ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರೆನ್ ರಾಜ್ಯ
ಕರೆನ್ ರಾಜ್ಯ: ಮಯನ್ಮಾರ್ ದೇಶಕ್ಕೆ ಸೇರಿದ ಒಂದು ರಾಜ್ಯ. 1947ರ ಬರ್ಮೀ ಸಂವಿಧಾನದ ಪ್ರಕಾರ ಸಾಲ್ವೀನ್ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಸೇರಿಸಿ ಅವುಗಳಿಗೆ ಕರೆನ್ ರಾಜ್ಯವೆಂದು ನಾಮಕರಣ ಮಾಡಲಾಗಿತ್ತು. ಆಗಿನ ಬರ್ಮ ಸ್ವತಂತ್ರವಾದರೂ ಕೇವಲ ಆಳರಸರ ಬದಲಾವಣೆ ಮಾತ್ರವೆಂದೂ ಇದರಿಂದ ತಮ್ಮ ಸ್ಥಿತಿ ಇನ್ನೂ ಹದಗೆಡುವುದೆಂದೂ ಅವರು ಭಾವಿಸಿದರು. ಕೇಂದ್ರಾಡಳಿತವನ್ನು ಬಲಪಡಿಸುವ ಸಲುವಾಗಿ ಬರ್ಮೀ ಸರ್ಕಾರ ಕೆಲವು ಕ್ರಮ ಕೈಕೊಂಡಾಗ (1948) ಸಶಸ್ತ್ರ ಕರೆನ್ ಜನರು ತಮ್ಮವೆನ್ನಲಾದ ಕೆಲವು ಪ್ರದೇಶಗಳನ್ನಾಕ್ರಮಿಸಿಕೊಂಡು ಬಂಡಾಯವೆದ್ದರು. ಸ್ವಯಮಾಡಳಿತ ರಾಜ್ಯವೇ ಅವರ ಗುರಿ. 1952ರಲ್ಲಿ ಬರ್ಮ ರಾಜ್ಯಾಂಗದಲ್ಲಿ ಸೂಕ್ತ ಬದಲಾವಣೆ ಮಾಡಿ ಕರೆನ್ ರಾಜ್ಯ ನಿರ್ಮಿಸಲಾಯಿತು. ಪಾ-ಅನ್ ಇದರ ರಾಜಧಾನಿ. 1957-59ರ ವೇಳೆಗೆ ಪಾ-ಅನ್ ಸರ್ವತೋಮುಖವಾದ ಪ್ರಗತಿ ಪಡೆಯಿತು. ದೊಡ್ಡ ರಸ್ತೆಗಳು, ವಿಮಾನ ನಿಲ್ದಾಣ, ಸರ್ಕಾರಿ ಕಟ್ಟಡಗಳು, ಆಸ್ಪತ್ರೆ ಮುಂತಾದವೆಲ್ಲ ಅಲ್ಲಿವೆ. ರಾಜ್ಯದ ವಿಸ್ತೀರ್ಣ 30383 ಚ.ಕಿಮೀ ಜನಸಂಖ್ಯೆ 1,431,377 (2005). ಈ ರಾಜ್ಯದ ಸುತ್ತಮುತ್ತ ದಟ್ಟವಾದ ಕಾಡುಗಳು ಹಬ್ಬಿವೆ. ಸರ್ಕಾರ ಇತ್ತೀಚೆಗೆ ಸಾಲ್ವೀನ್ ನದೀತೀರದ ಪ್ರದೇಶಗಳನ್ನೆಲ್ಲ ವ್ಯವಸಾಯಯೋಗ್ಯವನ್ನಾಗಿ ಮಾಡಿದುದರ ಪರಿಣಾಮವಾಗಿ ಇಲ್ಲಿ ಹೇರಳವಾಗಿ ಬತ್ತವನ್ನು ಬೆಳೆಯಲಾಗುತ್ತಿದೆ. ರಬ್ಬರ್, ಹತ್ತಿ, ಕಾಫಿ, ಕಬ್ಬು ಮುಂತಾದ ಬೆಳೆಗಳನ್ನು ಇತ್ತೀಚಿಗೆ ಕಾಣಬಹುದು. ತೇಗ ಒಂದು ಮುಖ್ಯ ಅರಣ್ಯವಸ್ತು. ಇದು ಕರೆನ್ ರಾಜ್ಯದ ನಿರ್ಯಾತಗಳಲ್ಲಿ ಪ್ರಧಾನವಾದದ್ದು. *