ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಥೈಯೆನ್ ಗಣರಾಜ್ಯ

ವಿಕಿಸೋರ್ಸ್ದಿಂದ

ಕಥೈಯೆನ್ ಗಣರಾಜ್ಯ : ಅಲೆಕ್ಸಾಂಡರನ ಭಾರತ ದಂಡಯಾತ್ರೆಯ ಕಾಲದಲ್ಲಿ, ರಾಬಿ ನದಿಯ ಪುರ್ವದಂಡೆಯ ಮೇಲೆ ಈಗಿನ ಲಾಹೋರ್ ಮತ್ತು ಅಮೃತಸರಗಳ ಹಲವು ಭಾಗಗಳಲ್ಲಿ ಇದ್ದ ಗಣರಾಜ್ಯ. ಆತನೊಂದಿಗೆ ಬಂದಿದ್ದ ಗ್ರೀಕ್ ಲೇಖಕರು ಈ ರಾಜ್ಯದ ಬಗ್ಗೆ ಅನೇಕ ವಿವರಗಳನ್ನು ನೀಡಿದ್ದಾರೆ. ಸಂಕಲ ಇದರ ರಾಜಧಾನಿ. ಇದು ಕೆಲಕಾಲ ಅತ್ಯಂತ ಪ್ರಬಲವಾಗಿತ್ತೆಂದೂ ಅಲೆಕ್ಸಾಂಡರನಿಂದ ಪರಾಜಿತವಾಗುವ ಮೊದಲು ಸುತ್ತುಮುತ್ತಿನ ಇತರ ಗಣರಾಜ್ಯಗಳನ್ನೂ ಪುರ್ವ, ಅಭಿಸಾರ ಮೊದಲಾದ ರಾಜರನ್ನೂ ಯುದ್ಧಗಳಲ್ಲಿ ಸೋಲಿಸಿದ್ದುದಾಗಿಯೂ ಅರೆಯನ್ ವರ್ಣಿಸಿದ್ದಾನೆ. ಅಲೆಕ್ಸಾಂಡರನ ಆಕ್ರಮಣವನ್ನು ತಡೆಗಟ್ಟಲು ಈ ಗಣರಾಜ್ಯದ ಸೈನ್ಯ ಶಕಟವ್ಯೂಹವನ್ನು ರಚಿಸಿಕೊಂಡು ವೀರಾವೇಶದಿಂದ ಹೋರಾಡಿತು. ಆದರೆ ಅಲೆಕ್ಸಾಂಡರನ ಅಗಾಧ ಸೈನ್ಯವನ್ನು ಗೆಲ್ಲುವುದು ಇದರಿಂದಾಗಲಿಲ್ಲ.

ಈ ಜನರ ಅನೇಕ ರಾಜಕೀಯ ಮತ್ತು ಸಾಮಾಜಿಕ ಪದ್ಧತಿಗಳನ್ನು ಗ್ರೀಕ್ ಲೇಖಕರಿಂದ ಅರಿಯಬಹುದಾಗಿದೆ. ಪರಾಕ್ರಮಿಯೂ ಸುಂದರನೂ ಆದವನನ್ನು ಇವರು ತಮ್ಮ ಗಣತಂತ್ರದ ಮುಖ್ಯನನ್ನಾಗಿ ಆರಿಸುತ್ತಿದ್ದರು. ವಿವಾಹಕ್ಕೆ ಜಾತಿಯ ಕಟ್ಟಿರಲಿಲ್ಲ. ವಧೂವರರ ವಿವಾಹಕ್ಕೆ ಪರಸ್ಪರರ ಸಮ್ಮತಿಯೇ ಮುಖ್ಯ. ಬಳುವಳಿ ಪದ್ಧತಿ ಇರಲಿಲ್ಲ. ಗಣರಾಜ್ಯದಲ್ಲಿ ಜನಿಸಿದ ಮಕ್ಕಳು ಪ್ರಥಮತಃ ರಾಷ್ಟ್ರೀಯರು; ಅನಂತರ ವ್ಯಕ್ತಿಗಳು. ಮಕ್ಕಳಿಗೆ ಎರಡು ತಿಂಗಳಾಗಿರುವಾಗ ಅವುಗಳ ಆರೋಗ್ಯವನ್ನು ಪರೀಕ್ಷಿಸಿ, ದುರ್ಬಲ ಮಕ್ಕಳನ್ನು ವಧಿಸಿ ಸುದೃಢವಾದವನ್ನು ಮಾತ್ರ ಉಳಿಸಿಕೊಂಡು ಪೋಷಿಸುವ ವ್ಯವಸ್ಥೆಯಿತ್ತು. ಗ್ರೀಸಿನ ಸ್ಪಾರ್ಟದಲ್ಲಿ ಕೂಡ ಇಂಥದೇ ಪದ್ಧತಿಯಿತ್ತೆಂಬುದನ್ನು ಇಲ್ಲಿ ನೆನೆಯಬಹುದು. ಕಥೈಯೆನ್ ಹೆಂಗಸರು ಸತೀ ಪದ್ಧತಿ ಅನುಸರಿಸುತ್ತಿದ್ದರು. ಗ್ರೀಕ್ ವಿದ್ವಾಂಸರು ಕಥೈಯೆನ್ಗಳ ಆಳವಾದ ತತ್ತ್ವಶಾಸ್ತ್ರಜ್ಞಾನವನ್ನೂ ಸೂಕ್ಷ್ಮಮತಿಯನ್ನೂ ಪ್ರಶಂಸಿದ್ದಾರೆ. ಕಠೋಪನಿಷತ್ತು ಮತ್ತು ಕಟಕ ಸಂಹಿತ ಕಥೈಯೆನ್ ವಿದ್ವಾಂಸರಿಂದ ರಚಿತವಾಗಿರಬೇಕೆಂದು ಕೆ.ಪಿ. ಜಯಸ್ವಾಲರ ಅಭಿಪ್ರಾಯ. (ಜಿ.ಆರ್.ಆರ್.)