ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಡುತುಂಬೆಗಿಡ

ವಿಕಿಸೋರ್ಸ್ದಿಂದ

ಕಾಡುತುಂಬೆಗಿಡ

ಲೇಬಿಯೇಟೀ ಕುಟುಂಬಕ್ಕೆ ಸೇರಿದ ಲಿಯೋನೋಟಿಸ್ ನೆಪೆಟಿಫೋಲಿಯ ಎಂಬ ಶಸ್ತ್ರೀಯ ಹೆಸರುಳ್ಳ ಮೂಲಿಕೆ ಸಸ್ಯ. ಭಾರತದ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ಅಲಂಕಾರ ಸಸ್ಯವಾಗಿ ಬೆಳೆಸುವುದೂ ಉಂಟು.

 ಇದು ಸುಮಾರು 1.2-1.8 ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ದಪ್ಪ, ಒರಟು, ರೋಮಮಯ. ಎಲೆಗಳು ದೊಡ್ಡವು. ತೊಟ್ಟು ಉದ್ದ, ಆಕಾರ ದೀರ್ಘವೃತ್ತದಂತೆ. ಅಂಚು ಗರಗಸದಂತೆ. ಹೂಗೊಂಚಲು ಗಿಣ್ಣಿನ ಸುತ್ತ ಆವರ್ತಗಳಲ್ಲಿ ಹುಟ್ಟುತ್ತದೆ. ಹೂಗಳು ಕಿತ್ತಳೆ, ಕೇಸರಿ ಬಣ್ಣದವಾಗಿದ್ದು ಆಕರ್ಷಕವಾಗಿವೆ.

 ಬೀಜಗಳಲ್ಲಿ ಆಲಿವ್ ಎಣ್ಣೆಯನ್ನು ಹೋಲುವ ಎಣ್ಣೆಯಿದೆ. ಇದರಲ್ಲಿ ಪಾಮಿಟಿಕ್, ಸ್ಟಿಯರಿಕ್, ಮಿರಿಸ್ಟಿಕ್, ಓಲಿಯಿಕ್, ಲಿನೋಲಿಯಿಕ್ ಮುಂತಾದ ಫ್ಯಾಟಿ ಆಮ್ಲಗಳು ಇವೆ. ಎಲೆ, ಪುಷ್ಪಪತ್ರ ಮತ್ತು ಹೂಗಳಲ್ಲಿ ಒಂದು ರೀತಿಯ ಕಹಿರುಚಿಯುಳ್ಳ ವಸ್ತು, ಎಣ್ಣೆ, ರೆಸಿóನ್ ಮತ್ತು ರೆಸಿóನಿಕ್ ಆಮ್ಲಗಳಿವೆ.

 ಕಾಡುತುಂಬೆಗಿಡಕ್ಕೆ ಔಷಧೀಯ ಮಹತ್ತ್ವವೂ ಇದೆ. ಇದರ ಬೀಜಗಳನ್ನು ಮಲೇರಿಯಾ ರೋಗವನ್ನು ಗುಣಪಡಿಸಲು ಬಳಸುತ್ತಾರೆ. ಚರ್ಮರೋಗಗಳಿಗೆ, ಸುಟ್ಟುಗಾಯ ಮತ್ತು ಬೊಬ್ಬೆಗಳಿಗೆ ಈ ಗಿಡದ ಬೂದಿಯನ್ನು ಹಚ್ಚುವುದುಂಟು. ಮಡಗಾಸ್ಕರಿನಲ್ಲಿ ಈ ಗಿಡವನ್ನು ಶುದ್ಧಿಕಾರಕವಾಗಿಯೂ ಜ್ವರವನ್ನು ತಗ್ಗಿಸುವ ಔಷಧ ತಯಾರಿಕೆಯಲ್ಲೂ ವಿರೇಚಕಗಳನ್ನು ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ. ಪೊರ್ಟೊರೀಕೊದಲ್ಲಿ ಎಲೆಗಳ ಕಷಾಯವನ್ನು ಬಲವರ್ಧಕವಾಗಿಯೂ ಬ್ರೆಜಿûಲ್‍ನಲ್ಲಿ ಸಂಧಿವಾತರೋಗಗಳನ್ನು ಗುಣಪಡಿಸುವುದಕ್ಕೂ ಬಳಸುವ ರೂಢಿ ಉಂಟು.

(ಎಸ್.ಆರ್.ಜಿ.)