ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾದಾಟದ ಆಯಾಸ
ಕಾದಾಟದ ಆಯಾಸ
ಕಾದಾಟದ ದಿವಸಗಳಲ್ಲಿ ನಿರಂತರ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳ ಪರಿಣಾಮವಾಗಿ ಸ್ನಾಯುಗಳ ಮತ್ತು ನರವ್ಯೂಹದ ಕಾರ್ಯಚಟುವಟಿಕೆಯಲ್ಲಿ ತೋರಿಬರುವ ಬಲಹೀನತೆ. ಈ ಎರಡೂ ತೆರನಾದ ಆಯಾಸಗಳು ಒಟ್ಟಾಗಿ ಇಲ್ಲವೆ ಬೇರೆಬೇರೆಯಾಗಿ ಕಂಡುಬಂದು ಕೆಲಸ ಮಾಡುವ ಶಕ್ತಿಯನ್ನು ಕುಂದಿಸಬಲ್ಲವು. ದೈಹಿಕಶ್ರಮದ ವೇಳೆಯಲ್ಲಿ ಉತ್ಪಾದನೆಗೊಳ್ಳುವ ವಿಷವಸ್ತುಗಳು ವಿಸರ್ಜನೆಗೊಳ್ಳದೆ ಸ್ನಾಯುಗಳಲ್ಲಿ ಉಳಿಯುತ್ತವೆ. ಜೊತೆಗೆ ಶಕ್ತಿದಾಯಕ ವಸ್ತುಗಳ ಪ್ರಮಾಣ ಅವುಗಳಲ್ಲಿ ಕಡಿಮೆಯಾಗುತ್ತದೆ. ಇದರ ಫಲವಾಗಿ ಸ್ನಾಯು, ಉಸಿರಾಟ ಮತ್ತು ರಕ್ತಪರಿಚಲನೆಯಲ್ಲಿ ವೈಪರೀತ್ಯಗಳು ತೋರಿಬರುತ್ತವೆ. ಆಮ್ಲಜನಕದ ಒತ್ತಡ ಕಡಿಮೆಯಾಗುವುದರ ಪರಿಣಾಮವಾಗಿ ಕೇಂದ್ರ ನರಮಂಡಲದ ಚಟುವಟಿಕೆ ಕಡಿಮೆಯಾಗುತ್ತದೆ ; ದೇಹಾಯಾಸ ಹೆಚ್ಚಾಗುತ್ತದೆ. ಆಮ್ಲಜನಕದ ಅಭಾವದಿಂದ ಸ್ನಾಯುಗಳಲ್ಲಿಯ ಜೀವಿತಕಣಗಳ ರಾಸಾಯನಿಕ ಕ್ರಿಯೆಗೆ ಅಡ್ಡಿಯಾಗಿ ಲ್ಯಾಕ್ಟಿಕ್ ಆಮ್ಲ ಸಿದ್ಧಗೊಳ್ಳುತ್ತದೆ. ಅದರ ಸಂಗ್ರಹದ ಫಲವಾಗಿ ಸ್ನಾಯುಗಳ ಸಂಕುಚನಕ್ಕೆ ಅಡ್ಡಿಯುಂಟಾಗುತ್ತದೆ. ಲ್ಯಾಕ್ಟಿಕ್ ಆಮ್ಲದ ಪ್ರಮಾಣ ರಕ್ತದಲ್ಲಿ ಹೆಚ್ಚುತ್ತದೆ. ಇದರಿಂದಾಗಿ ಕೆಲಸಮಾಡುವ ಶಕ್ತಿ ಕಡಿಮೆಯಾಗುತ್ತದೆ. ನಡೆದಾಡುವ ಶಕ್ತಿ ಕುಂದಿ ದೈಹಿಕವಾಗಿ ಆಯಾಸ ತೋರಿಬರುತ್ತದೆ. ಯುಕ್ತ ವಿಶ್ರಾಂತಿ, ಪೌಷ್ಟಿಕಾಹಾರ ಸೇವೆನೆಯಿಂದ ಈ ಆಯಾಸ ಪರಿಹಾರವಾಗಬಲ್ಲುದು.
(ಪಿ.ಎಸ್.ಎಸ್.)