ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವಲು ಪಡೆ

ವಿಕಿಸೋರ್ಸ್ದಿಂದ

ಕಾವಳ

 ಗಾಳಿಯ ಉಷ್ಣತೆ ಇಬ್ಬನಿಬಿಂದುವನ್ನು ಮುಟ್ಟಿದಾಗ ಮತ್ತು ಅದಕ್ಕಿಂತ ಕೆಳಗೆ ಇಳಿದಾಗ ನೀರಿನ ಆವಿ ಘನೀಭವಿಸುವುದರಿಂದ ಉಂಟಾಗುವ ಮಂಜಿನ ಮುಸುಕು (ಫಾಗ್, ಹೇಝ್). ನೀರಿನ ಆವಿ ಘನೀಭವಿಸಲು ವಾತಾವರಣದಲ್ಲಿರುವ ಹೊಗೆಯ ಕಣಗಳು ಮತ್ತು ಸಮುದ್ರದ ತುಂತುರಿನ ಉಪ್ಪಿನ ಕಣಗಳು ನ್ಯೂಕ್ಲಿಯಗಳಾಗುತ್ತವೆ. ಕಾವಳದಲ್ಲಿ ನೀರಿನ ಹನಿಗಳ ಗಾತ್ರ 100µ ಗಳಿಗಿಂತ ಕಡಿಮೆಯಿರುತ್ತದೆ. ಮಳೆಯನ್ನು ತರುವ ಮೋಡಗಳಲ್ಲಿ ಈ ಹನಿಗಳ ಗಾತ್ರ 400-1000µ ಗಳಷ್ಟಿರುತ್ತದೆ. ಕಾವಳದಲ್ಲಿ 1 ಘನ ಸೆಂಮೀ.ನಲ್ಲಿ ಸಾಮಾನ್ಯವಾಗಿ 100 ಹನಿಗಳಿಗಿಂತ ಹೆಚ್ಚಾಗಿರುವುದಿಲ್ಲ. 1 ಘನ ಮೀ. ಕಾವಳದಲ್ಲಿರುವ ನೀರಿನ ತೂಕ 1/100 ಗ್ರಾಮಿಗಿಂತ ಹೆಚ್ಚಾಗಿರುವುದು ವಿರಳ. ಮಳೆ ಮೋಡಗಳಲ್ಲಾದರೆ 1 ಘನ ಮೀ.ನಲ್ಲಿ 0.1-3 ಗ್ರಾಂ ನೀರಿರುತ್ತದೆ. ಮಳೆಯನ್ನು ತರದ ಮೋಡವೆಂದು ಕಾವಳವನ್ನು ಬಣ್ಣಿಸುವುದು ಇದಕ್ಕಾಗಿಯೇ.

 ವಿಕಿರಣ ಕಾವಳ (ರೇಡಿಯೇಷನ್ ಫಾಗ್): ಮೋಡವಿಲ್ಲದ ರಾತ್ರಿವೇಳೆ ಭೂಮಿ ವಿಕಿರಣದಿಂದ ತಣ್ಣಗಾಗುತ್ತದೆ. ಅದಕ್ಕೆ ತಾಗಿರುವ ತೇವವುಳ್ಳ ಗಾಳಿಯ ಉಷ್ಣತೆ ಇದರಿಂದಾಗಿ ಇಬ್ಬನಿ ಬಿಂದುಗಳಿಗಿಳಿದರೆ ವಿಕಿರಣ ಕಾವಳವುಂಟಾಗುತ್ತದೆ. ಮೇಲಿನ ಸ್ತರದ ಹನಿಗಳು ವಿಕಿರಣವನ್ನು ಮುಂದುವರಿಸುವುದರಿಂದ ಕಾವಳದ ತೀವ್ರತೆ ಮತ್ತು ಆಳ ಹೆಚ್ಚಾಗುತ್ತದೆ. ಗಾಳಿ ಗಂಟೆಗೆ 3.2ಕಿ.ಮೀ.ಗಿಂತ ಹೆಚ್ಚಾದ ಮತ್ತು 12.8ಕಿ.ಮೀ.ಗಿಂತ ಕಡಿಮೆಯಾದ ವೇಗದಲ್ಲಿ ಬೀಸುತ್ತಿದ್ದರೆ ಕಾವಳದ ಬೆಳವಣಿಗೆ ಹೆಚ್ಚುತ್ತದೆ. ಗಾಳಿ ಬೀಸುವ ವೇಗ 16ಕಿ.ಮೀ.ಗಳಿಗಿಂತ ಹೆಚ್ಚಾದರೆ ಕಾವಳ ಚದರಿ ಹೋಗುತ್ತದೆ; ಮತ್ತು ಇದೇ ವೇಳೆಯಲ್ಲಿ ಸ್ತರಮೋಡಗಳು ಹುಟ್ಟಿಕೊಳ್ಳುತ್ತವೆ.

 ಸಮುದ್ರ ಇಲ್ಲವೆ ಸರೋವರಗಳ ಮೇಲೆ ಹಾಯ್ದು ಅಧಿಕ ನೀರಿನ ಆವಿಯನ್ನು ಹೊತ್ತು ತರುವ ಗಾಳಿ ತಂಪಾದ ನೆಲದ ಮೇಲೆ ಬೀಸಿ ನಿಧಾನಗೊಂಡಾಗ ವಿಕಿರಣ ಕಾವಳವುಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಇಂಥ ಕಾವಳ ಶರತ್ಕಾಲ ಮತ್ತು ಚಳಿಗಾಲಗಳಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಇದರ ತೀವ್ರತೆ ಸೂರ್ಯೋದವಾದ ತರುಣದಲ್ಲಿ ಒಂದು ಗರಿಷ್ಠ ಮಿತಿಯನ್ನು ಮುಟ್ಟುತ್ತದೆ. ಸೂರ್ಯನ ಉಷ್ಣದಿಂದ ಗಾಳಿಯಲ್ಲಿ ಮಂದ ಚಲನೆಯುಂಟಾಗಿ ಕಾವಳದ ತೀವ್ರತೆ ಬೆಳೆಯಲು ಅನುಕೂಲವಾದ ಪರಿಸ್ಥಿತಿಯುಂಟಾಗುವುದು. ಕಾವಳದ ಆಳ 152.5ಮೀ-304.8ಮೀ.ಗಳಷ್ಟಿರುವುದು ಅಪೂರ್ವ ಘಟನೆಯೇನಲ್ಲ. ಹಗಲಿನ ಉಷ್ಣತೆ ಹೆಚ್ಚಾದಂತೆ   ಕಾವಳ ಚದರಿಹೋಗುತ್ತದೆ. ಅಂದರೆ ನೀರಿನ ಹನಿಗಳು ಆವಿಯಾಗುತ್ತವೆ. ಮೇಲೆ ಸ್ತರ ಮೋಡಗಳಿದ್ದು (ಬೂದು ಅಥವಾ ಬಿಳಿ ಮೋಡದ ತೇಪೆ, ಹರವು ಅಥವಾ ಪದರ) ಮತ್ತೂ ಮೇಲೆ ಉಷ್ಣತೆ ಹೆಚ್ಚುತ್ತ ಹೋಗುವ ಸನ್ನಿವೇಶವುಂಟಾದರೆ ಕಾವಳ ಹೆಚ್ಚು ದಟ್ಟವಾಗಿರುವುದಿಲ್ಲ ಮತ್ತು ಅದು ಹೆಚ್ಚು ಕಾಲ ನಿಲ್ಲುವುದೂ ಇಲ್ಲ. ಕಾರಣ ಈ ಕಾಲದಲ್ಲಿ ವಿಕಿರಣದಿಂದ ಭೂಮಿ ತಂಪಾಗುವ ರಾತ್ರಿ ಕಾಲ ಕಮ್ಮಿಯಾಗುತ್ತದೆ. ನೀರಿನ ಮೇಲೆ ವಿಕಿರಣ ಕಾವಳವುಂಟಾಗುವುದಿಲ್ಲ. ಕಾರಣ ನೀರಿನ ಉಷ್ಣತೆಯ ದೈನಂದಿನ ಏರಿಳಿತ ಅಷ್ಟು ಹೆಚ್ಚಾಗಿರುವುದಿಲ್ಲ.

 ಅದ್ಧಿüವಹನ ಕಾವಳ (ಅಡ್ವೆಕ್ಷನ್ ಫಾಗ್): ತೇವವುಳ್ಳ ಬಿಸಿಯಾದ ಗಾಳಿ ತಂಪಾದ ಭೂಮಿಯ ಮೇಲೆ ಇಲ್ಲವೆ ನೀರಿನ ಮೇಲೆ ಬೀಸುವಾಗ ಅಭಿವಹನ ಕಾವಳವುಂಟಾಗುತ್ತದೆ. ಶರತ್ಕಾಲದಲ್ಲಿ ಮತ್ತು ಚಳಿಗಾಲದಲ್ಲಿ  ಸಮುದ್ರದ ಕಡೆಯಿಂದ ತೇವವುಳ್ಳ ಬಿಸಿಯಾದ ಗಾಳಿ ತಂಪಾದ ಭೂಮಿಯ ಮೇಲೆ ಬೀಸುತ್ತದೆ. ಭೂಮಿಯನ್ನು ಮುಟ್ಟಿದಾಗ ಈ ಗಾಳಿಯ ಉಷ್ಣತೆ ಅದರ ಇಬ್ಬನಿಬಿಂದುವನ್ನು ಮುಟ್ಟಿದರೆ ನೀರಿನ ಆವಿ ಘನೀಭವಿಸಿ ಕಾವಳವುಂಟಾಗುತ್ತದೆ. ಸಮುದ್ರ ಕಾವಳ ಬಹುಮುಖ್ಯವಾದ ಅಧಿವಹನ ಕಾವಳ. ವಸಂತಕಾಲದಲ್ಲಿ ಮತ್ತು ಬೇಸಗೆಯಲ್ಲಿ ಕಾದ ಭೂಮಿಯ ಮೇಲೆ ಹಾಯ್ದು ಸಮುದ್ರದ ಕಡೆಗೆ ಧಾವಿಸುವ ಗಾಳಿಯ ಉಷ್ಣತೆ ಕಡಿಮೆಯಾಗಿ ಅದರ ಇಬ್ಬನಿಬಿಂದುವನ್ನು ತಲುಪಿದಾಗ ಕಾವಳವುಂಟಾಗುತ್ತದೆ. ನವೋಸ್ಕೋಷಿಯ ಮತ್ತು ನ್ಯೂಫೌಂಡ್‍ಲೆಂಡ್ ತೀರದಲ್ಲಿ ಕಾಣಿಸಿಕೊಳ್ಳುವ ವಿಸ್ತಾರವಾದ ಕಾವಳದಂಡೆಗಳು ಅಧಿವಹನ ಕಾವಳದಿಂದಲೇ ಉಂಟಾದವು.

 ಇತರ ಕಾವಳಗಳು: ವಿಕಿರಣ ಮತ್ತು ಅಧಿವಹನ ಕಾವಳಗಳಲ್ಲದೆ ಬೇರೆ ತೆರನಾದ ಕಾವಳಗಳೂ ಉಂಟು. ತೇವವುಳ್ಳ ಗಾಳಿ ಪರ್ವತಗಳನ್ನು ಏರುವಾಗ ಹಿಗ್ಗಿ ತಂಪಾಗುತ್ತದೆ. ಆಗ ಉಷ್ಣತೆ ಅದರ ಇಬ್ಬನಿಬಿಂದುವನ್ನು ಮುಟ್ಟಿದರೆ ಕಾವಳ ಕಾಣಿಸಿಕೊಳ್ಳುತ್ತದೆ. ಇಂಥ ಕಾವಳವನ್ನು ಎತ್ತರದ ಇಳಿಜಾರು ಕಾವಳವೆಂದು ಕರೆಯುತ್ತಾರೆ. ತಂಪಾದ ಗಾಳಿ ಬೆಚ್ಚಗಿರುವ ನೀರಿನ ಮೇಲೆ ಹಾಯುವಾಗ ಉಗಿ ಕಾವಳ (ಸ್ಟೀಮ್‍ಫಾಗ್) ವುಂಟಾಗುತ್ತದೆ. ತಂಪಾದ ಗಾಳಿಯನ್ನು ಸೇರಿದ ನೀರಿನ ಆವಿ ಮರುಕ್ಷಣದಲ್ಲೆ ಘನೀಭವಿಸುವುದರಿಂದ ಇದು ಸಂಭವಿಸುತ್ತದೆ. ಆರ್ಕ್‍ಟಿಕ್ ಸಮುದ್ರದ ಹೊಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಿಮಸ್ಛಟಿಕ ಉಗಿಕಾವಳ. ಶರತ್ಕಾಲದಲ್ಲಿ ಸರೋವರಗಳ ಮತ್ತು ನದಿಗಳ ಸಮೀಪ ಉಗಿಕಾವಳ ಕಾಣಿಸಿಕೊಳ್ಳುವುದುಂಟು. ಮಳೆಯ ಹನಿಗಳು ಗಾಳಿಯನ್ನು ಸಂತೃಪ್ತಗೊಳಿಸುವುದರಿಂದ ಉಂಟಾಗುವ ಕಾವಳವನ್ನು ಬೆಚ್ಚನೆ ಮುಂಚೂಣಿ ಕಾವಳವೆಂದು ಕರೆಯುತ್ತೇವೆ.

 ಅಸ್ತಮ, ಬ್ರಾನ್ಕಾಯ್ಟಸ್, ನ್ಯೂಮೋನಿಯ ಮುಂತಾದ ಕಾಯಿಲೆಯಿಂದ ನರಳುವ ರೋಗಿಗಳ ಮೇಲೆ ಕಾವಳ ತೀವ್ರತರವಾದ ಪರಿಣಾಮವನ್ನುಂಟುಮಾಡುತ್ತದೆ. ಇಂಥ ಜನರು ಅದನ್ನು ನಿವಾರಿಸಿಕೊಳ್ಳಲು ಬೆಚ್ಚನೆ ಉಡುಪು ಧರಿಸಬೇಕು ಮತ್ತು ಬೆಚ್ಚನೆ ಜಾಗದಲ್ಲಿರಬೇಕು. ರೋಗಿಗಳ ಸಂರಕ್ಷಣೆಗಾಗಿ ಯಾವ ಸರ್ಕಾರವೂ ಕಾವಳವನ್ನು ಕೃತಕವಾಗಿ ಚದರಿಸಲು ಹಣ ಮತ್ತು ಕಾಲವನ್ನು ವ್ಯಯಮಾಡುವುದಿಲ್ಲ. ಕೃತಕವಾಗಿ ಕಾವಳವನ್ನು ಚದರಿಸಬೇಕಾದ ಉತ್ಕಟ ಪರಿಸ್ಥಿತಿ ಒದಗಿದುದು ಎರಡನೆ ಮಹಾಯುದ್ದದ ಕಾಲದಲ್ಲಿ. ಆಗ ವಿಮಾನಗಳು ಯಾವ ನಿಲ್ದಾಣವೆಂದರಲ್ಲಿ ಇಳಿಯುವಂತಿರಲಿಲ್ಲ. ಅವು ಇಳಿಯಬೇಕಾದ ಕಡೆ ಓಡುದಾರಿಗಳು (ರನ್‍ವೇ) ಕಾವಳದಿಂದ ಮುಚ್ಚಿಹೋಗಿದ್ದರೆ ಕೃತಕವಾಗಿ ಕಾವಳವನ್ನು ಚದರಿಸದೆ ಬೇರೆ ಮಾರ್ಗವಿರಲಿಲ್ಲ. ಇಂಗ್ಲೆಂಡಿನಲ್ಲಿ ಓಡುದಾರಿಯ ಉದ್ದಕ್ಕೂ ಅನಿಲದೀಪಗಳನ್ನು ಸಾಲಾಗಿ ಉರಿಸಿ ಈ ಕೆಲಸ ಮಾಡಿದರು. ಕೆಲವೇ ಮಿನಿಟುಗಳಲ್ಲಿ 30ಮೀ.ಗಳಷ್ಟು ಎತ್ತರದವರೆಗೆ ಕಾಳವನ್ನು ಚದರಿಸಲು ಸಮರ್ಥವಾದ ವ್ಯವಸ್ಥೆಯನ್ನು ಸೈನಿಕರು ಆಗ ಮಾಡಿದ್ದರು. ರಾಸಾಯನಿಕ ವಿಧಾನಗಳಿಂದ ಕಾವಳವನ್ನು ಚದರಿಸುವುದೂ ಉಂಟು. ಗಾಳಿಯ ಚಲನೆಯಿಲ್ಲದಿದ್ದು, ಆಕಾಶ ನಿರ್ಮಲವಾಗಿದ್ದರೆ ಕಾವಳಕ್ಕೆ ಬದಲಾಗಿ ಇಬ್ಬನಿ (ಡ್ಯೂ) ಮೂಡುತ್ತದೆ.

 ಕಾವಳ ಸಂಜ್ಞೆಗಳು (ಫಾಗ್ ಸಿಗ್ನಲ್ಸ್): ಕಾವಳದಲ್ಲಿ ಸಂಚರಿಸುವ ರೈಲುಗಾಡಿಗಳು, ಹಡಗುಗಳು ಮತ್ತು ವಿಮಾನಗಳಿಗೆ ಅಪಾಯದ ಮುನ್ನೆಚ್ಚರವನ್ನು ಕೊಡಲು ಉಪಯೋಗಿಸುವ ಶಬ್ದ, ಬೆಳಕು ಮತ್ತು ಎಲೆಕ್ಟ್ರಾನಿಕ್ ಸಾಧನಗಳು. ಕಾವಳದಲ್ಲಿ ಸಂಚರಿಸುವ ರೈಲುಗಳು ಒಂದಕ್ಕೊಂದು ಡಿಕ್ಕಿ ಹೊಡೆಯಬಹುದು. ಅಂಥ ಪ್ರಕರಣಗಳನ್ನು ತಪ್ಪಿಸಲು ಮದ್ದನ್ನು ಸಿಡಿಸಿಯೊ ಕಹಳೆಯನ್ನೂದಿಯೋ ಜಾಗಟೆಯನ್ನು ಬಾರಿಸಿಯೋ ಚಾಲಕರಿಗೆ ಎಚ್ಚರಿಕೆ ಕೊಡುತ್ತಾರೆ. ಹಡಗುಗಳು ಕಾವಳದಿಂದ ಮುಚ್ಚಿಕೊಂಡಿರುವ ಬಂಡೆ, ಕೋಡುಗಲ್ಲು ಮುಂತಾದವುಗಳಿಗೆ ಡಿಕ್ಕಿಹೊಡೆಯದಂತೆ ಮುನ್ನೆಚ್ಚರಿಸಲು ಗಂಟೆ ಬಾರಿಸುತ್ತಾರೆ. ಸೈರನ್ನನ್ನು ಕೂಗಿಸುತ್ತಾರೆ. ಕೊಂಬು ಊದುತ್ತಾರೆ. ಆದರೆ ಈ ಶಬ್ದ ಸಾಧನಗಳು ನಂಬಿಕೆಗೆ ಅಷ್ಟು ಅರ್ಹವಾದುವಲ್ಲ. ಕಾರಣ ಶಬ್ದ ಪ್ರಸಾರದ ಮೇಲೆ ಗಾಳಿ ಮತ್ತು ಉಷ್ಣತೆಯ ವ್ಯತ್ಯಾಸ ಗಣನೀಯ ಪ್ರಭಾವವನ್ನು ಬೀರುತ್ತವೆ. ಶಬ್ದ ಒಂದು ಕ್ಷೇತ್ರದಲ್ಲಿ ಬಂದಿಯಾಗಲೂಬಹುದು. ಶಬ್ದದ ಅಲೆಗಳು ಸುಲಭವಾಗಿ ಬಾಗುವುದರಿಂದ ಅಪಾಯದ ದಿಕ್ಕೂ ಸರಿಯಾಗಿ ಗೊತ್ತಾಗುವುದಿಲ್ಲ. ನೀರಿನ ಮೂಲಕ ಕಳುಹಿಸುವ ಶಬ್ದದ ಅಲೆಗಳು ಇವೆಲ್ಲ ಪ್ರಭಾವಗಳಿಗೆ ಒಳಗಾಗುವುದು ಕಡಿಮೆ. ಸಂಜ್ಞೆಗಳನ್ನು ಹಡಗಿನ ಇಕ್ಕೆಲಗಳಲ್ಲಿರುವ ಧ್ವನಿಸಂಗ್ರಾಹಕಗಳು (ಸಾನಿಕ್ ಪಿಕ್‍ಅಪ್ಸ್) ಪತ್ತೆಮಾಡುತ್ತವೆ. ನೀರಿನಲ್ಲಿ ಅಪಾಯದ ಸೂಚನೆಯನ್ನು ರವಾನಿಸಲು ಮತ್ತು ಪತ್ತೆಹಚ್ಚಲು ಬೇಕಾದ ಉಪಕರಣಗಳನ್ನು ಹಡಗುಗಳು ಹೊಂದಿರುತ್ತವೆ.

 ಕಾವಳದಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಇತ್ತೀಚೆಗೆ ರೇಡಿಯೋ ಸಂಜ್ಞಾ ಪ್ರಸಾರಿಗಳನ್ನು (ರೇಡಿಯೋ ಬೀಕನ್ಸ್) ಮತ್ತು ರೇಡಿಯೋ ಕಂಪಾಸುಗಳನ್ನು ಉಪಯೋಗಿಸುತ್ತಿದ್ದಾರೆ. ರೇಡಿಯೋ ಸಂಜ್ಞಾ ಪ್ರಸಾರಿ ನೆಲೆ ರೇಡಿಯೋ ಮತ್ತು ಶಬ್ದದ ಸನ್ನೆಗಳನ್ನು ಒಟ್ಟಿಗೆ ಪ್ರಸಾರಿಸುತ್ತದೆ. ರೇಡಿಯೋ ಸಂಜ್ಞೆ ಮತ್ತು ಶಬ್ದಸಂಜ್ಞೆಗಳು ತಲುಪಿದ ಕಾಲಗಳ ಮಧ್ಯದ ಅವಧಿಯನ್ನು ಶಬ್ದದ ವೇಗದಿಂದ ಗುಣಿಸಿದರೆ ರೇಡಿಯೋ ನೆಲೆಗೂ ಹಡಗಿಗೂ ಇರುವ ದೂರ ಗೊತ್ತಾಗುತ್ತದೆ. ಇದರಿಂದ ನಾವಿಕರಿಗೆ ಅಪಾಯದ ಸಾಮೀಪ್ಯವನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತದೆ. ರೇಡಿಯೋ ಉಪಕರಣಗಳು ಕಾವಳದ ತೀವ್ರತೆಯನ್ನು ಅನುಸರಿಸಿ ಸ್ವಯಂ ಪ್ರೇರಣೆಯಿಂದಲೆ ಎಚ್ಚರಿಕೆಯ ಸಂಜ್ಞೆಗಳನ್ನು ಪ್ರಸರಿಸುತ್ತವೆ. ಇವುಗಳ ಬಳಕೆಯಿಂಧ ನೌಕಾಯಾನ ಹೆಚ್ಚು ಸುರಕ್ಷಿತವಾಗಿದೆ.

(ಎಸ್.ಎ.ಎಚ್.)

(ಪರಿಷ್ಕರಣೆ: ಹೆಚ್.ಆರ್.ಆರ್)