ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಬ್ಬಾರೆ ಹಕ್ಕಿ

ವಿಕಿಸೋರ್ಸ್ದಿಂದ

ಕಬ್ಬಾರೆ ಹಕ್ಕಿ : ಸಿಕೋನಿಫಾರ್ಮಿಸ್ ಗಣದ ಆರ್ಡೆಯಿಡೀ ಕುಟುಂಬಕ್ಕೆ ಸೇರಿದ ನೀಳಗಾಲಿನ ನೀರಿನಲ್ಲಿ ನಡೆದಾಡುವ ಹಕ್ಕಿಗಳು (ಹೆರಾನ್). ಒಂದು ಬಗೆಯ ಕಬ್ಬಾರೆಯನ್ನು ಕನ್ನಡ ನಾಡಿನ ಕೆಲವೆಡೆ ನಾರಾಯಣಿ ಪಕ್ಷಿ ಎಂದು ಕರೆಯುತ್ತಾರೆ.

ಇವು ಪ್ರಪಂಚದ ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಇವುಗಳ ದೇಹದ ಗಾತ್ರ ಕೋಳಿಯ ಗಾತ್ರದಿಂದ ಹಿಡಿದು ರಣಹದ್ದಿನ ಗಾತ್ರಕ್ಕೂ ಸ್ವಲ್ಪ ದೊಡ್ಡದಾಗಿರುತ್ತದೆ. ಇವುಗಳ ಕೊಕ್ಕು ನೀಳ ಮತ್ತು ಚೂಪು, ಭಲ್ಲೆಯ ಆಕಾರ; ಕೆಲವು ಪ್ರಭೇದಗಳಲ್ಲಿ ಕೊಕ್ಕಿನ ಅಂಚು ಸ್ವಲ್ಪಮಟ್ಟಿಗೆ ದಂತಿತವಾಗಿರುತ್ತದೆ. ಕುತ್ತಿಗೆ ಅನೇಕ ಪ್ರಭೇದಗಳಲ್ಲಿ ನೀಳ, ತೆಳು ಹಾಗೂ ಬಳುಕುವಂಥದ್ದು, ಕುತ್ತಿಗೆಯ ಮಧ್ಯಭಾಗ ಕೊಂಕಾಗಿರುವುದರಿಂದ ಇವು ಹಾರುವಾಗ ಅಥವಾ ಕಾಲುಗಳ ಮೇಲೆ ನಿಂತಾಗ, ಕುತ್ತಿಗೆ S ಆಕಾರದಂತಿರುವುದು ಈ ಹಕ್ಕಿಗಳ ಮತ್ತೊಂದು ವೈಶಿಷ್ಟ್ಯ. ಇವುಗಳ ಕಾಲುಗಳಲ್ಲಿ ಟಿಬಿಯ ಎಲುಬು ಇರುವ ಭಾಗ ನೀಳ ವಾಗಿದ್ದು, ಭಾಗಶಃ ಬೋಳಾಗಿರು ತ್ತದೆ. ಬೆರಳುಗಳು ನೀಳವಾಗಿ ತೆಳುವಾಗಿವೆ. ಮಧ್ಯದ ಮತ್ತು ಹೊರ ಬೆರಳುಗಳ ಮಧ್ಯೆ ಒಂದು ಚಿಕ್ಕ ಜಲಪಾದವಿದೆ. ಮಧ್ಯದ ಬೆರಳಿನ ಸ್ವಲ್ಪ ಬಾಗಿದ ಚೂಪು ನಖದ ಮೇಲೆ ಬಾಚಣಿಗೆಯಂಥ ರಚನೆಯಿದೆ. ಹಿಂಬೆರಳು ಚೆನ್ನಾಗಿ ಬೆಳೆದು ಇತರ ಬೆರಳುಗಳ ಮಧ್ಯದಲ್ಲಿಯೇ ಇರುವುದರಿಂದ ಹಕ್ಕಿ ನಿಂತು ಕೊಂಡಾಗ ದೇಹದ ಭಾರ ಎಲ್ಲ ಬೆರಳುಗಳ ಮೇಲೆ ಬೀಳುತ್ತದೆ. ದೇಹವನ್ನು ಆವರಿಸಿರುವ ತುಪ್ಪಳ ಮೃದು ಮತ್ತು ಸಾಮಾನ್ಯವಾಗಿ ವಿರಳ. ದೇಹದ ಬಣ್ಣ ಬಿಳುಪು. ಬೂದು, ಕಂದು ಅಥವಾ ಪಾಟಿಲ. ಕೆಲವು ಪ್ರಭೇದಗಳಲ್ಲಿ ಗರಿಗಳು ಮಚ್ಚೆ ಮತ್ತು ಪಟ್ಟೆಗಳಿಂದ ಕೂಡಿರುವುದೂ ಉಂಟು. ಸಂತಾನವೃದ್ಧಿಯ ಕಾಲದಲ್ಲಿ ಕೆಲವು ಬಗೆಯ ಪಕ್ಷಿಗಳ ತಲೆಯ ಮತ್ತು ಬೆನ್ನಿನ ಮೇಲೆ ಉದ್ದದ, ನಾರು ರೂಪದ ಅಲಂಕಾರದ ಗರಿಗಳು ಮೂಡುತ್ತವೆ. ಗಂಡು ಮತ್ತು ಹೆಣ್ಣು ಪಕ್ಷಿಗಳು ಹೊರನೋಟಕ್ಕೆ ಒಂದೇ ಬಗೆ. ಇವು ಸಾಮಾನ್ಯವಾಗಿ ಕೆರೆ, ಕೊಳ, ತೊರೆ, ಖಾರಿ ಮತ್ತು ಅಳಿವೆಗಳಲ್ಲಿ ಕಂಡುಬಂದರೂ ಕೆಲವು ಸಂದರ್ಭಗಳಲ್ಲಿ ಒಣ ಭೂ ಪ್ರದೇಶದ ಮೇಲೂ ನಡೆದಾಡುವುದನ್ನು ಕಾಣಬಹುದು. ಇವುಗಳ ರೆಕ್ಕೆ ಅಗಲ, ಬಾಲ ಮೊಟಕು. ಇವು ನೀರಿನ ಮೇಲೆ ಕೆಳಮಟ್ಟದಲ್ಲಿಯೇ ಹಾರುತ್ತವೆ. ಉತ್ತಳ ನೀರಿನಲ್ಲಿ ನಿಶ್ಚಲವಾಗಿ ನಿಲ್ಲುವುದು ಇವಕ್ಕೆ ಪ್ರಿಯ. ಈ ಭಂಗಿಯಲ್ಲಿಯೇ ಇವು ತಮ್ಮ ಆಹಾರ ಜೀವಿಯನ್ನು ಹೊಂಚು ಹಾಕಿ ಸಮಯ ಸಿಕ್ಕಿದಾಗ ತಮ್ಮ ಚೂಪಾದ ಕೊಕ್ಕಿನಿಂದ ಹಿಡಿದು ಇಡಿಯಾಗಿ ಗಬಕ್ಕನೆ ನುಂಗುತ್ತವೆ. ಅಜೀರ್ಣವಾದ ಆಹಾರವನ್ನು ತುತ್ತುಗಳ ರೂಪದಲ್ಲಿ ಹೊರಕ್ಕೆ ಹಾಕುತ್ತವೆ. ನೀರಿನಲ್ಲಿ ವಾಸಿಸುವ ಮೀನು, ಕಪ್ಪೆ, ಏಡಿ, ಸೀಗಡಿ ಮುಂತಾದುವು ಇವುಗಳ ಮುಖ್ಯ ಆಹಾರ. ಬಂiÀÄಲಿನಲ್ಲಿದ್ದಾಗ ಕೀಟ ಮತ್ತು ಹಲ್ಲಿಗಳನ್ನು ಹಿಡಿಯುವುದೂ ಉಂಟು. ಆಹಾರಾರ್ಜನೆ ಮಾಡುವಾಗ ಇವು ಒಂಟೊಂಟಿಯಾಗಿ ಕಂಡು ಬಂದರೂ ಸಂತಾನೋತ್ಪತ್ತಿ ಕಾಲದಲ್ಲಿ ಗುಂಪುಗೂಡಿ ಸಾಮೂಹಿಕವಾಗಿ ಮರಗಳ ಮೇಲೆ, ಪೊದೆಗಳಲ್ಲಿ ಅಥವಾ ಭೂಮಿಯ ಮೇಲೆ ಮರದ ಕಡ್ಡಿಗಳ ಒರಟು ಗೂಡುಗಳನ್ನು ಕಟ್ಟುತ್ತವೆ. ಒಂದು ಗೂಡಿನಲ್ಲಿ 3-6 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳ ಬಣ್ಣ ಮಾಸಲು ಕಂದು ಅಥವಾ ನೀಲಿಮಿಶ್ರಿತ ಬೂದು. 21-26 ದಿನಗಳವರೆಗೆ ಕಾವು ಕೊಟ್ಟಮೇಲೆ ಮೊಟ್ಟೆಯಿಂದ ಮರಿಗಳು ಹೊರಬರುತ್ತವೆ. ಗೂಡು ಕಟ್ಟುವುದರಲ್ಲಿ ಕಾವು ಕೊಡುವುದರಲ್ಲಿ ಮತ್ತು ಮರಿಗಳಿಗೆ ಗುಟುಕು ಕೊಟ್ಟು ಪಾಲನೆ ಮಾಡುವುದರಲ್ಲಿ ಗಂಡು ಹೆಣ್ಣು ಎರಡೂ ಭಾಗಿಯಾಗುತ್ತವೆ.

ನಮ್ಮ ದೇಶದಲ್ಲಿ ಕಬ್ಬಾರೆ ಎಂದು ಕರೆಯುವ ಹಕ್ಕಿಗಳು ಬೇರೆ ಬೇರೆ ಜಾತಿಗೆ ಸೇರಿವೆ. ಅಲ್ಲದೆ ಇವುಗಳ ಬೇರೆ ಬೇರೆ ಪ್ರಭೇದಗಳು ಅಮೆರಿಕ, ಯುರೋಪು, ಆಫ್ರಿಕ ಖಂಡಗಳಲ್ಲೂ ವ್ಯಾಪಿಸಿವೆ. ಭಾರತದಲ್ಲಿ ಅರ್ಡೆಯ ಜಾತಿಯಲ್ಲಿ ಆರ್ಡೆಯ ಇನ್ನಿಗ್ನಿಸ್ (ಬಿಳಿ ಹೊಟ್ಟೆ ಕಬ್ಬಾರೆ), ಆರ್ಡೆಯ ಗೋಲಿಯಾಸ್ (ಐದಡಿ ನಿಲುವಿನ ಪಕ್ಷಿ), ಆರ್ಡೆಯ ಸಿನೇರಿಯ (ನಾರಾಯಣಿ ಪಕ್ಷಿ) ಮತ್ತು ಆರ್ಡೆಯ ಪಫೂರ್ಯ್‌ರಿಯ (ಕೆಂಪು ನಾರಾಯಣಿ ಪಕ್ಷಿ)-ಇವು ಪ್ರಮುಖ ಪ್ರಭೇದಗಳು. ಬೂಟೊರಿಡಿಸ್ ಸ್ಟ್ರಯೇಟಸ್ (ಪುಟ್ಟ ಹಸಿರು ಕಬ್ಬಾರೆ), ಆರ್ಡಿಯೋಲ ಗ್ರಾಯಿ (ಬತ್ತದ ಗದ್ದೆಯ ಅಥವಾ ಕೊಳದ ಕಬ್ಬಾರೆ), ನಿಕ್ಟಿಕೊರಾಕ್ಸ್‌ ನಿಕ್ಟಿಕೊರಾಕ್ಸ್‌ (ಇರುಳ ಕಂಕ)-ಈ ಜಾತಿ ಪ್ರಭೇದಗಳೂ ಕಂಡುಬರುತ್ತವೆ. (ಬಿ.ಎನ್.ಬಿ.)