ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕವಲೆದುರ್ಗ

ವಿಕಿಸೋರ್ಸ್ದಿಂದ

ಕವಲೆದುರ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಮುದ್ರ ಮಟ್ಟದಿಂದ ೯೨೭ ಮೀ ಎತ್ತರದಲ್ಲಿರುವ ದುರ್ಗಮವಾದ ಗುಡ್ಡ. ಇದರ ಮೇಲೆ ಕೋಟಿಯಿದೆ. ಪುರಾಣಕಾಲದಲ್ಲಿ ಕಾಮ್ಯಕವನವೆಂದು ಹೆಸರಿದ್ದ ಈ ಸ್ಥಳದಲ್ಲಿ ಪಾಂಡವರು ವನವಾಸಕಾಲದಲ್ಲಿ ತಂಗಿದ್ದರೆಂದೂ ನೀರಿಗಾಗಿ ಭೀಮ ಇಲ್ಲಿ ಒಂದು ಕಟ್ಟೆ ನಿರ್ಮಿಸಿ ತುಂಗಭದ್ರೆಯನ್ನು ಅಲ್ಲಿಗೆ ತಿರುಗಿಸಿದುದಾಗಿಯೂ ಅನಂತರ ಋಷಿಗಳ ಪ್ರಾರ್ಥನೆಯಂತೆ ಧರ್ಮರಾಯ ಕಟ್ಟೆಯಿಂದ ನೀರು ಬಿಡಿಸಿದುದಾಗಿಯೂ ಐತಿಹ್ಯವಿದೆ. ಈ ಕಟ್ಟೆಗೆ ಭೀಮನಕಟ್ಟೆ ಎಂದು ಹೆಸರು. ಚಾರಿತ್ರಿಕವಾಗಿ ನೋಡುವುದಾದರೆ, ಇದು ಬಿದನೂರು ಪಾಳೆಯಗಾರರ ಕೇಂದ್ರವಾಗಿತ್ತು. ಆಗ ಇದಕ್ಕೆ ಭುವನಗಿರಿಯೆಂಬ ಹೆಸರಿತ್ತು. ಆ ಕಾಲದ ಅರಮನೆಯ ಅವಶೇಷಗಳು ಉಳಿದು ಬಂದಿವೆ. ಇವುಗಳ ಪೈಕಿ ೨.೪ ಮೀ. ಉದ್ದ ೨.೧ ಮೀ ಅಗಲ ಇರುವ ಕಲ್ಲಿನ ಮಂಚವೂ ಒಂದು. ಅದು ರಾಣಿಯ ಮಂಚವೆಂದು ಹೆಸರಾಗಿದೆ. ಅದನ್ನು ೧೬೯೪ರಲ್ಲಿ ನಿರ್ಮಿಸಲಾಯಿತೆಂದು ಅದರ ಮೇಲಿರುವ ಶಾಸನದಿಂದ ಗೊತ್ತಾಗುತ್ತದೆ. ಉತ್ತಮ ರೇಖಾಚಿತ್ರಗಳಿಂದ ಕೂಡಿ ಮಂಚ ಬಲು ಆಕರ್ಷಕವಾಗಿದೆ. ಈಗ ಅದು ಮೈಸೂರಿನಲ್ಲಿದೆ. ಹೈದರ್ ಅಲಿ, ಕವಲೆದುರ್ಗದ ಕೋಟೆಯನ್ನು ವಶಮಾಡಿಕೊಂಡ ಅನಂತರ ಇದಕ್ಕೆ ಆಗಿನ ಭುವನಗಿರಿ ಎಂಬ ಹೆಸರು ಹೋಗಿ ಕವಲೆದುರ್ಗ (ಕಾವಲುದುರ್ಗ) ಎಂಬ ಹೆಸರು ಬಂತು. ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾದ ಸುಂದರವಾದ ಅನೇಕ ಸುಂದರ ಕೊಳಗಳು ಕೋಟೆಯ ಒಳಗೆ ಇವೆ. ಇವುಗಳಲ್ಲಿ ಸಂತೆಗಂಗೆ ಮುಖ್ಯವಾದದ್ದು. ಕೆಳದಿ ದೊರೆಗಳ ಕಾಲದ ಲಿಂಗಾಯತರ ಮಠವೂ ಇದೆ. ಬೆಟ್ಟದ ಮೇಲೆ ಇರುವುದು ಶ್ರೀಕಂಠೇಶ್ವರನ ದೇವಾಲಯ. ಇದೂ ಪಾಳೆಯಗಾರರ ಕಾಲದಲ್ಲಿ ನಿರ್ಮಿತವಾದದ್ದು. ಸುತ್ತಮುತ್ತಲೂ ಕಾಡು ಬೆಳೆದುಕೊಂಡಿದ್ದರೂ ಇದೊಂದು ರಮ್ಯಸ್ಥಳ. (ಎ.ವಿ.ಎನ್.; ಕೆ.ಆರ್.ಆರ್.)