ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ವಾಮನ
ಕನ್ನಡ ವಾಮನ : ಸು.1870-1925. ಹೊಸಗನ್ನಡ ಸಾಹಿತ್ಯದ ಉದಯ ಕಾಲದ ಒಬ್ಬ ಕವಿ. ಪುರ್ಣ ಹೆಸರು ಉಪೇಂದ್ರ ಹಣಮಂತ ಕುಲಕರ್ಣಿ. ಇವರು ಬಾಗಲಕೋಟೆಯ ಹತ್ತಿರದ ತೋಳಮಟ್ಟಿಯವರು. ಇವರ ಆರಾಧ್ಯದೈವ ಬಾಗಲಕೋಟೆಯ ಹತ್ತಿರದ ಯಲಗುಂದದ ಶ್ರೀ ಹಣಮಂತ ದೇವರು. ಆ ಕಾಲಕ್ಕೆ ಮರಾಠಿಯಲ್ಲಿ ಪ್ರಸಿದ್ಧವಾದ ಯಮಕ್ಯಾ ವಾಮನ ಎಂಬವನನ್ನು ಅನುಸರಿಸಿ ಇವರು ಕನ್ನಡ ವಾಮನ ಎಂದು ಹೆಸರಿಟ್ಟುಕೊಂಡಂತೆ ಕಾಣುತ್ತದೆ. ಇವರು ಧಾರವಾಡದ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾದರು. ಕೆಲವು ಕಾಲ ಬಾಗಲಕೋಟೆಯ ಹತ್ತಿರದ ಮುರನಾಳದಲ್ಲಿ ಕನ್ನಡ ಶಾಲಾಶಿಕ್ಷಕರೂ ಅಲ್ಲಿಯ ಸಹಕಾರಿ ಸಂಘದ ಕಾರ್ಯದರ್ಶಿಗಳೂ ಆಗಿದ್ದರು. ಇವರು ಹಲವು ಗದ್ಯ ಪ್ರಬಂಧಗಳನ್ನೂ ಹೆಚ್ಚಾಗಿ ಬಿಡಿಕವನಗಳನ್ನೂ ಬರೆದರು. ಪ್ರಾಸರಹಿತವಾದ 1000 ಪದ್ಯಗಳನ್ನೂ ಪ್ರಾಸಸಹಿತವಾದ 2000 ಪದ್ಯಗಳನ್ನೂ ತಾವು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಇವರ ಕವನಗಳು ಹೆಚ್ಚಾಗಿ ಶುಭೋದಯ, ಸಚಿತ್ರ ಭಾರತ, ಕರ್ನಾಟಕ ವೈಭವ, ಶಾಲಾಪತ್ರಕ, ವಾಗ್ಭೂಷಣ, ಪ್ರಭಾತ, ಕರ್ನಾಟಕ ವೃತ್ತ, ಕರ್ನಾಟಕ ಧನಂಜಯಗಳಲ್ಲಿ ಪ್ರಕಟವಾಗಿವೆ.
ಇವರು ಕಾವ್ಯ ಪ್ರಪಂಚಕ್ಕೆ ಸಲ್ಲಿಸಿದಸೇವೆ ಮೂರು ವಿಧದಲ್ಲಿ ಮನನೀಯವಾಗಿದೆ. 1 ಪ್ರಾಸರಹಿತವಾಗಿ ಕಾವ್ಯವನ್ನು ಬರೆಯಲು ಬರುತ್ತದೆಂಬುದನ್ನು ಹಿಂದೆಯೇ ತೋರಿಸಿಕೊಟ್ಟದ್ದು. ಇವರು ಬರೆದ ಪೃಥ್ವೀರಾಜ ಎಂಬ ಖಂಡಕಾವ್ಯ ಪ್ರಾಸರಹಿತವಾಗಿದೆ. 2 ಕಾವ್ಯ ರಚನೆಗೆ ವಿಶಿಷ್ಟವಾದ ಕಾವ್ಯವಸ್ತುಗಳೇ ಬೇಕೆಂದೇನಿಲ್ಲ. ಇವರು ಕಲ್ಲಿಮೀಸೆ, ಪಂಚೆ, ಗ್ರಾಮೀಣ ಜನರಾದ ಗೌಡ ಕುಲಕರ್ಣಿಯರ ಬಗ್ಗೆ ಕವನಗಳನ್ನು ರಚಿಸಿದ್ದಾರೆ. 3 ಪ್ರಾಯಶಃ ಹಳೆಯ ತಲೆಮಾರಿನಲ್ಲಿ ಪ್ರಾದೇಶಿಕ ಉಲ್ಲೇಖಗಳನ್ನು ತಂದವರೂ ಇವರೇ ಎಂದು ಕಾಣುತ್ತದೆ. ತೋಳಮಟ್ಟಿ, ಯಲಗುರ, ಬಾಗಲಕೋಟೆ ಮುಂತಾದ ಸ್ಥಳಗಳ ವರ್ಣನೆಗಳೂ ಸೊಲಬಣ್ಣ ಮೊದಲಾದ ವ್ಯಾಪಾರಸ್ಥರ ಉಲ್ಲೇಖಗಳೂ ಇವರ ಕವನದಲ್ಲಿ ಬರುತ್ತವೆ. ಇವರು ಕೆರೂರ ವಾಸುದೇವಾಚಾರ್ಯರ ನಿಧನದ ಕಾಲಕ್ಕೆ ಬರೆದ ಒಂದು ಕವಿತೆ ಭಾವಪುರ್ಣವಾಗಿದೆ. (ಆರ್.ವೈ.ಡಿ.)