ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮೆರ್ಲಿಂಗ್ ಓನ್ಸ್‌, ಹೈಕ್

ವಿಕಿಸೋರ್ಸ್ ಇಂದ
Jump to navigation Jump to search

ಕಮೆರ್ಲಿಂಗ್ ಓನ್ಸ್‌, ಹೈಕ್ : 1853-1926. ವಿಖ್ಯಾತ ಡಚ್ ಭೌತವಿಜ್ಞಾನಿ. ಹುಟ್ಟಿದ್ದು ಹಾಲೆಂಡಿನ ಗ್ರ್ಯೂನಿಂಗೆನ್ ನಗರದಲ್ಲಿ, 1853 ಸೆಪ್ಟೆಂಬರ್ 21ರಂದು. ಅಲ್ಲೇ ಬೆಳೆದು ಭೌತವಿಜ್ಞಾನ ಮತ್ತು ಗಣಿತ ವಿಜ್ಞಾನಗಳನ್ನು ಓದಿದ. 1871ರಂದು ಜರ್ಮನಿಯ ಹೈಡೆಲ್ ಬರ್ಗ್ ನಗರಕ್ಕೆ ಹೋಗಿ ಬುನ್ಸೆನ್ ಮತ್ತು ಕಿರ್ಕಾಫರೊಂದಿಗೆ ಓದಿ ಮತ್ತೆ ಗ್ರ್ಯೂನಿಂಗಿಗೆ ಹಿಂತಿರುಗಿ ಅಲ್ಲಿ 1879ರಂದು ಡಾಕ್ಟೊರೇಟನ್ನು ಪಡೆದ. ಅನಂತರ ಹಾಲೆಂಡಿನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ(1882-1923) ಸಾಯುವುದಕ್ಕೆ ಕೆಲವು ವರ್ಷ ಮುಂಚಿನವರೆಗೂ ಇದ್ದ. ಅಲ್ಲಿ 1894ರಂದು ಉಪಕರಣಗಳಿಂದ ಸಜ್ಜಿತವಾದ ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿ ದ್ರವ ಮತ್ತು ಅನಿಲಗಳ ಮೇಲೆ ಒತ್ತಡದ ಮತ್ತು ಅಲ್ಪತಾಪದ ಪರಿಣಾಮಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದ ನೋಡಿ-(ಅಲ್ಪತಾಪ ಮತ್ತು ಅತಿವಾಹಕತ್ವ). ಇದರ ಫಲವಾಗಿ 1908ರಂದು ಹೀಲಿಯಂ ಅನಿಲವನ್ನು ದ್ರವೀಕರಿಸಿದ (ನೋಡಿ-ಅನಿಲ ದ್ರವೀಕರಣ) ಮತ್ತು 269ಲಿ ಸೆಂ. ಅಥವಾ 1ಲಿ ಏ ತಾಪವನ್ನು ಉಂಟುಮಾಡಿದ. ಇಂಥ ಅಲ್ಪತಾಪದಲ್ಲಿ ಲೋಹಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅತಿವಾಹಕತ್ವವನ್ನು ಕಂಡುಹಿಡಿದ. ಈ ರೀತಿ ಓನ್ಸ್‌ ನಡೆಸಿದ ಅತ್ಯುತ್ತಮ ಅಲ್ಪತಾಪ ಭೌತವಿಜ್ಞಾನದ ಪ್ರಯೋಗಗಳಿಗಾಗಿ ಮತ್ತು ಹೀಲಿಯಂ ಅನಿಲವನ್ನು ದ್ರವೀಕರಿಸಿದ್ದಕ್ಕಾಗಿ ಅವನಿಗೆ 1913ರಂದು ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು. ಓನ್ಸ್‌ ಭೌತವಿಜ್ಞಾನದ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. 1926 ಫೆಬ್ರವರಿ 21ನೆಯ ತಾರೀಖು ಲೈಡನ್ ನಗರದಲ್ಲಿ ಈತ ಅಸುನೀಗಿದ. (ಎನ್.ಜಿ.ಪಿ.)