ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಶ್ಯಪ ಮಾತಂಗ

ವಿಕಿಸೋರ್ಸ್ದಿಂದ

ಕಾಶ್ಯಪ ಮಾತಂಗ

  ಬೌದ್ಧಮತವನ್ನು ಚೀನ ದೇಶದಲ್ಲಿ ಪ್ರಚಾರಮಾಡಿದವರಲ್ಲಿ ಅಗ್ರಮಾನ್ಯ. ಮಧ್ಯಭಾರತಕ್ಕೆ ಸೇರಿದವನು. ಬಾಲ್ಯದಿಂದಲೂ ಬೌದ್ಧ ಧರ್ಮದಿಂದ ಆಕರ್ಷಿತನಾಗಿ, ಹೀನಯಾನ ಮತ್ತು ಮಹಾಯಾನ ಪಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ. ವಿದ್ಯಾಭ್ಯಾಸಕ್ಕಾಗಿ ತಕ್ಷಶಿಲೆಗೆ ಹೋಗಿದ್ದ ಈತ ಅಲ್ಲಿಂದ ತನ್ನ ಜೊತೆಗಾರ ಧರ್ಮರತ್ನನೆಂಬ ಬೌದ್ಧ ಸಂನ್ಯಾಸಿಯೊಡನೆ ಮಧ್ಯ ಏಷ್ಯದ ಯೂ-ಚಿ ರಾಜ್ಯಕ್ಕೆ ಹೋದ. ಧರ್ಮಪ್ರಚಾರವೇ ಇವರಿಬ್ಬರ ಗುರಿಯಾಗಿತ್ತು. ಅನಂತರ ಮರಳ್ಗಾಡು ಮತ್ತು ಪರ್ವತಶ್ರೇಣಿಗಳಿಂದ ಕೂಡಿದ ದುರ್ಗಮ ಪ್ರದೇಶದಲ್ಲಿ ಪ್ರಯಾಣಮಾಡಿ ಸು. 65ರಲ್ಲಿ ಲೋಯಾಂಗ್ ನಗರ ತಲಪಿದ. ಆಗ ಚೀನವನ್ನಾಳುತ್ತಿದ್ದ ಚಕ್ರವರ್ತಿ ಮಿಂಗ್ ಟೀ. ಹ್ಯಾನ್ ವಂಶಸ್ಥನಾದ ಆತನಿಗೆ ಬೌದ್ಧ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಅವನು ಭಾರತೀಯ ಯಾತ್ರಿಕರನ್ನು ಸ್ವಾಗತಿಸಿ, ಇವರಿಗಾಗಿ ಲೋಯಾಂಗ್‍ನಲ್ಲಿ 68ರಲ್ಲಿ ಪೂಮಾಸ್ಸೆ ವಿಹಾರವನ್ನು (ಬಿಳಿಕುದುರೆಯ ವಿಹಾರ) ಕಟ್ಟಿಸಿದ. ಆತನ ಪ್ರೋತ್ಸಾಹದಿಂದ ಕಾಶ್ಯಪ ಮಾತಂಗ ಧರ್ಮರತ್ನನ ಸಹಾಯ ಪಡೆದು ಬೌದ್ಧ ಧರ್ಮವನ್ನು ಆ ದೇಶದ ಎಲ್ಲ ಭಾಗಗಳಲ್ಲೂ ಪ್ರಚಾರಮಾಡಿದುದಲ್ಲದೆ ಐದು ಬೌದ್ಧ ಗ್ರಂಥಗಳನ್ನು ಚೀನೀ ಭಾಷೆಗೆ ತರ್ಜುಮೆ ಮಾಡಿದುದಾಗಿ ತಿಳಿದುಬಂದಿದೆ. ಕಾಶ್ಯಪ ಮಾತಂಗ ಸುವರ್ಣಪ್ರಭಾಸಸೂತ್ರವೆಂಬ ಬೌದ್ಧಗ್ರಂಥದ ಮೇಲೆ ವ್ಯಾಖ್ಯಾನ ರಚಿಸಿದ್ದಾನೆ. ಈತ ಭಾಷಾಂತರಿಸಿದ ಗ್ರಂಥಗಳಲ್ಲಿ ನಮಗೆ ದೊರೆತಿರುವುದು 43 ವಿಭಾಗಗಳ ಸೂತ್ರವೆಂಬ ಗ್ರಂಥವೊಂದೇ. ಇದು ಬೌದ್ಧಸಂಹಿತೆಗಳಲ್ಲಿ ಒಂದಲ್ಲ. ಬೌದ್ಧ ಭಿಕ್ಷುಗಳ ಮಾರ್ಗದರ್ಶನಕ್ಕಾಗಿ ಪ್ರಶ್ನೋತ್ತರ ರೂಪದಲ್ಲಿರುವ ಒಂದು ಕೃತಿ. ಈತ ಭಾಷಾಂತರಿಸಿದ ಇತರ ಕೃತಿಗಳು ಪ್ರಾಯಶಃ ಲಲಿತ ವಿಸ್ತರ, ಧರ್ಮ ಸಮುದ್ರ ಕೋಶಸೂತ್ರ, ದಶಭೂಮಿ ಕ್ಲೇಶಚ್ಛೇದಿಕಾ ಸೂತ್ರ, ಜಾತಕ ಮತ್ತು ಪ್ರತಿಮೋಕ್ಷ-ಎಂಬುದು ಪಂಡಿತರ ಅಭಿಪ್ರಾಯ.

(ಬಿ.ಕೆ.ಜಿ.; ಜಿ.ಆರ್.ಆರ್.)