ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಪರೆಟಿಯ
ಕಾಂಪರೆಟಿಯ
ಅಪೂರ್ವವಾದ ಮತ್ತು ಚೆಲುವಾದ ಒಂದು ಜಾತಿಯ ಆರ್ಕಿಡ್ ಸಸ್ಯ. ಆರ್ಕಿಡೇಸೀ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸುಮಾರು 12 ಪ್ರಭೇದಗಳಿವೆ. ದಕ್ಷಿಣ ಅಮೆರಿಕದ ಪೆರು, ಬ್ರೆಜಿóಲ್ ಮತ್ತು ಎಕ್ವಡಾರ್ ದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಎಲ್ಲ ಪ್ರಭೇದಗಳೂ ಅಪ್ಪು ಸಸ್ಯಗಳು. ಎಲ್ಲವುಗಳಲ್ಲೂ ಹರಿದುಕೊಂಡು ಬೆಳೆಯುವ ಪ್ರಕಂದವೂ (ರೈeóÉೂೀಮ್) ಅದರಿಂದ ಹುಟ್ಟುವ ಸಣ್ಣಗಾತ್ರದ ಮಿಥ್ಯಾಲಶುನಗಳೂ (ಸೂಡೋಬಲ್ಟ್ಸ್) ಹಚ್ಚಹಸಿರಾದ ದಪ್ಪನೆಯ ಎಲೆಗಳೂ ಇವೆ. ಹೂಗಳು ಸರಳವಾದ ಅಥವಾ ಕವಲೊಡೆದ ಅಂತ್ಯಾರಂಭಿ ಹೊಗೊಂಚಲುಗಳಾಗಿ ಜೋಡಣೆಯಾಗಿವೆ. ಹೂಗಳ ಬಣ್ಣ ವಿವಿಧ ಬಗೆಗಳಲ್ಲಿ ಬೇರೆ ಬೇರೆಯಾಗಿದೆ, ಮೇಲ್ಭಾಗದ ಪುಷ್ಪಪತ್ರ ಮತ್ತು ದಳಗಳ ಹೆಡೆಯಂತಿವೆ. ಕೆಳಭಾಗದ 2 ಪುಷ್ಪಪತ್ರಗಳು ಉದ್ದನೆಯ ಸೊಂಡಿಲಿನಂತೆ ಚಾಚಿಕೊಂಡು ಹೂದುಟಿಯಿಂದಾದ (ಲೇಬೆಲಮ್) ಸೊಂಡಿಲಿನಂಥ ಇನ್ನೊಂದು ರಚನೆಯನ್ನು ಆವರಿಸಿಕೊಂಡಿವೆ. ಈ ರಚನೆಗಳಿಂದಾಗಿ ಹೂ ಬಲು ಸುಂದರವಾಗಿ ಕಾಣುತ್ತದೆ.
ಕಾಂಪರೆಟಿಯದ ಹಲವಾರು ಪ್ರಭೇದಗಳಲ್ಲಿ ಉದ್ಯಾನಪ್ರಾಮುಖ್ಯವಿರುವ ಪ್ರಭೇದಗಳು ಈ ಮೂರು: ಕಾ.ಮ್ಯಾಕ್ರೊಪ್ಲೆಕ್ಟ್ರಾನ್.ಕಾ.ಕಾಕ್ಸಿನಿಯ ಮತ್ತು ಕಾ. ಫಾಲ್ಕೇಟ. ಮೊದಲನೆಯದರಲ್ಲಿ ತಿಳಹಳದಿ ಬಣ್ಣ ಮತ್ತು ಕೇಸರಿ ಬಣ್ಣದ ಅಂಚುಳ್ಳ ಹೂಗಳೂ ಎರಡನೆಯದರಲ್ಲಿ ಉಜ್ವಲ ಕಡುಗೆಂಪು ಬಣ್ಣದ ಹೂಗಳೂ ಮೂರನೆಯದರಲ್ಲಿ ಗಾಢ ಕೆಂಪು ಬಣ್ಣದ ಹೂಗಳೂ ಇವೆ. ಇವೆಲ್ಲ ಪ್ರಭೇದಗಳನ್ನೂ ತೂಗು ಬುಟ್ಟಿಗಳಲ್ಲಿ ಉಷ್ಣತೆ ಹೆಚ್ಚಾಗಿರುವ ಸ್ಥಳಗಳಲ್ಲಿ ಬೆಳೆಸುತ್ತಾರೆ.
(ಎನ್.ಆರ್.ಆರ್.)