ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣೇಗಾಲ ಕದನ
ಕಣ್ಣೇಗಾಲ ಕದನ : ಹೊಯ್ಸಳ ವಿಷ್ಣುವರ್ಧನನಿಗೂ ಕಲ್ಯಾಣಿ ಚಾಳುಕ್ಯರಿಗೂ ಕರ್ನಾಟಕ ರಾಜ್ಯದ ಹಾಸನದ ಬಳಿಯ ಕಣ್ಣೇಗಾಲ ಗ್ರಾಮದ ಹತ್ತಿರದಲ್ಲಿ ಸು. 1118ರಲ್ಲಿ ನಡೆದ ಕದನ. ವಿಷ್ಣುವರ್ಧನ ಚೋಳರ ಮೇಲೆ ಯುದ್ಧ ಘೋಷಿಸಿ ಅವರನ್ನು ಸೋಲಿಸಿ ಗಂಗವಾಡಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ಪ್ರಬಲನಾಗಿ, ಚಾಳುಕ್ಯ ಮಾಂಡಲಿಕರಾದ ಕದಂಬರನ್ನೂ ಉಚ್ಚಂಗಿಯ ಪಾಂಡ್ಯರನ್ನೂ ಸೋಲಿಸಿ, ಹೊಯ್ಸಳ ರಾಜ್ಯದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ. ತನ್ನ ಮಾಂಡಲಿಕನಾಗಿದ್ದ ವಿಷ್ಣುವರ್ಧನನ ಈ ಕೃತ್ಯಗಳಿಂದ ಚಾಳುಕ್ಯ ಸಾಮ್ರಾಟ ಆರನೆಯ ವಿಕ್ರಮಾದಿತ್ಯನಿಗೆ ಕೋಪ ಬಂತು. ಇತರ ಹನ್ನೆರಡು ಮಂದಿ ಸಾಮಂತರ ಸೈನ್ಯಗಳನ್ನೂ ಸೇರಿಸಿ ಸಿಂಧ ಸಾಮಂತರ ಆಚರಸನ ನಾಯಕತ್ವದಲ್ಲಿ ಹೊಯ್ಸಳ ರಾಜಧಾನಿಯಾದ ದ್ವಾರಸಮುದ್ರದ ಕಡೆಗೆ ಕಳುಹಿಸಿಕೊಟ್ಟ.
ವಿಷ್ಣುವರ್ಧನನ ಪ್ರಧಾನಾಮಾತ್ಯನೂ ಪ್ರಮುಖ ದಂಡನಾಯಕನೂ ಆದ ಗಂಗರಾಜನ ನೇತೃತ್ವದಲ್ಲಿ ಹೊಯ್ಸಳ ಸೈನ್ಯ ಆಚರಸನ ಸೈನ್ಯವನ್ನು ಹಾದಿಯಲ್ಲೆ ಕಣ್ಣೇಗಾಲದ ಬಳಿ ಎದುರಿಸಿತು. ಅನಿರೀಕ್ಷಿತವಾಗಿ ಮೇಲೆರಗಿದ ಹೊಯ್ಸಳ ಸೈನ್ಯದ ಪೆಟ್ಟಿಗೆ ತತ್ತರಿಸಿದ ಚಾಳುಕ್ಯ ಸೈನ್ಯ ಸೋತುಹೋಯಿತು. ಅದರಿಂದ ವಶಪಡಿಸಿಕೊಂಡ ಯುದ್ಧಸಾಮಗ್ರಿಯನ್ನು ಗಂಗರಾಜ ವಿಷ್ಣುವರ್ಧನನಿಗೆ ಒಪ್ಪಿಸಿದ. ಸಂಪ್ರೀತನಾದ ವಿಷ್ಣುವರ್ಧನ ಗಂಗರಾಜನಿಗೆ ಅನೇಕ ಗ್ರಾಮಗಳನ್ನು ಕೊಡುಗೆಯಾಗಿತ್ತ. ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಯ್ಸಳ ಸಾಮ್ರಾಜ್ಯದ ಆರಂಭ ಕಾಲದ ಒಂದು ಮುಖ್ಯ ಕದನವಿದು. (ಜಿ.ಆರ್.ಆರ್.)