ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಪೋತ 2

ವಿಕಿಸೋರ್ಸ್ದಿಂದ

ಕಪೋತ2 : ಕಟ್ಟಡದ ಗೋಡೆಗಳ ಮೇಲುಭಾಗದಲ್ಲಿ ಉದ್ದಕ್ಕೂ ಕಟ್ಟಿರುವ ಚಡಿ (ಕಾರ್ನಿಸ್). ಪ್ರಧಾನ ಉದ್ದೇಶ ಗೋಡೆಗಳ ಮೇಲೆ ನೀರು ಸೋರದಿರಲೆಂದು, ಗಾರೆ, ಕಾಂಕ್ರೀಟ್, ಕಲ್ಲುಚಪ್ಪಡಿ, ಪ್ಲಾಸ್ಟರ್ ಆಫ್ ಪ್ಯಾರಿಸ್, ಕಂಬಿ, ಮರ ಮುಂತಾದವುಗಳಿಂದ ಕಟ್ಟುತ್ತಾರೆ. ಕಪೋತಗಳನ್ನು ವೈವಿಧ್ಯಪುರ್ಣವಾಗಿ ಸೌಂದರ್ಯಯುಕ್ತವಾಗಿ ರಚಿಸಿ ಕಟ್ಟಡದ ಅಂದವನ್ನು ಹೆಚ್ಚಿಸುವುದು ವಾಡಿಕೆ. ಇವನ್ನು ಕಟ್ಟಡದ ಮುಂಭಾಗ, ಅಕ್ಕಪಕ್ಕ ಮತ್ತು ಕೆಲವು ಸಂದರ್ಭಗಳಲ್ಲಿ ಸುತ್ತಲೂ ಕಟ್ಟುತ್ತಾರೆ. ಕಟ್ಟಡದ ಮೇಲ್ಚಾವಣಿಯ ಕೆಳಮಟ್ಟದಿಂದ ಅರ್ಧ ಅಡಿಯಿಂದ ಮೂರು ಅಥವಾ ನಾಲ್ಕು ಅಡಿಗಳವರೆಗೆ ಮುಂದಕ್ಕೆ ಅಡ್ಡಲಾಗಿ ನೂಕಿ ಅದರ ಕೆಳಭಾಗದಲ್ಲಿ ವಿವಿಧ ರೀತಿಯ ಆಕಾರಗಳನ್ನು ಮಾಡುತ್ತಾರೆ. ಕಪೋತಗಳ ಅಗಲಕ್ಕೂ ಆಳಕ್ಕೂ ಸಂಬಂಧವಿದೆ. ಇವುಗಳ ಗಾತ್ರ ಕಟ್ಟಡದ ಗಾತ್ರವನ್ನು ಅನುಸರಿಸಿ ಇರುವುದು. ಇವು ಕಟ್ಟಡದ ಯಾವ ತೂಕವನ್ನೂ ಹೊರಲಾರವು. ಸಾಮಾನ್ಯವಾಗಿ ಮುಖ್ಯ ಹಾಗೂ ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ವಿಶ್ವವಿದ್ಯಾಲಯ ಕಚೇರಿ, ಶಾಲಾಕಾಲೇಜುಗಳು, ಪುಸ್ತಕಭಂಡಾರ, ವಸ್ತುಸಂಗ್ರಹಾಲಯ ನಾಟಕ ಮತ್ತು ಸಿನಿಮಾ ಮಂದಿರಗಳ ಕಟ್ಟಡಗಳಲ್ಲಿ ಕಪೋತಗಳನ್ನು ಕಾಣಬಹುದು. ರೋಮ್, ಗ್ರೀಸ್, ಈಜಿಪ್ಟ್‌, ಭಾರತಗಳಲ್ಲಿ ಹಿಂದಿನ ಕಾಲದಲ್ಲಿ ಕಟ್ಟಿರುವ ಕಟ್ಟಡಗಳಲ್ಲಿ ಕಪೋತಗಳಿವೆ. (ಜಿ.ಟಿ.ಜಿ.)