ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರನ್ ಫ್ಲವರ್
ಕಾರನ್ ಫ್ಲವರ್
ಸೆಂಟಾರಿಯ ಸಯೇನಸ್ ಎಂಬ ಶಾಸ್ತ್ರೀಯನಾಮವುಳ್ಳ ಏಕವಾರ್ಷಿಕ ಸಸ್ಯ. ಕಂಪಾಸಿóಟೀ ಕುಟುಂಬಕ್ಕೆ ಸೇರಿದೆ; ಬ್ಲೂ ಬಾಟಲ್ ಎಂದೂ ಕರೆಯುವುದುಂಟು. ಅಂದವಾದ ಹೂಬಿಡುವ ಸಸ್ಯವಾದ್ದರಿಂದ ಉದ್ಯಾನ ಪ್ರಾಮುಖ್ಯ ಪಡೆದಿದೆ. ಇದು ಸುಮಾರು 30-60 ಸೆಂಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ನೀಳ, ಹೂಗಳು ನೀಲಿ, ನಸುಗೆಂಪು, ಗುಲಾಬಿ, ಲೈಲಕ್, ಊದಾ. ಬಿಳಿ ಇತ್ಯಾದಿಯಾಗಿ ವರ್ಣರಂಜಿತವಾಗಿರುವುವಲ್ಲದೆ ಚೆಲುವಾದ ಚಂಡುಮಂಜರಿ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳಿಗೆ ಬಹಳ ಉದ್ದವಾದ ತೊಟ್ಟಿರುವುದರಿಂದ ಕತ್ತರಿಸಿ ಹೂದಾನಿಗಳಲ್ಲಿಟ್ಟು ಅಲಂಕಾರಕ್ಕಾಗಿ ಬಳಸಬಹುದು. ಈ ಗಿಡವನ್ನು ಬೀಜಗಳ ಮೂಲಕ ವೃದ್ಧಿಸುತ್ತಾರೆ. ನೇರವಾಗಿ ಮಡಿಗಳಲ್ಲೆ ಬಿತ್ತುವುದು ವಾಡಿಕೆ. ಮೊಳಕೆಯೊಡೆದು ಸಸಿಗಳು ಬಂದಮೇಲೆ 3"-4" ಗಳಿಗೊಂದರಂತೆ ಗಿಡಗಳನ್ನು ಬಿಟ್ಟು ಉಳಿದವನ್ನು ತೆಗೆದುಹಾಕಬೇಕು. ಇದರಿಂದ ಗಿಡಗಳ ಬೆಳವಣಿಗೆಗೂ ಹೂಗಳು ಎದ್ದು ಕಾಣುವುದಕ್ಕೂ ಅನುಕೂಲ. ನೀರು ಹೆಚ್ಚಾಗಿ ಬೇಕಾಗಿಲ್ಲ. ಬಿತ್ತನೆ ಮಾಡಿದ ಅನಂತರ 30,40,50 ಮತ್ತು 60ನೆಯ ದಿನಗಳಲ್ಲಿ ಹಿಂಡಿ ಗೊಬ್ಬರ ಹಾಕಬೇಕು 3ಳಿ ತಿಂಗಳಲ್ಲಿ ಹೂ ಒಡೆಯುತ್ತದೆ.
(ಕೆ.)