ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣಾನೂರು

ವಿಕಿಸೋರ್ಸ್ದಿಂದ

ಕಣ್ಣಾನೂರು : ಕೇರಳ ರಾಜ್ಯದ ಒಂದು ಜಿಲ್ಲೆ (ಸು. 7,099 ಚ.ಕಿಮೀ) ಹಾಗೂ ಮುಖ್ಯಪಟ್ಟಣ. ಪಟ್ಟಣ ದಕ್ಷಿಣ ರೈಲುಮಾರ್ಗದ ಪಶ್ಚಿಮ ತೀರಪ್ರದೇಶದಲ್ಲಿದ್ದು ಮಂಗಳೂರಿನ ದಕ್ಷಿಣಕ್ಕೆ ಸು. 131 ಚ. ಕಿಮೀ ದೂರದಲ್ಲಿದೆ. ಅರಬ್ಬೀ ಸಮುದ್ರ ದಂಡೆಯಲ್ಲಿರುವ ಈ ನಗರಕ್ಕೆ ಒಂದು ಸಣ್ಣ ಬಂದರಿದೆ. ಇಲ್ಲಿಂದ ಹೊರದೇಶಗಳಿಗೆ ಕೊಬ್ಬರಿ ಹಾಗೂ ತೆಂಗಿನ ನಾರು ರಫ್ತಾಗುತ್ತದೆ. ಇಲ್ಲಿ ನೇಯುವ, ನೂಲುವ ಹಾಗೂ ಉಡುಪುಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳಿವೆ.

ಈ ನಗರ 12 ಮತ್ತು 13ನೆಯ ಶತಮಾನಗಳಲ್ಲಿ ಪರ್ಷಿಯ ಮತ್ತು ಅರೇಬಿಯ ದೇಶಗಳೊಡನೆ ವ್ಯಾಪಾರ ಸಂಪರ್ಕವಿಟ್ಟುಕೊಂಡಿದ್ದಂಥ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿತ್ತು. ಅದುವರೆಗೂ ದಕ್ಷಿಣ ಭಾರತದ ಸ್ವತಂತ್ರ ನಾಡಿನಲ್ಲಿದ್ದ ಈ ಸ್ಥಳ 18ನೆಯ ಶತಮಾನದಲ್ಲಿ ಕಲ್ಲಿಕೋಟೆಯ ಕೊಲಾಟ್ಟರಿ ರಾಜನ ರಾಜಧಾನಿಯೆನಿಸಿತು. 1498ರಲ್ಲಿ ವ್ಯಾಸ್ಕೊ-ಡ-ಗ್ಯಾಮ ಇಲ್ಲಿಗೆ ಬಂದಿದ್ದ. 1505ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಿದರು. ಈಗಿರುವ ಕೋಟೆ ಡಚ್ಚರಿಂದ ನಿರ್ಮಿತವಾಗಿದ್ದು 1771ರಲ್ಲಿ ಅದನ್ನು ಆಲಿ ರಾಜನಿಗೆ ಮಾರಲಾಯಿತು. 1783ರಲ್ಲಿ ಇದು ಬ್ರಿಟಿಷರ ವಶವಾಗಿ ಈಸ್ಟ್‌ ಇಂಡಿಯ ಕಂಪನಿಯ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಂದ 1887ರ ವರೆಗೂ ಬ್ರಿಟಿಷರ ಮಿಲಿಟರಿ ಠಾಣ್ಯವಾಗಿತ್ತು. *