ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲಿನ್ಸ್, ವಿಲಿಯಂ
ಕಾಲಿನ್ಸ್, ವಿಲಿಯಂ
1721-1759. ಆಂಗ್ಲ ಕವಿ. ವಿಂಚೆಸ್ಟರ್, ಆಕ್ಸ್‍ಫರ್ಡಗಳಲ್ಲಿ ಓದಿ ಲೇಖಕನಾಗಿ ಜೀವನ ಮಾಡಲು ಲಂಡನ್ನಿಗೆ ಬಂದು ಜಾನ್‍ಸನ್ ಮತ್ತು ಥಾಮ್ಸನ್ನರ ಸ್ನೇಹ ಗಳಿಸಿದ. ಪ್ರಾರಂಭದಲ್ಲಿ ತುಂಬ ಆರ್ಥಿಕ ತೊಂದರೆಯಿದ್ದರೂ ಮುಂದೆ ಚಿಕ್ಕಪ್ಪನ ಆಸ್ತಿ ದೊರಕಿತು. ಪರ್ಷಿಯನ್ ಎಕ್ಲಾಗ್ಸ್ ಎಂಬ ಹೊತ್ತಗೆ ಈತ ವಿದ್ಯಾರ್ಥಿಯಾಗಿದ್ದಾಗಲೆ ಪ್ರಚುರಗೊಂಡಿತು. ಇದು ಉತ್ತಮ ಕೃತಿಯಲ್ಲವೆಂದು ಕವಿ ತಾನೇ ಹೇಳಿಕೊಂಡಿದ್ದಾನೆ. ಕಾಲಿನ್ಸ್ ಬರೆದದ್ದು ಸ್ವಲ್ಪವಾದರೂ ಬರೆದುದರಲ್ಲಿ ಬಹುಭಾಗ ಅತ್ಯುತ್ತಮ ಸಾಹಿತ್ಯವೆನಿಸಿದೆ. ಪ್ರಗಾಥಗಳಿಂದ ಇವನ ಹೆಸರು ಚಿರಸ್ಥಾಯಿಯಾಗಿದೆ. ಟು ಈವಿನಿಂಗ್ ಮತ್ತು ಡರ್ಜ್ ಇನ್ ಸಿಂಬೆಲೈನ್ ಎಂಬೆರಡು ಪ್ರಗಾಥಗಳು ಉಲ್ಲೇಖಾರ್ಹವಾದುವು. ಈತನ ಮರಣಾನಂತರ ಅಚ್ಚುಕಂಡ ಓಡ್ ಆನ್ ದಿ ಪಾಪ್ಯುಲರ್ ಸೂಪರ್‍ಸ್ಟಿಷನ್ಸ್ ಆಫ್ ದಿ ಹೈಲೆಂಡ್ ಎಂಬ ಪ್ರಗಾಥವಂತೂ ಅನಂತರ ಬಂದ ರಮ್ಯಯುಗದ ಮುನ್‍ಸೂಚಕವಾಗಿದೆಯೆಂದು ವಿಮರ್ಶಕರ ಮತ. ಇದರಲ್ಲಿ ಬಹು ಸುಂದರವಾದ ಅನೇಕ ಭಾಗಗಳಿವೆ. ಆದರೆ ಕವಿ ಬದುಕಿದ್ದಂದು ಅವನ ಕೃತಿಗಳಿಂದ ಅವನಿಗೆ ಸಾಕಷ್ಟು ಖ್ಯಾತಿ ಸಿಗಲಿಲ್ಲ. ದಿ ಬೆಲ್ ಆಫ್ ಆರೇಗಾನ್ ಎಂಬ ಇವನ ಕಟ್ಟಕಡೆಯ ಕವನವೊಂದು ನಷ್ಟವಾಗಿ ಹೋಗಿದೆ. ಅಸಾಧಾರಣ ಕಲ್ಪನೆ ಮತ್ತು ಕೋಮಲತೆ ಇವನ ಕಾವ್ಯದ ವೈಶಿಷ್ಟ್ಯ. ಕಾಲಿನ್ಸನ ರಚನಗಳಲ್ಲೆಲ್ಲ ಸೂಕ್ಷ್ಮ ಖೇದದ ಧ್ವನಿಯೊಂದು ವ್ಯಾಪಿಸಿದೆ. ತನ್ನ ಪ್ರಗಾಥಗಳು ಹೆಚ್ಚು ಯಶಸ್ಸುಗಳಿಸಲಿಲ್ಲವೆಂಬ ಚಿಂತೆ ಕವಿಯ ತಲೆ ಸೇರಿ ಅವನಲ್ಲಿ ತೀವ್ರವಾದ ಮಾನಸಿಕ ರೋಗಕ್ಕೆ ಕಾರಣವಾಯಿತು (1753). ಚಿಕಿತ್ಸೆಗಾಗಿ ಕವಿ ಫ್ರಾನ್ಸಿಗೆ ಹೋದ. ಹಿಂತಿರುಗಿದ ಮೇಲೆ ಕಾಯಿಲೆ ಉಲ್ಬಣಗೊಂಡಿತು. ಬುದ್ದಿ ಮುಂಕಾಯಿತು. ಈತ ಹೇಗೆ ಅನಾಮಿಕನಾಗಿ ಸತ್ತನೆಂದರೆ ಅಂದು ಯಾವ ಪತ್ರಿಕೆಯೂ ಇವನ ಮರಣವಾರ್ತೆಯನ್ನು ಅಚ್ಚು ಮಾಡಲಿಲ್ಲವಂತೆ.
(ಎನ್.ಎಸ್.ಎಲ್.)
ಕಾಲಿನ್ಸನ ಕವನಗಳಲ್ಲಿ, 'ಪರ್ಸಾನಿಫಿಕೇಷನ್', ಅಮೂರ್ತತೆಗಳು, ಉಪದೇಶಿಸುವ ಪ್ರವೃತ್ತಿ ಇವು ಕಾಣುತ್ತವೆ. ಇವು 'ನಿಯೊಕ್ಲ್ಯಾಸಿಕ್' ಕಾವ್ಯದ ಲಕ್ಷಣಗಳು. ಆದರೆ ನಿಸರ್ಗದ ಪ್ರೀತಿ, ನಿಗೂಢತೆಯ ಅರಿವು ಇವು ಮುಂದಿನ ಕಾವ್ಯದ ಸೂಚನೆಗಳು.
(ಎಲ್.ಎಸ್.ಎಸ್.)
(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)