ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್ಸ್‌ಲಿ, ಹೆನ್ರಿ
ಕಿಂಗ್ಸ್ಲಿ, ಹೆನ್ರಿ
1830-1876, ಆಂಗ್ಲ ಕವಿ, ಕಾದಂಬರಿಕಾರ ಮತ್ತು ಪತ್ರಿಕೋದ್ಯಮಿ. ಕಿಂಗ್ಸ್‍ಲಿ, ಚಾಲ್ರ್ಸ್‍ನ (ನೋಡಿ- ಕಿಂಗ್ಸ್‍ಲಿ,-ಚಾಲ್ರ್ಸ್) ತಮ್ಮ. ನಾರ್ದಾಂಪ್ಟನ್ ಷೈರಿನಲ್ಲಿರುವ ಬಾರ್ನಾಕ್‍ನಲ್ಲಿ ಜನವರಿ 2, 1830ರಲ್ಲಿ ಜನಿಸಿದ. ಲಂಡನ್ನಿನ ಕಿಂಗ್ಸ್ ಕಾಲೇಜು ಮತ್ತು ಆಕ್ಸ್‍ಫರ್ಡ್ ಕಾಲೇಜಿನಲ್ಲಿ ವ್ಯಾಸಂಗಮಾಡಿ, ಆಸ್ಟ್ರೇಲಿಯದ ಚಿನ್ನದ ಗಣಿಗಳಲ್ಲಿ ಕೆಲಸಕ್ಕೆ ಹೋದ (1853). ಐದು ವರ್ಷಗಳ ಅನಂತರ ಇಂಗ್ಲೆಂಡಿಗೆ ಬಂದು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದ. ದಿ ರಿಕಲೆಕ್ಷನ್ಸ್ ಆಫ್ ಜಾಫ್ರಿó ಹ್ಯಾಮ್‍ಲಿನ್ ಎಂಬುದು ಈತ ಬರೆದ ಪ್ರಥಮ ಕಾದಂಬರಿ. ಆಸ್ಟ್ರೇಲಿಯದ ಜನಜೀವನ ಇದರ ವಸ್ತು. ರ್ಯಾವನ್ ಷೂ (1861) ಮತ್ತು ದಿ ಹಿಲಿಯರ್ಸ್ ಅಂಡ್ ದಿ ಬರ್ಟನ್ಸ್ (1865) ಎಂಬುವು ಈತನ ಉತ್ತಮ ಹಾಗೂ ಜನಪ್ರಿಯ ಕಾದಂಬರಿಗಳು. ದಿ ಬಾಯ್ ಇನ್ ಗ್ರೆ ಎಂಬುದು ಈತ ಮಕ್ಕಳಿಗಾಗಿ ಬರೆದಿರುವ ಪುಸ್ತಕ. 1869ರಲ್ಲಿ ಎಡಿನ್‍ಬರೊಗೆ ಹೋಗಿ ಲಿಬರಲ್ ಡೆಯೆಲಿ ರೆವ್ಯೂ ಎಂಬ ಪತ್ರಿಕೆಯ ಸಂಪಾದಕನಾದ. ಜರ್ಮನಿ ಮತ್ತು ಫ್ರಾನ್ಸ್‍ಗಳಿಗೆ ನಡೆದ ಯುದ್ಧ ಸಮಯದಲ್ಲಿ ಯುದ್ಧ ವರದಿಗಾರನಾಗಿಯೂ ಕೆಲಸ ಮಾಡಿದ.
(ಕೆ.ಎಸ್.ಬಿ.ಜಿ.)