ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಗೆ
ಕಾಗೆ
ಪ್ಯಾಸೆರಿಫಾರ್ಮೀಸ್ ಗಣದ ಕಾರ್ವಿಡೀ ಕುಟುಂಬಕ್ಕೆ ಸೇರಿದ ಕಾರ್ವಸ್ ಜಾತಿಯ ಹಕ್ಕಿ. ಪ್ರಪಂಚದ ಎಲ್ಲ ದೇಶಗಳಲ್ಲೂ ಉಂಟು. ಇದರಲ್ಲಿ ಸುಮಾರು 32 ಪ್ರಭೇಧಗಳಿವೆ. ಭಾರತದಲ್ಲಿ ಕಾರ್ವಸ್ ಮ್ಯಾಕ್ರೊರಿಂಕೋಸ್ (ಕಾಡುಕಾಗೆ) ಮತ್ತು ಕಾರ್ವಸ್ ಸ್ಪ್ಲೆಂಡೆನ್ಸ್ (ಊರುಕಾಗೆ) ಎಂಬ ಎರಡು ಪ್ರಭೇದಗಳಿವೆ. ಯೂರೋಪಿನಲ್ಲಿ ಕಾರ್ವಸ್ ಕರೋನಿ ಮತ್ತು ಕಾ.ಕಾರ್ನಿಕ್ಸ್ ಎಂಬುವೂ ಉತ್ತರ ಅವೆರಿಕಲ್ಲಿ ಕಾರ್ವಾಸ್ ಬ್ರಾಕಿರಿಂಕೋಸ್, ಕಾ.ಕರಿನಸ್ ಎಂಬವೂ ಸಾಮಾನ್ಯವಾಗಿ ಕಾಣಬರುವ ಕಾಗೆಗಳು. ಭಾರತದಲ್ಲಿನ ಪ್ರಭೇದಗಳು ಸಿಂಹಳ ಮತ್ತು ಬರ್ಮಗಳಲ್ಲೂ ಇವೆ. ಒಂದೊಂದು ಪ್ರಭೇದದಲ್ಲೂ ಅವುಗಳ ಭೌಗೊಳಿದ ವ್ಯಾಪ್ತಿಯ ಆಧಾರದ ಮೇಲೆ ಹಲವಾರು ಬಣಗಳನ್ನು ಗುರುತಿಸುವುದುಂಟು.
ಭಾರತದ ಊರು ಮತ್ತು ಕಾಡು ಕಾಗೆಗಳಲ್ಲಿ ಕೆಲವು ವ್ಯತ್ಯಾಸಗಳುಂಟು. ಊರುಕಾಗೆ ಸಾಮಾನ್ಯವಾಗಿ ಬಯಲುಸೀಮೆಯ ವಾಸಿ. ಮಾನವವಸತಿಗಳ ಬಳಿ ಇದು ಬಲುಸಾಮಾನ್ಯ. ಇದರ ಉದ್ದ ಸುಮಾರು 17'. ಸುಮಾರು 7" ಉದ್ದದ ಬಾಲವೂ 2" ಉದ್ದದ ಕೊಕ್ಕೂ ಇದಕ್ಕಿವೆ. ಕೊಕ್ಕು ದೃಢ. ತುದಿಯಲ್ಲಿ ನಸು ಬಾಗಿದಂತಿದೆ. ದೇಹವೆಲ್ಲ ಕಪ್ಪು ಬಣ್ಣದ್ದು. ಕಂಠಪ್ರದೇಶ ಮಾತ್ರ ಬೂದಿಬಣ್ಣದ್ದಾಗಿದೆ. ಸತ್ತ ಇಲಿ ಮುಂತಾದ ಪ್ರಾಣಿಗಳು, ಕೀಟಗಳು, ಕಾಯಿ, ಬೀಜ, ಇತರ ಹಕ್ಕಿಗಳ ಮೊಟ್ಟೆ ಮತ್ತು ಮರಿ ಇತ್ಯಾದಿ ಎಂಥ ಬಗೆಯ ಆಹಾರವನ್ನಾದರೂ ಕಾಗೆ ತಿನ್ನಬಲ್ಲದು. ಇದು ಬಲು ಚುರುಕು ಹಾಗೂ ಧೈರ್ಯಶಾಲಿ. ಬಲು ಜಾಗರೂಕ ಪ್ರಾಣಿಯೂ ಹೌದು. ಸಂಜೆಯ ಹೊತ್ತು ಕಾಗೆಗಳೆಲ್ಲ ಯಾವುದಾದರೊಂದು ಮರದಲ್ಲೊ ಬಯಲಿನಲ್ಲೊ ಒಂದು ಕಡೆ ಗುಂಪುಗೂಡಿ, ವಿಚಾರವಿನಿಮಯ ಮಾಡಿಕೊಳ್ಳುವಂತೆ ವ್ಯವಹರಿಸುತ್ತವೆ. ಇದರ ಗುಟ್ಟು ಇನ್ನೂ ಬಯಲಾಗಿಲ್ಲ.
ಕಾಗೆ ತನ್ನ ಗೂಡನ್ನು ಮರದ ರೆಂಬೆಗಳ ಮೇಲೆ ಸಣ್ಣ ಕಡ್ಡಿಗಳಿಂದ ನಿರ್ಮಿಸುತ್ತದೆ. ಗೂಡು ಕಟ್ಟುವ ಕಾರ್ಯ ಹೆಚ್ಚಾಗಿ ಗಂಡಿನದು. ಗೂಡು ತಯಾರಾದ ಮೇಲೆ ಹೆಣ್ಣುಕಾಗೆ 4ರಿಂದ 5ರ ವರೆಗೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳ ಆಕಾರದಲ್ಲಿ, ಗಾತ್ರದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಮೊಟ್ಟೆಯ ಬಣ್ಣ ಹಸಿರು ಇಲ್ಲವೆ ನೀಲಿಮಿಶ್ರಿತ ಹಸಿರು; ಅಲ್ಲಲ್ಲಿ ಕಂದುಬಣ್ಣದ ಚುಕ್ಕೆಗಳಿವೆ. ಗಂಡುಹೆಣ್ಣುಗಳೆರಡೂ ಕಾವು ಕೊಡುತ್ತವೆ. ಮೊಟ್ಟೆಯಿಡುವ ಕಾಲ ದೇಶದ ವಿವಿಧ ಭಾಗಗಳಲ್ಲಿ ವಾಸಿಸುವ ಕಾಗೆಗಳಲ್ಲಿ ಬೇರೆಬೇರೆಯಾಗಿದೆ. ಪಶ್ಚಿಮದಲ್ಲಿ ವಾಸಿಸುವ ಕಾಗೆಗಳು ಏಪ್ರಿಲ್ ಮತ್ತು ಜೂನ್ ತಿಂಗಳುಗಳ ನಡುವೆ ಗೂಡನ್ನು ನಿರ್ಮಿಸಿ ಮೊಟ್ಟೆಗಳನ್ನಿಡುತ್ತವೆ. ಬಂಗಾಳದ ಕಾಗೆಗಳು ಇದಕ್ಕಿಂತ ಸ್ವಲ್ಪ ಮೊದಲೂ ದಕ್ಷಿಣ ಭಾರತದಲ್ಲಿನ ಕಾಗೆಗಳು ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೂ ಮೊಟ್ಟೆಯಿಡುತ್ತವೆ. ಕಾಗೆ ತನ್ನ ಮರಿಗಳ ಪಾಲನೆಯಲ್ಲಿ ಹೆಚ್ಚಿನ ಶ್ರದ್ದೆಯನ್ನು ವ್ಯಕ್ತಪಡಿಸುತ್ತವೆ.
ಕೋಗಿಲೆ ಸಾಮಾನ್ಯವಾಗಿ ತನ್ನ ಮೊಟ್ಟೆಗಳನ್ನು ಕಾಗೆಗಳ ಗೂಡಿನಲ್ಲಿಡುವುದುಂಟು. ಕಾಗೆ ಆ ಮೊಟ್ಟೆಗಳು ತನ್ನವೆಂದೇ ತಿಳಿದು ಅವಕ್ಕೆ ಕಾವುಕೊಟ್ಟು ಮರಿ ಮಾಡಿ ಗುಟುಕು ಕೊಟ್ಟು ಸಲಹುತ್ತದೆ. ಆದರೆ ಕೋಗಿಲೆ ಮರಿಗಳು ದೊಡ್ಡವಾದಾಗ ಕಾಗೆಗೆ ಅವು ತನ್ನವಲ್ಲ ಎಂದು ಅರಿವು ಬಂದು ಅವನ್ನು ಕುಕ್ಕಿ ಓಡಿಸುತ್ತದೆ.
ಕಾಡುಕಾಗೆ ಬೆಟ್ಟ, ಗುಡ್ಡಗಳಲ್ಲಿನ ಕಾಡಿನಲ್ಲಿ ವಾಸಿಸುತ್ತದೆ. ಕೆಲವೊಮ್ಮೆ ಊರುಗಳ ಬಳಿ ಕಂಡುಬರುವುದೂ ಉಂಟು. ಇದು ಅತ್ಯಂತ ಧೈರ್ಯಶಾಲಿ. ನಿರ್ಭಯವಾಗಿ, ಯಾವ ವಿಧವಾದ ಆಹಾರ ದೊರೆತರೂ ಬಿಡದೆ ಅಪಹರಿಸುತ್ತದೆ. ಇದರ ಆಹಾರ ಮೊಟ್ಟೆಗಳು, ಸಣ್ಣ ಹಕ್ಕಿಗಳು, ಹಣ್ಣುಗಳು, ಹಲ್ಲಿಗಳು, ಮಿಡಿತೆಗಳು, ಇತ್ಯಾದಿ. ಇದು ಊರುಕಾಗೆಗಿಂತ ದೊಡ್ಡದು. ದೇಹದ ಉದ್ದ 21". ಬಾಲ 7.5" ರಿಂದ 8" ಉದ್ದವಿದೆ. ದೇಹದ ಬಣ್ಣ ಸಂಪೂರ್ಣ ಕಪ್ಪು. ಕಾಡುಕಾಗೆ ಊರಕಾಗೆಯಂತೆ ಸಂಜೆಯ ವೇಳೆ ಗಂಪು ಸೇರುವುದಿಲ್ಲ. ಇದು ತನ್ನ ಗೂಡನ್ನು ದೊಡ್ಡ ದೊಡ್ಡ ಮರಗಳ ರೆಂಬೆಗಳ ಮೇಲೆ ಸಣ್ಣ ಕಡ್ಡಿ, ಪುಳ್ಳೆಗಳಿಂದ ನಿರ್ಮಿಸಿಕೊಳ್ಳುತ್ತದೆ. ಗೂಡಿನಲ್ಲಿ 3 ಅಥವಾ 4 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳು ಆಕಾರದಲ್ಲಿ ಮತ್ತು ಬಣ್ಣದಲ್ಲಿ ಊರುಕಾಗೆಯ ಮೊಟ್ಟೆಗಳಂತೆಯೇ ಇವೆ. ಆದರೆ ಗಾತ್ರದಲ್ಲಿ ದೊಡ್ಡವು.
ಕಾಗೆ ಬೇರೆ ಪಕ್ಷಿಗಳ ವಲಸೆ ಹೋಗುವ ಪರಿಪಾಟಿಯನ್ನು ಹೊಂದಿದ್ದರೂ ವಲಸೆಯ ಕ್ರಮ ಅತ್ಯಂತ ತಾತ್ಕಾಲಿಕವಾದುದು. ನಸುಬೆಳಕಿನಲ್ಲೇ ತನ್ನ ಗೂಡನ್ನು ತೊರೆದು ದೂರದ ಸ್ಥಳಗಳಿಗೆ ಆಹಾರಕ್ಕಾಗಿ ವಲಸೆಹೋಗಿ ಕತ್ತಲೆಗೆ ಮೊದಲೇ ಹಿಂತಿರುಗುವುದು ಇದರ ಸ್ವಭಾವ. ದಿನಬೆಳಗಾದರೆ ಊರುಕಾಗೆಗಳು ಕೂಡ ಗುಂಪು ಗುಂಪಾಗಿ ಹೊರಪ್ರದೇಶಗಳ ಕಡೆ ಹಾರಿಹೋಗುವುದನ್ನು ಎಲ್ಲರೂ ಗಮನಿಸಿದ್ದಾರೆ.
ಕಾಗೆ ನಗರವಾಸಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಎಷ್ಟೇ ಹೊಂದಿಕೊಂಡಿದ್ದರೂ ಗುಬ್ಬಚ್ಚಿಯಂತೆ ಇದು ಮಾನವನೊಂದಿಗೆ ಸಲಿಗೆಯಿಂದ ವರ್ತಿಸದು. ಉಪಾಯವಾಗಿ ತಿಂಡಿ ತಿನಿಸನ್ನು ಎಗರಿಸುವುದರಲ್ಲದು ನಿಸ್ಸೀಮ. ಎಂಜಲನ್ನವನ್ನು, ಕಸ ಮುಸುರೆಯನ್ನು ಕಂಡಾಗ ಕಾಕಾ ಎನ್ನುತ್ತ ತನ್ನ ಬಳಗದೊಂದಿಗೆ ಪ್ರತ್ಯಕ್ಷವಾಗುತ್ತದೆ. ಚಿಕ್ಕ ಪುಟ್ಟ ಪಾತ್ರೆ ಪಡಿಗವನ್ನು ಚಮಚಗಳನ್ನು ಕದ್ದೊಯ್ಯುವುದೂ ಉಂಟು. ಮನುಷ್ಯನ ಚಲನವಲನಗಳನ್ನಿದು ಬೆಕ್ಕಿನಂತೆ ಚೆನ್ನಾಗಿ ತಿಳಿದಿದೆ. ಆಹಾರ ಸಿಕ್ಕಾಗ ಹೇಗೋ ಹಾಗೆ ಸತ್ತ ಅಥವಾ ಪೆಟ್ಟುಬಿದ್ದ ಕಾಗೆಯ ಸುತ್ತ ಗುಂಪುಗೂಡುವುದು, ಗದ್ದಲ ಮಾಡುವುದು ಇದರ ಸ್ವಭಾವ. ಸರ್ಪವೊಂದನ್ನು ಉಪಾಯದಿಂದ ಕೊಂದುದು, ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ಚತುರತೆಯಿಂದ ಕುಡಿದುದು ಮುಂತಾದ ಕಥೆಗಳಲ್ಲಿನ ಕಾಗೆಯ ಜಾಣತನ ಕೇವಲ ಕಾಲ್ಪನಿಕವೆನ್ನಲಾಗದು. ಕಾಗೆಗೆ ಬೇಟೆಯ ಎಲ್ಲ ವರಸೆಗಳೂ ತಿಳಿದಿದೆ. ಹಕ್ಕಿಗಳ ಮೊಟ್ಟೆಗಳನ್ನು ಕದಿವಲ್ಲಿ, ಸಣ್ಣ ಪುಟ್ಟ ಹಕ್ಕಿಗಳನ್ನೂ ಪ್ರಾಣಿಗಳನ್ನೂ ಹಿಡಿವಲ್ಲಿ ಇದು ನಿಸ್ಸೀಮ. ಬೇಟೆ ದೊರೆತಾಗಲಂತೂ ಉಗ್ರವಾಗಿ ವರ್ತಿಸುತ್ತದೆ. ಕೊಳೆ ಕಳಪೆಗಳನ್ನು ತಿಂದು ಪರಿಸರವನ್ನು ಶುದ್ಧಿಮಾಡುವುದರಿಂದ ಇದು ಮನುಷ್ಯನಿಗೆ ಉಪಕಾರಿ ಎನಿಸಿದೆ.
ಪುರಾಣೇತಿಹಾಸದಲ್ಲಿ ಕಾಗೆಯ ಬಗ್ಗೆ ಅನೇಕ ಉಲ್ಲೇಖಗಳಿವೆ. ಸೀತೆಯನ್ನು ಬಾಧಿಸಿದ ಕಾಕಾಸುರನನ್ನು ರಾಮಬಾಣ ಅಟ್ಟಿಹೋದ ಪ್ರಸಂಗ ರಾಮಾಯಣದಲ್ಲಿದೆ. ಶನಿದೇವನ ರಥಕ್ಕೆ ಕಾಗೆಯನ್ನು ಹೂಡಲಾಗಿದೆಯೆಂದೂ ಕರ್ಣನ ಲಾಂಛನ ಕಾಗೆಯೆಂದೂ ಹೇಳಲಾಗಿದೆ.
(ಎನ್.ಎಂ.)
ಇದೇ ಕಾರಣಗಳಿಂದ ಕಾಗೆಗಳಿಗೆ ಆಹಾರ ನೀಡುವ ಪರಿಪಾಠ ಬೆಳೆದುಬಂದಿದೆ. ಇದರಿಂದ ಕಾಗೆಗಳ ಸಂತತಿ ಹೆಚ್ಚಿ ಅವು ಬೇರೆ ಪಕ್ಷಿಗಳ ಗೂಡು ನಾಶಮಾಡಿ, ಮೊಟ್ಟೆ-ಮರಿಗಳನ್ನು ತಿನ್ನುವುದರ ಮೂಲಕ ಇತರ ಪಕ್ಷಿಗಳ ಸಂಖ್ಯೆಗೆ ಪೂರಕವಾಗಿ ಪರಿಣಮಿಸಿದೆ. ಇವಕ್ಕೆ ಆಹಾರ ಹಾಕದೆ, ನಿಸರ್ಗಕ್ಕೆ ಬಿಡುವುದೊಂದೇ ಪರಿಹಾರ.
(ಪರಿಷ್ಕರಣೆ: ಕೆ ಎಸ್ ನವೀನ್)