ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಪಾಲ ಮೇಳ
ಕರಪಾಲ ಮೇಳ : ಕರ್ನಾಟಕದ ಜನಪದ ಮೇಳಗಳಲ್ಲಿ ಒಂದು. ಯಕ್ಷಗಾನ ಬಯಲಾಟಗಳ ವರ್ಣವೈಭವ, ವೇಷಭೂಷಣಗಳ ವೈಖರಿ ಕರಪಾಲಮೇಳದಲ್ಲಿಲ್ಲ. ಹೆಚ್ಚು ಸಂಖ್ಯೆಯ ಕಲಾವಿದರೂ ಇಲ್ಲಿ ಭಾಗವಹಿಸುವುದಿಲ್ಲ. ಮುಖ್ಯಕಥೆಗಾರನೊಬ್ಬ ಇಬ್ಬರು ಸಹನೃತ್ಯದವರೊಡನೆ ಜನಪ್ರಿಯ ಕಥೆಯೊಂದನ್ನು ನಾಟಕೀಯವಾಗಿ ಅಭಿನಯಿಸಿ, ನಿರೂಪಿಸಿ ಗ್ರಾಮಾಂತರ ಜನತೆಗೆ ಮನೋರಂಜನೆಯನ್ನೊದಗಿಸುವುದು, ಅತ್ಯಂತ ಸರಳರೀತಿಯಲ್ಲಿ ನೃತ್ಯ ಸಂಗೀತ, ವೇಷಭೂಷಣಗಳನ್ನು ಒದಗಿಸಿಕೊಂಡು ತನ್ನ ಕಲೆ ಕಳೆಗಟ್ಟುವಂತೆ ಮಾಡಿಕೊಳ್ಳುವುದು ಇಲ್ಲಿನ ವೈಶಿಷ್ಟ್ಯ. ಎಲ್ಲ ದೃಷ್ಟಿಯಿಂದಲೂ ಕರಪಾಲಮೇಳದಲ್ಲಿ ಎದ್ದುತೋರುವ ಮುಖ್ಯ ವೈಶಿಷ್ಟ್ಯ ಸರಳತೆ. ಕಥೆಯಲ್ಲಿ, ಹಾಡಿನಲ್ಲಿ, ಕುಣಿತದಲ್ಲಿ ಇತರ ಸಾಧನ ಸಲಕರಣೆಗಳಲ್ಲಿ ಈ ಅಂಶವನ್ನು ಗುರುತಿಸಬಹುದು.
ಕರಪಾಲಕ್ಕೆ ಬಯಲಾಟದಂತೆಯೇ ಸಾಕಷ್ಟು ಪ್ರೇಕ್ಷಕರು ಕೂರುವ ಬಯಲು ಪ್ರದೇಶ ಬೇಕು. ಊರ ಚಾವಡಿಯ ಮುಂದೆಯೋ ಗುಡಿಯ ಅಥವಾ ರಾಮಮಂದಿರದ ಮುಂದೆಯೋ ಬಯಲಾಟದಂತೆಯೇ ಚಪ್ಪರವನ್ನು ಹಾಕಬೇಕು. ಇಲ್ಲಿನ ಚಪ್ಪರ ಬಹಳ ಚಿಕ್ಕದು. ಮೂರು ಮಂದಿ ಒಂದು ಸಾಲಿನಲ್ಲಿ ನಿಂತು ಹಿಂದೆ ಮುಂದೆ ಸರಿಯುತ್ತ ಕುಣಿಯಲು ಆದರೆ ಸಾಕು. ಬಯಲಾಟದಂತೆ ವಿಡಂಗುಗಳು ಇಲ್ಲಿ ಬರುವುದಿಲ್ಲವಾದ್ದರಿಂದ ಚಪ್ಪರದ ಎತ್ತರ ಏಳು ಅಥವಾ ಎಂಟು ಅಡಿಗಳಷ್ಟಿದ್ದರೆ ಸಾಕು. ಚಪ್ಪರದ ಅಗಲ ಹತ್ತು ಅಡಿ, ಉದ್ದ ಹತ್ತು ಅಡಿ ಮಾತ್ರ ಇರುವುದರಿಂದ ಸಾಮಾನ್ಯವಾಗಿ ನೆಲಕ್ಕೆ ಹಲಗೆಯನ್ನು ಹಾಕಿ ಅಟ್ಟಣೆಯನ್ನು ಮಾಡಿಕೊಳ್ಳುವ ಅಗತ್ಯವಿಲ್ಲ. ಯಾವ ರುದ್ರ ನೃತ್ಯವು ಇಲ್ಲಿ ಬರದಿರುವುದರಿಂದ ಇಷ್ಟು ಸರಳವಾದ ವ್ಯವಸ್ಥೆಯಲ್ಲಿ ಕರಪಾಲ ಮೇಳ ಜರಗುತ್ತದೆ.
ಕರಪಾಲ ಮೇಳಕ್ಕೆ ವಾದ್ಯಗಳನ್ನು ನುಡಿಸುವವರು, ಹಿಮ್ಮೇಳವನ್ನು ಹಾಡುವವರು ಚಪ್ಪರದ ಮುಂಭಾಗದಲ್ಲಿ ಹೊರಗೆ ಕುಳಿತಿರುತ್ತಾರೆ. ಅವರನ್ನು ಅನುಸರಿಸಿ ಜನ ಕುಳಿತಿರುತ್ತಾರೆ. ಚಪ್ಪರದ ಒಳಗೆ ಕರಪಾಲದ ಕಥೆಯನ್ನು ಅಭಿನಯಿಸುವ ಮುಖ್ಯನಿರೂಪಕ ಮತ್ತು ಅವನ ಎರಡು ಬದಿಯಲ್ಲಿ ಇಬ್ಬರು ನೃತ್ಯದವರು ನಿಂತಿರುತ್ತಾರೆ. ಕರಪಾಲದ ಮುಖ್ಯ ನಿರೂಪಕ ತಲೆಗೆ ಕೋಡಂಗಿಯ ಕುಲಾವಿಯ ಆಕಾರದ ವಸ್ತ್ರದ ಸಾಧನವನ್ನು ತೊಟ್ಟಿರುತ್ತಾನೆ. ಮುತ್ತು, ಗಾಜಿನ ಕೊಳವೆ, ಬಣ್ಣದ ವಸ್ತ್ರಗಳಿಂದ ಅಲಂಕೃತವಾದ ಆ ಸಾಧನ ಒಂದು ಕಿರೀಟದಂತೆಯೇ ತೋರುತ್ತದೆ. ಅದರ ಬಲಬದಿಯಲ್ಲಿ ತುರಾಯಿ ಇಳಿಬಿದ್ದಿರುತ್ತದೆ. ಕತ್ತಿನಲ್ಲಿ ರುದ್ರಾಕ್ಷಿಯ ಸರ, ಮೈಮೇಲೆ ಕಾವಿಯ ನಿಲುವಂಗಿ ನಡುವಿಗೆ ಮುತ್ತಿನ ಅಂಚಿನಿಂದ ಹೊಳೆಯುವ ಕಾಸೆ, ಶುಭ್ರವಸ್ತ್ರದ ಕಚ್ಚೆಯ ಪಂಚೆ-ಹೀಗೆ ಅಲಂಕೃತವಾದ ಕರಪಾಲದ ಅಯ್ಯ ಕಿವಿಗಳಿಗೆ ಒಂದು ಬಗೆಯ ಕುಂಡಲಗಳನ್ನು ಧರಿಸಿರುತ್ತಾನೆ. ಕಾಲಿಗೆ ಗೆಜ್ಜೆ, ಕೈಯಲ್ಲಿ ತಾಳ, ಮುಖಕ್ಕೆಲ್ಲ ಬಳಿದ ವಿಭೂತಿ, ಸೊಂಟಕ್ಕೆ ಸಿಕ್ಕಿಸಿದ ಕರವಸ್ತ್ರ-ಹೀಗೆ ನಾಟಕದ ಪಾತ್ರಧಾರಿಯಂತೆಯೇ ಸಿದ್ಧನಾಗಿ ನಿಲ್ಲುತ್ತಾನೆ. ಅಯ್ಯನ ಬಲಬದಿಯಲ್ಲಿ ನಿಂತ ಸಹನೃತ್ಯದವ ವೀರಗಾಸೆಯನ್ನು ಹಾಕಿ, ಬಿಳಿಯ ನಿಲುವಂಗಿಯನ್ನು ಧರಿಸಿ ನಡುವಿಗೆ ಒಂದು ಶುಭ್ರವಸ್ತ್ರವನ್ನು ಬಿಗಿದಿರುತ್ತಾನೆ. ತಲೆಗೆ ಸವಾರನಂತೆ ಪೇಟವನ್ನು ಕಟ್ಟಿ ತಾನೂ ಕಾಲಿಗೆ ಗೆಜ್ಜೆಯ ಸರವನ್ನು ಸುತ್ತಿರುತ್ತಾನೆ. ಅವನ ನಡುವಿನಲ್ಲಿ ಮಣ್ಣಿನ ಅಚ್ಚಿನ ಢುಮಿಕಿ ಇರುತ್ತದೆ. ಇದರ ಗತ್ತನ್ನು ಅನುಸರಿಸಿಯೇ ಹಾಡೂ ನೃತ್ಯವೂ ಸಾಗುವುದು. ಇನ್ನೊಂದು ಬದಿಯಲ್ಲೂ ಇಂಥದೇ ವೇಷದ ಮತ್ತೊಬ್ಬ ನೃತ್ಯದವನಿರುತ್ತಾನೆ. ಆತ ಕೈಯಲ್ಲಿ ತಾಳವನ್ನು ಮಾತ್ರ ಹಿಡಿದಿರುತ್ತಾನೆ. ಚಪ್ಪರದ ಮುಂದೆ ಕುಳಿತವರಲ್ಲಿ ಮುಖ್ಯರಾದವರು ಮೃದಂಗ ಮತ್ತು ಹಾರ್ಮೋನಿಯಂ ನುಡಿಸುವ ಕಲಾವಿದರು. ಅವರ ಜೊತೆ ಕೆಲವು ಮಂದಿ ಹಿಮ್ಮೇಳ ಹಾಡುವವರೂ ಇರಬಹುದು. ಚಪ್ಪರದ ಒಂದು ಕಡೆ ಬಂiÀÄಲಾಟದಲ್ಲಿನಂತೆಯೇ ದೇವರ ಪಟವನ್ನು ಇಟ್ಟು ಪುಜಿಸುತ್ತಾರೆ. ಕರಪಾಲ ಮೇಳ ಬಹುಮಟ್ಟಿಗೆ ಬಂiÀÄಲಾಟ ಸಂಪ್ರದಾಯವನ್ನು ಹೋಲುತ್ತದೆ. ಬಂiÀÄಲಾಟದ ಭಾಗವತರು ಹಾಡುಗಾರಿಕೆಯಲ್ಲಿ ಮುಂದಿನ ಸೊಲ್ಲನ್ನು ಎತ್ತಿಕೊಟ್ಟರೆ ಹಿಮ್ಮೇಳದವರು ಪುರ್ಣಗೊಳಿಸುತ್ತಾರೆ. ಅದೇ ಕ್ರಮವನ್ನು ಇಲ್ಲಿಯೂ ಕಾಣಬಹುದು. ಬಂiÀÄಲಾಟದಲ್ಲಿ ಭಾಗವತರ ಹಾಡಿಗೆ ಅನುಸಾರವಾಗಿ ಪಾತ್ರಧಾರಿಗಳು ಕುಣಿದರೆ ಇಲ್ಲಿ ಕುಣಿತವೂ ನಿರೂಪಕನ ಪಾಲಿಗೇ ಬರುತ್ತದೆ. ಮಾತುಗಾರಿಕೆಯೂ ಇವನದೇ ಆಗುತ್ತದೆ. ಹರಿಕಥೆ ಒಂದು ದೃಷಿಯಿಂದ ಕರಪಾಲ ಮೇಳದಂತೆಯೇ ನಡೆಯುವ ವಿಶಿಷ್ಟ ಕಲೆ, ಅಲ್ಲಿನ ದಾಸರು ಹಾಡುಗಾರಿಕೆ, ನೃತ್ಯ, ಅಭಿನಯ, ಕಥಾನಿರೂಪಣೆ ಎಲ್ಲವನ್ನೂ ತಾವೇ ನಿರ್ವಹಿಸುವರು (ನೋಡಿ- ಕೀರ್ತನ-ಕಲೆ) ಆದರೆ ಅಲ್ಲಿ ಅವರ ಜೊತೆಗೆ ಇತರ ಕುಣಿತದವರು ಇರುವುದಿಲ್ಲ. ಕುಣಿತ ಸಂಗೀತ ಅಲ್ಲಿ ಪ್ರಧಾನವಲ್ಲ. ಕರಪಾಲ ಮೇಳದಲ್ಲಿ ಕಥೆಗಿಂತ ಕುಣಿತ, ಕುಣಿತಕ್ಕಿಂತ ಹಾಡು, ಹಾಡಿಗಿಂತ ಅಭಿನಯ ಮುಖ್ಯವಾದವು. ಇಲ್ಲಿಯೂ ಉಪಕಥೆಗಳುಂಟು ಅವೆಲ್ಲವೂ ಬಹುಮಟ್ಟಿಗೆ ಗ್ರಾಮಜೀವನದಿಂದಲೇ ಆಯ್ದ ಕಥೆಗಳು. ಭಾಷೆ ಗ್ರಾಮ್ಯ ಹಾಸ್ಯವೂ ಗ್ರಾಮ್ಯ. ಅಲ್ಲಿ ಪಾತ್ರಗಳೂ ಗ್ರಾಮದ ಯಾರೋ ವ್ಯಕ್ತಿಗಳ ಪ್ರತಿನಿಧಿಗಳೇ.
ಕರಪಾಲ ಮೇಳದ ಪ್ರಧಾನ ಕಥೆ ಮಾತ್ರ ಸಾಹಿತ್ಯಿಕ ಶೈಲಿಯಲ್ಲಿ ನಿರೂಪಿಸಲ್ಪಡುತ್ತದೆ. ಇಲ್ಲಿ ಶಿಷ್ಟ ಪುರಾಣ ಮೂಲದ ಕಥೆಗಳು ವಿರಳ. ಜನಪ್ರಿಯ ಮೂಲದ ಕಥೆಗಳೇ ಹೆಚ್ಚು. ಸಾಮಾನ್ಯ ಜನಪದ ಕಥೆಯೊಂದನ್ನು ಆರಿಸಿಕೊಂಡು ಅದಕ್ಕೆ ಜೀವಭಾವಗಳನ್ನು ತುಂಬಿ, ಸಾಕಷ್ಟು ವಿಸ್ತರಿಸಿಕೊಂಡು ನಿರೂಪಿಸಲಾಗುತ್ತದೆ. ಪ್ರಾಣಿ ಕಥೆಗಳು, ಹಾಸ್ಯಕಥೆಗಳು ಮುಂತಾದ ಸರಳಕಥೆಗಳನ್ನು ಕೈಬಿಟ್ಟು ಸಂಕೀರ್ಣ ಕಥೆಗಳನ್ನು ಕಥೆಗಾರ ಆರಿಸಿಕೊಂಡು ಕರಪಾಲ ಮೇಳಕ್ಕೆ ಅಳವಡಿಸಿಕೊಂಡಿರುತ್ತಾನೆ. ಶೋಕಸ್ಥಾಯಿಯ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮನಸ್ಸನ್ನು ಕಲಕುವ ಕಥೆಗಳೇ ಆಗಬೇಕು. ನಾಯಕ ಅಥವಾ ನಾಯಕಿ ವಿರೋಧಿಗಳಿಂದ ಅನೇಕ ಸಂಕಷ್ಟಗಳಿಗೆ ಒಳಗಾಗಿ ಕ್ರಮೇಣ ಯಾವುದೋ ಅತಿಮಾನುಷ ಶಕ್ತಿಯ ನೆರವಿನಿಂದಲೋ ಇತರ ವ್ಯಕ್ತಿಗಳ ಅಶ್ರಯದಿಂದಲೋ ಚೇತರಿಸಿಕೊಂಡು ಅಡಚಣೆಗಳನ್ನೆಲ್ಲ ದಾಟಿ ಮತ್ತೆ ತಮ್ಮ ಪ್ರಿಯವ್ಯಕ್ತಿಗಳನ್ನು ಕೂಡುವರು. ಅಧರ್ಮಕ್ಕೆ ಸೋಲಾಗಿ ಧರ್ಮಕ್ಕೆ ಜಯವಾಗುವುದು. ಶಿಷ್ಟ ರಕ್ಷಣೆಗಾಗಿ, ದುಷ್ಟರಿಗೆ ಶಿಕ್ಷೆಯೊದಗುವುದು. ಕಾಡಸಿದ್ಧಮ್ಮ, ನೀಲಕಂಠ ರೂಪಾವತಿ, ಬಸವಕುಮಾರ ಲೋಹಿತಕುಮಾರ, ಶಿವಯೋಗಿ ಪರಯೋಗಿ-ಇಂಥ ಜನಪದ ಕಥೆಗಳು ಕರಪಾಲದ ಅಯ್ಯನವರ ಬಾಯಲ್ಲಿ ಅಪುರ್ವ ಕಲಾಕೃತಿಗಳಾಗಿ ರಂಜಿಸುತ್ತವೆ; ಸೊಟಗಕ್ಕ, ಅಣ್ಣತಮ್ಮ ಎಂಬ ತಮ್ಮ ಮೂಲದ ಸಾಧಾರಣ ಹೆಸರುಗಳನ್ನು ಕಳೆದುಕೊಂಡು ಆಕರ್ಷಕ ಶೀರ್ಷಿಕೆಗಳನ್ನು ಪಡೆದುಕೊಂಡು ಒಂದು ಪ್ರೌಢ ಕಥೆಗಳಾಗುತ್ತದೆ. ಕಥೆಯಲ್ಲಿನ ಪಾತ್ರಗಳಿಗೆಲ್ಲ ಒಳ್ಳೆಯ ಹೆಸರುಗಳು ಪ್ರಾಪ್ತವಾಗುತ್ತವೆ. ಹಳೆಯ ಹಂದರವೇ ಇದ್ದರೂ ಅನೇಕ ಹೊಸ ಘಟನೆಗಳು ಮೈತುಂಬಿ ಬರುತ್ತವೆ.
ಕರಪಾಲ ಮೇಳದಲ್ಲಿ ಬಂiÀÄಲಾಟದ ಸಂಸ್ಕೃತ ಭೂಯಿಷ್ಠ ಸಂಭಾಷಣೆಯಾಗಲಿ, ಹಾಡುಗಳಾಗಲೀ ಇಲ್ಲ. ಆದರೂ ಕೆಲವು ಪ್ರಾರ್ಥನಾಗೀತೆಗಳಲ್ಲಿ ಮಂಗಳಾರತಿ ಗೀತೆಗಳಲ್ಲಿ ಹಾಡುಗಳ ಪ್ರಭಾವ ಇರುವುದನ್ನು ಕಾಣಬಹುದು.
ಶ್ರೀ ಗುರವರನೆ ಜಯತು ಯೋಗಿ ವಿಭೂಷಣ ಬೋಗಿವರನೆ ಜಯತು ಇಂಥ ಹಾಡುಗಳು ಬಂiÀÄಲಾಟದಿಂದ ಕರಪಾಲಮೇಳಕ್ಕೆ ಬಂದವು. ಕೆಲವು ವೇಳೆ ಶಿವಶರಣರ ತತ್ತ್ವಗಳಿಂದ ಆಯ್ದ ಹಾಡುಗಳೂ ಬರುತ್ತವೆ. ಭಿಕ್ಷವ ನೀಡಿರಮ್ಮ ಜಂಗಮರಿಗೆ ಭಿಕ್ಷವ ನೀಡಿರಮ್ಮ ಭಿಕ್ಷವ ನೀಡಿರಿ ಮೋಕ್ಷವ ಪಡೆಯಿರಿ ಭಿಕ್ಷವ ನೀಡಿರಮ್ಮ ಇಂಥ ಕೆಲವು ಪದಗಳಲ್ಲದೆ ಸಂದರ್ಭಾನುಸಾರವಾಗಿ ರಚಿಸಿಕೊಂಡ ಕೆಲವು ಸ್ವತಂತ್ರ ಗೀತೆಗಳೂ ಇರುತ್ತವೆ. ನಾನೊಲ್ಲೆ ನಾನೊಲ್ಲೆನೆ ನೀ ನೀಡುವ ಭಿಕ್ಷವ ನಾನೊಲ್ಲೆ ನಾನೊಲ್ಲೆನೆ ಬಂಜೆಕೈಯೊಳ ಭಿಕ್ಷ ಮಂಜುಳ ದಾನವ-ನಾನೊಲ್ಲೆ ನಾನೊಲ್ಲೆನೆ
ಈ ಬಗೆಯ ಕೆಲವು ಹಾಡುಗಳನ್ನು ಬಿಟ್ಟರೆ ಕರಪಾಲ ಮೇಳಕ್ಕೆ ಮೀಸಲಾದ ವಿಶಿಷ್ಟವರ್ಗದ ದ್ವಿಪದಿಗಳನ್ನು ಹಾಡಲಾಗುತ್ತದೆ. ಬಹುಮಟ್ಟಿಗೆ ಕರಪಾಲದ ಮುಖ್ಯ ಆಕರ್ಷಣೆಯೆಲ್ಲ ಈ ಮೇಳದ ಮೇಲೆಯೇ ನಿಂತಿರುತ್ತದೆ. ಕಥೆಯ ಆರಂಭ, ಬೆಳೆವಣಿಗೆ, ಮುಕ್ತಾಯ-ಹೀಗೆ ಎಲ್ಲ ಘಟ್ಟಗಳಲ್ಲಿಯೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ಈ ಹಾಡುಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಡುಗಳ ಜೋಡಣೆ, ಕಥಾ ಬೆಳೆವಣಿಗೆ ಇವುಗಳಲ್ಲಿ ಮಾರ್ಗಕಾವ್ಯಗಳ ರೀತಿಯೇ ಕಂಡುಬರುತ್ತದೆ. ಆರಂಭದಲ್ಲಿ ಮುಖ್ಯ ಕಥೆಗಾರ ತಮ್ಮ ಕಲಾಜ್ಞಾನದ ಬಗ್ಗೆ ನಮ್ರವಾಗಿ ಸಭಿಕರಲ್ಲಿ ವಿನಂತಿಮಾಡಿಕೊಳ್ಳುತ್ತಾನೆ. ಮೃದು ಮಧುರ ನುಡಿಗಳಲ್ಲಿ
ನಾವು ಬಲವರಲ್ಲ. ನಾವು ತಿಳಿದವರಲ್ಲ ಯಾವ ತಪ್ಪಿದ್ದರೂ ತಿದ್ದಿಕೊಳಬೇಕು ತಿದ್ದಿಕೊಳಬೇಕು.
ದೇವತಾಸ್ತುತಿಯೊಡನೆ ಕಥೆಯನ್ನು ಆರಂಭಿಸುವ ಸಂಪ್ರದಾಯ ಗಮನಾರ್ಹವಾದುದು.
ತಪ್ಪುಗಳಿದ್ದರೆ ಒಪ್ಪಿಕೊಳ್ಳಯ್ಯ ದೇವ ಸಾವಿರದ ಒಂದು ಶರಣಾರ್ಥಿ ನಿನಗೆ
ಹೀಗೆ ತಮ್ಮ ಆರಾಧ್ಯದೈವದ ಪಾದಮೂಲಕ್ಕೆ ಶರಣಾರ್ಥಿಯನ್ನು ಅರ್ಪಿಸಿ ತಾಳ ಮೇಳಗಳೊಡನೆ ಕಂಥಾರಂಭ ಮಾಡುತ್ತಾನೆ. ಮುಖ್ಯ ನಿರೂಪಕ. ವಿಶಿಷ್ಟಭಂಗಿಯಲ್ಲಿ ಹೆಜ್ಜೆಯನ್ನು ಹಾಕುತ್ತ ತಾಳದ ನಾದಕ್ಕೆ ತಕ್ಕಂತೆ ಬಾಗುತ್ತ ಬಳುಕುತ್ತ ಹಿಂದೆ ನಾಲ್ಕು ಗಜ ಸರಿಯುತ್ತ ಮತ್ತೆ ಮುಂದೆ ಚಪ್ಪರದ ಅಂಚನ್ನು ಮುಟ್ಟುತ್ತ ಕುಣಿಯತೊಡಗುತ್ತಾನೆ-
ಮುಂದಣ ಕತೆಯ ಅದರಂದವ ಪೇಳುವೆ ಚಂದ್ರಶೇಖರ ನಮಗೆ ವರಕೊಡೆಲೊದೇವ
ಕರಪಾಲದ ಹಾಡುಗಳಲ್ಲಿ ಅನೇಕ ವರ್ಣನೆಗಳು ಬರುತ್ತವೆ. ಆದರೂ ಎಲ್ಲಿಯೂ ಅನಗತ್ಯವಾಗಿ ವಿಸ್ತರಿಸುವ ಬಗೆ ಕಾಣುವುದಿಲ್ಲ. ತನ್ನ ಅನುಭವಕ್ಕೆ ಮಾತ್ರ ನಿಲುಕುವ ವರ್ಣನೆಗಳನ್ನು ಕಥೆಗಾರ ತರುತ್ತಾನೆ. ನಗರ ವರ್ಣನೆಯ ವೈಖರಿಯಿದು;
ಹಾಲಮಾರುವ ಬೀದಿ ನೂಲುಮಾರುವ ಬೀದಿ ಶಾಲು ಸಕಲಾತಿಗಳ ಮಾರುವ ಬೀದಿ ಪ್ರಕೃತಿ ವರ್ಣನೆಯೂ ಕಥಾಸೂತ್ರದೊಡನೆ ಬೆಸೆದುಕೊಂಡೇ ಬರುತ್ತದೆ- ಘೋರ ಕಾನನದೊಳಗೆ ನೀರಿಲ್ಲ. ನೆರಳಿಲ್ಲ ಹಾರುವ ಪಕ್ಷಿಗಳ ಸುಳಿವಿಲ್ಲ ದೇವ ಅಡವಿಗಿಡಮರದಲ್ಲಿ ಎಡವಿ ಮುಗ್ಗರಿಸುತ್ತ ತಡವರಿಸಿ ಹೊರಟಳು ಅರಣ್ಯದೊಳಗೆ
ಕರಪಾಲದ ಹಾಡುಗಳು ಅತ್ಯಂತ ಸರಳವಾಗಿ ಕಂಡರೂ ಉತ್ತಮ ಕಾವ್ಯಾಂಶದಿಂದ ಕೂಡಿರದಿದ್ದರೂ ಆಯಾ ಸನ್ನಿವೇಶದ ಹಿನ್ನೆಲೆಯಲ್ಲಿ ಅಪುರ್ವ ಮಟ್ಟಿನಲ್ಲಿ ಹಾಡಲ್ಪಡುವುದ ರಿಂದ ಮೃದು ನೃತ್ಯವೂ ಅಲ್ಲಿ ಬೆರೆಯುವುದರಿಂದ ಅತ್ಯಂತ ಸ್ವಾರಸ್ಯಪುರ್ಣವಾಗಿ ತೋರಿಬರುವುದರ ಜೊತೆಗೆ ನೇರವಾಗಿ ಅರ್ಥವಾಗುವುದರಿಂದ ಜನರ ಆಸಕ್ತಿಯನ್ನು ಸೆಳೆದುಕೊಳ್ಳುತ್ತವೆ. ಆತ್ಮೀಯವಾದ ಶೈಲಿಯಲ್ಲಿ ಅಭಿನಯದೊಂದಿಗೆ ಕಥೆಗಾರ ಹಾಡುಗಳನ್ನೂ ಎತ್ತಿಕೊಳ್ಳುವ ರೀತಿ ಆಕರ್ಷಕವಾಗಿರುತ್ತದೆ; ನೆರೆದವರ ಹೃದಯವನ್ನು ಕರಗಿಸುವಂತಿರುತ್ತದೆ.
ಎನ್ನ ಮಗನೆ ಬಾರೊ ಹೊನ್ನ ಪುತ್ಥಳಿಗೊಂಬೆ ಬಾರಯ್ಯ ನನಮಗನೆ ಮುದ್ದುಮಗನೆ ಬಾರೊ
ಇಂಥ ಎಷ್ಟೋ ಹಾಡುಗಳು ಕಥೆಯ ಮಧ್ಯೆ ಮಧ್ಯೆ ಬರುತ್ತವೆ. ಯಾವುದೋ ಘಟ್ಟದಲ್ಲಿ ಮುಖ್ಯ ಕಥೆಯನ್ನು ನಿಲ್ಲಿಸಿ ಶೋಕಭಾವದಿಂದೂ ತಣಿದ ಪ್ರೇಕ್ಷಕರನ್ನು ನಗೆಯಲ್ಲಿ ತೇಲಿಸುವ ಉಪಕಥೆ ಮುಗಿದಮೇಲೆ ಮತ್ತೆ ಮುಖ್ಯ ಕಥೆಗೆ ಬರುವ ಬಗೆಯೂ ಸುಂದರವಾಗಿರುತ್ತದೆ.
ಅಲ್ಲಿಗಲ್ಲಿಗೆ ಕಥೆಯು ಮಲ್ಲಿಗೆ ವಾಸನೆಯು ಬಲ್ಲಂಥ ಜಾಣರಿಗೆ ಇದು ಮಧುರವಯ್ಯಾ ಅತಿಮಧುರವಯ್ಯಾ ಮುಂದಲ ಕಥೆಯ ಅದರಂದವ ಪೇಳುವೆನು ಚಂದ್ರಶೇಖರ ನಮಗೆ ವರಕೊಡೆಲೊ ದೇವ ವರಕೊಡೆಲೋ ದೇವ
ಕರಪಾಲ ಕಥೆ ಗುರುಶಿಷ್ಯರ ಸಂಭಾಷಣೆಯಲ್ಲಿ ಸಾಗುತ್ತದೆ. ಮುಖ್ಯ ಕಥೆಗಾರ ಗುರು. ತನ್ನ ಪಕ್ಕದ ನೃತ್ಯಗಾರನನ್ನು ಕುರಿತು ಅವನೆನ್ನುತ್ತಾನೆ- ಅಯ್ಯ ಮಗು ಕೇಳಬೇಕಯ್ಯ
ಆಗಲಿ ಗುರುವೇ. . . . . . ಶುಭ ದಿನ, ಶುಭಲಗ್ನ, ಶುಭ ತಿಥಿಯಲ್ಲಿ ಚದುರಂಗರಾಯರು ಹೇಗೆ ಹೊರಟಿದ್ದಾರಯ್ಯ. . . . . . ಹೇಗೆ ಹೊರಟಿದ್ದಾರೆ ಗುರುವೇ. . . . . . ಹೀಗೆ ಸಂಭಾಷಣೆಯಿಂದ ತಟ್ಟನೆ ಹಾಡಿಗೆ ಜಿಗಿಯುತ್ತಾನೆ- ಕುದುರೆಯ ಕುಣಿಸುತ್ತ ಹುರಿಮಿÁಸೆ ತಿರುವುತ ಹೊರಟನೇ ರಾಯ ಚದುರಂಗರಾಯ
ಹಾಡನ್ನು ಮುಗಿಸಿ ಮತ್ತೆ ಮನೋಜ್ಞವಾದ ಗದ್ಯಕಥನಕ್ಕೆ ತೊಡಗುತ್ತಾನೆ.
ಅ ಪರಮಾತ್ಮನ ಲೀಲಾಮಯದಿಂದ ಚದುರಂಗರಾಯರು ಹೋಗುತ್ತಿರಬೇಕಾದರೆ; ಮುಂದೆ ಏನಾಯಿತಪ್ಪಾ?
ಏನಾಯಿತು ಗುರುವೆ?
ಪಂಚವರ್ಣದ ಗಿಳಿಯೊಂದುಕಾಣಿಸಿಕೊಂಡಿದೆ. ಆ ಕಾಡಾರಣ್ಯದಲ್ಲಿ ಚದುರಂಗ ರಾಯರು ಆ ಗಿಣಿಯನ್ನು ಹಿಂಬಾಲಿಸಿ ಹೋಗಿದ್ದಾರೆ.
ಕರಪಾಲ ಮೇಳದ ವಚನ ಭಾಗವೂ ಒಂದು ರೀತಿಯಲ್ಲಿ ಪದ್ಯಗಂಧಿಯಾಗಿಯೇ ಇರುತ್ತದೆ. ತನ್ನದೇ ಆದ ಗತ್ತಿನಲ್ಲಿ ನಿರೂಪಿಸುವುದರ ಮೂಲಕ ವಚನಭಾಗವನ್ನು ಆಕರ್ಷಕವಾಗಿರುವಂತೆ ಮಾಡಿರುತ್ತದೆ.
ಕರಪಾಲ ಎಂಬ ಶಬ್ದ ಕರಪಲ್ಲ. ಕರಪಲ್ಲವ ಕರತಾಲ ಎಂಬ ಶಬ್ದಗಳ ರೂಪಾಂತರ ವಿರಬೇಕೆಂದು ಊಹಿಸಲಾಗಿದೆ. ಬೆರಳುಗಳ ಸಂಜ್ಞೆಯ ಮೂಲಕ ಪ್ರೇಕ್ಷಕರ ಹೆಸರನ್ನು ಹೇಳುವ ಒಂದು ಸಂಪ್ರದಾಯ ಕರಪಾಲ ಮೇಳದಲ್ಲಿದ್ದಂತೆ ತೋರುತ್ತದೆ. ಗುರು ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ತಿಳಿದು ಜನರ ನಡುವೆ ನಿಂತ ತನ್ನ ಶಿಷ್ಯನಿಗೆ ಬೆರಳುಗಳ ಮೂಲಕ ಕೆಲವು ಸಂಜ್ಞೆಗಳನ್ನು ತೋರುತ್ತಾನೆ. ಅದರ ಮೂಲಕ ಶಿಷ್ಯ ಸಂಬಂಧಪಟ್ಟ ವ್ಯಕ್ತಿಯ ಹೆಸರನ್ನು ಊಹಿಸಿ ಹೇಳುತ್ತಾನೆ. ಹೀಗೆ ಈ ಹೆಸರು ಹೇಳುವ ಸಂಪ್ರದಾಯವೂ ಹಾಡಿನಲ್ಲಿಯೇ ಬೆರೆತು ಬರುತ್ತದೆ. ಗುರು ಸೂಚಿಸಿದ ಹೆಸರು ಕಲ್ಲಪ್ಪ ಅಗಿದ್ದರೆ-
ಕಲ್ಲಪ್ಪ ಹೌದೇನ್ರಿ ಮತ್ತೀನ್ಯಾರ್ ಹೇಳಯ್ಯಾ ಸುವ್ವಿಭಾ ಚೆನ್ನಬಸವಯ್ಯಸುವ್ವಿ
ಹೀಗೆ ಕರಪಲ್ಲವ (ಬೆರಳು) ಎಂಬ ಶಬ್ದದಿಂದ ಕರಪಲ್ಲ ಅಥವಾ ಕರತಾಲ ಬಂದಿರಬೇಕು. ಕರತಾಲ ಎಂಬ ಮಾತು ಕೈಯ ತಾಳವನ್ನು ಸೂಚಿಸುವಂತಿದ್ದರೂ ಅಷ್ಟು ಸಮರ್ಪಕವಾಗಿ ತೋರುವುದಿಲ್ಲ.
ಕರಪಾಲ ಮೇಳ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದ ಒಂದು ಶ್ರೇಷ್ಠ ಜನಪದ ಕಲೆ. ದಕ್ಷಿಣ ಕರ್ನಾಟಕದ ಎಲ್ಲ ಕಡೆಗಳಲ್ಲೂ ಇದು ಕಾಣಬರದಿದ್ದರೂ ತುಮಕೂರು, ಹಾಸನ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಇನ್ನೂ ಉಳಿದಿದೆ. ಕೈಬೆರಳಿನ ಸಂಜ್ಞೆಗಳ ಮೂಲಕ ಹೆಸರನ್ನು ಹಾಕುವ ಪದ್ಧತಿ ದೂರವಾಗುತ್ತಿದ್ದರೂ ಮೇಳವನ್ನು ನಡೆಸುವ ಸಂಪ್ರದಾಯ ಮಾತ್ರ ಈಗಲೂ ಉಸಿರಾಡುತ್ತಿದೆ. ಸಾಮಾನ್ಯವಾಗಿ ವೀರಶೈವ ಧರ್ಮದ ಅಯ್ಯಗಳು ಈ ಕರಪಾಲ ಮೇಳವನ್ನು ನಡೆಸಿಕೊಂಡು ಬಂದಿದ್ದರು ಬೇರೆ ಧರ್ಮೀಯರು ಅಲ್ಲಲ್ಲಿ ಭಾಗವಹಿಸಿದ ನಿದರ್ಶನಗಳೂ ಇವೆ. ಮಹಮದೀಯ ಧರ್ಮದವರೂ ಕರಪಾಲ ಮೇಳವನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ನಡೆಸಿದ ಸಂದರ್ಭಗಳನ್ನು ತುಮಕೂರು ಜಿಲ್ಲೆಯಲ್ಲಿ ಕಾಣಬಹುದು.
ಹಬ್ಬಹರಿದಿನಗಳಲ್ಲಿ, ಪುಣ್ಯದಿನಗಳಲ್ಲಿ ಕರಪಾಲ ಮೇಳವನ್ನು ನಡೆಸಲಾಗುವುದು ಯಕ್ಷಗಾನ ಬಂiÀÄಲಾಟಗಳಲ್ಲಿ ತೊಗಲು ಬೊಂಬೆ ಹಾಗೂ ಸೂತ್ರದ ಬೊಂಬೆಯಾಟಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವ ಜನ ಕರಪಾಲ ಮೇಳದಲ್ಲಿನ್ನೂ ಆಸಕ್ತಿಯನ್ನುಳಿಸಿಕೊಂಡು ಬಂದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. (ಜೆ.ಎಸ್.ಪಿ.)