ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ತಿಕೇಯ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕಾರ್ತಿಕೇಯ


 ಪಾರ್ವತೀಪುತ್ರನಾದ ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.

 ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಕುರುಂಜಿಯಾಂಡವನ್, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು ಅತ್ಯುಚ್ಚಸ್ಥಾನ, ಪೂಜೆ ಸಲ್ಲುತ್ತದೆ. ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸನ ಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ.  

(ಸಿ.ಜಿ.ಪಿ.)