ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಬಂಧ

ವಿಕಿಸೋರ್ಸ್ದಿಂದ

ಕಬಂಧ : ರಾಮನಿಂದ ಹತರಾದ ರಾಕ್ಷಸರಲ್ಲಿ ಒಬ್ಬ. ಕುವೆಂಪು ಅವರು ಈತನನ್ನು ಅಕಶೇರು ಕಶ್ಮಲ ಸರೀಸೃಪ-ಎಂದು ಬಣ್ಣಿಸಿದ್ದಾರೆ. ಶ್ರೀರಾಮ ಸುವರ್ಣಮೃಗ ರೂಪವನ್ನು ಧರಿಸಿದ ಮಾರೀಚನನ್ನು ಕೊಂದು ಹಿಂತಿರುಗಿ ಸೀತಾಶೂನ್ಯವಾದ ಆಶ್ರಮವನ್ನು ಕಂಡು, ನೊಂದು, ಸೀತೆಯನ್ನು ಹುಡುಕುತ್ತ ಮುಂದೆ ಸಾಗುತ್ತಿರಲಾಗಿ ದಂಡಕಾರಣ್ಯದ ದಕ್ಷಿಣ ಭಾಗದಲ್ಲಿ ಮೇಘಾಕೃತಿಯ ಮಹಾಪರ್ವತದಂತೆಯೂ ಸಾಲವೃಕ್ಷದಂತೆ ಹೆಗಲುಳ್ಳವ ನಾಗಿಯೂ ದೊಡ್ಡದಾದ ಭುಜಗಳುಳ್ಳವನಾಗಿಯೂ ಎದೆಯ ಭಾಗದಲ್ಲಿ ವಿಸ್ತಾರವಾದ ಕಣ್ಣುಳ್ಳವನಾಗಿಯೂ ಇದ್ದ, ಬೃಹದಾಕಾರವಾದ ಹೊಟ್ಟೆಯೆಂಬ ಮುಖವುಳ್ಳ, ಘೋರಾಕೃತಿಯ ಪುರುಷನೊಬ್ಬನನ್ನು ಕಂಡ. ಕೂಡಲೆ ರಾಮ ಅವನ ಎಡಭುಜವನ್ನೂ ಲಕ್ಷ್ಮಣ ಬಲಭುಜವನ್ನೂ ಕತ್ತರಿಸಿದರು. ಕಬಂಧ ಅಸು ನೀಗಿದ. ಒಡನೆಯೆ ಅವನ ದೇಹದಿಂದ ದಿವ್ಯಾಕೃತಿಯ ಪುರುಷನೊಬ್ಬ ಹೊರಬಂದು ಅಂತರಿಕ್ಷದಲ್ಲಿ ಸೂರ್ಯನಂತೆ ಜ್ವಲಿಸುತ್ತ ನಿಂತು, ಹಿಂದೆ ವಿಶ್ವಾವಸುವೆಂಬ ಗಂಧರ್ವನಾದ ತನಗೆ ಬ್ರಾಹ್ಮಣಶಾಪದಿಂದ ರಾಕ್ಷಸ ಸ್ವರೂಪ ಬಂದುದನ್ನೂ ರಾಮಾದಿಗಳಿಂದ ಶಾಪವಿಮೋಚನೆಯಾದುದನ್ನೂ ತಿಳಿಸಿ, ರಾವಣ ಸೀತೆಯನ್ನು ಕದ್ದೊಯ್ದು ಲಂಕಾಪುರಿಯಲ್ಲಿ ಇಟ್ಟಿರುವನೆಂದೂ ಸಮಾನ ವ್ಯಸನಿಯಾದ ಸುಗ್ರೀವನಿಂದ ಸೀತಾಪ್ರಾಪ್ತಿಗೆ ಬೇಕಾದ ಅನುಕೂಲವೆಲ್ಲ ದೊರಕುವುದೆಂದೂ ತಿಳಿಸಿ ಅದೃಶ್ಯನಾದ. ಇದು ವಾಲ್ಮೀಕಿ ರಾಮಾಯಣದ ವಿವರ. (ಎನ್.ಎಸ್.ಆರ್.ಬಿ.)