ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಡಜ್ವರ

ವಿಕಿಸೋರ್ಸ್ದಿಂದ

ಕರಡಜ್ವರ : ಇಸಬು, ಗೂರಲು, ಕರಡ ಜ್ವರ ಈ ಮೂರು ಬೇನೆಗಳು ಒಂದು ಗುಂಪಿನವು (ಹೇ ಫೀವರ್). ಈ ರೋಗತ್ರಯವನ್ನು ಇ-ಗೂ-ಕ-ಜ್ವ ಸಂಕೀರ್ಣ (ಇ.ಂ.ಊ.ಈ. ಅomಠಿಟex) ಎಂದೂ ಕರೆಯುವುದುಂಟು. ಏಕೆಂದರೆ ಕೆಲವು ಮನೆತನಗಳಲ್ಲಿ ಒಬ್ಬರಿಗಾದರೂ ಈ ಬೇನೆಗಳಲ್ಲಿ ಒಂದಾದರೂ ಕಾಡುವುದು. ಒಗ್ಗದಿಕೆಯೇ ಇವುಗಳ ಮೂಲಕಾರಣ.

ಕೆಲವು ಹುಲ್ಲುಗಳ ಪರಾಗ ಕಣಗಳಿಗೆ ಮೂಗು ಮೈಗಳ ಒಗ್ಗದಿಕೆಯೇ ಕರಡ ಜ್ವರಕ್ಕೆ ಕಾರಣವಾಗುವುದು. ಸಾಮಾನ್ಯವಾಗಿ ಬೇಸಗೆಯಲ್ಲಿ ಇದ್ದಕ್ಕಿದ್ದ ಹಾಗೆ ರೋಗ ತಲೆದೋರುತ್ತದೆ. ಮೊದ ಮೊದಲು ಕೇವಲ ನೆಗಡಿಯಂತೆ ಮೂಗು ಉರಿಯುತ್ತ ಕೆಂಪಾಗಿ ನೀರು ಸುರಿಯಬಹುದು. ಒಂದೆರಡು ಸೀನು, ಮೈ ತುರಿಕೆ, ಕಣ್ಣಿನಿಂದ ನೀರು ಸುರಿತ ಅಲ್ಲದೆ ಇನ್ನೂ ಜೋರಾದರೆ ಕಣ್ಣುರಿಯಾಗಿ ಊದಿಕೊಂಡು, ಉಬ್ಬಸ ಗೂರಲಿನ ತೆರನಾಗಿ ಸೇದಬಹುದು. ಜೊತೆಗೆ ಸಿಡಿವ ತಲೆನೋವು ಮತ್ತು ಜ್ವರದಿಂದ ರೋಗಿ ನರಳುತ್ತ ಸುಸ್ತು ಬೀಳುತ್ತಾನೆ. ಈ ಜ್ವರಕ್ಕೆ ಈಡಾಗುವರು ಹಲವಾರು ಬಗೆಯ ಹುಲ್ಲುಗಳ ಪರಾಗಗಳಿಗೆ ಒಗ್ಗದಂತಿರುವರು. ಇನ್ನು ಕೆಲವರು ಗೊತ್ತಾದ ಗಿಡ, ಹೂಗಳ ಪರಾಗಗಳಿಗೆ ಈಡಾಗುವರು. ಮತ್ತೆ ಕೆಲವರು ಉಣಿಸಿನಲ್ಲಿ ಕೆಲವು ಪ್ರೋಟೀನು ವಸ್ತುಗಳನ್ನೂ ಬೆಕ್ಕು, ನಾಯಿ, ಕುದುರೆ, ಇಲಿ ಮತ್ತಿತರ ಪ್ರಾಣಿಗಳ ಕೂದಲ ವಾಸನೆಗಳನ್ನೂ ಸಹಿಸರು. ಇಂಥ ರೋಗಿಗಳಿಗೆ 2-3 ಪರಾಗಕಣಗಳು ತಾಕಿದರೂ ಅವರು ಬೇನೆ ಬೀಳುವರು. ಒಗ್ಗದ ಗಿಡ, ಮರ, ಹೂಗಳು ಒಂದು ಕಿಲೋಮಿಟರ್ ದೂರದಲ್ಲಿದ್ದರೂ ಬೇನೆ ಆರಂಭವಾಗುತ್ತದೆ.

ಮಕ್ಕಳ ಬೇನೆಯಾದ ಇದು, ಸಣ್ಣ ವಯಸ್ಸಿನಲ್ಲಿ ಶುರುವಾಗಿ ಆಮೇಲೆ ಬೇಸಗೆ ಕಾಲದಲ್ಲಿ ಪ್ರತಿ ವರ್ಷವೂ ಕಾಡುತ್ತ ನಡುವಯಸ್ಸಿನಲ್ಲಿ ಇಳಿದು ಹೋಗುತ್ತದೆ. ಕೆಲವರಿಗೆ ಬೇಸಗೆ ಕಾಲದ ಹೊರತಾಗಿ ಎದೆಯಲ್ಲಿ ಯಾವ ಬೇನೆಯ ತೊಡಕೂ ಕಾಣಿಸಕೊಳ್ಳದು. ಇನ್ನು ಕೆಲವರಿಗಂತೂ ಯಾವಾಗ ಬೇಕಾದರೂ? ತಲೆದೋರಬಹುದು. ಈ ರೋಗಕ್ಕೆ ಈಡಾಗುವವರಲ್ಲಿ ಮೂರು ಅಂಶಗಳು ಮೇಲುಗೈಯಾಗಿರುತ್ತವೆ-ತಲೆಮಾರಿನ ಗುಣ, ಚಂಚಲ ಮನ, ಸಾಮಾನ್ಯರಲ್ಲಿ ಯಾವ ತೊಡಕನ್ನೂ ತೋರದ ವಸ್ತುಗಳಿಗೆ ಒಗ್ಗದಿರುವುದು. ಅಸಹಜವಾಗಿ ಈಡಾಗುವ ಈ ಗುಣಕ್ಕೆ ಒಗ್ಗದಿಕೆ ಎಂದು ಹೆಸರಿದೆ. ರೋಗಿಗೆ ಒಂದು ವಸ್ತು ಮೊದಲು ತಾಕಿದಾಗ, ಚುಚ್ಚಿಹೊಗಿಸಿದಾಗ, ನುಂಗಿದಾಗ, ಇಲ್ಲವೇ ಉಸಿರಿನ ಮೂಲಕ ಸೇರಿದಾಗ ಅದಕ್ಕೆ ಈಡಾಗುವ ಗುಣವನ್ನು ಪಡೆಯುವರು. ಆಮೇಲೆ ಎರಡನೆಯ ಬಾರಿ ಅದೇ ವಸ್ತು ತಾಕಿದರೆ ತುಂಬ ಪೇಚಾಡಿಸುವುದು. ಒಗ್ಗದಿಕೆಯ ಪರಿಣಾಮ ರಕ್ತ ನಾಳ, ಇಲ್ಲವೇ ನಯ ಸ್ನಾಯುಗಳ ಕೆಲಸದ ವ್ಯತ್ಯಾಸಗಳಿಂದಾಗುವುದು. ಮೈ ಮೇಲಿನ ಇಲ್ಲವೇ ಒಳಗಿನ ತಲಗಳ ಅತಿಸೂಕ್ಷ್ಮ ರಕ್ತನಾಳಗಳ ನಿಜಕೆಲಸ ಕೆಡುವುದರಿಂದ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಶ್ವಾಸನಾಳಗಳು ಅವುಗಳ ನಯ ಸ್ನಾಯುಗಳ ಒಗ್ಗದ ಪರಿಣಾಮವಾಗಿ ಕುಗ್ಗಿ ಗಾತ್ರ ಸಣ್ಣಗಾಗುವುದೇ ಉಬ್ಬಸಕ್ಕೆ ಕಾರಣ.

ಕರಡ ಜ್ವರವನ್ನು ಗುರುತಿಸುವುದು ಸುಲಭ. ಬೇಸಗೆಯಲ್ಲಿ ಬೇರೆ ಯಾವ ಬೇನೆಯೂ ಇದರ ಹಾಗೆ ಕಾಣಿಸಿಕೊಳ್ಳುವುದಿಲ್ಲ. ಕೆಲವು ಪರೀಕ್ಷೆಗಳಿಂದ ಮುಂದೆ ಬರಬಹುದಾದ ಈ ರೋಗದ ಕಾರಣಗಳನ್ನು ಕಂಡು ಹಿಡಿಯಬಹುದು. ಆಯಾ ಊರುಗಳಲ್ಲಿ ಕಾರಣವೆಂದು ಗೊತ್ತಿರುವ ಪರಾಗಗಳ ಸಿದ್ಧಪಡಿಸಿದ ಸಾರಕಗಳನ್ನು ಮದ್ದು ತಯಾರಕರಿಂದ ಪಡೆಯಬಹುದು. ಇವನ್ನು ಕರಡ ಜ್ವರದ ರೋಗಿಗೆ ಕೊಟ್ಟರೆ ಆರೋಗ್ಯವಂತರಿಗಿಂತಲೂ 500 ಪಾಲು ಜೋರಾಗಿ ಇವರು ಅದಕ್ಕೆ ಈಡಾಗುವುದನ್ನು ತೋರಿಸಬಹುದು.

ಯಾವ ವಸ್ತುವಿನ ಒಗ್ಗದಿರುವಿಕೆ ರೋಗಿಗೆ ಹೀಗಾಗುತ್ತದೆ ಎನ್ನುವುದನ್ನು ಕಂಡುಹಿಡಿಯ ಬಹುದು. ಒಗ್ಗದಿಕೆಯನ್ನುಂಟುಮಾಡಬಲ್ಲ ಪದಾರ್ಥಗಳನ್ನು, ಇಲ್ಲವೇ ಅವುಗಳ ಸಾರಕಗಳನ್ನು ನಿರ್ದಿಷ್ಟ, ಅತ್ಯಲ್ಪ ಪ್ರಮಾಣದಲ್ಲಿ ರೋಗಿಯ ಬೆನ್ನು ಅಥವಾ ಮುಂದೋಳಲ್ಲಿ ಚುಚ್ಚಿಹೊಗಿಸಿ 24 ಗಂಟೆಗಳ ಅನಂತರ ಪ್ರತಿಕ್ರಿಯೆಯನ್ನು ನೋಡಬೇಕು. ಚುಚ್ಚಿದೆಡೆ 5 ಮಿಮಿ. ಗಿಂತ ಹೆಚ್ಚು ಅಗಲವಾಗಿ ಕೆಂಪೇರಿ ಊತವೆದ್ದರೆ ರೋಗಿಗೆ ಆ ವಸ್ತು ಒಗ್ಗದೆಂದರ್ಥ.

ಬೇಸಗೆಯಲ್ಲಿ ಕರಡ ಜ್ವರಕ್ಕೆ ಈಡಾಗುವವರು ರೋಗದ ಲಕ್ಷಣಗಳು ಕಾಣಿಸಿ ಕೊಳ್ಳುವ 5-6 ವಾರಗಳ ಮುಂಚೆಯೇ ಒಗ್ಗದಿಕೆ ತಡೆಯುವ ಕ್ರಮವನ್ನು ಕೈಗೊಳ್ಳಬೇಕು. ರೋಗಿಗೆ ಯಾವ ವಸ್ತು ಒಗ್ಗದೆಂದು ಮೇಲೆ ಹೇಳಿರುವ ಪರೀಕ್ಷೆಯಿಂದ ಗೊತ್ತುಮಾಡಿ, ಅಂಥ ಪರಾಗದ ಸಾರಕದ್ರವದ ಲಕ್ಷಪಾಲಿನ ಒಂದರಷ್ಟನ್ನು ಚರ್ಮದಡಿ ಚುಚ್ಚಿ ಪ್ರಾರಂಭಿಸಬೇಕು. ಬರಬರುತ್ತ ವಾರವಾರವೂ ಪ್ರತಿಕ್ರಿಯೆ ನೋಡಿಕೊಂಡು ಅರೆಪಾಲು ಹೆಚ್ಚಿಸುತ್ತ 8-10 ಚುಚ್ಚುಗೆಗಳನ್ನು ಕೊಡಬೇಕು. ಹೀಗೆ ಮಾಡಿದಾಗ ಎಂದಾದರೂ ಮೈಯೆಲ್ಲ ದದ್ದುಗಳೆದ್ದು ತೊಂದರೆಯಾದರೆ ಮುಂದಿನ ವಾರ ಬಹಳಷ್ಟು ಕಡಿಮೆ ಮಾಡಿ ಚುಚ್ಚಬೇಕು. ಹೀಗೆ ಕ್ರಮವಾಗಿ ಚುಚ್ಚುತ್ತ ಹೋದಂತೆ ಮುಂದಿನ ಬೇಸಗೆಯಲ್ಲಿ ಕರಡ ಜ್ವರದಿಂದ ಆತನಿಗೆ ವಿಮೋಚನ ದೊರೆಯುತ್ತದೆ. ಆದರೆ ಈ ತಡೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇರದು. ಮುಂದಿನ ವರ್ಷ ಅಷ್ಟು ವಾರಗಳ ಚಿಕಿತ್ಸೆ ಬೇಕಿರದು.

ಒಬ್ಬೊಬ್ಬನಿಗೂ ಬೇರೆಯಾಗಿರುವ ಮೇಲಿನ ಚಿಕಿತ್ಸೆಯೊಂದಿಗೆ ಎಲ್ಲ ಬಗೆಯ ಒಗ್ಗದಿಕೆಯ ಚಿಕಿತ್ಸೆಗಾಗಿ ಹಿಸ್ಟಮಿನ್ ರೋಧಕ ಮದ್ದುಗಳಿವೆ. ಮೈಯಲ್ಲಿ ಹಿಸ್ಟಮೀನ್ ವಸ್ತು ಹೊರಬೀಳುವುದೇ ಒಗ್ಗದಿಕೆಯ ಲಕ್ಷಣಗಳಿಗೆ ಮುಖ್ಯಕಾರಣ. ಈ ಮದ್ದುಗಳು ಅದರಿಂದೇಳುವ ಪರಿಣಾಮಗಳನ್ನು ಎದುರಿಸಿ ಕಳೆಯುತ್ತವೆ. ಮಾತ್ರೆ, ಮುಲಾಮು, ತುಂಪುರಿ, ಚುಚ್ಚುಮದ್ದು-ಈ ರೂಪಗಳಲ್ಲಿ ಮದ್ದುಗಳು ಸಿಗುತ್ತವೆ. ಮೂಗು ಗಂಟಲುಗಳು ಕೆಂಪೇರಿದಾಗ ಶಾಮಕಗಳನ್ನು ಬಳಸಬಹುದು. ಆದರೆ ಇವುಗಳ ಶಕ್ತಿ ಕೊಂಚಕಾಲವಿದ್ದು ನಶಿಸುತ್ತದೆ. ಮೂಗಿನಲ್ಲಿ ಒಗ್ಗದಿಕೆ ಈಡಾಗುವ ಕೆಲವೆಡೆ ವಿದ್ಯುತ್ಗುಳದಿಂದ ಸುಡುವುದರಿಂದ ಕೆಲವರಿಗೆ ಅನುಕೂಲವಾಗಬಹುದು.

ಬೇಸಗೆ ಕಾಲ ಕಳೆವ ತನಕ, ಇಲ್ಲವೇ ಮಳೆಯೋ ಮಂಜೋ ಸುರಿದು ಪರಾಗದ ದೂಳು ಹರಡುವುದು ನಿಲ್ಲುವ ತನಕ, ಇಲ್ಲವೇ ಆ ಊರು ಬಿಡುವ ತನಕ ಕರಡ ಜ್ವರ ಕಾಡಬಹುದು. (ಡಿ.ಪಿ.ಜೆ.)