ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಳಿಂಗ ಪಕ್ಷಿ

ವಿಕಿಸೋರ್ಸ್ ಇಂದ
Jump to navigation Jump to search

ಕಳಿಂಗ ಪಕ್ಷಿ


ಪ್ಯಾಸ್‍ರಿಫಾರ್ಮೀ¸óï ಗಣದ ಲ್ಯಾನೈಯಿಡೀ ಕುಟುಂಬಕ್ಕೆ ಸೇರಿದ ಒಂದು ಮಾಂಸಹಾರಿ ಹಕ್ಕಿ (ಶ್ರೈಕ್). ಇದನ್ನು ಬುಚರ್ ಬರ್ಡ್ (ಕುಟುಕ ಹಕ್ಕಿ) ಎಂದೂ ಕರೆಯುತ್ತಾರೆ. ತನ್ನ ಬೇಟೆಯನ್ನು ಮುಳ್ಳುಗಿಡಗಳ ಮುಳ್ಳಿಗೆ ಸಿಕ್ಕಿಸಿ ಕೊಂಚ ಕೊಂಚವಾಗಿ ಹರಿದು ತಿನ್ನುವುದರಿಂದ ಇದಕ್ಕೆ ಈ ಹೆಸರು. ಆದರೂ, ಇದು ಕೇವಲ ಆಹಾರ ಸಂಗ್ರಹಣೆಯ ಪದ್ಧತಿ ಅಷ್ಟೆ. ಇದರಲ್ಲಿ ಸು. (29) ಪ್ರಭೇದಗಳಿದ್ದು ಎಲ್ಲವೂ ಲೇನಿಯಸ್ ಎಂಬ ಶಾಸ್ತ್ರೀಯ ಹೆಸರುಳ್ಳ ಜಾತಿಗೆ ಸೇರಿವೆ. ಇವುಗಳಲ್ಲಿ ಮುಖ್ಯವಾದ ಪ್ರಭೇದಗಳಿವು: ಯೂರೋಪು ಹಾಗೂ ಮೆಡಿಟರೇನಿಯನ್ ಪ್ರದೇಶಗಳಲ್ಲಿ ಕಾಣಬರುವ ಕೆಂಪು ಬೆನ್ನಿನ ಕಳಿಂಗ (ಲೇನಿಯಸ್ ಕೊಲ್ಲೊರಿಯೊ), ಕೆನಡ ಹಾಗೂ ಅಲಾಸ್ಕಗಳಲ್ಲಿರುವ ಉತ್ತರದ ಕಳಿಂಗ (ಲೇ.ಎಕ್ಸ್‍ಕ್ಯುಬಿಟರ್), ಭಾರತದಲ್ಲಿನ ಕೆಂಪು ಬೆನ್ನಿನ ಕಳಿಂಗ (ಲೇ.ಶಾಚ್) ಹಾಗೂ ಲೇ. ವಿಟೇಟಸ್. ಲೇ. ಎಕ್ಸ್‍ಕ್ಯುಬಿಟರ್ ಪ್ರಭೇದ ಭಾರತದಲ್ಲೂ ಇದೆ. ಸಾಮಾನ್ಯವಾಗಿ ಕುರುಚಲು ಕಾಡು, ಗೊಬ್ಬಳಿಮರಗಳ ತೋಪುಗಳಲ್ಲಿ ಇವುಗಳ ವಾಸ. ಸಣ್ಣ ಅಥವಾ ಮಧ್ಯಮಗಾತ್ರದ ಹಕ್ಕಿಗಳಿವು. (ಬಹುಪಾಲು ಹಕ್ಕಿಗಳ ಉದ್ದ ಸು. 7"-10"). ದೊಡ್ಡದಾದ ಮತ್ತು ಅಗಲವಾದ ತಲೆ, ತುದಿಯಲ್ಲಿ ಕಚ್ಚುಗಳಿರುವ ಹಾಗೂ ಬಾಗಿರುವ ಬಲವಾದ ಕೊಕ್ಕು, ಮೊನೆಯುಗುರುಗಳುಳ್ಳ ದೃಢವಾದ ಕಾಲುಗಳು ಮತ್ತು ಉದ್ದವಾದ ಬಾಲ-ಇವು ಈ ಹಕ್ಕಿಗಳ ಮುಖ್ಯ ಲಕ್ಷಣಗಳು. ದೇಹ ಬೂದು, ಬಿಳಿ, ಕರಿ, ಕಂದು, ಹಸಿರು ಹಾಗೂ ಕೆಂಪು ಬಣ್ಣಗಳ ರೆಕ್ಕೆ ಪುಕ್ಕಗಳಿಂದ ಕೂಡಿದೆ. ಕೆಲವು ಪ್ರಭೇದಗಳನ್ನು ಬಿಟ್ಟು ಉಳಿದವುಗಳಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳ ಬಣ್ಣದಲ್ಲಿ ವ್ಯತ್ಯಾಸವಿಲ್ಲ. ಹಾಡುಹಕ್ಕಿಗಳ ಕುಟುಂಬಕ್ಕೆ ಸೇರಿದ್ದರೂ ಇವುಗಳ ಧ್ವನಿ ಕಿವಿಗೆ ಹಿತಕರವಲ್ಲ. ಆದರೆ ಕೆಲವು ಬಗೆಯವು ಇತರ ಹಕ್ಕಿಗಳ ಕೂಗನ್ನು ಚೆನ್ನಾಗಿ ಅನುಕರಿಸಬಲ್ಲವು. ವಿವಿಧ ಬಗೆಯ ಕೀಟಗಳು, ಸಣ್ಣಗಾತ್ರದ ಓತಿ, ಹಲ್ಲಿ, ಇಲಿ ಮುಂತಾದ ಸಸ್ತನಿಗಳು ಮತ್ತು ಇತರ ಜಾತಿಯ ಹಕ್ಕಿಗಳು ಮುಂತಾದವು ಇವುಗಳ ಆಹಾರ. ಆಯಕಟ್ಟಿನ ಸ್ಥಳಗಳಲ್ಲಿ ಕೂತು ತಮ್ಮ ಬೇಟೆಗಾಗಿ ಇವು ಕಾಯುತ್ತವೆ. ಬೇಟೆ ಕಾಣಿಸಿದ ತತ್‍ಕ್ಷಣ ಹದ್ದು ಡೇಗೆಗಳಂತೆ ಅದರ ಮೇಲೆರಗಿ ತಮ್ಮ ಚೂಪಾದ ಕೊಕ್ಕಿನಿಂದ ಕೊಲ್ಲುತ್ತದೆ. ಕಾಲುಗಳು ದೊಡ್ಡ ಗಾತ್ರದ ಬೇಟೆಯನ್ನು ಹಿಡಿದುಕೊಳ್ಳಲು ಶಕ್ತವಾಗಿಲ್ಲವಾದ್ದರಿಂದ ಬೇಟೆಯನ್ನು ಯಾವುದಾದರೂ ಮರದ ಮುಳ್ಳಿಗೊ ತಂತಿಬೇಲಿಗೊ ಸಿಕ್ಕಿಸಿ ತೂಗು ಹಾಕಿ ಅದನ್ನು ನಿಧಾನವಾಗಿ ಹರಿದು ತಿನ್ನುತ್ತವೆ. ಕಳಿಂಗ ಪಕ್ಷಿಗಳಿರುವ ಪ್ರದೇಶಗಳಲ್ಲಿ ಹೀಗೆ ತೂಗುಹಾಕಿರುವ ಕೀಟಗಳು, ಇಲಿಗಳು ಸಾಮಾನ್ಯ ದೃಶ್ಯ. ಕೆಲವು ಬಾರಿ ಸಾಕಿದ ಹಕ್ಕಿಗಳನ್ನು ಹಿಡಿದು ತಿನ್ನುವುದುಂಟು. ಹೀಗಾಗಿ ಇವನ್ನು ಯಾರೂ ಇಷ್ಟಪಡುವುದಿಲ್ಲ. ಕಳಿಂಗಗಳು ತಮ್ಮ ಜೀವನವನ್ನು ಒಂಟಿಯಾಗಿಯೇ ಕಳೆಯುತ್ತವೆ. ಸಂತಾನೋತ್ಪತ್ತಿಯ ಕಾಲವಾದ ವಸಂತದಲ್ಲಿ ಮಾತ್ರ ಗಂಡು ಹೆಣ್ಣು ಹಕ್ಕಿಗಳು ಜೊತೆಗೂಡುತ್ತವೆ. ಪೊದೆಗಳಲ್ಲಿ ಮತ್ತು ಮರಗಳಲ್ಲಿ ಹುಲ್ಲು ಮತ್ತು ಕಡ್ಡಿಗಳಿಂದ ಒರಟಾದ ಗೂಡು ಕಟ್ಟುತ್ತವೆ. ಹೆಣ್ಣು ಮಾಸಲು ಬಿಳಿಯ ಬಣ್ಣದ, ಮೇಲೆಲ್ಲ ಕಂದು ಅಥವಾ ಬೂದು ಬಣ್ಣದ ಚುಕ್ಕೆಗಳಿರುವ 3-6 ಮೊಟ್ಟೆಗಳನ್ನಿಡುತ್ತದೆ. ಹೆಣ್ಣೇ ಮೊಟ್ಟೆಗಳಿಗೆ ಕಾವುಕೊಟ್ಟು ಮರಿ ಮಾಡುತ್ತದೆ. ಕಾವುಕೂರುವ ಕಾಲ ಸುಮಾರು (14-16) ದಿವಸಗಳು. ಗಂಡು ಕಾವುಕೂತ ಹೆಣ್ಣಿಗೆ ಆಹಾರ ತಂದುಕೊಡುವುದರಲ್ಲಿ ನಿರತವಾಗಿರುತ್ತದೆ. ಮರಿಗಳು ದೊಡ್ಡವಾಗುವ ಕಾಲಕ್ಕೆ ಗಂಡು ಹೆಣ್ಣುಗಳು ಬೇರೆಯಾಗಿ ಮತ್ತೆ ಒಂಟಿ ಜೀವನವನ್ನು ಮುಂದುವರಿಸುತ್ತವೆ.

ಕಳಿಂಗ ಪಕ್ಷಿಯ ಕೆಲವು ಪ್ರಭೇದಗಳು ಚಳಿಗಾಲದಲ್ಲಿ ದಕ್ಷಿಣದ ಕಡೆಗೆ ವಲಸೆ ಹೋಗುತ್ತವೆ (ಉದಾಹರಣೆಗೆ ಉತ್ತರದ ಕಳಿಂಗ). ಆದರೆ ಈ ವಲಸೆಹೋಗುವಿಕೆ ಬೇರೆ ಹಕ್ಕಿಗಳಲ್ಲಿರುವಂತೆ ಕ್ರಮಬದ್ಧವೂ ನಿಯತವೂ ಅಲ್ಲ. 

 

(ಎಚ್.ಬಿ.ಡಿ.)

         (ಪರಿಷ್ಕರಣೆ: ಕೆ ಎಸ್ ನವೀನ್)