ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ದಾಸ ಸಾಹಿತ್ಯ

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ದಾಸಸಾಹಿತ್ಯ: --ಕನ್ನಡಕ್ಕೆ ಹರಿದಾಸರ ಕೊಡುಗೆ ಅಪಾರ. ಅನೇಕಾನೇಕ ಹಾಡುಗಳಾಗಿ, ಭಗವದ್ಭಕ್ತರ ಜೀವನಕಥನಗಳಾಗಿ, ವಚನರೂಪದ ಸುಳಾದಿ ಉಗಾಭೋಗಗಳಾಗಿ ಅದು ಬೆಳೆದಿದೆ. ತತ್ತ್ವಬೋಧೆಯನ್ನು ರಮ್ಯವಾಗಿ ಸುಲಭಗ್ರಾಹ್ಯವಾಗಿ ಹೇಳುವಲ್ಲಿ, ಆಡುಮಾತನ್ನೂ ಕನ್ನಡಛಂದಸ್ಸುಗಳನ್ನೂ ಬಳಸುವಲ್ಲಿ ಅದರ ವೈಶಿಷ್ಟ್ಯವನ್ನು ಕಾಣಬಹುದು. 13ನೆಯ ಶತಮಾನದ ವೇಳೆಗೆ ದ್ವೈತಸಿದ್ಧಾಂತವನ್ನು ಸಾರಿದ ಮಧ್ವಾಚಾರ್ಯರು ಹರಿದಾಸ ಪಂಥಕ್ಕೆ ಮೂಲಪ್ರೇರಕರು. ಅವರ ದ್ವಾದಶಸ್ತೋತ್ರ ಹರಿದಾಸರಿಗೆ ಸ್ಫೂರ್ತಿಯ ಸೆಲೆ. ಅವರ ದ್ವೈತಸಿದ್ಧಾಂತ ಹರಿದಾಸರ ಸಿದ್ಧಾಂತವೂ ಹೌದು. ಮಧ್ವಮತದ ತತ್ತ್ವಗಳನ್ನೊಪ್ಪಿ, ಅವುಗಳ ಪ್ರತಿಪಾದನೆಯೊಂದಿಗೆ ತಮ್ಮ ಭಕ್ತಿ ಸಾಧನೆಯನ್ನೂ ಮೇಳವಿಸಿದ್ದಾರೆ ಹರಿದಾಸರು. ಇತ್ತೀಚೆಗೆ ದೊರೆತಿರುವ ಕನ್ನಡ ಭಾಷೆಯ ಒಂದು ಓಲೆಗ್ರಂಥದ ನಾಲ್ಕೇನಾಲ್ಕು ಓಲೆಗರಿಗಳಲ್ಲಿ ಅಚಲಾನಂದರನ್ನು ಕುರಿತ ಕೆಲವು ಸಂಗತಿಗಳಿವೆ. ಆ ಪ್ರಕಾರ ಸು.9ನೆಯ ಶತಮಾನದಲ್ಲಿ ಒಬ್ಬರು ಅಚಲಾನಂದರು ಇದ್ದರು. ಅವರು ಮಠಾದಿಪತಿಗಳಾಗಿದ್ದುದಲ್ಲದೆ ಪಾಂಡುರಂಗ, ಕಳಸ, ವಿದ್ಯಾನಗರ, ಪೆನುಗೊಂಡೆ, ರಾಮೇಶ್ವರ, ಕಾಶಿ, ಕೆಳದಿ, ಬಿದನೂರುಗಳಲ್ಲಿ ಒಂದೊಂದು ಮಠವನ್ನು ಸ್ಥಾಪಿಸಿದರು. ಆದರೆ ಅವರದೆನ್ನಲಾಗಿರುವ ಕೃತಿಗಳ ಭಾಷೆ 9ನೆಯ ಶತಮಾನದ್ದಲ್ಲ; 15-16ನೆಯ ಶತಮಾನದ ಕನ್ನಡ. ಈ ಸಂದಿಗ್ಧವನ್ನು ಗಮನಿಸಿ ಬೇರೆ ಬೇರೆ ಕಾಲಕ್ಕೆ ಸೇರಿದ ಇಬ್ಬರು ಅಚಲಾನಂದರು ಇದ್ದಿರಬೇಕು ಎಂದು ಹೇಳಿದ ವರದರಾಜರಾಯರ ಊಹೆ ನಿಜವಾದುದು. ಇವರ ಈ ಊಹೆಗೆ 1722ರ ತೊಣ್ಣೂರು ದೇವಾಲಯದ ತಾಮ್ರಶಾಸನಮೊಂದು ಪೂರಕ ಮಾಹಿತಿ ನೀಡುತ್ತದೆ. ಮೈಸೂರಿನ ದೊರೆ ಒಂದನೆಯ ಕೃಷ್ಣರಾಜ ತೊಂಡೂರು, ಅತ್ತಿಕುಪ್ಪೆ ಹಳ್ಳಿಗಳನ್ನು ಅಗ್ರಹಾರವನ್ನಾಗಿ ಮಾಡಿ, ಅದನ್ನು ವೃತ್ತಿಗಳಾಗಿ ವಿಭಜಿಸಿ, ಹೊರನಾಡುಗಳಿಂದ ಆಹ್ವಾನಿತರಾಗಿ ಬಂದ ಬ್ರಾಹ್ಮಣರಿಗೆ ಅಲ್ಲಿಯೇ ನೆಲೆಸಲೆಂದು ಹಂಚಿಕೊಟ್ಟ ವಿಚಾರ ಅದರಲ್ಲಿದೆ.

................. ಅಚಲಾನನ್ದದಾಸಾಖ್ಯ ವಿಷ್ಣುಕುಲೋದ್ಭವಃ ಆಶ್ವಲಾಯನ ವಾಸಿಷ್ಠ ಋಕ್ಯಾಖ್ಯಪ್ಪಣ ಪುತ್ರಜಃ ವೃತ್ತಿಂ ನೃಸಿಂಹಜೋ ತ್ರೈಕಾಂ ಹರಿದಾಸಸ್ಸಮಶ್ನುತೇ

ವೃತ್ತಿಗಳನ್ನು ಪಡೆದ 112 ಜನರಲ್ಲಿ ವೈಷ್ಣವ ಮನೆತನದಲ್ಲಿ ಹುಟ್ಟಿದ, ನೃಸಿಂಹನ ಮಗನೂ ಅಪ್ಪಣನ ಮೊಮ್ಮಗನೂ ಆದ, ವಾಸಿಷ್ಠಗೋತ್ರ ಆಶ್ವಲಾಯನ ಸೂತ್ರ ಋಕ್ ಶಾಖಾಧ್ಯಾಯಿ ಅಚಲಾನಂದದಾಸರೂ ಒಬ್ಬರು. ಅಚಲಾನಂದರನ್ನು ಹೆಸರಿಸುವ ಇನ್ನೊಂದು ಶಾಸನ 15-16ನೆಯ ಶತಮಾನಕ್ಕೆ ಸೇರಿದ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ನಲ್ಲೂರು ಶಾಸನ. ಈ ಶಾಸನದಲ್ಲಿ ‘ಶ್ರೀ ಅಚಲಾನಂದನ ವಿಠಲ’ ಎಂಬ ಬರೆಹವಿದೆ. ಈ ಎಲ್ಲ ದಾಖಲೆಗಳನ್ನು ಗಮನಿಸಿದಾಗ ದೊರೆತಿರುವ ಅಚಲಾನಂದ ವಿಠಲಾಂಕಿತ ಕೀರ್ತನೆಗಳು 9ನೆಯ ಶತಮಾನದ ಮಠಾದಿಪತಿ ಅಚಲಾನಂದರದಲ್ಲ 16ನೆಯ ಶತಮಾನದ ಹರಿದಾಸ ಅಚಲಾನಂದರದು ಎಂಬುದು ಸ್ಪಷ್ಟ. ಹೀಗಾಗಿ ಹರಿದಾಸಪಂಥಕ್ಕೆ ಅಚಲಾನಂದ ದಾಸರು ಮೊದಲಿಗರೆನ್ನುವ ವಾದವನ್ನು ಒಪ್ಪಲಾಗುವುದಿಲ್ಲ.

ಬೇಲೂರು ಕೇಶವದಾಸರು ಮತ್ತು ಎ.ಟಿ.ಪಾಟೀಲರು ಸು.9ನೆಯ ಶತಮಾನ ದಲ್ಲಿದ್ದರೆನ್ನಲಾದ ಅಚಲಾನಂದದಾಸರೇ ಹರಿದಾಸಪಂಥಕ್ಕೆ ಮೊದಲಿಗರೆಂದು ಅಬಿಪ್ರಾಯ ಪಟ್ಟಿದ್ದಾರೆ. ಅಚಲಾನಂದವಿಠಲ ಎಂಬ ಅಂಕಿತದಲ್ಲಿರುವ ಕೀರ್ತನೆ, ಉಗಾಭೋಗಗಳ ಭಾಷೆ 15ನೆಯ ಶತಮಾನದ್ದಾಗಿ ಕಾಣುವುದರಿಂದಲೂ ಅಚಲಾನಂದರು ಮಧ್ವಮತದ ವಿಷಯವನ್ನೆತ್ತಿರುವುದರಿಂದಲೂ ಇವರ ಕಾಲ 13ನೆಯ ಶತಮಾನದಿಂದ ಈಚಿನದಾಗುತ್ತದೆ ಎಂದು ಆರ್.ಎಸ್.ಪಂಚಮುಖಿ, ಕೆ.ಎಂ.ಕೃಷ್ಣರಾವ್, ಎಚ್.ಕೆ.ವೇದವ್ಯಾಸಾಚಾರ್ಯ, ಜಿ.ವರದರಾಜರಾವ್, ರಂ.ಶ್ರೀ.ಮುಗಳಿ ಮೊದಲಾದ ವಿದ್ವಾಂಸರು ಅಬಿಪ್ರಾಯಪಡುತ್ತಾರೆ.

13ನೆಯ ಶತಮಾನದ ಮಧ್ವಾಚಾರ್ಯರ ನೇರಶಿಷ್ಯರಾದ ನರಹರಿತೀರ್ಥರೇ ಹರಿದಾಸ ಪಂಥದ ಆದ್ಯಪ್ರವರ್ತಕರೆಂಬ ಒಂದು ವಾದವೂ ಇದೆ. ಅವರವೆಂದು ಹೇಳಲಾಗಿರುವ ಕೇವಲ ಮೂರೇ ಮೂರು ಕೀರ್ತನೆಗಳು ದೊರೆತಿವೆ. ಈ ವಾದದ ಬಗ್ಗೆ ಚರ್ಚಿಸಿದವರಲ್ಲಿ ಆರ್.ಎಸ್.ಪಂಚಮುಖಿ, ಗೋರಬಾಳ ಹನುಮಂತರಾವ್, ಕೆ.ಎಂ.ಕೃಷ್ಣರಾವ್ ಮುಖ್ಯರು. ಅವರ ವಾದದ ಸಾರಾಂಶವಿಷ್ಟು: ದೊರೆತಿರುವ ಮೂರು ಕೀರ್ತನೆಗಳಲ್ಲೂ ಅಂಕಿತ ನಿರ್ದಿಷ್ಟವಾಗಿಲ್ಲ. ನರಹರಿತೀರ್ಥರ ಶಿಷ್ಯಪರಂಪರೆಯಿಲ್ಲ; ಹರಿದಾಸ ಪರಂಪರೆಯನ್ನು ಕುರಿತ ವಂದನಾ ಶ್ಲೋಕದಲ್ಲಿ ಅವರ ಹೆಸರಿಲ್ಲ; ಅವರ ಮಾತೃಭಾಷೆ ಕನ್ನಡವಲ್ಲ. ಈ ಕೆಲವು ಅಂಶಗಳನ್ನು ಗಮನಿಸಿ ನರಹರಿತೀರ್ಥರು ದಾಸಸಾಹಿತ್ಯಕ್ಕೆ ಮೊದಲಿಗರೆಂದು ಒಪ್ಪುವುದು ಕಷ್ಟ. ಈ ಎಲ್ಲ ವಿಚಾರಗಳನ್ನು ಗಮನಿಸಿ ಜಿ.ವರದರಾಜರಾಯರು ಅವುಗಳ ಜೊತೆಗೆ ನರಹರಿತೀರ್ಥರ ಕೃತಿಗಳಲ್ಲಿ ಕಂಡುಬರುವ ಅನುಪಲ್ಲವಿಯ ಪ್ರಯೋಗ ಆ ಕಾಲದ ಸಂಗೀತಶಾಸ್ತ್ರ ನಿಯಮಗಳಿಗೆ ವಿರುದ್ಧವಾದುದೂ ಐತಿಹಾಸಿಕವಾಗಿಯೂ ಅಸಂಗತ ಎಂಬ ವಿಚಾರಗಳನ್ನು ಎತ್ತಿ ತೋರಿಸಿ ಶ್ರೀಪಾದರಾಜರೇ ಕನ್ನಡ ಹರಿದಾಸಸಾಹಿತ್ಯದ ಆದ್ಯಪ್ರವರ್ತಕರೆಂಬುದನ್ನು ಸಾಧಾರವಾಗಿ ಸ್ಥಾಪಿಸಿದ್ದಾರೆ.

ನರಹರಿತೀರ್ಥರ ಬಳಿಕ ಸುಮಾರು ಒಂದು ಶತಮಾನದ ಅನಂತರ ನಮಗೆ ಶ್ರೀಪಾದರಾಯರ ಹೆಸರು ಸಿಕ್ಕುತ್ತದೆ. ಇವರು 15ನೆಯ ಶತಮಾನದಲ್ಲಿದ್ದ ಖ್ಯಾತ ಮಠಾದಿಪತಿ, ಹರಿದಾಸಸಾಹಿತ್ಯದ ಪ್ರಮುಖರಲ್ಲೊಬ್ಬರು. ಚನ್ನಪಟ್ಟಣದ ಬಳಿಯಿರುವ ಅಬ್ಬೂರು ಇವರ ಜನ್ಮಸ್ಥಳ. ರಂಗವಿಠಲ ಎಂಬ ಅಂಕಿತದಿಂದ ಕೃತಿರಚನೆ ಮಾಡಿದ್ದಾರೆ. ಸಂಸ್ಕೃತದ ಬಲವಿದ್ದರೂ ಕನ್ನಡದ ಒಲವನ್ನು ಕೃತಿಗಳಲ್ಲಿ ತೋರಿದ್ದಾರೆ. ಅನೇಕ ವರ್ಷಗಳ ಕಾಲ ಶ್ರೀರಂಗದಲ್ಲಿದ್ದು, ತಮಿಳಿನ ಆಳ್ವಾರರ ಕೃತಿಗಳು ಸಾಮಾನ್ಯ ಜನರ ಮೇಲೆ ಬೀರಿದ್ದ ಪ್ರಭಾವವನ್ನು ಕಣ್ಣಾರೆ ಕಂಡಿದ್ದವರು. ನರಹರಿತೀರ್ಥರ ಮೇಲ್ಪಂಕ್ತಿಯೊಂದಿಗೆ ಶಿವಶರಣರ ಪ್ರಭಾವವೂ ಸೇರಿ ಇವರ ಕೃತಿರಚನೆಗೆ ಪುಷ್ಟಿ ದೊರೆತಂತೆ ಕಾಣುತ್ತದೆ. ಹರಿದಾಸ ಸಾಹಿತ್ಯವಾಹಿನಿ ಇವರಲ್ಲಿ ವೈವಿಧ್ಯಪುರ್ಣವಾಗಿ, ಬಹುಮುಖವಾಗಿ ವಿಕಸಿಸಿದೆ. ದಾಸ್ಯ, ಸಖ್ಯ, ಮಧುರ, ವಾತ್ಸಲ್ಯ ಹಾಗೂ ಶಾಂತಭಾವಗಳ ಮೂಲಕ ಭಕ್ತಿ ಇಲ್ಲಿ ಹೊನಲಿಟ್ಟಿದೆ. ಜೋಗುಳದ ಹಾಡಿನಲ್ಲಿ ಹರಿಯ ದಶಾವತಾರಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಒಂದು ಪ್ರಸಂಗ ಅಥವಾ ಸಂದರ್ಭವನ್ನು ಆರಿಸಿಕೊಂಡು ನೀಳವಾದ ಕೀರ್ತನೆ ರಚಿಸಿರುವುದು ಇವರ ಇನ್ನೊಂದು ವೈಶಿಷ್ಟ್ಯ. ಶ್ರೀ ರುಕ್ಮಿಣಿಸತ್ಯಭಾಮ ವಿಲಾಸವನ್ನು ನಿದರ್ಶನವಾಗಿ ಹೆಸರಿಸಬಹುದು. ಇವರಲ್ಲಿ ಭಾಗವತಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆತಿದೆ. ಈ ಎಲ್ಲ ಕಾರಣಗಳಿಂದಾಗಿ ಹರಿದಾಸ ಸಾಹಿತ್ಯದ ಮುನ್ನಡೆಗೆ ಶ್ರೀಪಾದರಾಯರೇ ಮೊದಲಿಗರೆನ್ನಬಹುದು. ಕೀರ್ತನೆ, ಸುಳಾದಿ, ಉಗಾಭೋಗಳೊಂದಿಗೆ ದಂಡಕ, ವೃತ್ತನಾಮಗಳನ್ನೂ ಇವರು ಬಳಸಿಕೊಂಡಿದ್ದಾರೆ. ಇವರ ಅನಂತರದ ಹರಿದಾಸರಿಗೆ ಇವರ ಕೃತಿಗಳು ಸಾಂಪ್ರದಾಯಕವಾಗಿ ಪರಿಣಮಿಸಿದುವು. ಇವರ ಆತ್ಮಸಾಧನೆ ಉಳಿದವರಿಗೆ ಮಾರ್ಗದರ್ಶಕವಾಯಿತು.

ಶ್ರೀಪಾದರಾಯರ ಅನಂತರ ಇವರ ಶಿಷ್ಯೋತ್ತಮರಾದ ವ್ಯಾಸರಾಯರನ್ನು ಹೆಸರಿಸಬೇಕು. ಇವರು ಸು.1447ರಲ್ಲಿ ವಹ್ನಿಪುರದಲ್ಲಿ (ಈಗಿನ ಬನ್ನೂರು) ಜನಿಸಿದರು. ವಿಜಯನಗರದ ಕೃಷ್ಣದೇವರಾಯನ ಸಮಕಾಲೀನರೂ ರಾಜಮರ್ಯಾದೆಗೆ ಪಾತ್ರರೂ ಆಗಿದ್ದ ಗಣ್ಯ ಮಠಾದಿಪತಿ ಇವರು. ಶ್ರೀಕೃಷ್ಣ ಎಂಬ ಅಂಕಿತದಿಂದ ಕೃತಿರಚನೆ ಮಾಡಿದ್ದಾರೆ. ಇವರ ಮತ್ತು ಇವರ ಶಿಷ್ಯರಿಂದ ಹರಿದಾಸರ ಒಂದು ಒಕ್ಕೂಟ ಪ್ರಾರಂಭವಾಯಿತು. ಪುರಂದರದಾಸ, ಕನಕದಾಸ, ವಾದಿರಾಜರು ದಾಸಕೂಟದ ಪ್ರಮುಖ ಸ್ತಂಭಗಳು, ಪ್ರತಿನಿದಿಗಳು. ಶ್ರೀಪಾದರಾಯರಲ್ಲಿ ಕಂಡುಬರುವ ದೃಷ್ಟಿ ಭಾವಾದಿಗಳು ಇವರಲ್ಲಿ ಇನ್ನೂ ಬೆಳೆವಣಿಗೆ ಹೊಂದಿವೆ. ಅಪುರ್ವವಾದ ಕೆಲವು ಭಾವನೆಗಳನ್ನು ಇವರಲ್ಲಿ ಕಾಣಬಹುದು. ಆದಿಕವಿ ಪಂಪ ಬನವಾಸಿಯಲ್ಲಿ ಮರುಹುಟ್ಟು ಬಯಸಿದಂತೆ ವ್ಯಾಸರಾಯರು ಬೃಂದಾವನದಲ್ಲಿ ಮತ್ತೊಮ್ಮೆ ಹುಟ್ಟಬೇಕೆಂದು ಹಂಬಲಿಸುತ್ತಾರೆ. ಕೃಷ್ಣನನ್ನು ಕುರಿತು ‘ಏನಬೇಡಲೊ ನಿನ್ನ ದೇವಾದಿದೇವ’ ಎಂದು ಪ್ರಶ್ನಿಸುತ್ತ ‘ವನಿತೆಯರ ಬೇಡಲೆ ಬ್ರಹ್ಮಚಾರಿ’ ಎಂದು ಉದ್ಗರಿಸುತ್ತಾರೆ. ವಾಮನಾವತಾರದಲ್ಲಿ ವಟುವಾಗಿ ಬಂದ ಆ ಕೃಷ್ಣನನ್ನು ವ್ಯಾಸರಾಯರು ಪ್ರಶ್ನಿಸಿರುವ ರೀತಿ ಇದು. ದಾಸಕೂಟದ ಮೇಲ್ವಿಚಾರಕರ ಸ್ಥಾನದಲ್ಲಿರುವ ಇವರನ್ನು ಕುರಿತು ಗುರುವೆಂದೂ ಜ್ಞಾನಿಗಳ ಅರಸನೆಂದೂ ಪುರಂದರದಾಸರು ಹೊಗಳಿದ್ದಾರೆ.

ವ್ಯಾಸರಾಯರ ಶಿಷ್ಯಪರಂಪರೆಯಲ್ಲಿ ಕರ್ನಾಟಕದ ಮನೆ ಮನೆಯಲ್ಲಿಯೂ ಕೇಳಿಬರುವ ಹೆಸರೆಂದರೆ ಪುರಂದರದಾಸರದು (ನೋಡಿ). ತಮ್ಮ ಅಪಾರ ಕೃತಿರಾಶಿಯಿಂದ ಇವರು ಕನ್ನಡಿಗರಿಗೆ ಚಿರ ಪರಿಚಿತರಾಗಿದ್ದಾರೆ. ಇವರು ಸು.1484ರಲ್ಲಿ ಪುರಂದರಗಡ ಎಂಬಲ್ಲಿ ಜನಿಸಿದರು. ಪೂರ್ವಾಶ್ರಮದ ಹೆಸರು ಶ್ರೀನಿವಾಸನಾಯಕ, ಹೆಂಡತಿ ಸರಸ್ವತಿ. ದಾಸದೀಕ್ಷೆಯನ್ನು ಕೈಗೊಳ್ಳುವ ಮೊದಲು ಅತ್ಯಂತ ಶ್ರೀಮಂತರಾಗಿ ವೈಭವದಿಂದ ಮೆರೆದವರು. ಮೂಗುತಿಯ ಕಾರಣದಿಂದ ಮನಃ ಪರಿವರ್ತನೆಯಾದ ಮೇಲೆ, ಐಶ್ವರ್ಯವನ್ನೆಲ್ಲ ದಾನಮಾಡಿ ವ್ಯಾಸರಾಯರ ಬಳಿ ಬಂದು ದಾಸದೀಕ್ಷೆಯನ್ನು ಕೈಗೊಂಡರು ಇತ್ಯಾದಿ ವಿಚಾರಗಳು ಪ್ರಚಲಿತವಾಗಿವೆ. ಆದರೆ 'ಕಮಲಾಪುರ'ದ ತಾಮ್ರಶಾಸನದಿಂದ (1526 ಫೆಬ್ರವರಿ 24) ಅದಿಕೃತವಾಗಿ ತಿಳಿದಿರುವ ಅಂಶಗಳು ಹೀಗಿವೆ. ಪುರಂದರದಾಸರು ವಸಿಷ್ಠಗೋತ್ರದ ಯಜುಶ್ಯಾಖೆಯವರು. ಇವರಿಗೆ ಲಕ್ಷ್ಮಣದಾಸ, ಹೇಬಣದಾಸ ಮತ್ತು ಮಧ್ವಪದಾಸ ಎಂಬ ಮೂವರು ಮಕ್ಕಳಿದ್ದರು. ಪುರಂದರದಾಸರು ಬದುಕಿದ್ದಾಗಲೇ ವಿಜಯನಗರದ ಅರಸ ಕೃಷ್ಣದೇವರಾಯನಿಂದ ಹೊರಟ ಶಾಸನವಿದು. ಇವರು ವ್ಯಾಸರಾಯರ ಶಿಷ್ಯರಾಗಿದ್ದುದು ಇವರ ‘ವ್ಯಾಸರಾಯರ ಚರಣಕಮಲದರುಶನ ..............’ ಎಂಬ ಕೀರ್ತನೆಯಿಂದಲೇ ಸ್ಪಷ್ಟವಾಗುತ್ತದೆ. ಅವರಿಂದಲೇ ದಾಸದೀಕ್ಷೆ ಪಡೆದು ಪುರಂದರವಿಠಲ ಎಂಬ ಅಂಕಿತದಿಂದ ಕೃತಿರಚನೆ ಮಾಡಿದರು. ಹೆಂಡತಿಯ ಮೂಲಕ ಭಕ್ತಿಯೆಡೆಗೆ ತಿರುಗಿದ ಮನಸ್ಸು ಗುರುಮುಖೇನ ದೀಕ್ಷೆಯನ್ನು ಪಡೆಯಿತು. ಪಂಚಭಾವಗಳ ಮೂಲಕ ಭಗವಂತನನ್ನು ಇವರು ಬಗೆಬಗೆಯಾಗಿ ಸ್ತುತಿಸಿದ್ದಾರೆ. ವಾತ್ಸಲ್ಯಭಾವಕ್ಕೆ ಇವರಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆತಿದೆ. ಭಕ್ತಿಸಾಧನೆಯೊಂದಿಗೆ ಸಮಾಜದ ರೀತಿ ನೀತಿಗಳನ್ನು ಸರಿಪಡಿಸುವ ಹೊಣೆಯನ್ನು ಹೊತ್ತು ನಿರ್ವಹಿಸಿದ್ದಾರೆ. ನಡೆದಂತೆ ನುಡಿಯುತ್ತ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ವೈದ್ಯನಂತೆ ನೋಡುತ್ತ ಅದರ ಸರಿತಪ್ಪುಗಳನ್ನು ಎತ್ತಿ ಆಡಿದ್ದಾರೆ. ಇವರು ಶುಷ್ಕ ನೀತಿಬೋಧಕರಲ್ಲ, ಜನರೊಡನೆ ಬೆರೆತು, ಅವರ ಕಷ್ಟ ಸುಖಗಳನ್ನು ಹಂಚಿಕೊಂಡು ಅವರಿಗೆ ಮುಕ್ತಿ ಪಥವನ್ನು ತೋರಿಸಿಕೊಟ್ಟ ದಿಟ್ಟರು. ಮಧ್ವಮತ ತತ್ತ್ವ, ವೇದಾಂತಸಾರಗಳನ್ನು ಕನ್ನಡದಲ್ಲಿ ಸಾರಿದ ಹರಿಕಾರರು. ವ್ಯಾಸರಾಯರು ಇವರ ಕೃತಿಗಳನ್ನು ಒಟ್ಟಾಗಿ ಪುರಂದರೋಪನಿಷತ್ತು ಎಂದು ಕರೆದು ಶ್ಲಾಘಿಸಿದ್ದಾರೆ. ಅದರಲ್ಲಿ ಕೀರ್ತನೆಗಳು ಮಾತ್ರವಲ್ಲ, ಅನುಭವದ ರಸಗಟ್ಟಿಗಳಾದ ಉಗಾಭೋಗಗಳೂ ತತ್ತ್ವಭೂಯಿಷ್ಠವಾದ ಸುಳಾದಿಗಳೂ ಅಡಕವಾಗಿವೆ. ಆತ್ಮಚರಿತ್ರೆ, ಆಧ್ಯಾತ್ಮಿಕದೃಷ್ಟಿ ಹಾಗೂ ಲೋಕಚರಿತ್ರೆ ಈ ದೃಷ್ಟಿಗಳಿಂದಲೂ ಇವರ ಕೃತಿಗಳು ವಿಶಿಷ್ಟವಾಗಿವೆ. ಜನಸಾಮಾನ್ಯರ ಬದುಕನ್ನು ಅನಂತರೀತಿಯಲ್ಲಿ ನೋಡುವ ಒಂದು ವಿಸ್ತಾರ ದೃಷ್ಟಿ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾರ್ವಜನಿಕ ಹಾಗೂ ಸಾರ್ವಕಾಲಿಕ ಧರ್ಮಸತ್ಯಗಳನ್ನು ಎತ್ತಿಹಿಡಿಯುವುದರಲ್ಲಿ ಹರಿದಾಸ ಸಾಹಿತ್ಯದಲ್ಲಿ ಕನಕದಾಸರನ್ನು ಬಿಟ್ಟರೆ ಉಳಿದವರಾರೂ ಇವರ ಸಮಕ್ಕೆ ಬರಲಾರರು. ಸಾಹಿತ್ಯ, ಸಂಗೀತ ಮತ್ತು ಪಾರಮಾರ್ಥಿಕಗಳ ಸಮ್ಮಿಲನ ಇವರ ಕೃತಿಗಳಲ್ಲಿದೆ. ಕೃಷ್ಣನ ವಿವಿಧ ಲೀಲೆಗಳನ್ನು ದಶಾವತಾರಗಳನ್ನು ಬಗೆಬಗೆಯಾಗಿ ವರ್ಣಿಸುವ ಅಸಂಖ್ಯಾತ ಕೃತಿಗಳು ಶ್ರೇಷ್ಠ ಭಾವಗೀತೆಗಳಾಗಿವೆ. ಧರ್ಮವೇ ಜಯವೆಂಬ ದಿವ್ಯಮಂತ್ರ ಎಂಬ ಹಾಡಿನಲ್ಲಿ ಧರ್ಮಜೀವನದ ತುತ್ತತುದಿಯ ಆದರ್ಶವನ್ನು ಬಹು ಸೊಗಸಾಗಿ ವರ್ಣಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಆರಂಭದ ಅಭ್ಯಾಸಿಗಳಿಗೆ ಪಿಳ್ಳಾರಿಗೀತೆಗಳನ್ನು ರಚಿಸಿಕೊಟ್ಟಿದ್ದಾರೆ. ಇವರು ನಾರದಾಂಶಸಂಭೂತರೆಂದು ಪ್ರತೀತಿ. ಕರ್ನಾಟಕ ಸಂಗೀತಕ್ಕೆ ಭದ್ರವಾದ ತಳಪಾಯವನ್ನು ಹಾಕಿದವರೇ ಇವರು. ಶಾಸ್ತ್ರೀಯ ಸಂಗೀತಕ್ಕೆ ಹೊಂದುವ ಕನ್ನಡ ಹಾಡುಗಳನ್ನು ರಚಿಸಿರುವುದು ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ. ದಾಸರೆಂದರೆ ಪುರಂದರದಾಸರಯ್ಯ ಎಂದು ಗುರು ವ್ಯಾಸರಾಯರೇ ಇವರನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಪುರಂದರದಾಸರ ಸಮಕಾಲೀನರೂ ವ್ಯಾಸರಾಯರ ಶಿಷ್ಯರೂ ಆದ ಮತ್ತೊಬ್ಬ ದಾಸಶ್ರೇಷ್ಠರು ಕನಕದಾಸರು. ಇಂದಿನ ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಇರುವ ಬಾಡ ಎಂಬಲ್ಲಿ ಜನಿಸಿದರು (ಸು.1500) ಜಾತಿಯಲ್ಲಿ ಕುರುಬರು. ಹೆಸರು ತಿಮ್ಮ, ಚಿಕ್ಕಂದಿನಲ್ಲೇ ತಂದೆ-ತಾಯಿಗಳು ತೀರಿಕೊಂಡರು. ಬಾಲಕ ತಿಮ್ಮನಿಗೆ ಬೇಟೆ, ಕತ್ತಿವರಸೆ, ಕಾಳಗಗಳಲ್ಲಿ ವಿಶೇಷ ಆಸಕ್ತಿ ಮೂಡಿತು. ಅನೇಕ ಗ್ರಾಮಗಳ ಢಣಾಯಕನಾದ. ನಿಧಿಯೊಂದು ಸಿಕ್ಕಿದ್ದರಿಂದ ಕನಕನಾಯಕನೆಂದು ಪ್ರಸಿದ್ಧನಾದ. ಪುರಂದರರಂತೆ ವೈರಾಗ್ಯದ ಕಡೆ ತಿರುಗಿ ವ್ಯಾಸರಾಯರ ಗುರುತ್ವದಲ್ಲಿ, ಆದಿಕೇಶವ ಎಂಬ ಅಂಕಿತದಲ್ಲಿ ಕೃತಿರಚನೆ ಮಾಡಿ ಕನಕದಾಸರಾದರು. ಇವರದು ಶ್ರೀವೈಷ್ಣವ ಸಂಪ್ರದಾಯವೋ ಮಾಧ್ವ ಸಂಪ್ರದಾಯವೋ ಎಂಬ ಬಗ್ಗೆ ಏಕಾಬಿಪ್ರಾಯವಿಲ್ಲ. ಇವರ ಕಾವ್ಯಗಳಲ್ಲೊಂದಾದ ಮೋಹನ ತರಂಗಿಣಿಯಿಂದ ಇವರು ಶ್ರೀವೈಷ್ಣವಸಂಪ್ರದಾಯಸ್ಥರೆನ್ನಲು ಅವಕಾಶವಿದೆ. ವ್ಯಾಸರಾಯರ ಶಿಷ್ಯರಾಗಿ ಮಧ್ವಮತ ತತ್ತ್ವಗಳನ್ನೂ ಬೋದಿಸಿದ್ದಾರೆ. ಹರಿ ಹರ ಸಾಮರಸ್ಯದೃಷ್ಟಿ ಮೋಹನ ತರಂಗಿಣಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಇವರ ಸಾಮರಸ್ಯದೃಷ್ಟಿ ಬಿನ್ನಧರ್ಮದ ನಾಯಕ ನಾಯಿಕೆಯರನ್ನು ವಿವಾಹಬಂಧನದ ಮೂಲಕ ಒಟ್ಟುಗೂಡಿಸುವವರೆಗೂ ಚಾಚಿದೆ. ಇವರ ಕ್ರಾಂತಿಕಾರಕ ಮನೋಭಾವಕ್ಕೆ ಇದೊಂದು ನಿದರ್ಶನ. ಸಮಾಜದ ರೀತಿನೀತಿಗಳನ್ನು ಕಟುವಾಗಿ ಟೀಕಿಸಬಲ್ಲ ಎದೆಗಾರಿಕೆ ಇವರದು. ಡೊಂಕುಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಎಂಬ ಹಾಡಿನಲ್ಲಿ ಸಾಮಾಜಿಕ ವಿಡಂಬನೆ ಕಾಣುತ್ತದೆ. ಕನಕನ ಕಿಂಡಿಯ ಕಲ್ಪಿತ ಕಥೆ ಮಾರ್ಮಿಕವಾಗಿ ಅಂದಿನ ಸಾಮಾಜಿಕ ನಡೆವಳಿಕೆಯನ್ನೂ ಕನಕದಾಸರ ಭಕ್ತಿಪಾರಮ್ಯವನ್ನೂ ಸೂಚಿಸುತ್ತದೆ. ಲೋಕ ಹೇಗೆ ತಿಳಿಯಲಿ ವ್ಯಾಸರಾಯರು ಕನಕರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು, ಪುರಂದರದಾಸರು ಸ್ನೇಹಿತರಾಗಿ ಕಂಡರು. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತ್ರೆ, ಹರಿಭಕ್ತಿ ಸಾರ -ಈ ಕಾವ್ಯಗಳನ್ನು ರಚಿಸಿ, ಹರಿದಾಸ ಪಂಥದಲ್ಲಿ ಕವಿಯೆನಿಸಿಕೊಂಡಿದ್ದಾರೆ. ಪದ, ಸುಳಾದಿ, ಉಗಾಭೋಗಗಳೊಂದಿಗೆ ಮುಂಡಿಗೆಗಳನ್ನೂ ರಚಿಸಿದ ವೈಶಿಷ್ಟ್ಯ ಇವರದು. ಕನಕದಾಸರ ಬಳಿಕ ವ್ಯಾಸರಾಯರ ಪ್ರಮುಖ ಶಿಷ್ಯರಲ್ಲೊಬ್ಬರಾದ ವಾದಿರಾಜರು. ಸೋದೆಮಠದ ಅದಿಪತಿಯಾಗಿದ್ದ (1480-1600) ಇವರ ಹುಟ್ಟು ಹೆಸರು ವರಾಹ. ವಾದದಲ್ಲಿ ಇವರು ನಿಸ್ಸೀಮರು. ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದಿದ್ದ ಸವ್ಯಸಾಚಿ, ಉಡುಪಿಯ ಅಷ್ಟಮಠಗಳನ್ನು ಒಂದು ವ್ಯವಸ್ಥೆಗೆ ತಂದು, ಪರ್ಯಾಯದ ಏರ್ಪಾಡು ಮಾಡಿದವರು. ಇಷ್ಟದೈವ ಇವರಿಗೆ ಕುದುರೆಯ ರೂಪದಲ್ಲಿ ದರ್ಶನಕೊಟ್ಟಿತಂತೆ. ಹಯವದನ ಎಂಬ ಅಂಕಿತದಿಂದ ಕೃತಿರಚನೆ ಮಾಡಿದ್ದಾರೆ. ಶಾಸ್ತ್ರೀಯ ವಿಚಾರಗಳತ್ತ ಇವರಿಗೆ ಗಮನ ಹೆಚ್ಚು. ಸಂಭಾಷಣಾರೂಪದಲ್ಲಿ ಕೃತಿರಚನೆ ಮಾಡಿರುವುದು ಇವರ ವೈಶಿಷ್ಟ್ಯ. ಮಹಾಭಾರತದ ಕೀಚಕವಧೆಯ ಪ್ರಸಂಗವನ್ನು ಮನೋಹರವಾಗಿ ಚಿತ್ರಿಸಿದ್ದಾರೆ. ಕೀರ್ತನೆಯನ್ನು ಕಟ್ಟುತ್ತಿದ್ದ ದಾಸರದೃಷ್ಟಿ ಇಲ್ಲಿ ಕಥನಕವನದ ಘಟ್ಟವನ್ನು ಮುಟ್ಟಿದೆ. ಸ್ವಪ್ನಪದ, ಲಕ್ಷ್ಮೀಶೋಭಾನೆ, ವೈಕುಂಠ ವರ್ಣನೆಗಳಂಥ ಖಂಡಕಾವ್ಯಗಳೆನ್ನಬಹುದಾದ ಕೃತಿಗಳನ್ನೂ ರಚಿಸಿದ್ದಾರೆ. ವೈಕುಂಠವರ್ಣನೆ ನಾಲ್ಕು ಸಂದಿಗಳಲ್ಲಿ ಅಡಕವಾಗಿರುವ ಸಾಂಗತ್ಯ ಕೃತಿ. ಕನ್ನಡಿಯಂತಿರುವ ಪೂರ್ಣಪ್ರಜ್ಞರ ಮತದ ಸಾರವನ್ನು ಕನ್ನಡಿಸುವುದೇ ತನ್ನ ಕರ್ತವ್ಯವೆಂದು ಒಂದು ಕಡೆ ಹೇಳಿಕೊಂಡಿದ್ದಾರೆ. ಉಭಯ ಭಾಷಾವಿಶಾರದರಾದ ಇವರ ಈ ಸಂಕಲ್ಪ ಕನ್ನಡಿಗರಿಗೆ ನಿಜಕ್ಕೂ ಒಂದು ವರವಾಗಿ ಪರಿಣಮಿಸಿದೆ. ತತ್ತ್ವ ಪ್ರಕಾಶಿಕಾ, ಭಗವದ್ಗೀತಾಟಿಪ್ಪಣಿ, ಮಹಾಭಾರತಟೀಕಾ ಮೊದಲಾದ ಸಂಸ್ಕೃತಗ್ರಂಥಗಳನ್ನು ರಚಿಸಿದ್ದಾರೆ. ನೂರಿಪ್ಪತ್ತು ವರ್ಷಗಳ ತುಂಬುಬಾಳನ್ನು ಬಾಳಿದ ಇವರು ಅನೇಕ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳನ್ನು ರಚಿಸಿದ್ದಾರೆ. ‘ತಾಳುವಿಕೆಗಿಂತ ತಪವು ಇಲ್ಲ’ ಎಂಬುದು ಇವರು ನೀಡಿದ ಸಂದೇಶ. ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು ದಾಸಸಾಹಿತ್ಯ ಪರಂಪರೆಯನ್ನು ಮುಂದುವರಿಸಿದವರು. ಕಾವ್ಯಮಯವಾದ ದೃಷ್ಟಿಕೋನದಿಂದ ಶಾಸ್ತ್ರಭೂಯಿಷ್ಠವಾಗಿ ಪರಿಣಮಿಸಿದ ಹರಿದಾಸ ಸಾಹಿತ್ಯದ ಒಂದು ತಿರುವನ್ನು ವಿಜಯದಾಸರ ಕೃತಿಗಳಲ್ಲಿ ಗುರುತಿಸಬಹುದು. 18ನೆಯ ಶತಮಾನದಲ್ಲಿ ಚೀಕಲಪರಿವೆ ಎಂಬಲ್ಲಿ ಇವರು ಜನಿಸಿದರು. ಸ್ವಪ್ನದಲ್ಲಿ ಪುರಂದರದಾಸರ ಅನುಗ್ರಹವಾಯಿತು. ವಿಜಯವಿಠಲ ಎಂಬ ಅಂಕಿತ ದೊರೆಯಿತು. ಇವರು ಕೀರ್ತನೆಗಳಲ್ಲಿ ತಮ್ಮ ಪರೋಕ್ಷ ಗುರುವನ್ನು ನಾನಾವಿಧವಾಗಿ ಸ್ತುತಿಸಿದ್ದಾರೆ. ಇವರಲ್ಲಿ ಭಾವ ವೈವಿಧ್ಯ, ಲಾಲಿತ್ಯ, ಕಡಿಮೆ, ತತ್ತ್ವಗಳ ನಿರೂಪಣೆಗೆ ಅನುಗುಣವಾಗಿ ಸುಳಾದಿಯಂಥ ಬಿಗುಬಂಧ ರೂಪುಗೊಂಡಿದೆ. ಗಹನತತ್ತ್ವಗಳನ್ನು ಸರಳವಾಗಿ ನಿರೂಪಿಸಿರುವ ಕೌಶಲ ಮೆಚ್ಚುವಂಥದು. ಹರಿ ಸರ್ಮೋತ್ತಮತ್ವ, ಬಿಂಬರೂಪಿ ಪರಮಾತ್ಮನನ್ನು ಒಲಿಸಿಕೊಳ್ಳುವ ಬಗೆ, ಜ್ಞಾನ - ಭಕ್ತಿ - ವೈರಾಗ್ಯಗಳ ಸಂಪಾದನೆ, ಪ್ರಾಣದೇವರಸ್ತುತಿ, ಮಾನವ ಜನ್ಮದಲ್ಲಿ ಕರ್ಮದ ಪಾತ್ರ ಇತ್ಯಾದಿ ಅನೇಕ ಗಹನ ತತ್ತ್ವಗಳನ್ನು ತೆಗೆದುಕೊಂಡು ಅವನ್ನು ವಿವರಿಸಲೆತ್ನಿಸಿದ್ದಾರೆ. ಇವರ ಶಿಷ್ಯ ಗೋಪಾಲದಾಸರು, ಇವರ ಪೂರ್ವಾಶ್ರಮದ ಹೆಸರು ಭಾಗಣ್ಣ, ಭಕ್ತಿಯಲ್ಲಿ ಭಾಗಣ್ಣ ಎಂಬ ಜನಪ್ರಿಯೋಕ್ತಿಯೊಂದಿದೆ. ದಾಸಚತುಷ್ಟಯ ಎಂದು ಪ್ರಸಿದ್ಧರಾಗಿರುವವರಲ್ಲಿ ಪುರಂದರ, ವಿಜಯ ಹಾಗೂ ಜಗನ್ನಾಥದಾಸರೊಂದಿಗೆ ಇವರೂ ಒಬ್ಬರು. ವಿಜಯದಾಸರಿಂದ ದೀಕ್ಷೆಪಡೆದು ‘ಗೋಪಾಲವಿಠಲ’ ಎಂಬ ಅಂಕಿತದಲ್ಲಿ ಕೃತಿರಚನೆ ಮಾಡಿದ್ದಾರೆ. ಅನಂತರದ ಹರಿದಾಸ ಪೀಳಿಗೆಯಲ್ಲಿ ಜಗನ್ನಾಥದಾಸರು ಮುಖ್ಯರು. ವಿಜಯದಾಸರಲ್ಲಿ ಕಾಣುವ ಶಾಸ್ತ್ರಪ್ರಾವೀಣ್ಯ ಇವರಲ್ಲಿ ಇನ್ನೂ ಹೆಚ್ಚಿನ ಪಕ್ವತೆ ಪಡೆದಿದೆ. ಸು.1727ರಲ್ಲಿ ಮಾನ್ವಿ ತಾಲ್ಲೂಕಿನ ಬ್ಯಾಗವಟ್ಟದಲ್ಲಿ ಜನಿಸಿದರು. ಮೊದಲ ಹೆಸರು ಶ್ರೀನಿವಾಸ. ಅಂಕಿತ ಜಗನ್ನಾಥವಿಠಲ. ಹರಿಕಥಾಮೃತಾಸಾರ ಇವರ ತಾತ್ತ್ವಿಕ ಉದ್ಗ್ರಂಥ. ಇದರಲ್ಲಿ ಶುಷ್ಕವೈದಿಕ ತತ್ತ್ವಬೋಧನೆ ಮಾತ್ರವಿರದೆ ಸರಳವಾಗಿ, ಅರ್ಥವಾಗುವಂತಿರುವುದು ಇದರ ವೈಶಿಷ್ಟ್ಯ. ಈ ಕೃತಿಯಲ್ಲಿ 32 ಸಂದಿಗಳಿವೆ. ಭಾಮಿನೀಷಟ್ಪದಿಯಲ್ಲಿ ರಚಿತವಾಗಿರುವ ಶುದ್ಧಕಾವ್ಯವಿದಲ್ಲ ಎಂದು ಕವಿಯೇ ಹೇಳಿಬಿಟ್ಟಿದ್ದಾರೆ. ಶಾಸ್ತ್ರದಲ್ಲಿ ಅಬಿರುಚಿ, ಧರ್ಮದಲ್ಲಿ ಶ್ರದ್ಧೆ, ಪರಮಾತ್ಮನಲ್ಲಿ ಪ್ರೀತಿಯಿರುವ ಎಲ್ಲರಿಗೂ ಈ ಗ್ರಂಥ ಒಂದು ಸವಿಯುಣಿಸಾಗ ಬಲ್ಲುದು. ಇದರೊಂದಿಗೆ ಅನೇಕ ಕೀರ್ತನೆಗಳನ್ನೂ ಸುಳಾದಿಗಳನ್ನೂ ಇವರು ರಚಿಸಿದ್ದಾರೆ. ಸುವ್ವಾಲಿಗಳ ರಚನೆ ಇವರ ಮತ್ತೊಂದು ವೈಶಿಷ್ಟ್ಯ.

ವಾತ್ಸಲ್ಯ ಭಾವದ ಪ್ರತಿಪಾದನೆಯ ದೃಷ್ಟಿಯಿಂದ ಜಗನ್ನಾಥದಾಸರ ಸಮಕಾಲೀನರಾದ ಪ್ರಸನ್ನ ವೆಂಕಟದಾಸರನ್ನು ಗಮನಿಸಬೇಕಾಗುತ್ತದೆ. ವಾತ್ಸಲ್ಯ ಭಾವದ ಪ್ರತಿಪಾದನೆ ಎಲ್ಲ ದಾಸರಲ್ಲೂ ಸಾಮಾನ್ಯವಾಗಿ ಕಂಡುಬಂದರೂ ಇವರಲ್ಲಿ ವಿಶೇಷವಾಗಿದೆ. ಕೃಷ್ಣಾದಿಗಳ ಬಾಲಭಾಷೆಯನ್ನು ಬಳಸಿ ಕೊಂಡಿರುವುದು ಇವರ ವೈಶಿಷ್ಟ್ಯ. ಹೀಗೆ ಹರಿದಾಸ ಪರಂಪರೆಯನ್ನು ಗಮನಿಸಿದರೆ ಪ್ರಾಣೇಶವಿಠಲರು (ಸು.1736-1822), ಗುರುಶ್ರೀಶವಿಠಲರು (ಸು.1740-1840), ಶ್ರೀದವಿಠಲರು (ಸು.1800), ಹರಪನಹಳ್ಳಿ ಬೀಮವ್ವ (ಸು.1823-1903), ಗುರುಜಗನ್ನಾಥವಿಠಲರು (ಸು.1841-1930) ಮೊದಲಾದ ಸುಮಾರು 350 ಮಂದಿ ದಾಸರು ಆಗಿಹೋಗಿದ್ದಾರೆ.

ಹರಿದಾಸ ಸಾಹಿತ್ಯವನ್ನು ಒಟ್ಟಾಗಿ ಪರಿಶೀಲಿಸಿದಾಗ ಕೆಲವು ವಿಶಿಷ್ಟ ಗುಣಗಳನ್ನು ಗುರುತಿಸಬಹುದು. ಮಧ್ವಾಚಾರ್ಯರ ಹನುಮ, ಭೀಮ, ಮಧ್ವ - ಈ ಅವತಾರತ್ರಯದಲ್ಲಿ ಹರಿದಾಸರೆಲ್ಲರಿಗೂ ನಂಬಿಕೆಯಿದೆ. ಹರಿಯ ದಶಾವತಾರಗಳನ್ನೊಪ್ಪಿಕೊಂಡ ವಿಷ್ಣುಪಂಥೀಯರಿವರು. ಹನುಮನಿಗೆ ಗುರುಪದವಿಯನ್ನು ಕೊಟ್ಟಿರುವ ದ್ವೈತಿಗಳು. ಈ ಹಿನ್ನೆಲೆಯಲ್ಲಿ, ವಿಷ್ಣುಭಕ್ತಿಯ ಆಗರಗಳಾದ ರಾಮಾಯಣ, ಮಹಾಭಾರತ, ಭಾಗವತಗಳನ್ನು ತಮ್ಮ ತತ್ತ್ವಪ್ರತಿಪಾದನೆಗಳಲ್ಲಿ ಧಾರಾಳವಾಗಿ ಇವರು ಬಳಸಿಕೊಂಡಿದ್ದಾರೆ. ಹನುಮನ ಸ್ವಾಮಿಭಕ್ತಿದ್ಯೋತಕವಾಗಿರುವ ರಾಮಾಯಣ, ಭೀಮನ ಪರಾಕ್ರಮದ ಪ್ರತೀಕವಾಗಿರುವ ಮಹಾಭಾರತ, ವಿಷ್ಣುವಿನ ಲೀಲಾಕಥನವೇ ಆದ ಭಾಗವತ - ಇವು ಅನುಸರಣೀಯವಾದುದರಲ್ಲಿ ಆಶ್ಚರ್ಯವಿಲ್ಲ. ತಮ್ಮ ನಂಬಿಕೆಗಳನ್ನು ಧ್ರುವ, ಅಜಾಮಿಳ, ಪ್ರಹ್ಲಾದ, ಗಜೇಂದ್ರ, ಬಲಿ, ಅಂಬರೀಷ ಮೊದಲಾದವರ ಉದಾಹರಣೆಗಳ ಮೂಲಕ ನಮಗೆ ಮತ್ತೆ ಮತ್ತೆ ದಾಸರು ಸ್ಪಷ್ಟಪಡಿಸುತ್ತಾರೆ. ಅಂತೆಯೇ ಪುತನಿ, ಕಂಸ, ಶಕಟಾಸುರ, ಕಾಳಿಂಗನೇ ಮೊದಲಾದ ದುಷ್ಟರ ನಿಗ್ರಹ ದಾಸರಿಗೆ ಮಾದರಿಯಾಗಿದೆ. ಭಾಗವತದ ದಶಮಸ್ಕಂದವನ್ನಂತೂ ದಾಸರ ಪದಗಳಿಂದಲೇ ಪುನಾರಚಿಸಬಹುದು. ಪ್ರತಿಯೊಬ್ಬ ದಾಸರೂ ಗುರುಮುಖೇನ ಅಂಕಿತವನ್ನು ಪಡೆದಿರುವುದು ಸ್ಪಷ್ಟವಿದೆ.

ಸಾಮಾನ್ಯ ಜನರ ಉದ್ಧಾರಕ್ಕೆ ಕಂಕಣಬದ್ದರಾಗಿ ನಿಂತಂಥ ಹರಿದಾಸರು ಆ ಜನರ ಪ್ರತಿನಿತ್ಯದ ಜೀವನದ ಕಡೆಗೂ ತಮ್ಮ ದೃಷ್ಟಿಯನ್ನು ಹರಿಸಿರುವುದು ಸ್ತುತ್ಯರ್ಹ. ಲೌಕಿಕ ಘಟನೆಗಳನ್ನು ಬಣ್ಣಿಸಿ ಅದಕ್ಕೆ ಒಂದು ಪಾರಮಾರ್ಥಿಕ ಅರ್ಥವನ್ನಳವಡಿಸಿರುವುದು ಹರಿದಾಸರ ವೈಶಿಷ್ಟ್ಯಗಳಲ್ಲೊಂದು. ಜೀವನದಲ್ಲಿ ಅಂಟಿಯೂ ಅಂಟದಂತೆ ಬಾಳಬೇಕೆಂಬುದೇ ಹರಿದಾಸರ ಉಪದೇಶದ ಸಾರ. ಮಾನವಧರ್ಮವನ್ನು ಕಟ್ಟುವ ಪ್ರಯತ್ನ ಅವರದು. ಸಮಾಜದಲ್ಲಿದ್ದ ಸಣ್ಣತನ, ಮತ್ಸರ, ಮೋಹ, ಭ್ರಮೆ, ಅಂಧಶ್ರದ್ಧೆ, ಕುರುಡುನಿಷ್ಠೆ- ಇತ್ಯಾದಿ ರೋಗಾಣುಗಳನ್ನೆಲ್ಲ ತಮ್ಮ ಸಾಹಿತ್ಯವೆಂಬ ಸಿದ್ಧೌಷಧದಿಂದ ನಾಶಪಡಿಸಲೆತ್ನಿಸಿದರು. ತಮ್ಮದು ನ್ಯಾಯಮಾರ್ಗವೆಂಬ ಪ್ರಜ್ಞೆಯನ್ನು ಎಲ್ಲಿಯೂ ಅವರು ಮರೆತಂತಿಲ್ಲ. ಆ ಧೈರ್ಯದಿಂದಲೇ ಅವರು ಭಗವಂತನೊಡನೆ ವಾದ ಮಾಡಲು ಶಕ್ತರಾದುದು. ಪರಮಾತ್ಮನ ಸ್ವರೂಪ, ಗುಣಾದಿ ವಿಷಯಗಳಿಗೆ ಬಂದಾಗಲಂತೂ ಅವರ ಸರಳ ಸುಂದರ ನಿರೂಪಣೆಗಳು ಅಚ್ಚರಿಯನ್ನುಂಟುಮಾಡುತ್ತವೆ. ವೇದೋಪನಿಷತ್ತುಗಳ ಸಾರವನ್ನೇ ಕನ್ನಡಕ್ಕವರು ಭಟ್ಟಿಯಿಳಿಸಿಕೊಟ್ಟಿದ್ದಾರೆ.

ಇಡೀ ಭಾರತದಲ್ಲೇ ಧರ್ಮಜಾಗೃತಿಯ ಕಾಲವಾಗಿದ್ದ ಆ ಪರ್ವಕಾಲದಲ್ಲಿ, ಕರ್ನಾಟಕದಲ್ಲಿ ಧರ್ಮ ಹಾಗೂ ವಿಷ್ಣುಭಕ್ತಿಗಳನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಹರಿದಾಸರದು. ತಮ್ಮ ನಾದಮಯ ಪದಸೃಷ್ಟಿಯನ್ನು ತಂಬೂರಿಯ ಶ್ರುತಿಯೊಂದಿಗೆ ಮೇಳವಿಸಿ, ಕಾಲಿಗೆ ಗೆಜ್ಜೆಕಟ್ಟಿಕೊಂಡು ನರ್ತಿಸುತ್ತ ಹಾಡಿ, ಮನೆ ಮನೆಗೂ ಸಂಗೀತ, ಸಾಹಿತ್ಯ, ನೃತ್ಯಗಳ ರಸಾನುಭವವನ್ನು ಮುಟ್ಟಿಸಿದರು. ದಾಸಸಾಹಿತ್ಯದಲ್ಲಿ ನಿರೂಪಣಾ ಮಾಧ್ಯಮಗಳು ವೈವಿಧ್ಯ ಪುರ್ಣವಾಗಿವೆ. ಕೀರ್ತನೆ, ಉಗಾಭೋಗ, ಸುಳಾದಿ, ದಂಡಕ, ಸುವ್ವಾಲಿ, ವೃತ್ತನಾಮ ಮೊದಲಾದ ಪ್ರಕಾರಗಳಲ್ಲಿ ಅವು ಹೊರಹೊಮ್ಮಿವೆ. ಕೆಲವು ಉದಾಹರಣೆಗಳನ್ನು ಈ ಮುಂದೆ ಕೊಟ್ಟಿದೆ.

ಕೀರ್ತನೆ:

ಈಸಬೇಕು ಇದ್ದು ಜಯಿಸಬೇಕು ಹೇಸಿಕೆ ಸಂಸಾರದಲ್ಲಿ | ಆಸೆ ಲೇಶ ಇಡದ್ಹಾಂಗೆ ತಾಮರಸಜಲದಂತೆ | ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮ ಎನುತ ಪಾಡಿ | ಕಾಮಿತ ಕಯ್ಗೊಂಬರೆಲ್ಲ ಗೇರುಹಣ್ಣಿನಲ್ಲಿ ಬೀಜ | ಸೇರಿದಂತೆ ಸಂಸಾರದಿ ಮೀರಿಯಾಸೆ ಮಾಡದಲೆ | ದೀರ ಕೃಷ್ಣನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯಸಿಲುಕಿ | ಹಿಂಸೆ ಪಟ್ಟಪರಿಯಂತೆ ಮೋಸ ಹೋಗದ್ಹಾಂಗೆ | ಜಗದೀಶ ಪುರಂದರ ವಿಠಲನ ನೆನೆದು

ಉಗಾಭೋಗ: ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ ನಿನ್ನಂಥ ತಂದೆ ಎನಗುಂಟು ನಿನಗಿಲ್ಲ

ನೀನೆ ಪರದೇಶಿ ನಾನೆ ಸ್ವದೇಶಿ ನಿನ್ನರಸಿ ಲಕುಮಿ ಎನ್ನ ತಾಯಿ ನಿನ್ನ ತಾಯ ತೋರೋ ಶ್ರೀ ಪುರಂದರವಿಠಲ

ಸುಳಾದಿ: ಒಡೆಯ ಹಾವಿಗೆ ಮೆಟ್ಟೆ ಹಾವಿಗೆಯವ ನಾನು ಒಡೆಯ ಮೆಲ್ಲಡಿಯಿಡಲು ಕಟ್ಟಿಗೆಯವ ನಾನು ಕಡೆಯ ತಾಂಬೂಲವನುಗುಳುವ ವೇಳ್ಯಗಳಲ್ಲಿ ಕಾಳಾಂಚಿಯವ ನಾನು

ಒಡೆಯನೊಡ್ಡೋಲಗದಲ್ಲಿ ಚಿತ್ತೈಸಿರೆ ಯತ್ರ ಚಾಮರ ಕನ್ನಡಿ ಪಿಡಿವವ ನಾನೊಡೆಯಗೆ ಒಡೆಯ ಪುರಂದರವಿಠಲರಾಯನ ಉಗುರು ಬಿದ್ದಲ್ಲಿ ಯೆನ್ನ ಶಿರವ ಕೊಡುವೆ ನಾನೊಡೆಯಗೆ ಮಠ್ಯತಾಳ ಹರಿಯನೋಲೈಸುವೆಂಬಣ್ಣಗಳಿರ ಕೇಳಿರೊ ಶರದಿಯ ಕಟ್ಟಿಟ್ಟು ಕುಲಂಕೆಯ ಮುಟ್ಟಿ ಕುರಾವಣಾದಿಗಳ ಕೂಡೆ ಇರಿದಾಡುತಿರಬೇಕು ಪುರಂದರ ವಿಠಲನೋಲಗದೆಳೀಗ ಘನಾ

ಅಟ್ಟತಾಳ ಚಂದ್ರಮ ನೀನಿನ್ನು ನಿಂದಿರೆ ತೆರವಿಲ್ಲ ಸೂರೆಯಗೈಯಿನ್ನು ತಿರುಗದಲೆ ಹೊತ್ತು ಇಂದ್ರಾದಿಗಳಿಗೆಲ್ಲ ಹರಿಹರಿ ನಿಂದು ತಲೆ ಯನು ತುರಿಸಲು ಹೊತ್ತಿಲ್ಲ ಬೊಮ್ಮಾದಿಗಳಿಗೂ ಒಮ್ಮೆಯೂ ತೆರಪಿಲ್ಲ ಈ ದೇವರೆಲ್ಲರೊಳೊಬ್ಬನೆ ಮೆಟ್ಟಿ ಆಡುವ ನಮ್ಮ ಪುರಂದರವಿಠಲ ಕಟ್ಟಾಳು ಕಾಣಿರೊ

ಆದಿತಾಳ ಧರೆಯಂಜುತಲಿದೆ ಗಿರಿಗಳಂಜುತಲಿವೆ ಮರಬಳ್ಳಿಗಳಂಜಿ ಫಲವನೀವುತಲಿವೆ ಸರಿತು ಸಮುದ್ರಗಳಂಜಿ ಬೆಚ್ಚುತಲಿವೆ ಪುರಂದರವಿಠಲ ನೀನೆಂಥ ಅರಸೂ

ಜತೆ ನಾ ಘನ ನೀ ಘನ ತಾ ಘನಯೆನಬೇಡಾ| ಪುರಂದರವಿಠಲನೊಬ್ಬನೆ ಘನ ಸಂಖ್ಯಾಬಾಹುಳ್ಯದಿಂದ ನೋಡುವುದಾದರೆ ಪದ ಅಥವಾ ಕೀರ್ತನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕುತ್ತವೆ. ಅನಂತರ ಸುಳಾದಿಗಳು, ಬಳಿಕ ಉಗಾಭೋಗಗಳು, ದಂಡಕ, ವೃತ್ತನಾಮ, ಸುವ್ವಾಲಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಹರಿದಾಸಸಾಹಿತ್ಯವನ್ನು ಸಂಗ್ರಹಿಸಿ, ಪರಿಷ್ಕರಿಸಿ ಪ್ರಕಟಿಸುವ ಕಾರ್ಯ ಹಲವಾರು ವ್ಯಕ್ತಿ, ಸಂಸ್ಥೆ ಮತ್ತು ಸರ್ಕಾರದಿಂದ ಕರ್ನಾಟಕದಲ್ಲಿ ನಿರಂತರವಾಗಿ ನಡೆದಿದೆ. ವ್ಯಕ್ತಿ ಹಂತದಲ್ಲಿ ಸುಬೋಧ ರಾಮರಾಯರು, ಗೋರಬಾಳ ಹನುಮಂತರಾವ್, ಪಾವಂಜೆ ಗುರುರಾಯರನ್ನು ಹೆಸರಿಸಬಹುದು. ಅಂತೆಯೇ ಕನಕದಾಸರ ನಾಲ್ಕನೆಯ ಶತಮಾನೋತ್ಸವ ಸಮಿತಿಯವರು ಕನಕದಾಸರ ಕೃತಿಗಳನ್ನೂ ಅಖಿಲ ಕರ್ನಾಟಕ ಪುರಂದರದಾಸರ 400ನೆಯ ವರ್ಷದ ಉತ್ಸವಮಂಡಳದವರು (ಧಾರವಾಡ) ಪುರಂದರದಾಸರ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹರಿದಾಸಸಾಹಿತ್ಯ ವಿಭಾಗ ‘ಹರಿದಾಸಸಾಹಿತ್ಯ ಮಾಲೆ’ಯಾಗಿ ದಾಸಸಾಹಿತ್ಯದ ಸಂಪಾದನ ಕಾರ್ಯವನ್ನು ಕೈಗೊಂಡು ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಪ್ರಕಟಿಸುವ ಕಾರ್ಯ ಮಾಡಿದೆ. ಇದುವರೆಗೆ ಈ ಮಾಲೆಯಲ್ಲಿ ಅನೇಕ ಕೃತಿಗಳು ಪಂಡಿತ ಹಾಗೂ ಜನಪ್ರಿಯ ಆವೃತಿಗಳಲ್ಲಿ ಪ್ರಕಟವಾಗಿವೆ. ದಾಸ ಸಾಹಿತ್ಯ ಪ್ರಕಟಣ ಯೋಜನೆಯನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರ ಸಮಗ್ರ ದಾಸ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಯ ಕಾರ್ಯವಾಗಿ ಕೈಗೆತ್ತಿಕೊಂಡು ಐವತ್ತು ಸಂಪುಟಗಳಲ್ಲಿ ಹೊರತಂದಿದೆ.

ಕನ್ನಡದಲ್ಲಿ ದಾಸಸಾಹಿತ್ಯ ಕುರಿತ ಸಂಶೋಧನೆ ಸಾಕಷ್ಟು ನಡೆದಿದ್ದು ಅನೇಕ ಕೃತಿಗಳು ಹೊರಬಂದಿವೆ. ಪ್ರಸನ್ನ ವೆಂಕಟಾದಾಸರು ಮತ್ತು ಅವರ ಕೃತಿಗಳು (ಎ.ಟಿ.ಪಾಟೀಲ), ಕರ್ನಾಟಕದ ಹರಿದಾಸರು (ಎಚ್.ಕೆ.ವೇದವ್ಯಾಸಾಚಾರ್ಯ), ಜಗನ್ನಾಥದಾಸರು (ಕೆ.ಎಂ.ಕೃಷ್ಣರಾವ್), ಪ್ರಸಾದಯೋಗ (ವಿ.ಎ.ದಿವಾಣಜಿ), ಶ್ರೀವಿಜಯದಾಸರು ಜೀವನ ಮತ್ತು ಕೃತಿಗಳ ಸಮೀಕ್ಷೆ (ಕೆ.ಗೋಕುಲನಾಥ್), ಹರಿದಾಸರ ಭಕ್ತಿ ಸ್ವರೂಪ (ಟಿ.ಎನ್.ನಾಗರತ್ನ), ಶ್ರೀವಾದಿರಾಜರ ಕನ್ನಡ ಕೃತಿಗಳು (ಎಚ್.ಜಿ. ಲೋಕೂರ), ಪುರಂದರದಾಸರ ಮತ್ತು ಅನ್ನಮಾಚಾರ್ಯರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ (ಅಕ್ಕಮಹಾದೇವಿ), ಬಸವೇಶ್ವರ ಮತ್ತು ಪುರಂದರದಾಸ (ಬಸವರಾಜ ಸಬರದ), ಹರಿದಾಸ ಅಂದೋಲನ - ಒಂದು ಅಧ್ಯಯನ (ಎನ್.ಕೆ.ರಾಮಶೇಷನ್), ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು- ಒಂದು ಅಧ್ಯಯನ (ಆರ್.ಸುನಂದಮ್ಮ), ಹತ್ತೊಂಬತ್ತನೆಯ ಶತಮಾನದ ಹರಿದಾಸ ಸಾಹಿತ್ಯ (ಅನಂತ ಪದ್ಮನಾಭರಾವ್) - ಇವು ದಾಸಸಾಹಿತ್ಯ ಕ್ಷೇತ್ರದಲ್ಲಿ ಡಾಕ್ಟೊರೇಟ್ ಪಡೆದಿರುವ ಮಹಾಪ್ರಬಂಧಗಳು.

ಆರ್.ಎಸ್.ಪಂಚಮುಖಿಯವರ ಕರ್ನಾಟಕದ ಹರಿದಾಸ ಸಾಹಿತ್ಯ, ಬೇಲೂರು ಕೇಶವದಾಸರ ಕರ್ನಾಟಕ ಭಕ್ತವಿಜಯ, ಆರ್.ಆರ್.ದಿವಾಕರರ ಹರಿಭಕ್ತಿಸುಧೆ, ಜಿ.ವರದರಾಜರಾಯರ ಹರಿದಾಸ ಹೃದಯ ಇವು ದಾಸಸಾಹಿತ್ಯವನ್ನು ಕುರಿತ ಕೆಲವು ಮೌಲಿಕ ಕೃತಿಗಳು. ಈ ಶತಮಾನದಲ್ಲೂ ದಾಸಪರಂಪರೆಯನ್ನುಳಿಸಿಕೊಂಡು ಕೃತಿರಚನೆಯಲ್ಲಿ ತೊಡಗಿರುವವರಲ್ಲಿ ಚಿತ್ರದುರ್ಗದ ರಾಮಚಂದ್ರರಾವ್ (ತಂದೆ ವೆಂಕಟೇಶ ವಿಠಲ), ಮೈಸೂರಿನ ಎಂ.ಆರ್.ಗೋವಿಂದರಾವ್ (ಗುರುಗೋವಿಂದ ವಿಠಲ) ಮತ್ತು ಜೀವಬಾಯಿ (ಕಮಲನಾಭವಿಠಲ) ಮೊದಲಾದವರನ್ನು ಹೆಸರಿಸಬಹುದು. ಶ್ರೀಪಾದರಾಜರಿಂದ ಪ್ರಾರಂಭವಾದ ಕೀರ್ತನ ಸಾಹಿತ್ಯ ಐದುನೂರು ವರ್ಷಗಳಲ್ಲಿ ಸಮೃದ್ಧವಾಗಿ ಬೆಳೆದಿದೆ. ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಕೀರ್ತನೆಗಳು ರಚಿತವಾಗಿವೆ. ಕನ್ನಡ ಸಂಸ್ಕೃತಿ ಪರಂಪರೆಯ ಮಹತ್ತ್ವಪೂರ್ಣ ಭಾಗವಾದ ದಾಸಸಾಹಿತ್ಯ ವಾಹಿನಿ ಇಂದಿಗೂ ಜೀವಂತವಾಗಿ ಮುಂದುವರಿದಿದೆ. (ಟಿ.ಎನ್.ಎನ್.)