ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಬ್ಬಿಣದ ಅದುರು ನಿಕ್ಷೇಪಗಳು

ವಿಕಿಸೋರ್ಸ್ದಿಂದ

ಕಬ್ಬಿಣದ ಅದುರು ನಿಕ್ಷೇಪಗಳು

ಕಬ್ಬಿಣ ಭೂಮಿಯ ಮೇಲೆ ಹೇರಳವಾಗಿ ದೊರೆಯುವಂಥ ಲೋಹ, ಬಲು ಹಿಂದೆಯೇ ಮಾನವಕುಲ ಈ ಲೋಹದ ಉಪಯುಕ್ತತೆಯನ್ನು ಗುರುತಿಸಿ ಅದನ್ನು ಬಳಕೆ ತಂದುದಕ್ಕೆ ಸಾಕಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷ ನಿದರ್ಶನಗಳು ಇವೆ. ಕಬ್ಬಿಣದ ಅಂಶ ಅನೇಕ ವರ್ಗದ ಖನಿಜಗಳಲ್ಲಿ ಸೇರಿದ್ದರೂ ಲೋಹದ ಉತ್ಪಾದನೆಯ ದೃಷ್ಟಿಯಿಂದ ಮುಖ್ಯವಾದ ಖನಿಜಗಳೆಂದರೆ ಮೂರು ಮಾತ್ರ: ಅವುಗಳಲ್ಲಿರುವ ಕಬ್ಬಿಣದ ಅಂಶವನ್ನು ಪಕ್ಕದಲ್ಲಿ ತೋರಿಸಿದೆ. ಮ್ಯಾಗ್ನಟೈಟ್ 72.00% ಹಿಮಟೈಟ್ 70.00% ಲೈಮೊನೈಟ್ 59.63%

ಮ್ಯಾಗ್ನಟೈಟ್ : ಇದು ಕಪ್ಪು ಬಣ್ಣದ್ದು. ಅದರಿಂದಲೇ ಕಪ್ಪು ಅದುರು ಎಂದು ಕರೆಯುತ್ತಾರೆ. ಕಬ್ಬಿಣದ ಅಂಶ ಇದರಲ್ಲಿ ಅತಿ ಹೆಚ್ಚು (72%). ಇದಕ್ಕೆ ಅಯಸ್ಕಾಂತ ಶಕ್ತಿ ಇದೆ. ಭಾರತದ ಅನೇಕ ಭಾಗಗಳಲ್ಲಿ ಮ್ಯಾಗ್ನಟೈಟನ್ನು ಒಳಗೊಂಡಿರುವ ಕಬ್ಬಿಣದ ಸ್ತರಗಳು ಇವೆ.

ಹಿಮಟೈಟ್ : ಕಬ್ಬಿಣದ ಉತ್ಪಾದನೆಯಲ್ಲಿ ಅತಿ ಮುಖ್ಯವಾದ ಸ್ಥಾನವನ್ನು ಪಡೆದಿರುವ ಖನಿಜ ಇದು. ಸಾಮಾನ್ಯವಾಗಿ ಕಪ್ಪು ಬಣ್ಣ ಪ್ರದರ್ಶಿಸಿದರೂ ಪುಡಿ ಮಾಡಿದಾಗ ಕೆಂಪು ಬಣ್ಣದ್ದಾಗಿ ಕಾಣುತ್ತದೆ.

ಲೈಮೊನೈಟ್ : ಕಬ್ಬಿಣದ ಅಂಶ ಇದರಲ್ಲಿ ತೀರ ಕಡಿಮೆ. ಖನಿಜ ಕೂಡ ಹಳದಿ ಬಣ್ಣವಾಗಿರುತ್ತದೆ. ಖನಿಜದಲ್ಲಿ ನೀರಿನ ಅಂಶವಿರುವುದರಿಂದ ಇದು ಸಾಮಾನ್ಯವಾಗಿ ಹಳದಿ ಮಣ್ಣಿನಂತಿರುತ್ತದೆ.

ಈ ಮೂರು ಖನಿಜಗಳಲ್ಲಿ ಕಬ್ಬಿಣ ತಯಾರಿಕೆಯಲ್ಲಿ ಮುಖ್ಯವಾಗಿ ಉಪಯೋಗವಾಗುತ್ತಿರುವ ಖನಿಜ ಹಿಮಟೈಟ್. ಭಾರತದಲ್ಲಿ ಹೇರಳವಾಗಿ ದೊರೆಯುವ ಕಬ್ಬಿಣದ ಖನಿಜವೆಂದರೆ ಇದೇ. ಕಬ್ಬಿಣ ನಿಕ್ಷೇಪಗಳಲ್ಲಿ ಮೂರು ಮುಖ್ಯ ವರ್ಗಗಳನ್ನು ಗುರುತಿಸಬಹುದು.

1. ಭೂಮಿಯ ಒಳಗಿನ ಉಷ್ಣದಿಂದ ಕರಗಿ ಶಿಲಾಪಾಕದ ಅವಸ್ಥೆಯಲ್ಲಿದ್ದು ಕೆನೆಗಟ್ಟುತ್ತ ಹೋದಂತೆ ತೂಕವಾದ ಕಬ್ಬಿಣದ ಖನಿಜ ಕೆಳಗೆ ದಟ್ಟೈಸಿ ರೂಪುಗೊಂಡ ಕಬ್ಬಿಣದ ನಿಕ್ಷೇಪ ಮೊದಲ ವರ್ಗದ್ದು. ಈ ರೀತಿ ರೂಪುಗೊಂಡ ಅದುರಿನಲ್ಲಿ ಟೈಟೇನಿಯಂ ಮತ್ತು ವೆನೆಡಿಯಂ ಲೋಹಾಂಶಗಳು ಸೇರಿರುತ್ತವೆ. ಟೈಟೇನಿಯಂ ಬೆರೆತಿರುವ ಅದುರನ್ನು ಕರಗಿಸುವುದಕ್ಕೆ ಅತಿ ಹೆಚ್ಚು ಉಷ್ಣತೆ ಬೇಕಾಗುವುದರಿಂದ ಈ ಬಗೆಯ ಅದುರುಗಳು ಕಬ್ಬಿಣ ಕೈಗಾರಿಕೆಯಲ್ಲಿ ಈವರೆಗೂ ಉಪಯೋಗಕ್ಕೆ ಬಂದಿಲ್ಲ.

2.ಪ್ರಕೃತಿ ವ್ಯಾಪಾರಗಳಾದ ಮಳೆ, ಬಿಸಿಲು, ಗಾಳಿ-ಇವುಗಳ ಹೊಡೆತಕ್ಕೆ ಸಿಕ್ಕಿ ಕಲ್ಲುಗಳು ಬೀಳುಬಿದ್ದು, ಪುಡಿಯೆದ್ದು ಮಣ್ಣಾಗಿ, ನೀರಿನಲ್ಲಿ ಬಹುದೂರ ಸಾಗಿ ಸಾಗರದ ಪಾಲಾಗುತ್ತವೆ. ಆಗ ಕಲ್ಲಿನಲ್ಲಿದ್ದ ಕಬ್ಬಿಣದ ಅಂಶವೇ ಬೇರೆಯಾಗಿ ಸಮುದ್ರದ ತಳದಲ್ಲಿ ಕೆನೆಯಂತೆ ಪದರಪದರವಾಗಿ ನಿಕ್ಷೇಪಗೊಳ್ಳುತ್ತದೆ. ಅನೇಕ ವರ್ಷಕಾಲ ತಡೆಯಿಲ್ಲದ ಈ ಬಗೆಯ ವ್ಯಾಪಾರದಿಂದ ಕಬ್ಬಿಣದ ಒಂದು ಸ್ತರಪಂಕ್ತಿಯೇ ಸಾಗರದ ತಲದಲ್ಲಿ ಶೇಖರವಾಗುತ್ತದೆ. ಕ್ರಮೇಣ ಭೂವ್ಯಾಪಾರಗಳ ದೆಸೆಯಿಂದ ನೆಲ ಜಲವಾಗಿ, ಜಲ ನೆಲವಾದಾಗ ನೀರಿನಲ್ಲಿ ಶೇಖರಗೊಂಡ ಕಬ್ಬಿಣದ ಸ್ತರಗಳು ನೆಲದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ರೀತಿ ರೂಪು ಹೊಂದಿದ ಕಬ್ಬಿಣದ ಸ್ತರಗಳು ಮುಖ್ಯವಾಗಿ ಕರ್ನಾಟಕ, ಗೋವ, ಬಿಹಾರ, ಒರಿಸ್ಸ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮೈಲಿಗಟ್ಟಲೆ ಹರಡಿವೆ. ಭಾರತದ ಮುಖ್ಯ ಕಬ್ಬಿಣ ನಿಕ್ಷೇಪಗಳಿರುವುದು ಈ ಬಗೆಯ ಜಲದಲ್ಲಿ ನಿಕ್ಷೇಪಗೊಂಡ ಸ್ತರಗಳಲ್ಲಿ.

3 ಜಲದಲ್ಲಿ ನಿಕ್ಷೇಪಗೊಂಡ ಸ್ತರಪಂಕ್ತಿ ನೇರವಾಗಿ ಮೇಲೆದ್ದು ನಿಂತಾಗ, ಮಳೆಗಾಳಿಗಳ ಹೊಡೆತಕ್ಕೆ ಸಿಕ್ಕುತ್ತದೆ. ಕಲ್ಲಿನಲ್ಲಿದ್ದ ಸುಲಭವಾಗಿ ಕರಗಿಹೋಗುವಂಥ ವಸ್ತುವೆಲ್ಲವೂ ಹೋಗಿ, ಕಬ್ಬಿಣ ಅಂಶ ಮಾತ್ರ ಕೆನೆಗಟ್ಟಿ ಹೆಪ್ಪುಹೆಪ್ಪಾಗಿ ಶೇಖರವಾಗುತ್ತದೆ. ಈ ರೀತಿ ಸಂಗ್ರಹವಾದ ನಿಕ್ಷೇಪಗಳು ಕಬ್ಬಿಣದ ಅದುರಿಗೆ ಮುಖ್ಯ ಆಕರಗಳು.

ಈ ಬಗೆಯ ನಿಕ್ಷೇಪಗಳು ಬೆಟ್ಟದ ನೆತ್ತಿಯ ಮೇಲಿರುತ್ತವೆ. ಬಹು ದೊಡ್ಡದಾಗಿರುತ್ತವೆ; ಇವುಗಳಲ್ಲಿನ ಕಬ್ಬಿಣದ ಅಂಶ 60% ಕ್ಕೂ ಹೆಚ್ಚಿರುತ್ತದೆ. ಪ್ರಪಂಚದ ಮುಖ್ಯ ಕಬ್ಬಿಣದ ನಿಕ್ಷೇಪಗಳೆಲ್ಲವೂ ಈ ರೀತಿಯವು.

ಭಾರತದಲ್ಲಿ ಕಬ್ಬಿಣದ ಅದುರು ನಿಕ್ಷೇಪಗಳು : ಇವು ಸುಮಾರಾಗಿ ಎಲ್ಲ ರಾಜ್ಯಗಳಲ್ಲಿಯೂ ಇವೆ. ಆದರೆ ದೊಡ್ಡ ಪ್ರಮಾಣದವು ಮಧ್ಯ ಪ್ರದೇಶದ ಶ್ರೇಣಿ, ಒರಿಸ್ಸ, ಸುಂದರಘಡ್ ಜಿಲ್ಲೆಯ ಬೋನಾಯ ಶ್ರೇಣಿ. ಕಟಕ್ ಜಿಲ್ಲೆಯ ದಯತೌರಿ, ಗಂಧಮಾದನ ಪರ್ವತಗಳು, ಬಿಹಾರದ ಸಿಂಗ್‍ಭೂಂ ಜಿಲ್ಲೆ, ಕರ್ನಾಟಕದ ಹೊಸಪೇಟೆ, ಕುದುರೆಮುಖ, ಬಾಬಾಬುಡನ್ ಶ್ರೇಣಿಗಳು, ಪಶ್ಚಿಮ ಕರಾವಳಿಯ ಗೋವ-ಈ ಪ್ರದೇಶಗಳಲ್ಲಿವೆ. ದೊಡ್ಡ ಪ್ರಮಾಣದಲ್ಲಿ ಗಣಿ ಕೆಲಸ ನಡೆಯುತ್ತಿರುವುದು ಸಹ ಇವೇ ಸ್ಥಳಗಳಲ್ಲಿ.

ಮಧ್ಯಪ್ರದೇಶ ಬೈಲದಿಲ : ಮಧ್ಯಪ್ರದೇಶದ ಬಸ್ತರ್ ಜಿಲ್ಲೆಯ ಒಳಭಾಗದಲ್ಲಿರುವ ಈ ಶ್ರೇಣಿಯ ನೆತ್ತಿಯ ಮೇಲೆ ಪ್ರಪಂಚದಲ್ಲೇ ಅತಿ ದೊಡ್ಡದೆಂದು ಪರಿಗಣಿಸಲಾದ ಕಬ್ಬಿಣ ನಿಕ್ಷೇಪವಿದೆ. ಸುಮಾರು ನಲವತ್ತು ಮೈಲಿಗಳಷ್ಟು ದೂರ ಹಬ್ಬಿರುವ ಈ ಬೆಟ್ಟದ ಸಾಲಿನಲ್ಲಿ ಹದಿನಾಲ್ಕು ಮುಖ್ಯ ನಿಕ್ಷೇಪಗಳನ್ನು ಗುರುತಿಸಿದ್ದಾರೆ. ಒಂದೊಂದೂ ಸುಮಾರು ಎರಡು ಮೈಲಿ ಉದ್ದ, ಸಾವಿರ ಅಡಿಗಳಷ್ಟು ಅಗಲವಿದೆ. ಕೆಲವು ಕಡೆಗಳಂತೂ ನೂರರಿಂದ ಇನ್ನೂರು ಅಡಿಯವರೆಗೂ ಕಡಿದಾಗಿ ನಿಂತಿರುವ ದರಿಗಳು ಪೂರ್ತಿಯಾಗಿ ಕಬ್ಬಿಣದ ಅದುರನ್ನೇ ತೋರಿಸುತ್ತವೆ.

ಇಲ್ಲಿನ ಅದುರು ಅತ್ಯುತ್ತಮವಾದದ್ದು. ಕಬ್ಬಿಣದ ಅಂಶ ಸರಾಸರಿ 65%ಕ್ಕೂ ಮೇಲಿದೆ. ನಿರ್ಜನವಾದ ಈ ಪ್ರದೇಶಕ್ಕೆ ಸಂಬಂಧ ಕಲ್ಪಿಸಲು ಹೊಸದೊಂದು ರೈಲುಮಾರ್ಗವನ್ನು ಹಾಕಿದ್ದಾರೆ. ಇದರ ಮೂಲಕ ಬೈಲದಿಲ ಅದುರನ್ನು ವಿಶಾಖಪಟ್ಟಣ ಬಂದರಿಗೆ ಕಳುಹಿಸುತ್ತಾರೆ. ಅಲ್ಲಿಂದ ಅದು ಜಪಾನಿಗೆ ರಫ್ತಾಗುತ್ತದೆ. ಈ ಪ್ರದೇಶದಲ್ಲಿ 1000 ಮಿಲಿಯನ್ ಟನ್‍ಗಳಷ್ಟು ಉತ್ತಮವಾದ ಕಬ್ಬಿಣದ ಅದುರು ದೊರೆಯುವುದೆಂದು ಅಂದಾಜು ಮಾಡಲಾಗಿದೆ.

ಬಿಹಾರ ಮತ್ತು ಒರಿಸ್ಸ ಜಿಲ್ಲೆ : ಪಕ್ಕಪಕ್ಕದಲ್ಲಿರುವ ದಕ್ಷಿಣ ಸಿಂಗ್‍ಭೂಂ, ಸುಂದರಘಡ್, ಕೆಯಾಂಜಾರ್ ಜಿಲ್ಲೆಗಳು ಕಬ್ಬಿಣದ ಅದುರಿನ ನಿಕ್ಷೇಪಗಳಿಗೆ ಪ್ರಸಿದ್ಧಿಯಾಗಿವೆ. ಎರಡು ರಾಜ್ಯಗಳಲ್ಲಿಯೂ ಹರಡಿರುವ ಬೊನಾಯ್ ಶ್ರೇಣಿ ಸುಮಾರು ಮೂವತ್ತು ಮೈಲಿ ದೂರ ಹಬ್ಬಿದೆ. ಈ ಉದ್ದಕ್ಕೂ ಗುಡ್ಡದ ನೆತ್ತಿಯಲ್ಲಿ ಹೇರಳವಾಗಿ ಕಬ್ಬಿಣದ ಅದುರು ದೊರೆಯುತ್ತದೆ. ದೇಶದ ಮುಖ್ಯವಾದ ಗಣಿಗಳಿರುವುದು ಈ ಸರಹದ್ದಿನಲ್ಲಿ. ಜಂಷಡ್‍ಪುರದಲ್ಲಿರುವ ತಾತಾ ಕಬ್ಬಿಣ ಕಂಪನಿ, ದುರ್ಗಾಪುರ, ಬೊಕಾರೊ ಇವುಗಳಲ್ಲಿ ಅಗಾಧ ಪ್ರಮಾಣದ ಕಬ್ಬಿಣ ಕೈಗಾರಿಕೆಗಳು ಬೊನಾಯ್ ಶ್ರೇಣಿಯ ಅದುರನ್ನು ಅವಲಂಬಿಸಿವೆ.

ಇವಲ್ಲದೆ ಕಟಕ್ ಜಿಲ್ಲೆಯಲ್ಲಿನ ದಯತಾರಿ, ಗಂಧಮಾದನ ಶ್ರೇಣಿಯಲ್ಲಿ ಮತ್ತು ಬನಸಪಾಣಿಯ ಸುತ್ತಮುತ್ತ ಅನೇಕ ಸಣ್ಣ ಪ್ರಮಾಣದ ಕಬ್ಬಿಣದ ಗಣಿಗಳಿವೆ. ಇಲ್ಲಿ ಉತ್ಪತ್ತಿಯಾಗುವ ಅದುರು ಕೊಲ್ಕತ್ತ ಮತ್ತು ಪರದೀಪ ಬಂದರುಗಳ ಮೂಲಕ ಜಪಾನ್ ದೇಶಕ್ಕೆ ರಫ್ತಾಗುತ್ತದೆ.

ಗೋವ : 1300 ಚ.ಮೈ ಪಶ್ಚಿಮ ಕರಾವಳಿಗೆ ಅಂಟಿಕೊಂಡಿರುವ ಈ ಪ್ರದೇಶದಲ್ಲಿ ಪ್ರಧಾನವಾದದ್ದು ಕಬ್ಬಿಣ ಕೈಗಾರಿಕೆಯೊಂದೇ. ಇಲ್ಲಿನ ನಿಕ್ಷೇಪಗಳು ಬಂದರಿಗೆ ಅತಿ ಸಮೀಪವಾಗಿರುವುದರಿಂದಲೂ ನದಿಗಳು, ಕಾಲುವೆಗಳ ಮೂಲಕ ಅದುರನ್ನು ಸಾಗಿಸಲು ಸೌಲಭ್ಯ ಇರುವುದರಿಂದಲೂ ಲಾಭದಾಯಕವಾಗಿ ಅದುರು ವ್ಯಾಪಾರವನ್ನು ಮಾಡಲು ಸಾಧ್ಯವಾಗಿದೆ. ಅದುರಿನಲ್ಲಿರುವ ಕಬ್ಬಿಣದ ಅಂಶಹೆಚ್ಚೇನೂ ಅಲ್ಲ; 58% ರಿಂದ ಹಿಡಿದು 60% ವರೆಗೆ ಮಾತ್ರ. ನವೀನ ಯಂತ್ರೋಪಕರಣಗಳ ಸಹಾಯದಿಂದ ಹೇರಳ ಪ್ರಮಾಣದಲ್ಲಿ ಅದುರನ್ನು ಉತ್ಪಾದಿಸಿ ದೂರ ದೇಶಗಳಿಗೆ ಕಳುಹಿಸುತ್ತಾರೆ. 300 ಮಿಲಿಯನ್ ಟನ್‍ಗಳಷ್ಟು ಕಬ್ಬಿಣದ ಅದುರು ಇಲ್ಲಿದೆಯೆಂದು ಅಂದಾಜು. ವರ್ಷಂಪ್ರತಿ ಐದಾರು ದಶಲಕ್ಷ ಟನ್‍ಗಳು ಜಪಾನ್ ದೇಶಕ್ಕೆ ರಫ್ತಾಗುತ್ತವೆ.

ಕರ್ನಾಟಕ : ಕಬ್ಬಿಣ ನಿಕ್ಷೇಪಗಳು ಈ ಕೆಳಕಂಡ ಜಿಲ್ಲೆಗಳಲ್ಲಿವೆ : ಬಳ್ಳಾರಿ ಹೊಸಪೇಟೆ, ಬಳ್ಳಾರಿ ಬಿಜಾಪುರ ಬಾಗಲಕೋಟೆ ಬಳಿಯಿರುವ ಕಮತಗಿ ಚಿಕ್ಕಮಗಳೂರು ಬಾಬಾಬುಡನ್ ಶ್ರೇಣಿಯ ಕೆಮ್ಮಣ್ಣುಗುಂಡಿ, ಕುದುರೆಮುಖ,

                               ಗಂಗಮೂಲ

ಚಿತ್ರದುರ್ಗ ವಜ್ರ, ಸಾಸಲು, ಹೊಸದುರ್ಗ ಉತ್ತರಕನ್ನಡ ಅನಮೋಚು, ಸೂಪ, ಹೊನ್ನಾವರ ದಕ್ಷಿಣ ಕನ್ನಡ ಸುಬ್ರಹ್ಮಣ್ಯ, ಪುತ್ತೂರು ಶಿವಮೊಗ್ಗ ಕುಂಸಿ, ಶಂಕರಗುಡ್ಡ ತುಮಕೂರು ಚಿಕ್ಕನಾಯಕನ ಹಳ್ಳಿ

ಬಳ್ಳಾರಿ-ಹೊಸಪೇಟೆ : ಕರ್ನಾಟಕ ರಾಜ್ಯದಲ್ಲಿ ಮುಖ್ಯವಾದ ಕಬ್ಬಿಣದ ಅದುರು ವಲಯದಲ್ಲಿದೆ. ಪ್ರಪಂಚದ ಅತ್ಯುತ್ತಮ ಕಬ್ಬಿಣದ ಅದುರು ಇಲ್ಲಿನದೆಂದು ಹೆಸರುವಾಸಿಯಾಗಿದೆ. 1952ರಲ್ಲಿ ವರ್ಷಕ್ಕೆ ಹತ್ತು ಸಾವಿರ ಟನ್ ಮಾತ್ರ ಉತ್ಪಾದನೆಯಿತ್ತು. ಅಲ್ಲಿಂದೀಚೆಗೆ ಉತ್ಪಾದನೆ ವರ್ಷವರ್ಷವೂ ಹೆಚ್ಚುತ್ತಹೋಗಿ ಈಗ ಮೂವತ್ತು ಲಕ್ಷಟನ್ ಮುಟ್ಟಿದೆ. ಜಂಬುನಾಥನ ಹಳ್ಳಿ, ಪಾಪನಾಯಕನ ಹಳ್ಳಿ, ಎತ್ತಿನಹಟ್ಟೆ, ಉಬ್ಬಲಗಂಡಿ, ದೋಣಿಮಲೆ, ದೇವದಾರ ಗುಡ್ಡ, ರಾಮನ ದುರ್ಗ, ಕುಮಾರಸ್ವಾಮಿ ಈ ಗುಡ್ಡ ಸಾಲುಗಳಲ್ಲಿ 10,000 ಟನ್ನು ಅದುರನ್ನು ವಾರ್ಷಿಕ ಉತ್ಪಾದಿಸುತ್ತಿದ್ದುದು ಈಗ ಅದು 86,000 ಟನ್ನುಗಳಿಗೆ ಏರಿದೆ. ಅತ್ಯುತ್ತಮವಾದ ಅದುರು ಹೇರಳವಾಗಿ ದೊರೆಯುವುದರಿಂದಲೂ ರೈಲು, ನೀರು, ವಿದ್ಯುಚ್ಛಕ್ತಿ ಸೌಕರ್ಯಗಳಿರುವುದರಿಂದಲೂ ಹೊಸಪೇಟೆಯಲ್ಲಿ ದೊಡ್ಡ ಪ್ರಮಾಣದ ಉಕ್ಕಿನ ಯಂತ್ರಾಗಾರವನ್ನು ನಿರ್ಮಿಸುವುದು ಸಾಧ್ಯ. ಸೊಂಡೂರಿಗೆ ಸಮೀಪದಲ್ಲಿರುವ ದೋಣಿಮಲೆಯ ಬಳಿ ಬೃಹತ್ ಪ್ರಮಾಣದಲ್ಲಿ ಗಣಿ ಉದ್ಯಮ ಪ್ರಾರಂಭವಾಗಿದೆ. ವರ್ಷಂಪ್ರತಿ ಸುಮಾರು 4 ಮಿಲಿಯನ್ ಟನ್‍ಗಳಷ್ಟು ಅದುರನ್ನು ಈ ಗುಡ್ಡಸಾಲಿನಲ್ಲಿ ತೆಗೆದು ಚೆನ್ನೈ ಬಂದರಿಗೆ ಸಾಗಿಸಲಾಗುತ್ತದೆ. ಇಷ್ಟು ಹೇರಳವಾದ ಪ್ರಮಾಣದಲ್ಲಿ ಅದುರನ್ನು ಪಡೆಯಲು ಅತ್ಯಾಧುನಿಕವಾದ ಯಂತ್ರೋಪಕರಣಗಳು ಅವಶ್ಯಕ.

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣು ಗುಂಡಿ : ಈ ಜಿಲ್ಲೆಯಲ್ಲಿರುವ ಬಾಬಾಬುಡನ್ ಶ್ರೇಣಿ ಪ್ರಸಿದ್ಧಿಯಾದುದು. ಈ ಪರ್ವತಪಂಕ್ತಿಯ ನೆತ್ತಿಯ ಪ್ರದೇಶವೆಲ್ಲ ಕಬ್ಬಿಣದ ಅದುರಿನಿಂದ ಕೂಡಿದೆ. ಕೆಮ್ಮಣ್ಣುಗುಂಡಿಯ ಬಳಿ ದೊರೆಯುವ ಅದುರನ್ನು ಭದ್ರಾವತಿಗೆ ಸಾಗಿಸಿ ಕಬ್ಬಿಣ ಉಕ್ಕನ್ನು ತಯಾರಿಸಲಾಗುತ್ತದೆ.

ಕುದುರೆಮುಖ : ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಕುದುರೆಮುಖ ಗಂಗಮೂಲ ಪರ್ವತಶ್ರೇಣಿ ಮೈಸೂರು ದೇಶದಲ್ಲಿ ಹೆಸರುವಾಸಿಯಾಗಿದೆ. ಪ್ರಕೃತಿ ಸಂಪತ್ತಿನ ತವರಾದ ಈ ಶ್ರೇಣಿಯ ಉದ್ದಕ್ಕೂ ಕಬ್ಬಿಣದ ಸ್ತರ ಪಂಕ್ತಿಯಿದೆ. ಕಬ್ಬಿಣದ ಅಂಶ ಕಡಿಮೆ ಇದ್ದುದರಿಂದ ಇವುಗಳನ್ನು ಈವರೆಗೆ ಗಣನೆಗೆ ತಂದು ಕೊಂಡಿರಲಿಲ್ಲ. ಬೆಳೆಯುತ್ತಿರುವ ಮಂಗಳೂರು ಬಂದರಿಗೆ ಕುದುರೆಮುಖ ಸಮೀಪವಾಗಿರುವುದರಿಂದ ಹೆಚ್ಚು ಖರ್ಚಿಲ್ಲದೆ ಅದುರನ್ನು ಅಲ್ಲಿಗೆ ಸಾಗಿಸುತ್ತಾರೆ. ಇಲ್ಲಿ ದೊರೆಯುವ ಅದುರಿಗೆ ಅಯಸ್ಕಾಂತಶಕ್ತಿ ಇರುವುದರಿಂದ ಅದುರನ್ನು ಶುದ್ಧಿಮಾಡಿ ಉತ್ತಮ ದರ್ಜೆಯ ಅದುರನ್ನು ವಿಂಗಡಿಸಲು ಸಾಧ್ಯವಾಗಿದೆ. ಸುಮಾರು ಅರುವತ್ತು ಕೋಟಿ ರೂಪಾಯಿ ಬಂಡವಾಳ ಹೂಡಿ ಇಲ್ಲಿನ ನಿಕ್ಷೇಪಗಳನ್ನು ರೂಢಿಸುವ ಬೃಹತ್ ಯೋಜನೆಯೊಂದು ಸಿದ್ಧವಾಗಿ, 1987ರಲ್ಲೇ ಕಬ್ಬಿಣದ ಅದುರನ್ನು ಉಂಡೆರೂಪಕ್ಕೆ ತರುವ 3 ದಶಲಕ್ಷ ಟನ್ನು ಸಾಮಥ್ರ್ಯದ ಸ್ಥಾವರನ್ನು ಇಲ್ಲಿ ಸ್ಥಾಪಿಸಲಾಯಿತು. ನಿರ್ಜನವಾದ, ದುರ್ಗಮವಾದ ಈ ಪ್ರದೇಶ ಅನೇಕ ಬಗೆಯ ಕಾರ್ಯಚಟುವಟಿಕೆಗಳಿಂದ ಜೀವಂತವಾಗಿದೆ. ವಾರ್ಷಿಕ ಅದುರು ಉತ್ಪಾದನೆ ಒಂದು ಲಕ್ಷ ಟನ್ನುಗಳು.

ಚಿತ್ರದುರ್ಗ ಜಿಲ್ಲೆ : ಮುಖ್ಯವಾದ ಕಬ್ಬಿಣದ ನಿಕ್ಷೇಪಗಳು ಹುಲಿಯೂರಿನ ಬಳಿಯ ವಜ್ರ, ಕುದುರೆಕಣಿವೆ, ಮಾರಿಕಣಿವೆ ಬಳಿಯ ಲಕ್ಕಿಹಳ್ಳಿ, ಕೆಂಕೆರೆ, ಚಿತ್ರದುರ್ಗ ಬಳಿಯ ಭೀಮಸಮುದ್ರ, ಸಿರಿಗೆರೆ ಬಳಿಯ ಮದಕರಿಪುರ ಇವುಗಳ ಹತ್ತಿರ ಇವೆ. ಇಲ್ಲಿನ ನಿಕ್ಷೇಪಗಳು ಚೆನ್ನೈ ಬಂದರಿಗೆ ದೂರವಾಗಿರುವುದರಿಂದ ದೊರೆಯುವ ಹಣವೆಲ್ಲವೂ ಅದುರು ಸಾಗಾಣಿಕೆಗೇ ವ್ಯಯವಾಗುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಇಲ್ಲೆಲ್ಲೂ ಕೆಲಸ ನಡೆಯುತ್ತಿಲ್ಲ. ಉದ್ದೇಶಿತ ಉಕ್ಕಿನ ಕಾರ್ಖಾನೆಗಳು. 1.ಹೊಸಪೇಟೆ, 2.ಸೇಲಂ, 3.ವಿಶಾಖಪಟ್ಟಣ 4.ಬೊಕಾರೊ ಶಿವಮೊಗ್ಗ ಜಿಲ್ಲೆ : ಇಲ್ಲಿ ಕಬ್ಬಿಣದ ಅದುರು ಕುಂಸಿ, ಶಂಕರಗುಡ್ಡ, ಚಟ್ಟನಹಳ್ಳಿ, ಗಂಗೂರು, ಸಿದ್ಧರಹಳ್ಳಿ, ಆಗುಂಬೆ, ನಿಶಾನಿಗುಡ್ಡ, ಹೊಸದುರ್ಗದ ಕೊಡಚಾದ್ರಿ ಈ ಬಳಿ ದೊರೆಯುತ್ತದೆ. ಆದರೆ ಇವುಗಳೆಲ್ಲವೂ ರೈಲುಮಾರ್ಗಗಳಿಗೆ ಅತಿ ದೂರವಿರುವುದರಿಂದ ಇದುವರೆವಿಗೆ ಎಲ್ಲಿಯೂ ಕೆಲಸ ನಡೆದಿಲ್ಲ. ಕೊಡಚಾದ್ರಿ ಕೋಟೆ ನಿಕ್ಷೇಪಗಳು ಕುದುರೆಮುಖದ ನಿಕ್ಷೇಪಗಳಂತೆಯೇ ಕುಂದಾಪುರ ಬಂದರಿಗೆ ಅತಿ ಸಮೀಪವಾದವು.

ದಕ್ಷಿಣ ಕನ್ನಡ ಜಿಲ್ಲೆ : ಕಬ್ಬಿಣದ ಸ್ತರಗಳು ಪುತ್ತೂತು ತಾಲ್ಲೂಕಿನ ಆರ್ಬದ ಗುಡ್ಡದಲ್ಲಿವೆ. ಈ ಗುಡ್ಡದ ಸಾಲು ಸುಬ್ರಹ್ಮಣ್ಯದಿಂದ ಧರ್ಮಸ್ಥಳದವರೆಗೂ ಹರಡಿದೆ. ಹಾಸನ-ಮಂಗಳೂರು ರೈಲುಮಾರ್ಗ ಈ ನಿಕ್ಷೇಪಗಳ ಬಳಿಯೇ ಹಾದುಹೋಗುವುದರಿಂದ ಇನ್ನು ಕೆಲವು ವರ್ಷಗಳಲ್ಲೇ ಇವುಗಳಿಗೂ ಬೆಲೆ ಬರಬಹುದು.

ಉತ್ತರಕನ್ನಡ ಜಿಲ್ಲೆ : ಗೋವೆಯ ಅಂಚಿಗಿರುವ ಅನಮೋಡಸೂಪ, ದಾಂಡೇಲಿ, ಎಲ್ಲಾಪುರ, ತಲಗಿನಕೇರಿ, ಮಾವಿನಗುಂಡಿ, ಈ ಸ್ಥಳಗಳಲ್ಲಿ ಕಬ್ಬಿಣದ ನಿಕ್ಷೇಪಗಳಿವೆ. ಎಲ್ಲೆಲ್ಲೂ ದಟ್ಟವಾದ ಕಾಡು ಹಬ್ಬಿರುವುದರಿಂದಲೂ ಮಾರ್ಗಾನುಕೂಲತೆಗಳು ಇಲ್ಲದಿರುವುದರಿಂದಲೂ ಇವುಗಳಿಗೆ ಪ್ರಾಮುಖ್ಯ ಬಂದಿಲ್ಲ. ಕಾರವಾರ ಬಂದರು ಅಭಿವೃದ್ಧಿಗೊಂಡು ಸೇತುವೆಗಳು, ರೈಲುಮಾರ್ಗಗಳು ನಿರ್ಮಿತವಾದರೆ ಉತ್ತರಕನ್ನಡ ಜಿಲ್ಲೆಯ ಅದುರು ನಿಕ್ಷೇಪಗಳು ಪ್ರಾಮುಖ್ಯಕ್ಕೆ ಬರುತ್ತವೆ.

ತುಮಕೂರು ಜಿಲ್ಲೆ : ದಕ್ಷಿಣದಲ್ಲಿ ಹತ್ಯಾಳಿನಿಂದ ಹಿಡಿದು, ಹುಳಿಯಾರಿನವರೆಗೆ ಚಿಕ್ಕನಾಯಕನಹಳ್ಳಿಯ ಪೂರ್ವಕ್ಕೆ ಹಬ್ಬಿರುವ ಗುಡ್ಡಸಾಲಿನಲ್ಲಿ ಕಬ್ಬಿಣದ ನಿಕ್ಷೇಪಗಳು ಹಲವಾರಿವೆ. ಸಣ್ಣಪ್ರಮಾಣದಲ್ಲಿ ಅದುರನ್ನು-ಮಂಗಳೂರು ಬಂದರಿಗೂ ಭದ್ರಾವತಿಯ ಉಕ್ಕಿನ ಕಾರ್ಖಾನೆಗೂ ಕಳುಹಿಸಲಾಗುತ್ತಿದೆ. ದೊರೆಯಬಹುದಾದ ಅದುರಿನ ಪ್ರಮಾಣದ ಅಂದಾಜು : ಭಾರತದಲ್ಲಿ ದೊರೆಯಬಹುದಾದ ಕಬ್ಬಿಣದ ಅದುರಿನ ಒಟ್ಟು ಪರಿಮಾಣ ಇಪ್ಪತ್ತು ಸಾವಿರ ಮಿಲಿಯನ್ ಟನ್‍ಗಳೆಂದು ಅಂದಾಜು. ಇದರಲ್ಲಿ ಸಿದ್ಧಪಡಿಸಿ ತೋರಿಸಿದ ಹಾಗೂ ಇರಬಹುದೆಂದು ಅನುಮಾನಿಸಿದ ಅದುರಿನ ಮೊತ್ತಗಳೆರಡೂ ಸೇರಿವೆ. ವರ್ಷಂಪ್ರತಿ ನಡೆಯುತ್ತಿರುವ ಅನ್ವೇಷಣೆಗಳಿಂದ ಹೊಸ ನಿಕ್ಷೇಪಗಳು ಗಮನಕ್ಕೆ ಬಂದು ನಿಕ್ಷೇಪಗಳ ಒಟ್ಟು ಅಂದಾಜು ಹೆಚ್ಚುತ್ತ ಹೋಗುತ್ತಿದೆ. ನಮ್ಮ ಬಳಕೆಗೆ ಸಾಕಾಗಿ ಬೇರೆ ದೇಶಗಳಿಗೆ ನಾವು ಅದುರನ್ನು ರಫ್ತು ಮಾಡಬಹುದಾಗಿದೆ.

ಇತ್ತೀಚೆಗೆ ನಡೆಸಿರುವ ಶೋಧನೆಗಳ ಪ್ರಕಾರ ಬಳ್ಳಾರಿ ಹೊಸಪೇಟೆ ಪ್ರಾಂತದಲ್ಲಿ ದೊರೆಯಬಹುದಾದ ಅದುರಿನ ಮೊತ್ತ 1500 ಮಿಲಿಯನ್ ಟನ್‍ಗಳು ಎಂದು ಪರಿಗಣಿಸಲಾಗಿದೆ. ಇದೇ ರೀತಿ ಕುದುರೆಮುಖದ ಬಳಿ ಮ್ಯಾಗ್ನಟೈಟ್ ಅದುರಿನ ಪ್ರಮಾಣ 3000 ಮಿಲಿಯನ್ ಟನ್‍ಗಳಿಗೂ ಹೆಚ್ಚಿದೆಯೆಂದು ಅಂದಾಜುಮಾಡಲಾಗಿದೆ. (ನೋಡಿ- ಕರ್ಣಾಟಕದ ಖನಿಜ ನಿಕ್ಷೇಪಗಳು)

 (ಬಿ.ಪಿ.ಆರ್.)

(ಪರಿಷ್ಕರಣೆ: ಟಿ. ಆರ್. ಅನಂತರಾಮು)