ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಡಕೊರಕ ಹುಳುಗಳು
ಕಾಂಡಕೊರಕ ಹುಳುಗಳು
ವಿವಿಧ ಬಗೆಯ ಸಸ್ಯಗಳ ಕಾಂಡಗಳನ್ನು ಕೊರೆದು ಅವುಗಳೊಳಗಿನ ರಸ ಕುಡಿದು ಜೀವನ ಸಾಗಿಸುವ ಕೆಲವು ಬಗೆಯ ಮರಿಕೀಟಗಳು. ಕೀಟವರ್ಗದ ಲೆಪಿಡಾಪ್ಟಿರ (ಪತಂಗ), ಕೋಲಿಯಾಪ್ಟಿರ (ಜೀರುಂಡೆ) ಮತ್ತು ಡಿಪ್ಟಿರ (ನೊಣ) ಗಣಗಳ ಕೀಟಗಳ ಮರಿಗಳಿಗೆ ಈ ಸಾಮಾನ್ಯ ಹೆಸರಿದೆ. ಈ ಮರಿಕೀಟಗಳನ್ನು ಕ್ರಮವಾಗಿ ಕ್ಯಾಟರ್‍ಪಿಲ್ಲರ್ (ಕಂಬಳಿಹುಳು), ಗ್ರಬ್ ಮತ್ತು ಮ್ಯಾಗಟ್ ಎಂದು ಕರೆಯಲಾಗುತ್ತದೆ. ತಾಯಿಕೀಟ ಸಸ್ಯಗಳ ಮೇಲೆ ತೊಗಟೆಗಳ ಕೆಳಗೆ ಇಡುವ ಮೊಟ್ಟೆಗಳೊಡೆದು ಹೊರಬರುವ ಮರಿಗಳಿವು. ಹೊರಬಂದ ಮರಿಗಳು ಸಸ್ಯಗಳ ಮೃದುವಾದ, ಭಾಗಗಳನ್ನು ಕೊರೆದು, ಅಲ್ಲಿನ ಅಂಗಾಂಶಗಳನ್ನು ತಿಂದು ಬೆಳೆಯುತ್ತವೆ, ಸಾಮಾನ್ಯವಾಗಿ ಇವು ಕಾಂಡವನ್ನು ಮಾತ್ರ ಕೊರೆಯುವುದಾದರೂ ಬೇರು, ಎಳೆಚಿಗುರು, ಮೊಗ್ಗು ಕಾಯಿ ಮುಂತಾದವನ್ನೂ ಕೊರೆಯುವುದುಂಟು. ಸ್ಥೂಲವಾಗಿ ಕಾಂಡಕೊರಕ ಹುಳುಗಳನ್ನು ಕೆಳಕಂಡಂತೆ ವಿಂಗಡಿಸಬಹುದು.
1. ದಂಟುಕೊರಕಗಳು: ಬತ್ತ, ರಾಗಿ, ಜೋಳ ಮುಂತಾದ ಹುಲ್ಲಿನ ಜಾತಿಯ ಸಸ್ಯಗಳ ಕಾಂಡಗಳನ್ನು ಕೊರೆಯುತ್ತವೆ. ಲೆಪಿಡಾಪ್ಟಿರ ಕಣಕ್ಕೆ ಸೇರಿದೆ.
2. ಮೃದು ಕಾಂಡಕೊರಕಗಳು; ಏಕವಾರ್ಷಿಕ ಸಸ್ಯಗಳ ಕಾಂಡ ಕೊರೆಯುವಂಥವು. ಉದಾಹರಣೆಗೆ ಹೊಗೆಸೊಪ್ಪು, ಬದನೆ ಇತ್ಯಾದಿ. ಲೆಪಿಡಾಪ್ಟಿರ ಗಣಕ್ಕೆ ಸೇರಿವೆ.
3. ಗಟ್ಟಿಕಾಂಡಕೊರಕಗಳು: ಮರ ಮತ್ತು ಪೊದೆಸಸ್ಯಗಳ ಕಾಂಡಗಳನ್ನು ಕೊರೆಯುವ ಹುಳುಗಳಿವು. ಇವು ಕೋಲಿಯಾಪ್ಟಿರ ಗಣಕ್ಕೆ ಸೇರಿವೆ.
4. ಎಳೆಸಸಿ ಕೊರಕಗಳು: ಕಾಫಿ, ಕಿತ್ತಳೆ, ಮಾವು, ತೆಂಗು ಮುಂತಾದ ಸಸ್ಯಗಳ ಎಳೆಸಸಿಗಳನ್ನು ಕೊರೆಯುವ ಹುಳುಗಳು ಇವು ಡಿಪ್ಟಿರ ಕಣಕ್ಕೆ ಸೇರಿವೆ.
(ಡಿ.ಎಸ್.)