿ ನದಿಗಳಿಗೆ ಕಟ್ಟೆಗಳನ್ನು ಕಟ್ಟಿ, ತಾಲ್ಲೂಕಿನಲ್ಲಿ ನೀರಾವರಿಯ ಜಾಲವನ್ನು ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಅತಿಕಡಿಮೆ ಮಳೆ ಪಡೆಯುವ ತಾಲ್ಲೂಕು ಕಡೂರು. ಇದರ ವಾರ್ಷಿಕ ಸರಾಸರಿ ಮಳೆ 583.7 ಮಿಮೀ (ಶೃಂಗೇರಿ ಅತಿ ಹೆಚ್ಚು : 3760.8 ಮಿಮೀ)
ತಾಲ್ಲೂಕಿನಲ್ಲಿ ಫಲವತ್ತಾದ ಕಪ್ಪುಮಣ್ಣಿನಿಂದ ಮರಳು ಮಣ್ಣಿನವರೆಗೆ ಹಲವು ಬಗೆಯ ನೆಲಗಳಿವೆ, ದಕ್ಷಿಣ ಪಶ್ಚಿಮಗಳಲ್ಲಿ ಒಳ್ಳೆಯ ಹೊಗೆಸೊಪ್ಪು ಬೆಳೆಯುತ್ತದೆ. ತಗ್ಗಿನ ಮರಳು ನೆಲದಲ್ಲಿ ತೆಂಗಿನ ಮರಗಳು ವಿಶೇಷ. ವಾಯವ್ಯ ಭಾಗದಲ್ಲಿರುವ ಹೊಗರಿ ಬೆಟ್ಟದಲ್ಲಿ ಕಬ್ಬಿಣದ ಅದುರು ಸಿಗುತ್ತದೆ. ಕಡೂರು ತಾಲ್ಲೂಕಿನಲ್ಲಿ ತರಿ, ಕುಷ್ಕಿ ಮತ್ತು ಬಾಗಾಯತು - ಈ ಮೂರು ವಿಧದ ಬೆಳೆಗಳೂ ಇವೆ. ಹಲವೆಡೆ, ತೆಂಗು, ಬಾಳೆ, ಅಡಕೆ ಬೆಳೆಯುತ್ತಾರೆ. ಸಕ್ಕರೆಪಟ್ಟಣದ ಹಲಸು, ಬೀರೂರಿನ ಅಡಕೆ, ಅಣೆಗೆರೆಯ ಎಳೆನೀರು, ಎಮ್ಮೆ ದೊಡ್ಡಿಯ ಕಿತ್ತಳೆಹಣ್ಣು ಪ್ರಸಿದ್ಧವಾಗಿವೆ.
ಕಡೂರು ಪಟ್ಟಣದ ಸುತ್ತಮುತ್ತ ಎಳ್ಳು, ಜೋಳ, ರಾಗಿ, ಮತ್ತು ಮೆಣಸಿನಕಾಯಿ ವಿಶೇಷವಾಗಿ ಬೆಳೆಯುತ್ತಾರೆ. ಮಿಕ್ಕ ಕಡೆ ಬೆಳೆಯುವ ಎಳ್ಳಿಗಿಂತ ಕಡೂರು ತಾಲ್ಲೂಕಿನಲ್ಲಿ ಬೆಳೆಯುವ ಎಳ್ಳಿನಲ್ಲಿ ಕೊಬ್ಬಿನ ಅಂಶ ಹೆಚ್ಚು. ಈ ತಾಲ್ಲೂಕಿನಲ್ಲಿ 1241 ಕಿಮೀ ಉದ್ದದ ರಸ್ತೆ ಮತ್ತು 51 ಕಿಮೀ ರೈಲುಮಾರ್ಗಗಳಿವೆ. ರಸ್ತೆಗಳಲ್ಲಿ ಶೇ45 ಭಾಗ ಸುಧಾರಿತ ಮಾರ್ಗಗಳು, 8081 ಟೆಲಿಫೋನ್ ಸಂಪರ್ಕಗಳು, 56 ಅಂಚೆ ಕಛೇರಿಗಳು, 59 ನೊಂದಾಯಿತ ಕಾರ್ಖಾನೆಗಳು ಮತ್ತು ನೂರಾರು ಸಣ್ಣ ಪ್ರಮಾಣದ ಘಟಕಗಳಿವೆ.
ಕಡೂರು ತಾಲ್ಲೂಕಿನಲ್ಲಿ ಒಟ್ಟು 8 ಗ್ರಾಮಾಂತರ ಪಶುವೈದ್ಯ ಶಾಲೆಗಳಿವೆ. ಇಲ್ಲಿಯ ಅಭಿವೃದ್ಧಿ ಮಂಡಲಿಯವರೇ 9 ಆಯುರ್ವೇದ ಮತ್ತು ಒಂದು ಅಲಾಪತಿ ಔಷಧಾಲಯ ಗಳನ್ನು ತೆರೆದಿರುವರು. ಇದಲ್ಲದೆ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳನ್ನೂ ಈ ತಾಲ್ಲೂಕು ಪಡೆದಿದೆ. ಇಲ್ಲಿ 247 ಪ್ರಾಥಮಿಕ ಶಾಲೆಗಳೂ ಹತ್ತು ಪ್ರೌಢಶಾಲೆಗಳೂ ಇವೆ. ಈಚೆಗೆ ಕಡೂರು ಪಟ್ಟಣದಲ್ಲಿ ಒಂದು ಕಾಲೇಜೂ ಸ್ಥಾಪಿತವಾಗಿದೆ.
ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು: ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು ಅನೇಕ. ಕನ್ನಡ ಜೈಮಿನಿಭಾರತ ರಚಿಸಿದ ಮಹಾಕವಿ ಲಕ್ಷ್ಮೀಶನ ಜನ್ಮ ಸ್ಥಳವೆಂದು ಹೇಳಲಾಗಿರುವ ದೇವನೂರು ಕಡೂರು ಪಟ್ಟಣಕ್ಕೆ ಸು.17 ಕಿಮೀ ದೂರದಲ್ಲಿದೆ. ಲಕ್ಷ್ಮೀಶನೇ ಕಟ್ಟಿದನೆನ್ನಲಾದ ಕಾವ್ಯಮಂಟಪ, ಆತನದೆಂದು ಭಾವಿಸಲಾಗಿರುವ ಮನೆ, ಜೈಮಿನಭಾರತ ರಚಿಸಿದ ತಾಣ, ಆರಾಧ್ಯ ದೈವನಾದ-ಅವನೇ ಅರ್ಚಿಸಿದನೆಂಬ-ಶ್ರೀ ಲಕ್ಷ್ಮಿಕಾಂತಸ್ವಾಮಿಯ ಗುಡಿ -ಇವೆಲ್ಲವನ್ನೂ ಕಾಣಬಹುದು. ಜಗನ್ನಾಥವಿಜಯ ಗ್ರಂಥವನ್ನು ರಚಿಸಿದ ರುದ್ರಭಟ್ಟ ಮಹಾಕವಿಯೂ ಇಲ್ಲಿಯವನೇ. ಆತ ಪುಜಿಸಿದ ಶ್ರೀ ಸಿದ್ಧೇಶ್ವರಸ್ವಾಮಿಯ ಗುಡಿ ಇಲ್ಲಿದೆ.
ಕಡೂರು ಪಟ್ಟಣದ ನೈಋತ್ಯಕ್ಕೆ ಸು. 17 ಕಿಮೀ ದೂರದಲ್ಲಿರುವ ಸಕ್ಕರೆಪಟ್ಟಣ ಇತಿಹಾಸ ಪ್ರಸಿದ್ಧ ಸ್ಥಳ. ಪ್ರತಿ ಶುಕ್ರವಾರವೂ ಸಂತೆ ನಡೆಯುವ ಈ ಊರಿನಲ್ಲಿ ವರ್ಷಕೊಮ್ಮೆ ವೈಶಾಕಮಾಸದಲ್ಲಿ ನಡೆಯುವ ರಂಗನಾಥನ ರಥೋತ್ಸವ ಈ ಸುತ್ತಿನಲ್ಲೆಲ್ಲ ಪ್ರಸಿದ್ಧವಾಗಿದೆ. ಇದು ಮಹಾಭಾರತದ ಕಾಲದಲ್ಲಿ ರುಕ್ಮಾಂಗದನ ರಾಜಧಾನಿಯಾಗಿತ್ತಂತೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಇದು ಐಗೂರು ಪಾಳೆಯಗಾರರ ಅಧೀನದಲ್ಲಿತ್ತು. ಮುಂದೆ ಇದು ಇಕ್ಕೇರಿಯ ನಾಯಕರ ವಶವಾಯಿತು. ವಿಜಯನಗರದ ಪತನವಾದ ಮೇಲೆ ಇಕ್ಕೇರಿಯ ನಾಯಕನ ಆಶ್ರಯ ಪಡೆದ ಶ್ರೀರಂಗರಾಯ ಸಕ್ಕರೆಪಟ್ಟಣದಲ್ಲಿ ನೆಲೆಸಿದನೆಂದೂ ಗೊತ್ತಾಗುತ್ತದೆ. 1690ರಲ್ಲಿ ಈ ಊರು ಮೈಸೂರಿನ ವಶವಾಯಿತು. ಇಲ್ಲಿಯ ವೀರಬಲ್ಲಾಳ ಚೌಕಿ ಪ್ರಸಿದ್ಧವಾದದ್ದು. ಇದು ದೊರೆ ವೀರಬಲ್ಲಾಳನ ನ್ಯಾಯಪೀಠವಾಗಿತ್ತಂತೆ. ಸು. 3 ಮೀ ಉದ್ದಗಲದ ಚಚ್ಚೌಕನಾದ ಈ ಚಪ್ಪಟೆಕಲ್ಲನ್ನು ನಾಲ್ಕು ಕಂಬಗಳ ಮೇಲೆ ನಿಲ್ಲಿಸಲಾಗಿದೆ. ಹಳೆಯ ಪಿರಂಗಿ ಇನ್ನೊಂದು ಪ್ರೇಕ್ಷಣೀಯ ವಸ್ತು.
ಸಕ್ಕರೆಪಟ್ಟಣಕ್ಕೆ 6.4 ಕಿಮೀ ದೂರದಲ್ಲಿರುವ ಅಯ್ಯನಕೆರೆಯನ್ನು ರುಕ್ಮಾಂಗದ ರಾಜ ಕಟ್ಟಿಸಿದನೆಂದು ಪ್ರತೀತಿ. ಇದು ಜಿಲ್ಲೆಯ ಅತ್ಯಂತ ದೊಡ್ಡ ಕೆರೆ. ವೇದಾ ನದಿ ಹರಿಯುವುದು ಈ ಮೂಲಕ. ಈ ಕೆರೆಯ ಬಗ್ಗೆ ಒಂದು ದಂತ ಕಥೆಯುಂಟು. ಒಮ್ಮೆ ಕೆರೆಯ ದಂಡೆ ಒಡೆಯುವ ಅಪಾಯವಿದ್ದಾಗ ಇದರ ದೇವತೆಯಿಂದ ನೀರಗಂಟಿಗೆ ಮುನ್ಸೂಚನೆ ಬರಲಾಗಿ, ತಾನು ಊರಿಗೆ ಹೋಗಿ ಸುದ್ದಿ ಮುಟ್ಟಿಸಿ ಹಿಂದಿರುಗಿ ಬರುವವರೆಗೂ ಕೆರೆ ಒಡೆಯಕೂಡದೆಂದು ದೇವತೆಯಿಂದ ಮಾತು ಪಡೆದು ಆತ ಸಕ್ಕರೆಪಟ್ಟಣದ ದೊರೆಗೆ ಈ ವಿಷಯ ತಿಳಿಸಿದನೆಂದೂ
ನೀರುಗಂಟಿ ಹಿಂದಿರುಗುವವರೆಗೂ ಕೆರೆ ಒಡೆಯುವುದಿಲ್ಲ ವೆಂಬ ಭರವಸೆ ಇದ್ದುದರಿಂದ ಆತ ಎಂದೆಂದೂ ಅಲ್ಲಿಗೆ ಹಿಂದಿರುಗದಂತೆ ದೊರೆ ಅವನನ್ನು ಕೊಲ್ಲಿಸಿದನೆಂದೂ ಕೊಟ್ಟ ಮಾತಿಗೆ ದೇವತೆ ತಪ್ಪಿ ನಡೆಯುವಂತಿಲ್ಲವಾದ್ದರಿಂದ ಆಕೆ ಇನ್ನೂ ಆ ನೀರಗಂಟಿಯ ಬರವಿಗಾಗಿ ಕಾದಿದ್ದಾಳೆಂದೂ ಪ್ರತೀತಿ.
ಜನಹಿತಕ್ಕಾಗಿ ಜೀವವನ್ನೆ ತೆತ್ತನೆನ್ನಲಾದ ನೀರಗಂಟಿ ಹೊನ್ನ-ಬಿಲ್ಲನ ಸ್ಮಾರಕ ಸಕ್ಕರೆಪಟ್ಟಣದಲ್ಲಿದೆ. ಈಗಲೂ ಜನ ಅದನ್ನು ಪುಜಿಸುತ್ತಾರೆ. ಹೊಯ್ಸಳರ ಕಾಲದಲ್ಲಿ ಈ ಕೆರೆಗೆ ದುರಸ್ತಿಕಾರ್ಯ ನಡೆಯಿತು. ಇದರ ಬಳಿ ಇರುವ ಬಲ್ಲಾಳೇಶ್ವರನ ದೇವಾಲಯದ ಹತ್ತಿರದ ಶಾಸನ ವೀರನರಸಿಂಹನ ಕಾಲದ್ದು (13ನೆಯ ಶತಮಾನ). ಅಯ್ಯನಕೆರೆಗೆ ಮಲ್ಲಪ್ಪನ ಕಾಲುವೆ, ಬಸವನ ಕಾಲುವೆ, ಊರು ಕಾಲುವೆ ಎಂಬ ಮೂರು ಕಾಲುವೆ ಮತ್ತು ಕೆರೆ ಕಾಲುವೆ ಎಂಬ ನಾಲ್ಕು ಕಾಲುವೆಗಳಿವೆ.
ಅಯ್ಯನಕೆರೆಗೆ ಹತ್ತಿರದಲ್ಲಿ ಬಿಲ್ವಪತ್ರ ವನದ ನಡುವೆ ಇರುವ ಶ್ರೀ ಕಲ್ಲುಮರಡಿ ಒಂದು ಪುಣ್ಯಕ್ಷೇತ್ರ.
ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ಹೇಮಗಿರಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಕಡೂರು ಪಟ್ಟಣದ ಹತ್ತಿರ ಇದೆ. ಪ್ರಕೃತಿ ಸೌಂದರ್ಯದ ಬೀಡಾದ ಇಲ್ಲಿ ವರ್ಷಕ್ಕೊಮ್ಮೆ ದನದ ಜಾತ್ರೆ ನಡೆಯುತ್ತದೆ.
ಕಡೂರು ಪಟ್ಟಣಕ್ಕೆ 21 ಕಿಮೀ ದೂರವಿರುವ ವೇದ ಮತ್ತು ಅವತಿ ನದಿಗಳ ಸಂಗಮ ಸ್ಥಳವೂ ಒಂದು ರಮಣೀಯ ದೃಶ್ಯ. ಇದು ಇರುವುದು ಯಗಟಿ ಗ್ರಾಮದ ಬಳಿಯಲ್ಲಿ.
ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಒಳಗೊಂಡು ಚೋಳರ ಕಾಲದಲ್ಲಿ ನಿರ್ಮಿತವಾದ ಪುರಾತನ ದೇವಸ್ಥಾನವಿರುವುದು ಕಡೂರು ತಾಲ್ಲೂಕಿನ ಹಿರೇನಲ್ಲೂರಿನಲ್ಲಿ. ಇದರ ಸುತ್ತಮುತ್ತ ಚೋಳರ ಕಲಾಪ್ರೌಢಿಮೆಗೆ ನಿದರ್ಶನಗಳಾದ ಅನೇಕ ದೇವಸ್ಥಾನಗಳುಂಟು.
ಮಹಾಭಾರತದ ಕಾಲದಲ್ಲಿ ಮತ್ಸ್ಯನಗರವೆಂದು ಖ್ಯಾತಿಗೊಂಡಿದ್ದ ಊರೇ ಇಂದು ಮಚ್ಚೇರಿ. ಪಾಂಡವರು ಕುಂತಿಯೊಂದಿಗೆ ಇಲ್ಲಿ ಕೊಂಚ ಕಾಲ ತಂಗಿದ್ದರೆಂಬುದು ಐತಿಹ್ಯ. ಕುಂತಿ ಅಂದು ಮಿಂದಳೆನ್ನಲಾದ ಹೊಳೆಗೆ ಕುಂತಿ ಹೊಳೆಯೆಂಬ ಹೆಸರಿದೆ. ಪವಾಡಪುರುಷರೆಂದು ಖ್ಯಾತಿ ಪಡೆದ ಶ್ರೀ ಸೋಮೇಶ್ವರ ಪ್ರಭುವರ್ಯರು ನಂದೀಶ್ವರರನ್ನು ಸಾಕ್ಷಾತ್ಕಾರ ಮಾಡಿಕೊಂಡ ಸ್ಥಳವಾದ ನಿರ್ವಾಣಸ್ವಾಮಿ ಬೆಟ್ಟ ಇನ್ನೊಂದು ಯಾತ್ರಾ ಸ್ಥಳ. ಕಡೂರು ತಾಲ್ಲೂಕಿನ ಆಸಂದಿ ಗ್ರಾಮ ಇತಿಹಾಸ ಪ್ರಸಿದ್ಧವಾದದ್ದು. ಗಂಗರ ಮತ್ತು ಹೊಯ್ಸಳರ ಕಾಲದಲ್ಲಿ ಇದು ಒಂದು ಮುಖ್ಯನಗರವಾಗಿತ್ತು. 8ನೆಯ ಶತಮಾನದಲ್ಲಿ ಇದನ್ನು ಶ್ರೀಪುರುಷನ ಮಗ ವಿಜಯಾದಿತ್ಯನೂ 12-13ನೆಯ ಶತಮಾನಗಳಲ್ಲಿ ಗಂಗಸಂತತಿಯ ಅರಸರೂ ಆಳುತ್ತಿದ್ದ ಈ ಸ್ಥಳದಲ್ಲಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನೂರಾರು ಶಾಸನಗಳಿವೆ.
ಈ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳು ವೀರಗಾಸೆ ಕುಣಿತ, ಕರಡಿಮಜಲು, ಕರಪಾಲ, ಕೀಲುಕುದುರೆ ನರ್ತನ-ಮುಂತಾದವಕ್ಕೆ ಹೆಸರಾಗಿವೆ. ಗಿರಿಯಾಪುರ, ಕಾವೇನಹಳ್ಳಿ ಮುಂತಾದ ಊರುಗಳ ಕಲಾವಿದರು ನೆರೆ ರಾಜ್ಯಗಳಲ್ಲಿ ಕೂಡ ತಮ್ಮ ಕಲಾ ಕೌಶಲವನ್ನು
ಪ್ರದರ್ಶಿಸಿ ಮನ್ನಣೆ ಗಳಿಸಿದ್ದಾರೆ. (ಎಸ್.ಎಸ್.ಎ.)