ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲಕವೃಕ್ಷೀಯ
ಗೋಚರ
ಕಾಲಕವೃಕ್ಷೀಯ
ಒಬ್ಬ ಋಷಿ. ಮಹಾಭಾರತದ ಪ್ರಕಾರ ಈತ ಒಮ್ಮೆ ಒಂದು ಪಕ್ಷಿಯನ್ನು ಪಂಜರದಲ್ಲಿಟ್ಟುಕೊಂಡು ಬಂದು ಕೋಸಲದೇಶದ ಕ್ಷೇಮದರ್ಶಿ ಎಂಬ ರಾಜನಿಗೆ ಕೊಟ್ಟ. ಆ ರಾಜ ಸರಿಯಾದ ಸಚಿವರನ್ನು ಪಡೆಯದೆ ರಾಜ್ಯವನ್ನು ಕಳೆದುಕೊಳ್ಳುವುದರಲ್ಲಿದ್ದ. ಋಷಿ ಕೊಟ್ಟ ಪಕ್ಷಿ ತ್ರಿಕಾಲವನ್ನು ಹೇಳಬಲ್ಲಂಥದು. ಅದರ ಮುಖೇನ ಮಂತ್ರಿ ಮುಂತಾದವರ ದೋಷಗಳನ್ನು ರಾಜ ತಿಳಿದುಕೊಂಡು ಜಾಗೃತನಾಗಿರಲೆಂದು ಋಷಿಯ ಆಶಯವಾಗಿತ್ತು. ಈ ರಹಸ್ಯವನ್ನರಿತ ಅರಮನೆಯ ಸೇವಕರು ಆ ಪಕ್ಷಿಯಿಂದ ತಮ್ಮ ಕುತಂತ್ರಗಳು ಬಯಲಾಗುವುವೆಂದು ಭಾವಿಸಿ ಅದನ್ನು ಕೊಂದರು. ಕೊನೆಗೆ ರಾಜ ತನ್ನವರೇ ಒಡ್ಡಿದ ಮೋಸಕ್ಕೆ ಸಿಲುಕಿ ರಾಜ್ಯವನ್ನು ಕಳೆದುಕೊಂಡ. ಅನಂತರ ಕಾಲಕವೃಕ್ಷೀಯ ರಾಜನ ಹತ್ತಿರ ಬಂದು ರಾಜನೀತಿಯನ್ನು ಉಪದೇಶಿಸಿ ಪುನಃ ರಾಜ್ಯವನ್ನು ಪಡೆಯುವ ಉಪಾಯವನ್ನು ಹೇಳಿದ.
(ಕೆ.ಎಸ್.ವಿ.)