ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಗ್ರಾ ಚಿತ್ರಕಲೆ

ವಿಕಿಸೋರ್ಸ್ ಇಂದ
Jump to navigation Jump to search

ಕಾಂಗ್ರಾ ಚಿತ್ರಕಲೆ


ಹಿಮಾಚಲ ಪ್ರದೇಶದ ಬೆಟ್ಟಗುಡ್ಡಗಾಡಿನಲ್ಲಿ, ಮುಖ್ಯವಾಗಿ ಕಾಂಗ್ರಾ ಕಣಿವೆಯಲ್ಲಿ ಪ್ರಚಲಿತವಾಗಿದ್ದ ಚಿತ್ರಕಲೆ. ಇದು ರಜಪೂತ ಚಿತ್ರ ಕಲೆಯ ಒಂದು ಪ್ರಭೇದವೆಂದೇ ಹಿಂದಿನ ವಿದ್ವಾಂಸರು ಭಾವಿಸಿದ್ದರು. ಆದರೆ ಇತ್ತೀಚೆಗೆ ಆರ್ಚರ್, ರಾಂಧವ ಮುಂತಾದವರು ಈ ಕಲೆಯನ್ನು ಕುರಿತು ವಿಶೇಷ ಅಧ್ಯಯನ ನಡೆಸಿ, ಇದು ರಜಪೂತ ಚಿತ್ರಕಲೆಗಿಂತ ಭಿನ್ನವಾದುದೆಂದೂ ಕಾಂಗ್ರಾ ಕಣಿವೆಯಲ್ಲಿ ವಿಶೇಷವಾಗಿ ಪ್ರಚಲಿತವಾಗಿರುವುದರಿಂದ ಇದನ್ನು ಕಾಂಗ್ರಾ ಚಿತ್ರಕಲೆಯೆಂದು ಕರೆಯಬೇಕೆಂದೂ ವಾದಿಸಿದ್ದಾರೆ. ಇದರ ಮೂರು ಮುಖ್ಯ ಕೇಂದ್ರಗಳೆಂದರೆ ಗುಲೇರ್, ತಿರಸುಜನ್‍ಪುರ ಮತ್ತು ನೂರ್‍ಪುರ. ಅಲ್ಲಿಯ ರಾಜರ ಆಶ್ರಯದಲ್ಲಿ ಕಾಂಗ್ರಾ ಚಿತ್ರಕಲೆ ಬೆಳೆಯಿತು.

ಕಾಂಗ್ರಾ ಚಿತ್ರಕಲೆಯಲ್ಲಿ ರಜಪೂತ, ಮೊಗಲ್ ಮತ್ತು ಪಂಜಾಬಿನ ಜಾನಪದ ಶೈಲಿಗಳ ಮಿಳಿತವನ್ನು ಕಾಣುತ್ತೇವೆ. ಔರಂಗeóÉೀಬ್ ತನ್ನ ಆಸ್ಥಾನದ ಹಿಂದೂ ಕಲಾಕಾರರನ್ನು ರಾಜ್ಯದಿಂದ ಓಡಿಸಿದುದರಿಂದ, ಅವರು ನೆರೆ ರಾಜ್ಯಗಳಲ್ಲಿ ಆಶ್ರಯ ಪಡೆದರು. ಅವರಿಂದ ಬೆಳೆದ ಈ ಕಲೆಯಲ್ಲಿ ಅನೇಕ ಶೈಲಿಗಳುಂಟು. ಈ ಕಲೆ 18ನೆಯ ಶತಮಾನದಲ್ಲಿ ಜನ್ಮ ತಾಳಿದರೂ ಇದು ಹಠಾತ್ತನೆ ಉದ್ಭವಿಸಿದ ಸಾಂಸ್ಕ್ರತಿಕ ಕ್ರಿಯೆಯಲ್ಲ. ಉತ್ತರಭಾರತದಲ್ಲಿ ಭಕ್ತಿಪಂಥ, ಅದರಲ್ಲೂ ರಾಧಾಕೃಷ್ಣಪಂಥ ಬೆಳೆದಂತೆಲ್ಲ ಅಲ್ಲಿಯ ಗುಡ್ಡಗಾಡಿನ ಜನರಲ್ಲಿ ಉಂಟಾದ ಸಾಂಸ್ಕøತಿಕ ಬದಲಾವಣೆಗಳೇ ಕಾಂಗ್ರಾ ಚಿತ್ರಕಲೆಯ ಉಗಮಕ್ಕೆ ಕಾರಣವೆಂಬುದು ವಿದ್ವಾಂಸರ ಮತ.

 ಕಾಂಗ್ರಾ ಚಿತ್ರಕಲೆ ಅದು ಹುಟ್ಟಿ ಬೆಳೆದ ಪ್ರದೇಶಕ್ಕೆ ವಿಶಿಷ್ಟವಾದದ್ದು. ಆ ಚಿತ್ರಗಳಿಗೆ ಅಲ್ಲಿಯ ಬೆಟ್ಟಗುಡ್ಡಗಳೇ ಸ್ಫೂರ್ತಿ ನೀಡಿದೆ. ಉಡಿಗೆ ತೊಡಿಗೆಗಳಲ್ಲಿ ಆ ಪ್ರದೇಶದ ಛಾಯೆ ಎದ್ದುಕಾಣುತ್ತದೆ. ಚಿತ್ರಿತ ಕಥಾವಸ್ತುವಿಗೂ ಜಾನಪದ ಕಥೆಗಳ ಸ್ಪರ್ಶವಿದೆ. ಕಾಂಗ್ರಾ ಅರ್ಥಪೂರ್ಣವಾಗಿರುವುದು ಈ ವರ್ಣಮಯ ಹಿನ್ನೆಲೆಯಿಂದಾಗಿ.

 ಕಾಂಗ್ರಾ ಚಿತ್ರಕಲೆಯಲ್ಲಿ ಪ್ರಯೋಗತಂತ್ರ ಕಡಿಮೆ. ಇದನ್ನು ಸರಿದೂಗಿಸುವುದಕ್ಕಾಗಿ ಚಿತ್ರಕಾರ ತನ್ನ ಕಲೆಯನ್ನೇ ಬಳಸುತ್ತಾನೆ. ಸ್ತ್ರೀ-ಪುರುಷರ ಅಂಗಾಂಗಗಳು, ಬೆಟ್ಟಗುಡ್ಡಗಳು ಇವನ್ನು ಪದೇ ಪದೇ ಬಳಸಿದರೂ ಬೇಸರ ತರಿಸದ ಜೀವಂತ ಕೃತಿಗಳನ್ನಾಗಿ ಮಾಡಲು ಆಶ್ಚರ್ಯಕರ ರೀತಿಯಲ್ಲಿ ಭಾವಗಳನ್ನು ಯಥಾವತ್ತಾಗಿ ಚಿತ್ರಿಸುತ್ತಾನೆ. ನಾಯಿಕೆಯ ಕಣ್ಣುಗಳು ಚಲಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತದೆ. ಸಂಕೇತಗಳು ಬಹು ವಿರಳ. ಚಿತ್ರಕಾರನಿಗೆ ಪೂರ್ಣ ಸ್ವಾತಂತ್ರ್ಯವಿದ್ದು ತನ್ನ ಸ್ಫೂರ್ತಿಗೆ ತಕ್ಕಂತೆ ಚಿತ್ರರಚನೆಗೆ ಅವನಿಗೆ ಅವಕಾಶವಿತ್ತು. ಚಿತ್ರಗಳ ವೈವಿಧ್ಯಕ್ಕೆ ಈ ಸ್ವಾತಂತ್ರ್ಯ ಕಾರಣ.

 ಕಾಂಗ್ರಾ ಚಿತ್ರಕಲೆಯ ಮುಖ್ಯ ಅಂಶಗಳೆಂದರೆ ರೇಖಾಚಿತ್ರದ ವಿನ್ಯಾಸ, ಪ್ರಕಾಶಮಾನವಾದ ಬಣ್ಣ ಮತ್ತು ಅತಿಸೂಕ್ಷ್ಮ ಅಲಂಕಾರಗಳು. ಇದಕ್ಕಾಗಿ ಚಿತ್ರಕಾರ ಬಹು ಸೂಕ್ಷ್ಮವೂ ಮೃದುವೂ ಆದ ಕುಂಚಗಳನ್ನು ಬಳಸುತ್ತಿದ್ದರು. ಇವು ಅಳಿಲಿನ ಕೂದಲುಗಳಿಂದ ತಯಾರಿಸಿದುವು. ಚಿತ್ರಗಳನ್ನು ಬರೆಯುವುದಕ್ಕೆ ಮುಂಚೆ ಕೈಯಿಂದ ಮಾಡಿದ ಕಂದುಬಣ್ಣದ ಸಿಯಾಲ್‍ಸಕೋಟ್ ಕಾಗದದ ಮೇಲೆ ತಿಳಿಕೆಂಪು ಬಣ್ಣದಲ್ಲಿ ಕರಡನ್ನು ತಯಾರಿಸುತ್ತಿದ್ದರು. ಇದರ ಮೇಲೆ ಬಿಳಿಯ ಬಣ್ಣ ಬಳಿದು ಕಾಗದವನ್ನು ಮೃದುಮಾಡಿ, ರೇಖಾಚಿತ್ರವನ್ನು ಕಪ್ಪು ಅಥವಾ ಕಂದುಬಣ್ಣದಲ್ಲಿ ಬರೆದು ಅನಂತರ ಅವುಗಳಿಗೆ ಬಣ್ಣ ತುಂಬುತ್ತಿದ್ದರು. ಇವರು ವಿಶೇಷವಾಗಿ ಬಳಸುತ್ತಿದ್ದದ್ದು ಸ್ವಚ್ಛ ಕೆಂಪು, ಹಳದಿ, ನೀಲಿ ಮತ್ತು ಹಸಿರುಬಣ್ಣ. 200 ವರ್ಷಗಳ ಅನಂತರವೂ ಈ ಚಿತ್ರಗಳ ಬಣ್ಣಗಳು ಹಾಗೆಯೇ ಇರುವುದು ಗಮನಾರ್ಹ.

 ಕಾಂಗ್ರಾ ಚಿತ್ರಕಲೆಯಲ್ಲಿ ಯಥಾವತ್ ರೂಪಣವಿಲ್ಲ. ಸ್ತ್ರೀಯರು, ಬೆಟ್ಟಗುಡ್ಡ ಮೊದಲಾದವನ್ನು ಚಿತ್ರಕಾರ ತನ್ನ ಜ್ಞಾಪಕ ಶಕ್ತಿಯಿಂದ ರಚಿಸಿದ್ದಾನೆ. ಸಾಮಾನ್ಯವಾಗಿ ತೆಳ್ಳಗೆ, ಬಳುಕುವ, ಹರಿಣಾಕ್ಷಿಯರಾಗಿ, ತುಂಬುಗಲ್ಲ ಮತ್ತು ನೇರ ಮೂಗುಗಳುಳ್ಳವರಂತೆ ಸ್ತ್ರೀಯರನ್ನು ಚಿತ್ರಿಸಲಾಗಿದೆ. ಆದರೂ ಪ್ರತಿಯೊಬ್ಬ ಚಿತ್ರಕಾರನೂ ಮುಖವನ್ನು ತನ್ನ ರುಚಿಗೆ ತಕ್ಕಂತೆ ಚಿತ್ರಿಸಿದ್ದಾನೆ. ಸಾಮಾನ್ಯವಾಗಿ ಸ್ತ್ರೀಯರ ಎಲ್ಲ ಚಿತ್ರಗಳು ಪಾಶ್ರ್ವ ದೃಶ್ಯದಲ್ಲಿ ಚಿತ್ರಿತವಾಗಿದೆ.

 ಕಾಂಗ್ರಾ ಚಿತ್ರಕಲೆ ಹೆಚ್ಚಾಗಿ ಅನಾಮಧೇಯವಾಗಿಯೇ ಉಳಿದಿದೆ. ಕೆಲವು ಚಿತ್ರಗಳಲ್ಲಿ ಮಾತ್ರ ಗುರುಸಹಾಯ, ಕುಶನ್‍ಲಾಲ್, ಹಸ್ತೂ, ಪುರ್ಖೂ ಮತ್ತು ರಾಮ ದಯಾಲ್ ಮುಂತಾದ ಚಿತ್ರಕಾರರ ಸಹಿಗಳು ಕಂಡುಬರುತ್ತವೆ.

 ಶೃಂಗಾರವೇ ಕಾಂಗ್ರಾ ಚಿತ್ರಕಲೆಯ ಜೀವಾಳ. ಶೃಂಗಾರದ ವಿವಿಧ ಮುಖಗಳು ಉತ್ತಮ ರೀತಿಯಲ್ಲಿ ವ್ಯಕ್ತವಾಗಿವೆ. ರಾಧಾ-ಕೃಷ್ಣ ಇಲ್ಲವೇ ಶಿವಪಾರ್ವತಿಯರೇ ಪ್ರತಿಯೊಂದು ಚಿತ್ರದ ಪ್ರಧಾನ ವ್ಯಕ್ತಿಗಳು. ಸ್ತ್ರೀ-ಪುರುಷರ ಪರಸ್ಪರ ಆಕರ್ಷಣೆಯೇ ಕಾಂಗ್ರಾ ಚಿತ್ರಕಾರನಿಗೆ ಅತಿ ಮುಖ್ಯ ವಸ್ತು. ಹೆಣ್ಣಿನ ಅಂಗಾಂಗಗಳ ಸೌಂದರ್ಯಕ್ಕೆ ಈ ಚಿತ್ರಕಾರ ಆದ್ಯತೆ ನೀಡಿದ್ದಾನೆ. ಮಿಕ್ಕೆಲ್ಲವೂ ಅವನಿಗೆ ಗೌಣ. ಪ್ರಕೃತಿ ಚಿತ್ರಣವೂ ಹೆಣ್ಣಿನ ಸೌಂದರ್ಯವನ್ನು ಪ್ರತಿಬಿಂಬಿಸುವ ಇಲ್ಲವೇ ಹೆಚ್ಚಿಸುವ ಸಾಧನವೆಂದೇ ಅವನ ಭಾವನೆ. ಈ ದೃಷ್ಟಿಯಿಂದ ಕಾಂಗ್ರಾ ಚಿತ್ರಕಲೆಗೆ ಸಮವಾದ ಕಲೆ ಭಾರತದಲ್ಲಿ ಮತ್ತೊಂದಿಲ್ಲ. ಇಷ್ಟಾದರೂ ಈ ಚಿತ್ರಕಲೆಯಲ್ಲಿ ಘನತೆ ಗಾಂಭೀರ್ಯಗಳನ್ನು ಮೀರಿದ ಅಶ್ಲೀಲತೆಗೆ ಆಸ್ಪದವಿಲ್ಲ. ಲೈಂಗಿಕ ಆಕರ್ಷಣೆಯ ಸಂಕೇತಗಳನ್ನು ಮಾತ್ರ ಕೆಲವೆಡೆ ಬಳಸಿದ್ದಾರೆಂದು ಆರ್ಚರ್ ಅಭಿಪ್ರಾಯಪಡುತ್ತಾನೆ.

 ಕಾಂಗ್ರಾ ಚಿತ್ರಕಲೆಯ ಇನ್ನೊಂದು ವಿಶಿಷ್ಟ ಗುಣವೆಂದರೆ ಕಲಾವಿದನ ಚಿತ್ತವೃತ್ತಿ. ಹಿಮಾಲಯದ ಬೆಟ್ಟಗುಡ್ಡಗಳ ಜೀವನ ಕಷ್ಟಕರವಾದದ್ದು. ಈ ಕಷ್ಟಜೀವನದ ಚಿತ್ರಣವನ್ನು ಎಲ್ಲ ಕಾಂಗ್ರಾ ಚಿತ್ರಗಳಲ್ಲೂ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಕಾಂಗ್ರಾ ಚಿತ್ರಕಾರನಿಗೆ ಪ್ರಕೃತಿಯಲ್ಲೂ ವಿಶೇಷ ಆಸಕ್ತಿ. ತನಗೆ ವಿಶೇಷವಾಗಿ ಪರಿಚಿತವಾಗಿರುವ ಬೀಯಾಸ್ ನದೀ ಕಣಿವೆ, ಬೆಟ್ಟಗುಡ್ಡ, ಅವುಗಳ ಮೇಲೆ ಛತ್ರಿಯಂತಿರುವ ಮರಗಳು, ಮಾವಿನ ತೋಪು, ಗುಡಿಸಲು, ಮಂಜುಮಿಶ್ರಿತ ಹೊಳೆ ತೊರೆ, ಮೃಗಪಕ್ಷಿ - ಇವೆಲ್ಲವನ್ನೂ ನೈಜವಾಗಿ ಚಿತ್ರಿಸಿದ್ದಾನೆ.

 ಭಾಗವತ ಪುರಾಣ, ಗೀತಗೋವಿಂದ, ಬಾರಾಮಾಸಾ ಮುಂತಾದ ಕೃತಿಗಳ ಪರಿಚಯ ಚಿತ್ರಕಾರನಿಗೆ ಚೆನ್ನಾಗಿದೆ. ಅಲ್ಲಿಯ ನಾಯಿಕೆಯರ ಚಿತ್ರಣದಲ್ಲಿ ಅವನ್ನು ವಿಶೇಷ ಆಸಕ್ತಿ ತೋರಿದ್ದಾನೆ. ಹಿಂದಿ ಕವಿ ಕೇಶವದಾಸನ ರಸಿಕಪ್ರಿಯ ಗ್ರಂಥದಲ್ಲಿ ಕಾಣಬರುವ ಎಂಟು ರೀತಿಯ ನಾಯಿಕೆಯರನ್ನು ಚಿತ್ರಿಸಿ, ಆ ಗ್ರಂಥದಿಂದ ಆಯ್ದ ಶ್ಲೋಕಗಳನ್ನು ಆ ಚಿತ್ರಗಳ ಕೆಳಗೆ ಕೊಡಲಾಗಿದೆ. ಸ್ವಾಧೀನಪತಿಕಾ, ಉತ್ಕಾ, ವಾಸಕಶಯ್ಯಾ, ಅಭಿಸಂದಿತಾ, ಖಂಡಿತಾ, ಪ್ರೋಷಿತಪತಿಕಾ, ವಿಪ್ರಲಬ್ದಾ, ಅಭಿಸಾರಿಕಾ ಮೊದಲಾದ ಅಷ್ಟ ನಾಯಿಕೆಯರ ವಿರಹ, ಮಾನ ಮತ್ತು ಸಂಯೋಗಗಳು ಬಹು ವಿಶದವಾಗಿ ಚಿತ್ರಿತವಾಗಿವೆ. ರಾಧಾಕೃಷ್ಣರು ಸೂಚ್ಯವಾಗಿ ಆಯಾ ಋತುಗಳಿಗೆ ತಕ್ಕ ಉಡಿಗೆ-ತೊಡಿಗೆಗಳಲ್ಲಿ ಚಿತ್ರಿತರಾಗಿದ್ದಾರೆ. ಸಂಗೀತದ ರಾಗಗಳಿಗನುಗುಣವಾದ ರಾಗಾಮಾಲಾ ಚಿತ್ರಗಳೂ ಈ ಶೈಲಿಯಲ್ಲಿ ಹೇರಳವಾಗುಂಟು.

 ಕಾಂಗ್ರಾ ಚಿತ್ರಕಾರನಿಗೆ ಪ್ರಿಯವಾದ ಇನ್ನೊಂದು ವಸ್ತುವೆಂದರೆ ಕೃಷ್ಣಲೀಲೆ. ಕೃಷ್ಣನ ಕೊಳಲಿಗೆ ಮಾರು ಹೋದ ಗೋಪ ಗೋಪೀ ಗೋವುಗಳನ್ನು ಚಿತ್ರಿಸುವುದಕ್ಕೂ ಅವನಿಗೆ ವಿಶೇಷ ಆಸಕ್ತಿ. ಕಾಳೀಯಮರ್ಧನ, ಗೋವರ್ಧನಗಿರಿಧಾರಿ, ಗೋಪಿಕಾ ವಸ್ತ್ರಾಪಹರಣ ಈ ಚಿತ್ರಗಳು ಹಲವಾರಿವೆ.

 ಕಾಲಕ್ರಮದಲ್ಲಿ ಈ ಶೈಲಿಯಲ್ಲಿ ಭಾವಕ್ಕಿಂತ ಅಲಂಕಾರಕ್ಕೆ ಹೆಚ್ಚು ಪ್ರಾಧಾನ್ಯ ಸಲ್ಲಲಾರಂಭವಾಗಿ ಚಿತ್ರದ ಸತ್ವ ಕಡಿಮೆಯಾಯಿತು. ಆ ವೇಳೆಗೆ ಅದರ ಪೋಷಕರಾಗಿದ್ದ ರಾಜರೂ ಕ್ಷೀಣದೆಸೆಗೆ ಬರಲಾರಂಭಿಸಿದರು. ಹೀಗಾಗಿ ಕಾಂಗ್ರಾ ಚಿತ್ರಕಲೆ ಅವನತಿ ಹೊಂದಿ ಸಂಗ್ರಹಾಲಯಗಳಲ್ಲೂ ಅರಮನೆಗಳಲ್ಲೂ ಇರುವ ಕಲಾಕೃತಿಗಳಲ್ಲಿ ಮಾತ್ರ ಈಗ ಉಳಿದುಕೊಂಡಿದೆ.

 

(ಎ.ವಿ.ಎನ್.)