ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕತ್ತಿವರಸೆ

ವಿಕಿಸೋರ್ಸ್ದಿಂದ

ಕತ್ತಿವರಸೆ : ಮೂಲತಃ ಆತ್ಮರಕ್ಷಣೆಗೂ ಶತ್ರುವಿನ ವಿರುದ್ಧ ಆಕ್ರಮಣೆಗೂ ಕತ್ತಿಯನ್ನು ಬಳಸುವ ಚಾಕಚಕ್ಯತೆ (ಫೆನ್ಸಿಂಗ್). ಕ್ರಮೇಣ ಇದು ಬದಲಾವಣೆಗೊಂಡು ಇಂದು ಒಂದು ಕುಶಲ ಕಲೆಯಾಗಿ ಮಾತ್ರ ಉಳಿದಿದೆ. ಪ್ರಾಚೀನ ಭಾರತೀಯ ಸಾಹಿತ್ಯದಲ್ಲೂ ಗ್ರೀಕ್ ಸಾಹಿತಿ ಹೋಮರನ ಇಲಿಯಡ್ ಗ್ರಂಥದಲ್ಲೂ ಕತ್ತಿವರಸೆಯ ಉಲ್ಲೇಖವಿದೆ. ಪ್ರಾಚೀನ ರೋಮಿನ ಖಡ್ಗಮಲ್ಲರೂ ಮಧ್ಯಯುಗದ ಅಶ್ವವೀರರೂ ಕತ್ತಿ ಕಾಳಗವಾಡುತ್ತಿದ್ದರು. ಬಂದೂಕು ಮದ್ದನ್ನು ಉಪಜ್ಞಿಸುವ (ಇನ್ವೆಂಟ್)ವರೆಗೂ ಕತ್ತಿಯುದ್ಧಗಳು ನಡೆಯುತ್ತಿದ್ದವು. ಬಂದೂಕು ಬಂದ ಅನಂತರ ಎದುರಾಳಿಯ ಯುದ್ಧಕವಚವನ್ನು ಕತ್ತಿ ಹೊಡೆತದಿಂದ ಸೀಳುವುದು ಉಪಯೋಗವಾಗಲಿಲ್ಲ. ಬದಲು, ಬಲಗೈಯಲ್ಲಿ ಕತ್ತಿಯಿಂದ ಎದುರಾಳಿಯ ಮೇಲೆ ಹಾಯುವುದೂ ಆತ್ಮರಕ್ಷಣೆಗೋಸ್ಕರ ಎಡಗೈಯಲ್ಲಿ ಗುರಾಣಿ, ಕಠಾರಿ, ಖೇಲಕಗಳನ್ನು ಹಿಡಿಯುವುದೂ ಆಚರಣೆಗೆ ಬಂತು. ಮೊದಮೊದಲು ಖಡ್ಗಶಿಕ್ಷಕರು ರಹಸ್ಯ ವರಸೆಗಳನ್ನು ಇತರರಿಗೆ ಗೊತ್ತಾಗದಂತೆ ತಮ್ಮ ಶಿಷ್ಯರಿಗೆ ಮಾತ್ರ ಕಲಿಸುತ್ತಿದ್ದರು. ಕ್ರಮೇಣ ಅನೇಕ ಪ್ರವೀಣ ಶಿಕ್ಷಣ ಕೇಂದ್ರಗಳು ಸ್ಥಾಪಿತವಾದವು. ಖಡ್ಗನಿಪುಣರು ಗಣಿತವಿಜ್ಞಾನದ ನಿಯಮಗಳ ನ್ನೊಳಗೊಂಡ ಶಾಸ್ತ್ರೋಕ್ತ ಗ್ರಂಥಗಳನ್ನು ರಚಿಸಿದರು. ಇಂಗ್ಲೆಂಡಿನ ರಾಜ ಎಂಟನೆಯ ಹೆನ್ರಿಯೂ ಕತ್ತಿ ಸಾಧನಕ್ಕೆ ಉತ್ತೇಜನ ಕೊಟ್ಟ. ಅನೇಕ ದೇಶಗಳಲ್ಲಿ ದರೋಡೆಯವರ ಕಾಟ ಹೆಚ್ಚಾಗಲು ಆತ್ಮರಕ್ಷಣೆಗೆ ಜನರಿಗೆ ಕತ್ತಿಸಾಧನೆ ಅಗತ್ಯವಾಯಿತು. ಖಡ್ಗಚತುರರು ರಾಜಸ್ಥಾನಗಳಲ್ಲಿ ಅಂಗರಕ್ಷಕರಾಗಿಯೂ ಮಹಾ ವ್ಯಕ್ತಿಗಳ ಸಂಗಾತಿಗಳಾಗಿಯೂ ನೇಮಿಸಲ್ಪಡುತ್ತಿದ್ದರು. ಜರ್ಮನಿಯ ನ್ಯಾಯ ಸಂಸ್ಥೆಗಳಲ್ಲಿ ನ್ಯಾಯವನ್ನು ಕತ್ತಿಕಾಳಗಗಳಿಂದ ತೀರ್ಮಾನಿಸುವ ವ್ಯವಸ್ಥೆಯಿತ್ತು.

ವ್ಯಕ್ತಿಗಳ ಪರಸ್ಪರ ವಿವಾಹ, ವ್ಯಾಜ್ಯ, ಮಾನಾಪಮಾನ ಸಮಸ್ಯೆಗಳನ್ನು ಕತ್ತಿಯ ದ್ವಂದ್ವಯುದ್ಧದಿಂದ ನಿರ್ಣಯಿಸುವ ಸಂಪ್ರದಾಯ ಯುರೋಪ್, ಅಮೆರಿಕಗಳಲ್ಲಿ ಅನೇಕ ಶತಮಾನ ಕಾಲ ಪ್ರಬಲಿಸಿದ್ದು ಸಣ್ಣಪುಟ್ಟ ಕಲಹಗಳಿಗೂ ಕತ್ತಿಕಾಳಗದ ಹುಚ್ಚು ಜನರಿಗಿತ್ತು. ಇದಕ್ಕೂ ಕಟ್ಟುಕಟ್ಟಳೆ, ಶಿಷ್ಟಾಚಾರಗಳಿದ್ದವು. ಲಾರ್ಡ್ಬೈರನ್, ಚಾಲ್ರ್ಸ್‌ ಫಾಕ್ಸ್‌, ಷೆರಿಡನ್, ಜ್ಯೇಷ್ಠ ಪಿಟ್, ಕ್ಯಾನಿಂಗ್ನಂಥ ಹಿರಿಯರೂ ಕತ್ತಿಯ ದ್ವಂದ್ವಯುದ್ಧ ಮಾಡಬೇಕಾಯಿತು. ಅನೇಕರು ಕೊಲೆಯಾದ್ದರಿಂದ ಇದನ್ನು ನಿಷೇಧಿಸಲು 19ನೆಯ ಶತಮಾನದಲ್ಲಿ ಕಾನೂನಾಯಿತು. ಅನಂತರ ಖಡ್ಗ ವಿದ್ಯೆಯಲ್ಲಿ ಕಲಹ, ದ್ವೇಷ, ಕಚ್ಚಾಟಗಳು ಮಾಯವಾಗಿ, ಸ್ನೇಹಭಾವದ ವಿನೋದಪರ ಕ್ರೀಡಾಕಲೆ ರೂಪುಗೊಂಡಿತು. ಹಿಂದೆ ಆತ್ಮರಕ್ಷಣೆಗೂ ಕಾಳಗಕ್ಕೂ ನೆರವಾಗಿದ್ದದ್ದು ಮುಂದೆ ಜನಪ್ರಿಯ ವ್ಯಾಯಾಮ, ಕ್ರೀಡೆ, ಖಡ್ಗಚಾತುರ್ಯ ಪರೀಕ್ಷೆಯ ಸ್ಪರ್ಧೆಯಾಗಿ ಪರಿಣಮಿಸಿತು. ಶ್ರೀಮಂತರ ಸಂಸ್ಕೃತಿಯ ಸಂಕೇತವಾಯಿತು. ಗೌರವಸ್ಥ ಸ್ತ್ರೀಯರೂ ಕತ್ತಿವರಸೆಯನ್ನು ಕಲಿಯತೊಡಗಿದರು. ಇದರ ವೈಯಕ್ತಿಕ ಶಿಸ್ತು, ಶಿಕ್ಷಣ, ಮಾನಸಿಕ ಶಾರೀರಿಕ ಹೊಂದಾಣಿಕೆಗಳು ಮೋಹಕವಾದವು.

ಖಡ್ಗ ತಂತ್ರದಲ್ಲಿ ಕ್ರಾಂತಿಯಾಗಿ ಆಧುನಿಕ ರಚನೆ ಸ್ಥಾಪಿತವಾಯಿತು. ಹರಿತ, ಭಾರ, ನಿರ್ವಹಿಸಲಾಗದಷ್ಟು ತೊಡಕಾಗಿದ್ದ ಹಿಂದಿನ ಕತ್ತಿಗಳು ಹೋಗಿ ಸಮತೋಲನದ, ಚಿಕ್ಕ, ಹಗುರ, ಮೊಂಡ ಕತ್ತಿಗಳು ಉದ್ಭವಿಸಿದವು. ಹಿಂದಿನ ಕತ್ತಿವರಸೆಗೆ ದೇಹಶಕ್ತಿ ಪ್ರಾಧಾನ್ಯವಾಗಿತ್ತು. ಈಗ ಬೇಕಾದದ್ದು ಪಶುಶಕ್ತಿಯಲ್ಲ. ಶಾಸ್ತ್ರೀಯ ಸುಧಾರಣೆ; ಒರಟುತನ ದಾಂಡಿಗತನವಲ್ಲ, ಯುಕ್ತಿ ಚಾತುರ್ಯ ಕೈಚಳಕ. ಸ್ನಾಯುಗಳಿಗಿಂತಲೂ ಹೆಚ್ಚಾಗಿ ನರಗಳು, ಮಿದುಳು ಮುಖ್ಯ. ಮೈ ಹವಣಿಕೆ, ಮಾನಸಿಕ ಚಟುವಟಿಕೆ, ಖಚಿತ ಮತ್ತು ಸೂಕ್ಷ್ಮ ಸಂಚಲನೆ, ಶೀಘ್ರಗತಿ, ಚುರುಕು ಪಾದಗಳು ಅವಶ್ಯ. ಇದು ವ್ಯಾಯಾಮ ಮಾತ್ರವಲ್ಲ, ಕಲೆಯೂ ಆಗಿದೆ. ಚದುರಂಗದಂತೆ ಬಗೆ ಬಗೆ ತೊಡಕಾದ ಚಾಲನ ಶಕ್ತಿ, ಹಿಡಿತ, ಏಕಾಗ್ರತೆ ಬೇಕು. ಅಗ್ರೇಸರ ಕತ್ತಿವರಸೆಗಾರನೂ ತನ್ನ ಜೀವನಗತಿಯಲ್ಲಿ ನಿರಂತರ ಅಭ್ಯಾಸ ಮಾಡಬೇಕು.

ದೀರ್ಘಾವಧಿ ನಿಂತುಹೋಗಿದ್ದ ಒಲಿಂಪಿಕ್ ಪಂದ್ಯಾಟ 1896ರಲ್ಲಿ ಪುನರುಜ್ಜೀವಿತ ವಾದಾಗ ಕತ್ತಿವರಸೆಯೂ ಏಳಿಗೆಯಾಗಿ ಪ್ರಮುಖ ಆಟವಾಯಿತು. ಯುರೋಪ್, ಅಮೆರಿಕಗಳಲ್ಲಿ ಅನೇಕ ಖಡ್ಗಕೂಟಗಳು ಬೆಳೆದವು. ಅರವತ್ತು ರಾಷ್ಟ್ರಗಳು ಸ್ಪರ್ಧೆಗಳನ್ನೂ ಪೃಥ್ವಿಯ ಖಡ್ಗಾಗ್ರಣಿಗಳ ಪ್ರದರ್ಶನವನ್ನೂ ನಡೆಸುತ್ತದೆ. ನಾನಾ ಜನಾಂಗಗಳು ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನೂ ಸೈನಿಕ ಮತ್ತು ಸರ್ವಶ್ರೇಷ್ಠರ ಪೋಟಾಪೋಟಿಗಳನ್ನೂ ನಿರ್ವಹಿಸುತ್ತವೆ. ಇಟಲಿಯ ವಿಶ್ವವಿಖ್ಯಾತ ಖಡ್ಗಪ್ರವೀಣ ಅಲ್ಟೋನಾಡಿ ಅಮೆರಿಕಕ್ಕೆ 1938ರಲ್ಲಿ ಹೋದ ಅನಂತರ ಅಲ್ಲಿ ಖಡ್ಗಕಲೆ ಅಗಾಧವಾಗಿ ಬೆಳೆಯಿತು. ಅಮೆರಿಕದ ಕಾಲೇಜುಗಳು ಪರಸ್ಪರ ನಡೆಸುವ ಅಗ್ರಣಿ ಕತ್ತಿ ಸ್ಪರ್ಧೆಗಳಿಗೆ ಹದಿನೈದು ವಿಶ್ವವಿದ್ಯಾನಿಲಯಗಳು ಸೇರಿವೆ.

ಆಧುನಿಕ ಕತ್ತಿವರಸೆಗಳಲ್ಲಿ ಮೂರು ವಿಧಗಳಿವೆ: 1 ಫಾಯಿಲ್ (ಫ್ರಾನ್ಸ್‌ ಮತ್ತು ಇಟಲಿಗಳ ಫಾಯಿಲ್ಗಳಲ್ಲಿ ಭಿನ್ನತೆ ಇದೆ); 2 ಏಪೇ; 3 ಕೊಂಕುಕತ್ತಿ. ಈ ವಿಧಗಳಲ್ಲಿ ಬಳಕೆಯಾಗುವ ಕತ್ತಿಗಳು ಬೇರೆ ಬೇರೆ ತರದವು. ಇವುಗಳಿಗೆ ಬೇರೆ ಬೇರೆ ನಿಯಮ, ಕಟ್ಟಳೆಗಳಿವೆ. ಪುರುಷರು ಮೂರು ವಿಧಗಳಲ್ಲೂ ಸಾಧನೆ ಮಾಡುತ್ತಾರೆ. ಸ್ತ್ರೀಯರ ಸಾಧನೆ ಫಾಯಿಲ್ನಲ್ಲಿ ಮಾತ್ರ. ಕತ್ತಿವರಸೆಗಾರ ತಲೆಯ ರಕ್ಷಣೆಗೆ ಬಲೆಯ ಕಣ್ಣುಗಳಿರುವ ಬಲವಾದ ಮುಖವಾಡವನ್ನು ಧರಿಸುತ್ತಾನೆ. ಅವನ ದೃಷ್ಟಿಗೆ ಇದರಿಂದ ಅಡಚಣೆಯಾಗುವುದಿಲ್ಲ. ಮೆತ್ತೆಯಿಂದ ತುಂಬಿದ ಬಿಳಿಯ ಕ್ಯಾನ್ವಾಸ್ ಅಥವಾ ಗ್ಯಾಬಡ್ಙೀನ್ನ ಕವಚ; ಮೊಣಕಾಲುವರೆಗಿನ ಷರಾಯಿ; ಕತ್ತಿ ಹಿಡಿದ ಕೈಗೆ ತೊಗಲಿನ ಕೈಚೀಲ; ಕಾಲುಗಳಿಗೆ ದಪ್ಪ ಕಾಲುಚೀಲ ಮತ್ತು ಚಪ್ಪಟೆ ತಳದ ಜೋಡುಗಳು; ಇಟಲಿಯ ಫಾಯಿಲ್ ಆದಾಗ ಕೈಹರಡಿಗೆ ತೊಗಲಿನ ಬಾರು-ಇವು ಸ್ತ್ರೀಪುರುಷರಿಬ್ಬರಿಗೂ ಉಡುಪು. ಸ್ತ್ರೀಯರಿಗೆ ವಕ್ಷಸ್ಥಳದ ರಕ್ಷಣೆಯೂ ಬೇಕು. ಮನೆಯೊಳಗಾಗಲೀ ಅಥವಾ ಬೈಲಿನಲ್ಲಾಗಲೀ ಇರುವ ಸ್ಪರ್ಧಾರಂಗ ಕಡೇಪಕ್ಷ ಸು. 12 ಮೀ ಉದ್ದ ಸು. 1.8 ಮೀ ಅಗಲ ಇರುವುದು. ಅದನ್ನು ಲಿನೋಲಿಯಂ ತುಕಡಿ ಅಥವಾ ಕಾರ್ಕ್ ಮುಚ್ಚಿರುತ್ತದೆ. ಏಪೇಗೆ ತಾಮ್ರದ ಜಾಲ ಹಾಸಿರುತ್ತದೆ. ಫಾಯಿಲ್ : ಇದು ನಾಲ್ಕು ಅಂಚುಗಳುಳ್ಳ ತೆಳುವಾದ ಜಾಲ ಹಾಸಿರುತ್ತದೆ. ಮಣಿಯುವ ಉಕ್ಕಿನ ಅಲಗಿನ ಇರಿಯುವ ಕತ್ತಿ. ತುದಿಗೆ ರಬ್ಬರ್ ಗುಂಡಿ ಹಾಕಿ ಮೊಂಡು ಮಾಡಿದೆ. ಕೈ ರಕ್ಷಣೆಗೆ ಗುಂಡಾದ ಕಾಪು ಇದೆ. ಇಟಲಿಯ ಫಾಯಿಲ್ ಇದಕ್ಕಿಂತ ಸ್ವಲ್ಪ ಹೆಚ್ಚು ಉದ್ದ; ಘಂಟೆ ಆಕಾರದ ಕಾಪು ಕೈಯನ್ನು ರಕ್ಷಿಸುತ್ತದೆ. ಈ ಕತ್ತಿವರಸೆ ಕೈ ಹರಡು ಕಣ್ಣುಗಳಿಗೆ ಮಾತ್ರವೇ ಅಲ್ಲ, ತಲೆಯಿಂದ ಹಿಮ್ಮಡಿಯವರೆಗೆ ಪ್ರತಿಯೊಂದು ಸ್ನಾಯು, ನರ, ಅಂಗಾಂಶಕ್ಕೂ ಕಸರತ್ತು ಕೊಡುತ್ತದೆ. ತಲೆಯನ್ನು ನೆಟ್ಟಗಿಡುತ್ತದೆ. ಭುಜಗಳನ್ನು ಬಿಗಿಸುತ್ತದೆ. ಕತ್ತಿವರಸೆಗೆ ಇದೇ ತಳಹದಿ. ಇದನ್ನು ಕಲಿತರೆ ಉಳಿದೆರಡೂ ಸುಲಭ. ಇದನ್ನು ಲಘುವಾಗಿ ಅಂಗೈ ಮತ್ತು ಬೆಟ್ಟುಗಳಿಂದ ಹಿಡಿದುಕೊಂಡು ಹೆಬ್ಬಟ್ಟನ್ನು ಹಿಡಿಕೆಯ ಮೇಲುಭಾಗದ ಮೇಲೆ ಅರಿತಿರಬೇಕು.

ಕತ್ತಿವರಸೆಗಾರರಿಬ್ಬರೂ ಹಿಮ್ಮಡಿಗಳನ್ನು ತಗಲಿಸಿಕೊಂಡು, ಪಾದಗಳನ್ನು ಸಮಕೋನ ದಲ್ಲಿಟ್ಟು, ಕಾಲುಗಳನ್ನು ಬಾಗಿಸಿ, ದೇಹದ ಭಾರವನ್ನು ಸಮವಾಗಿ ಹಂಚಿ, ಒಂದಕ್ಕೂ ಮುಂದಕ್ಕೂ ಸುಸೂತ್ರವಾಗಿ ಸಮತೋಲನದಲ್ಲಿ ಸರಳರೇಖೆಯಲ್ಲಿ ಚಲಿಸಲು ಅವಕಾಶವಾಗುವಂತೆ ಒಬ್ಬರನ್ನೊಬ್ಬರು ಅರ್ಧ ಎದುರಿಸಿ ನಿಲ್ಲಬೇಕು. ಅನಂತರ ಆಕ್ರಮಣ ಮಾಡುವವನು ಕೈ, ಕತ್ತಿ ಕೊನೆ, ಭುಜಗಳನ್ನು ಎದೆಯ ಎತ್ತರದಲ್ಲಿ ಒಂದೇ ಸರಳರೇಖೆಯಲ್ಲಿರುವಂತೆ ಬಲ ತೋಳನ್ನು ಚಾಚಿ, ಬಲಪಾದವನ್ನು ಮುಂದೂಡಬೇಕು. ಮೊಣಕಾಲು ಮಂಡಿಯನ್ನು ಚೆನ್ನಾಗಿ ಬಾಗಿಸಿ, ಹಿಂಗಾಲನ್ನು ನೆಟ್ಟಗಿಟ್ಟು, ಮೈ ಹವಣಿಕೆಗೆ ಎಡ ತೋಳನ್ನು ತಲೆಯ ಎತ್ತರದ ಮೇಲಿಡಬೇಕು. (ಕೊಂಕು ಕತ್ತಿವರಸೆಯಲ್ಲಿ ಎಡಗೈ ಸೊಂಟದ ಮೇಲಿರಬೇಕು.) ಈ ಶರೀರಸ್ಥಿತಿಗೆ ಲಂಜ್ ಎಂದು ಹೆಸರು.

ಮೇಲೆ ಬೀಳುವವನ ಗುರಿ ಎದುರಾಳಿಯ ದೇಹದ ಮುಂಡ ಮಾತ್ರ; ತಲೆ, ತೋಳು, ಕಾಲುಗಳಲ್ಲ. ಅವನು ಗುರಿಯನ್ನು ಕತ್ತಿಯಿಂದ ಒಂದು ಸಾರಿ ಮುಟ್ಟಿದರೆ ಒಂದು ಅಂಶ ಗೆದ್ದಂತೆ. ಐದು ಸಾರಿ ಮುಟ್ಟಿದರೆ ಒಂದು ಸುತ್ತು ಗೆದ್ದಂತೆ. ಹೆಂಗಸು ಒಂದು ಸುತ್ತನ್ನು ಗೆಲ್ಲಲು ನಾಲ್ಕು ಸಾರಿ ಮುಟ್ಟಿದರೆ ಸಾಕು. ಗುರಿಯ ಆಚೆ ಮುಟ್ಟಿದರೆ ಅದು ಲೆಕ್ಕಕ್ಕಿಲ್ಲ; ದಂಡನೆಯುಂಟು.

ಆಕ್ರಮಣಕಾರನಿಗೆ ಎದುರಾಳಿಯ ಮೇಲೆ ನುಗ್ಗಲು ಹಕ್ಕಿದೆ. (ರೈಟ್ ಆಫ್ ವೇ). ಆಗ ಎದುರಾಳಿ ಈ ಏಟನ್ನು ತಪ್ಪಿಸಿಕೊಂಡರೆ ಆಕ್ರಮಣದ ಹಕ್ಕು ಅವನಿಗೆ ಬರುತ್ತದೆ. ಹಕ್ಕು ಸರ್ತಿಯ ಪ್ರಕಾರ ಪರಸ್ಪರ ಬದಲಿಸುತ್ತದೆ. ಇಬ್ಬರೂ ಏಕಕಾಲದಲ್ಲಿ ಪರಸ್ಪರ ಮುಟ್ಟಿದರೆ ಹಕ್ಕುದಾರನ ಹೊಡೆತಕ್ಕೆ ಮಾತ್ರ ಲೆಕ್ಕ. ಆಕ್ರಮಣದಲ್ಲಿ ಗುರಿಯ ಬೇರೆ ಬೇರೆ ಭಾಗಗಳನ್ನು ಮುಟ್ಟಲು ನಾನಾ ವಿಧಗಳಿವೆ; ಎದುರಾಳಿಯ ಕತ್ತಿಯಿಲ್ಲದ ಗುರಿಯ ಕಡೆ ಕತ್ತಿ ಇರಿಯುವುದು; ತಿವಿತಕ್ಕೆ ದಾರಿ ಕೊಡದಂತೆ ಎದುರಾಳಿ ಕತ್ತಿ ಹಿಡಿದುಕೊಂಡಿದ್ದರೆ ಅದನ್ನು ಚುರುಕಾಗಿ ಬಡಿದು ಅಥವಾ ಅದುಮಿ ದಾರಿ ಮಾಡಿಕೊಂಡು ತಿವಿಯುವುದು; ಕತ್ತಿ ತುದಿಯನ್ನು ಎದುರಾಳಿಯ ಕಾಪಿನ ಸುತ್ತಲೂ ತಿರುಗಿಸಿ, ತಿವಿತಕ್ಕೆ ದಾರಿ ಮಾಡಿಕೊಳ್ಳುವುದು; ಕತ್ತಿಯಿಂದ ತಿವಿಯುವಂತೆ ನಟಿಸಿ ಅದನ್ನು ಬೇರೆ ಕಡೆ ತಿರುಗಿಸಿ ತಿವಿಯುವುದು; ಓಡುತ್ತ ಅಥವಾ ನೆಗೆಯುತ್ತ ಹೋಗಿ ತಿವಿಯುವುದು; ಎದುರಾಳಿಯ ಕತ್ತಿ ಕೊನೆಯ ಮೇಲೆ ತನ್ನ ಕತ್ತಿಯನ್ನು ನುಗ್ಗಿಸಿ ಬೇರೆ ದಿಕ್ಕಿನಿಂದ ಮುಟ್ಟುವುದು; ಇತ್ಯಾದಿ. ಎದುರಾಳಿ ತನ್ನ ಮೇಲೆ ಬೀಳುವ ಆಕ್ರಮಣದ ಏಟುಗಳನ್ನು ನಿವಾರಿಸಲೂ ಎಂಟು ವಿಧಗಳಿವೆ; ಆಕ್ರಮಣಕಾರಿಯ ಕತ್ತಿಯನ್ನು ಚುರುಕಾಗಿ ಬಡಿದು ಪಕ್ಕಕ್ಕೆ ತಿರುಗಿಸಿ ಮಾರ್ಗ ತಪ್ಪಿಸುವುದು; ತನ್ನ ಕತ್ತಿ ಕೊನೆಯನ್ನು ಆಕ್ರಮಣಕಾರಿಯ ಕತ್ತಿಯ ಸುತ್ತಲೂ ಸುತ್ತಿಸಿ ಅಲಗನ್ನು ಪಕ್ಕಕ್ಕೆ ತಿರುಗಿಸುವುದು; ಇತ್ಯಾದಿ. ಇವುಗಳಿಗೆಲ್ಲ ಖಡ್ಗಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿವೆ.

ಸ್ಪರ್ಧೆಯ ತೀರ್ಮಾನಕ್ಕೆ ನಾಲ್ಕು ಪಂಚಾಯತರೂ ಒಬ್ಬ ಅಧ್ಯಕ್ಷನೂ ಇರುತ್ತಾರೆ. ಸ್ವಯಂಚಾಲಕ ವಿದ್ಯುತ್ ಸಲಕರಣೆಯು ಗಂಟೆಶಬ್ದ, ದೀಪಗಳನ್ನುಂಟು ಮಾಡಿ ಪ್ರತಿಯೊಂದು ಇರಿತವನ್ನೂ ನಿಖರವಾಗಿ ತಿಳಿಸುತ್ತದೆ. ಇದಕ್ಕೆ ಒಬ್ಬನೇ ಸಾಕು. ಏಪೇ : ಇದು ಹಿಂದಿನ ದ್ವಂದ್ವಯುದ್ಧ ಕತ್ತಿಯ ಪ್ರತಿರೂಪ. ಅಲಗಿನ ಕೊನೆಯಲ್ಲಿ ಚೂಪಾದ ಬಿಂದುವಿನ ಬದಲು ಚಪ್ಪಟೆ ಗುಂಡಿಯಂಥ ಮೊಳೆಯ ತಲೆ ಮೊಂಡು ಮಾಡಿದೆ. ಫಾಯಿಲ್ನಷ್ಟೇ ಉದ್ದ. ಅದಕ್ಕಿಂತ ಹೆಚ್ಚು ಭಾರ; 27 ಔನ್ಸ್‌. ತ್ರಿಕೋನಾಕಾರ. ಗಡುಸು. ಬಹು ದೊಡ್ಡ ಕಾಪು. ಫಾಯಿಲ್ನಂತೆ ತಿವಿಯುವ ಆಯುಧ; ಹಕ್ಕಿನ ಕ್ರಮವಿದೆ. ಕತ್ತಿ ತುದಿಗೆ ಸಿಕ್ಕಿಸಿದ ಮೂರು ಚಿಕ್ಕ ಮುಳ್ಳುಗೋಲುಗಳು ಬಟ್ಟೆಗೆ ಸಿಕ್ಕಿಕೊಂಡು ಕತ್ತಿ ತಗಲಿದ್ದನ್ನು ಸ್ಪಷ್ಟಪಡಿಸುತ್ತವೆ. ತಲೆಯಿಂದ ಕಾಲ್ಬೆರಳವರೆಗೆ ಇಡೀ ಶರೀರ ಗುರಿ. ಎಲ್ಲಿ ಮುಟ್ಟಿದರೂ ಎಣಿಕೆ, ಯಾರು ಮೊದಲು ಮುಟ್ಟುತ್ತಾರೋ ಅವರಿಗೆ ಎಣಿಕೆ. ಇಬ್ಬರೂ ಏಕಕಾಲದಲ್ಲಿ ಮುಟ್ಟಿದರೆ ಇಬ್ಬರಿಗೂ ಎಣಿಕೆ. ಫಲಿತಾಂಶನಿರ್ಣಯಕ್ಕೆ ಇದರಲ್ಲೂ ಐದು ಮಂದಿ. ವಿದ್ಯುತ್ ಸಲಕರಣೆಯಿಂದ ನಿರ್ಣಯಿಸುವ ಕ್ರಮವೂ ಬಂದಿದೆ.

ಕೊಂಕು ಕತ್ತಿ : ಇದು ಒಂದನೆಯ ಎಲಿಜಬೆತ್ ರಾಣಿಯ ಕಾಲದ ಕತ್ತಿಯಿಂದಲೂ ಅಶ್ವಪಡೆಯ ಭಾರದ ಕತ್ತಿಯಿಂದಲೂ ವಿಕಸಿತವಾಗಿದೆ. ಚಪ್ಪಟೆಯಾದ ಮಣಿಯುವ ಅಲಗಿದೆ. ಇದರಿಂದ ಕತ್ತರಿಸಲೂ, ತಿವಿಯಲೂ ಸಾಧ್ಯ. ಮುಂದಿನ ಅಂಚಿನಿಂದ ಪುರ್ತಿ ಯಾಗಿಯೂ ಹಿಂದಿನ ಅಂಚಿನ 1/2ರಷ್ಟು ಭಾಗದಿಂದಲೂ ಅಥವಾ ತುದಿಯಿಂದಲೂ ಹೊಡೆಯಬಹುದು. ಅಲಗು ಮೊಂಡ; ಕೆಡಕು ಮಾಡುವುದಿಲ್ಲ. ತೆಳ್ಳಗಿದೆ. ಫಾಯಿಲ್ನಂತೆ ಗಿ ಆಕಾರ. ಲೋಹದ ದೊಡ್ಡ ಕಾಪು ಕೈಯ ಹಿಂದಿನ ಸುತ್ತಲೂ ಬಾಗಿ ಕೈಗಣ್ಣುಗಳನ್ನೂ ತೋಳನ್ನೂ ರಕ್ಷಿಸುತ್ತದೆ. ಇದರಲ್ಲಿ ಹಕ್ಕಿನ ನಿಯಮವಿಲ್ಲ. ಸೊಂಟದ ಮೇಲಿನ ಎಲ್ಲ ಭಾಗವೂ ಗುರಿ; ಕಾಲುಗಳೂ ಪಾದಗಳೂ ಸೇರಿಲ್ಲ. ಇದು ರೋಮಾಂಚಕಾರಿ ಆಟ. ಹೆಂಗಸರಿಗೆ ಇದರಲ್ಲಿ ಪ್ರಧಾನತ್ವ ಬಂದಿದೆ. (ಎಂ.ಜಿ.ಕೆ.ಎಂ.)

ಭಾರತದಲ್ಲಿ ಕತ್ತಿವರಸೆ ಬಹುಶಃ ಕುಸ್ತಿಯ ಜೊತೆಗೆ ಕೂಡಿಯೇ ಇರುತ್ತಿತ್ತು. ಗರಡಿ ಮನೆಯ ಅಖಾಡದಲ್ಲಿ ವಸ್ತಾಜಿಗಳು ತಮ್ಮ ಶಿಷ್ಯರಿಗೆ ಕುಸ್ತಿಯೊಂದಿಗೆ ಕತ್ತಿ ವರಸೆ ಮುಂತಾದವನ್ನು ಕಲಿಸುತ್ತಿದ್ದರು. ಈ ದೇಶದ ಕೆಲ ಭಾಗಗಳಲ್ಲಿ ಈಗಲೂ ಮೆರವಣಿಗೆಗಳ ಅಂಗವಾಗಿ ಗದೆ, ಕೋಲು, ಬರ್ಜಿ, ಈಟಿ ಇವುಗಳ ಜೊತೆಗೆ ಕತ್ತಿ ವರಸೆಗಳನ್ನೂ ಪ್ರದರ್ಶಿಸುತ್ತಾರೆ. ಇಂಗ್ಲೆಂಡ್ ಮತ್ತು ಇತರ ದೇಶಗಳಲ್ಲಿ ಕೆಲವು ಕಾಲ ಬಳಕೆಯಲ್ಲಿದ್ದಂತೆ, ಕತ್ತಿವರಸೆಗೆ ಉದ್ದವಾದ ಕತ್ತಿಯೇ ಆಯುಧ. (ವಿ.ಎನ್.ಎಸ್.ಎಂ.)