ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕದ್ರು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕದ್ರು : ದೇವಯುಗದಲ್ಲಿ ಬ್ರಹ್ಮಪುತ್ರಿಯರಾದ ಇಬ್ಬರಲ್ಲಿ ಒಬ್ಬಳು. ಇನ್ನೊಬ್ಬಳು ವಿನತೆ. ಸ್ಫುರದ್ರೂಪಿಗಳಾದ ಈ ಇಬ್ಬರೂ ಕಶ್ಯಪನ ಮಡದಿಯರು. ಇವರ ವೃತ್ತಾಂತ ಮಹಾಭಾರತದ ಆದಿಪರ್ವದಲ್ಲಿದೆ. ಕಶ್ಯಪ ಒಮ್ಮೆ ತನ್ನ ಪತ್ನಿಯರಿಗೆ ಉತ್ತಮ ವರಗಳನ್ನು ಕೊಡುವುದಾಗಿ ಪ್ರಕಟಿಸಿದಾಗ ಸಂತುಷ್ಟಾಂತಃಕರಣೆಯರಾದ ಇಬ್ಬರು ಹೆಂಡಿರೂ ತಮತಮಗೆ ಪ್ರಿಯವಾದ ವರಗಳನ್ನು ಬೇಡಿದರು. ಕದ್ರು ಸಮಾನ ತೇಜಸ್ವಿಗಳಾದ ಒಂದು ಸಾವಿರ ನಾಗಗಳನ್ನು (ಸರ್ಪ) ಪುತ್ರರಾಗಿ ಪಡೆಯಲಿಚ್ಚಿಸಿದಳು. ವಿನತೆಯಾದರೋ ಕದ್ರುವಿನ ಮಕ್ಕಳಿಗಿಂತಲೂ ಅಧಿಕವಾದ ಬಲಸಂಪತ್ತಿನಿಂದ ಕೂಡಿದ ಇಬ್ಬರು ಮಕ್ಕಳನ್ನು ಮಾತ್ರ ಬೇಡಿದಳು. ಅವರವರ ಅಪೇಕ್ಷೆಯಂತೆ ಕಶ್ಯಪ ವರವಿತ್ತು ತಪಸ್ಸಿಗೆ ತೆರಳಿದ. ಬಹುಕಾಲ ಕಳೆದ ಮೇಲೆ ಕದ್ರು ಒಂದು ಸಾವಿರ ಅಂಡಗಳನ್ನೂ ವಿನತೆ ಎರಡು ಅಂಡಗಳನ್ನೂ ಪಡೆದರು. ಹೀಗೆ ಪಡೆದ ಅಂಡಗಳನ್ನು ಪರಿಚಾರಿಕೆಯರು ಸ್ನೇಹಪುರ್ಣ ಕುಂಡಗಳಲ್ಲಿ ಇಟ್ಟು ಐದು ನೂರು ವರ್ಷಗಳವರೆಗೆ ರಕ್ಷಿಸಿದರು. ಅನಂತರ ಕದ್ರುಪುತ್ರರು ಹೊರಬಿದ್ದರು. ವಿನತಾಪುತ್ರರು ಮಾತ್ರ ಹೊರಬೀಳದ ಕಾರಣ ಲಜ್ಜಿತಳಾದ ವಿನತೆ ಒಂದು ಅಂಡವನ್ನು ಒಡೆದಳು. ಅಲ್ಲಿ ಶಿಶು ಪುರ್ಣಾಂಗವಾಗಿ ಇರಲಿಲ್ಲವಾದ ಕಾರಣ ಅದು ತನ್ನ ತಾಯಿಗೆ ಶಾಪ ಕೊಟ್ಟಿತು-ನೀನು ಐದು ನೂರು ವರ್ಷಗಳ ಕಾಲ ನಿನ್ನ ಪ್ರತಿಸ್ಪರ್ಧಿಗೆ ದಾಸಿಯಾಗುವೆ-ಎಂದು. ಈ ಶಾಪ ಮುಂದುವರಿದು ಒಮ್ಮೆ ಕದ್ರುವಿನಲ್ಲಿ ಒಂದು ಬಗೆಯ ಬುದ್ಧಿವಿಕಾರವುಂಟಾಯಿತು. ಕದ್ರು ಒಮ್ಮೆ ವಿನತೆಯನ್ನು ಕುರಿತು ಉಚ್ಚೈಶ್ರವಸ್ಸಿನ ಬಣ್ಣವಾವುದೆಂದು ಕೇಳಿದಳು. ಇಂದ್ರನ ಪಟ್ಟದ ಕುದುರೆಯಾದ ಉಚ್ಚೈಶ್ರವಸ್ಸಿನ ಬಣ್ಣ ಬಿಳುಪೆಂಬ ವಿಷಯ ಸರ್ವವಿದಿತವಾದ್ದರಿಂದ ವಿನತೆ ಹಾಗೆಂದು ಉತ್ತರವಿತ್ತಳು. ಅಲ್ಲದೆ ಅದರ ಬಣ್ಣ ಬೇರೆಯಾಗಿದೆಯೆ ಎಂದು ಕದ್ರುವನ್ನು ಆಕೆ ಮರುಪ್ರಶ್ನಿಸಿದಳು. ಅದಕ್ಕೆ ಕದ್ರು ಅದರ ಬಾಲ ಮಾತ್ರ ಕಪ್ಪಾಗಿದೆಯೆಂದು ಹೇಳಿ ಇಬ್ಬರೂ ಹೋಗಿ ಕುದುರೆಯ ಬಣ್ಣವನ್ನು ಪರೀಕ್ಷಿಸಬೇಕೆಂದೂ ಯಾರ ಹೇಳಿಕೆ ನಿಜವಾಗುತ್ತದೋ ಅವರಿಗೆ ಸೋತವರು ದಾಸಿಯಾಗಬೇಕೆಂದೂ ಪಣವೊಡ್ಡಿದಳು. ತನ್ನ ಪುತ್ರರಾದ ನಾಗರು ಕುದುರೆಯ ಬಾಲಕ್ಕೆ ಅಂಟಿಕೊಂಡು ಅದನ್ನು ಕಪ್ಪಾಗಿಸತಕ್ಕದ್ದೆಂದು ಕದ್ರು ಗುಟ್ಟಾಗಿ ಸಂಚು ನಡೆಸಿದಳಾಗಿ ಇಬ್ಬರು ಸೋದರಿಯರೂ ಹೋಗಿ ನೋಡಿದಾಗ ಕುದುರೆ ಹಾಲು ಗಲ್ಲಿನಂತೆ ಬೆಳ್ಳಗೆ ಕಂಡರೂ ಬಾಲ ಮಾತ್ರ ಹಾಲಾಹಲದಂತೆ ಕಪ್ಪಾಗಿಯೇ ತೋರಿತು. ಅಂತೂ ಕದ್ರುವೇ ಗೆದ್ದಳು. ಪಣದಂತೆ ವಿನತೆ ಕದ್ರುವಿನ ದಾಸಿಯಾದಳು. ಬಹುಕಾಲ ಸಂದಮೇಲೆ ವಿನತಾಪುತ್ರನಾದ ಗರುಡ ತಾಯ ಸೆರೆಯನ್ನು ಬಿಡಿಸಿದ. (ನೋಡಿ-ಗರುಡ) (ಎನ್.ಎಸ್.ಆರ್.ಬಿ.)