ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಣ್ವ ಮನೆತನ
ಗೋಚರ
ಕಾಣ್ವ ಮನೆತನ
ಪ್ರಾಚೀನ ಭಾರತದಲ್ಲಿ ಆಳಿದ, ಅಷ್ಟು ಪ್ರಮುಖವಲ್ಲದ ಒಂದು ರಾಜವಂಶ. ಇದರ ಚರಿತ್ರೆ ಪುರಾಣಗಳಲ್ಲಿ ಉಕ್ತವಾಗಿದೆ. ಈ ವಂಶದ ಸ್ಥಾಪಕ ವಸುದೇವ. ಈತ ಶುಂಗ ವಂಶದ ದೇವಭೂತಿಯ (ದೇವಭೂಮಿ) ಅಮಾತ್ಯನಾಗಿದ್ದ. ದೇವಭೂತಿಯನ್ನು ಕೊಂದು ರಾಜ್ಯವನ್ನು ಅಪಹರಿಸಿ ತನ್ನ ಆಳ್ವಿಕೆಯನ್ನು ಸ್ಥಾಪಿಸಿದ. ಈತನ ಗೋತ್ರದಿಂದಾಗಿ ಈ ವಂಶಕ್ಕೆ ಕಾಣ್ವ (ಕಾಣ್ವಾಯನ) ಎಂಬ ಹೆಸರು ಬಂದಿದೆ. ವಸುದೇವ 9 ವರ್ಷ ಆಳಿದ. ಅನಂತರ ಇವನ ಸಂತತಿಯ ಭೂಮಿಮಿತ್ರ, ನಾರಾಯಣ, ಸುಶರ್ಮ-ಇವರು 36 ವರ್ಷ ರಾಜ್ಯಭಾರ ಮಾಡಿದರು. ಸುಶರ್ಮನೇ ಈ ವಂಶದ ಕೊನೆಯ ಅರಸ. ಈ ವಂಶದ ಆಳ್ವಿಕೆ ಕ್ರಿ.ಪೂ. 76 ರಿಂದ 30ರ ವರೆಗೆ ನಡೆಯಿತು. ಸಾತವಾಹನಸಂತತಿಯ ಸಿಮುಖ ಇದನ್ನು ಕೊನೆಗಾಣಿಸಿದ.
(ಪಿ.ಬಿ.ಡಿ.)