ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಡುತಿದ್ದುವಿಕೆ
ಕರಡುತಿದ್ದುವಿಕೆ : ಮುದ್ರಣಾಲಯದಲ್ಲಿ ಒಂದು ವಿಷಯವನ್ನು ಅದರ ಮೂಲಪ್ರತಿಗೆ ಸರಿಹೊಂದುವಂತೆ ಮೊಳೆ ಜೋಡಿಸಿ ಕರಡಚ್ಚನ್ನು ಸಿದ್ಧಪಡಿಸಿದ ತರುವಾಯ ಕರಡಚ್ಚಿನಲ್ಲಿ ಉಳಿದಿರಬಹುದಾದ ದೋಷಗಳ ಪರಿಶೀಲನೆ ಹಾಗೂ ಕ್ರಮಬದ್ಧ ತಿದ್ದುವಿಕೆ (ಪ್ರುಫ್ ರೀಡಿಂಗ್). ಕರಡಚ್ಚಿನಲ್ಲಿ ದೋಷಗಳು ಉಳಿದಿರುವುದು ತೀರ ಸಹಜ. ಇವುಗಳಲ್ಲಿ ಸ್ಥೂಲವಾಗಿ ಎರಡು ವಿಭಾಗಗಳಿವೆ. ಅಚ್ಚು ಮೊಳೆಗಳಿಗೆ (ಎಂದರೆ ಮುದ್ರಣಾಲಯಕ್ಕೆ) ಸಂಬಂಧಿಸಿದವು; ವಿಷಯಕ್ಕೆ (ಎಂದರೆ ಮೂಲಪ್ರತಿಗೆ) ಸಂಬಂಧಿಸಿದವು. ಕರಡು ತಿದ್ದುವವರು ಇವೆರಡನ್ನೂ ಲಕ್ಷ್ಯದಲ್ಲಿಟ್ಟು ಕೊಂಡು ಗೊತ್ತಾದ ವಿಧಿನಿಯಮಾನುಸಾರ ತಮ್ಮ ಕಾರ್ಯವನ್ನು ನಡೆಸಬೇಕು.
ಅಚ್ಚುಮೊಳೆಗಳಿಗೆ ಸಂಬಂಧಿಸಿದ ಕೆಲವು ಮುಖ್ಯ ದೋಷಗಳು : 1. ಅಕ್ಷರಗಳು ತಲೆಕೆಳಗಾಗುವುದು. 2. ಅಕ್ಷರಗಳು ಸ್ಥಾನಪಲ್ಲಟಗೊಂಡಿರುವುದು. 3. ಅಕ್ಷರಗಳ ಮೊಳೆಗಳ ಅಳತೆಗಳಲ್ಲಿ ವ್ಯತ್ಯಾಸ. 4. ಅಕ್ಷರಗಳು ಇಲ್ಲದಿರುವಿಕೆ. 5. ತಪ್ಪು ಅಕ್ಷರಗಳು. 6. ಒಡೆದ ಮೊಳೆಗಳು ಸೇರಿಕೊಂಡಿರುವುದು. 7. ಎರಡು ಅನುಕ್ರಮ ಪದಗಳ, ಪಂಕ್ತಿಗಳ, ಪರಿಚ್ಛೇದಗಳ ನಡುವೆ ಸಾಕಷ್ಟು ಜಾಗ ಬಿಟ್ಟಿಲ್ಲದಿರುವುದು ಅಥವಾ ಅತಿ ಜಾಗ ಬಿಟ್ಟಿರುವುದು. 8. ಪಂಕ್ತಿಯ ಕೊನೆಯಲ್ಲಿ ಪದವಿಭಜನೆ ಅಸಮರ್ಪಕವಾಗಿರುವುದು. 9. ಪಂಕ್ತಿಗಳು, ಅಂಚುಗಳು, ಪರಿಚ್ಛೇದ ಪ್ರಾರಂಭದ ಅಂಚುಗಳು ನೇರವಾಗಿಲ್ಲದಿರುವುದು. 10. ಸಂಖ್ಯೆಗಳು, ಚಿಹ್ನೆಗಳು, ಕೋಷ್ಟಕಗಳು, ಚಿತ್ರಗಳು, ಅಡಿಟಿಪ್ಪಣಿಗಳು, ಸಮೀಪಕರಣಗಳು ಮುಂತಾದುವುಗಳಲ್ಲಿ ತಲೆದೋರಿರುವ ವಿಶಿಷ್ಟಬಗೆಯ ದೋಷಗಳು.
ವಿಷಯಕ್ಕೆ ಸಂಬಂಧಿಸಿದ ಕೆಲವು ಮುಖ್ಯ ದೋಷಗಳು : 1. ಅಕ್ಷರಗಳಲ್ಲಿ ಅಸ್ಪಷ್ಟತೆ, ಸಂದಿಗ್ಧತೆ ಮತ್ತು ತಪ್ಪುಗಳು. 2. ವಾಕ್ಯರಚನೆಗಳಲ್ಲಿ ಅರ್ಥ ದೋಷ, ವ್ಯಾಕರಣ ದೋಷ ಇತ್ಯಾದಿ. 3. ಶೈಲಿಯಲ್ಲಿಯೂ ಸಂಕೇತಗಳ ಮತ್ತು ಚಿಹ್ನೆಗಳ ಬಳಕೆಯಲ್ಲಿಯೂ ಸಮರೂಪತೆ ಇಲ್ಲದಿರುವಿಕೆ. ಒಂದು ಮೂಲಪ್ರತಿಯನ್ನು ಮುದ್ರಣಾಲಯಕ್ಕೆ ಕೊಡುವ ಮೊದಲು ಇವೆಲ್ಲ ಸಾ್ಖಲಿತ್ಯಗಳನ್ನು ಪರಿಹರಿಸಬೇಕು. ಆದರೆ ವಾಸ್ತವಿಕ ಪರಿಸ್ಥಿತಿಯಲ್ಲಿ ಹೀಗೆ ನಡೆಯುವುದಿಲ್ಲ. ಆದ್ದರಿಂದ ತತ್ಸಂಬಂಧ ದೋಷಗಳು ಕರಡಚ್ಚಿನಲ್ಲಿ ಕಂಡುಬರುತ್ತವೆ.
ತಿದ್ದುವಿಕೆಯ ವಿಧಿಗಳು: ಕರಡಚ್ಚಿನಿಂದ ಮೊದಲಸಾರಿ ತೆಗೆಯುವ ಮುದ್ರಣದ ಹೆಸರು ಗ್ಯಾಲಿ ಕರಡುಪ್ರತಿ. ಇದನ್ನು ಮೂಲಪ್ರತಿ ಸಮೇತ ಮುದ್ರಣಾಲಯದ ಕರಡುಪ್ರತಿ ತಿದ್ದುವ ವಿಭಾಗಕ್ಕೆ ಕಳಿಸಲಾಗುವುದು. ಅಲ್ಲಿ ಇಬ್ಬರು ಸಹಕರಿಸಿ ಈ ಕೆಲಸವನ್ನು ಮಾಡುತ್ತಾರೆ. ಒಬ್ಬ ಮೂಲಪ್ರತಿಯನ್ನು ಸಾವಧಾನವಾಗಿ, ಅಕ್ಷರ ಅಕ್ಷರ ಬಿಡಿಸಿ ಪ್ರತಿಯೊಂದು ಚಿಹ್ನೆ ಸಂಕೇತವನ್ನೂ ವಿವರವಾಗಿ ಓದಿ ಹೇಳುತ್ತಾನೆ. ಇನ್ನೊಬ್ಬ ಇದರ ಸಂವಾದಿಯಾಗಿ ಕರಡಚ್ಚಿನಲ್ಲಿ ಎಲ್ಲವೂ ಸರಿಯಾಗಿ ಬಂದಿವೆಯೇ ಎಂದು ಸೂಕ್ಷ್ಮವಾಗಿ ಕಣ್ಣಾಡಿಸುತ್ತಾ ಮುಂದುವರಿಸುತ್ತಾನೆ. ದೋಷ ಬಂದಿರುವಲ್ಲೆಲ್ಲ ಅದನ್ನು ತಿದ್ದುವ ಹೊಣೆಯೂ ಇವನದೇ. ಕರಡಿನ ಎಡ ಮತ್ತು ಬಲ ಅಂಚುಗಳಲ್ಲಿರುವ ಖಾಲಿ ಸ್ಥಳಗಳಲ್ಲಿ ಆಯಾ ಪಂಕ್ತಿಯ ಪಕ್ಕದಲ್ಲಿ ತಪ್ಪುಗಳು ಬಂದಿರುವ ಕ್ರಮದಲ್ಲಿ ನಿರ್ದಿಷ್ಟ ಶಿಷ್ಟೀಕೃತಸಂಕೇತಗಳ ನೆರವಿನಿಂದ ತಪ್ಪುಗಳು ಬಂದಿರುವ ಕ್ರಮದಲ್ಲಿ ನಿರ್ದಿಷ್ಟ ಶಿಷ್ಟೀಕೃತಸಂಕೇತಗಳ ನೆರವಿನಿಂದ ತಪ್ಪುಗಳನ್ನು ಗುರುತಿಸಬೇಕು ಹಾಗೂ ಸರಿಯಾದ ಅಕ್ಷರಗಳನ್ನೂ ಸಂಕೇತಗಳನ್ನೂ ಸೂಚಿಸಬೇಕು. ಈ ಕೆಲಸದಲ್ಲಿ ಬಳಸುವ ಸಂಕೇತಗಳನ್ನೂ ಅವುಗಳ ವಿವರಗಳನ್ನೂ ಪಕ್ಕದ ಮತ್ತು ಅದರ ಹಿಂದಿನ ಕಲಮುಗಳಲ್ಲಿ ಕೊಟ್ಟಿದೆ. ಒಂದನೆಯ ಕರಡಿನ ಮೇಲೆ ಸೂಚಿಸಿದ ತಿದ್ದುಪಡಿಗಳನ್ನು ಮುದ್ರಣಾಲಯ ನೆರವೇರಿಸಿ ಎರಡನೆಯ ಕರಡನ್ನು ತಯಾರಿಸಿ ಕೊಡುತ್ತದೆ. ಈಗ ಪ್ರಥಮ ಗಮನ ಮೊದಲಿನ ತಿದ್ದುಪಡಿಗಳೆಲ್ಲವೂ ಸರಿಯಾಗಿ ನಿರ್ವಹಿಸಲ್ಪಟ್ಟಿವೆಯೋ ಎಂಬುದರ ಕಡೆಗೆ; ಇಂಥ ವೇಳೆ ಅಚಾತುರ್ಯದಿಂದ ಸಂಭವಿಸಬಹುದಾದ ಹೊಸ ದೋಷಗಳ ಕಡೆಗೂ ವಿಶೇಷ ಲಕ್ಷ್ಯ ಕೊಡಬೇಕು. ಮೊದಲಿನ ಸಲದ ಓದಿಕೆಯಲ್ಲಿ ಕಣ್ಣುತಪ್ಪಿಸಿ ಉಳಿದಿರಬಹುದಾದ ದೋಷಗಳನ್ನು ಈ ಓದಿಕೆಯಲ್ಲಿ ಸರಿಪಡಿಸಬೇಕು.
ಸಾಮಾನ್ಯವಾಗಿ ಮೂರನೆಯ ಸಲ ಮುದ್ರಣಾಲಯದಿಂದ ಬರುವ ಕರಡುಪ್ರತಿ ಸಿದ್ಧಪಡಿಸಿದ ಪುಟರೂಪದಲ್ಲಿರುವುದು. ಶೀರ್ಷಿಕೆ, ಪುಟಸಂಖ್ಯೆ ಅಡಿಟಿಪ್ಪಣಿಗಳ ಜೋಡಣೆ ಚಿತ್ರಗಳು ಎಲ್ಲವನ್ನೂ ಇಬ್ಬರು ಬೇಕಾದರೆ ಪುಟಕರಡನ್ನು ಓದಲು ನುರಿತ ಒಬ್ಬನೇ ಸಾಕು. ಸಾಮಾನ್ಯವಾಗಿ ಲೇಖಕನೇ ಇದನ್ನು ಓದಿ ತಿದ್ದುವುದು ವಾಡಿಕೆ.
ಮುಂದಿನ ಹಂತ ಯಂತ್ರ ಕರಡು. ಪುಟಕರಡಗಳು ಒಂದು ಫಾರ್ಮಿನಷ್ಟು ಸಿದ್ಧವಾಗುವ ಕರಡಚ್ಚುಗಳನ್ನು ಫಾರಂ ರೂಪದಲ್ಲಿ ಜೋಡಿಸಿ ಮುದ್ರಣ ಚೌಕಟ್ಟನ್ನು ಸಿದ್ಧಪಡಿಸುತ್ತಾರೆ. ಇದನ್ನು ಮುದ್ರಣ ಯಂತ್ರಕ್ಕೆ ಜೋಡಿಸಿ ಯಂತ್ರ ಕರಡನ್ನು ತೆಗೆದು ಪರಿಶೀಲಿಸಲಾಗುವುದು. ಇದರಲ್ಲಿ ಉಳಿದಿರಬಹುದಾದ ಅಲ್ಪಸ್ವಲ್ಪ ತಪ್ಪುಗಳು, ಒಡೆದ ಮೊಳೆಗಳು, ಹಾರಿಹೋದ ಒತ್ತುಗಳು ಮುಂತಾದವನ್ನು ಸರಿಪಡಿಸಿದ ತರುವಾಯ ಮುದ್ರಣಕಾರ್ಯ ಮುಂದುವರಿಯುತ್ತದೆ. ಸಾವಿರಗಟ್ಟಲೆ ಪ್ರತಿಗಳನ್ನು ಮುದ್ರಿಸುವಾಗ ಒಂದು ನಿರ್ದಿಷ್ಟ ಘಟ್ಟದಲ್ಲಿ (ಉದಾಹರಣೆಗೆ 1,000 ಪ್ರತಿಗಳನ್ನು ಮುದ್ರಿಸಿ ಆದಮೇಲೆ) ಮುದ್ರಿತ ಪ್ರತಿಯನ್ನು ಚುರುಕಾಗಿಯಾದರೂ ಓದುವುದು ಒಳ್ಳೆಯದು. (ಎಂ.ಎ.ಎಸ್.ಎಚ್.ಎನ್.)