ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಡಿ

ವಿಕಿಸೋರ್ಸ್ದಿಂದ

ಕಿಡಿ

ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಒಂದು ಕನ್ನಡ ಪತ್ರಿಕೆ; ದ್ವೈವಾರಿಕ. ವಿಶ್ವಕರ್ಣಾಟಕ, ಮಾತೃಭೂಮಿ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮ ಮೊನಚಾದ ವರದಿಗಳಿಗೂ ಲೇಖನಗಳಿಗೂ ಹೆಸರಾಗಿದ್ದ ಪಿ. ಶೇಷಪ್ಪ ಅವರು ಇದರ ಸಂಪಾದಕರಾಗಿದ್ದರು. ಕಿಡಿಯನ್ನು ಪ್ರಾರಂಭಿಸುವ ಮುನ್ನ 1947ರ ಆಗಸ್ಟ್ 15ರಂದು ಅವರು ಸ್ವಾತಂತ್ರ್ಯೋದಯ ಎಂಬ ದ್ವೈವಾರಿಕವನ್ನು ಪ್ರಾರಂಭಿಸಿದ್ದರು. ಹದಿನೈದು ದಿನಗಳ ಬಳಿಕ ಪ್ರಾರಂಭವಾದ ಜವಾಬ್ದಾರಿ ಸರ್ಕಾರ ಚಳವಳಿಗೆ ಪೂರ್ಣ ಬೆಂಬಲ ನೀಡಿ ಅಂದಿನ ಸರ್ಕಾರದ ಆಗ್ರಹಕ್ಕೆ ಅದು ಅನೇಕ ಸಲ ತುತ್ತಾಯಿತು. ನಾನಾ ಬಗೆಯ ಏಳು-ಬೀಳುಗಳಿಗೆ ಒಳಗಾಗಿ ಒಂದು ವರ್ಷಕಾಲ ನಡೆಯಿತು. ಹಳೆಯ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಧಾಪಿತವಾದ ಮೇಲೂ ಶೇಷಪ್ಪನವರ ಸ್ವಾತಂತ್ರ್ಯೋದಯ ಪತ್ರಿಕೆಯ ಸ್ವತಂತ್ರ ಧೋರಣೆ ಕೊನೆಗೊಳ್ಳಲಿಲ್ಲ. ಆಗಿನ ಮೈಸೂರು ಸಂಸ್ಥಾನದ ಪ್ರಥಮ ಜನತಾ ಸರ್ಕಾರದ ಕೆಲವು ನೀತಿ ನಿಲುವುಗಳನ್ನು ನಿರ್ಭಯವಾಗಿ ಟೀಕಿಸಿದ ಆ ಪತ್ರಿಕೆಯಿಂದ ಭಾರಿ ಮೊತ್ತದ ಠೇವಣಿಯನ್ನು ಸರ್ಕಾರ ಕೇಳಿತು. ಠೇವಣಿ ಕೊಡಲಾಗಲಿ, ಮುಚ್ಚಳಿಕೆ ಬರೆದು ಕೊಡಲಾಗಲಿ ಶೇಷಪ್ಪನವರು ಒಪ್ಪಲಿಲ್ಲ. ಕೆಲವು ವಾರಗಳಲ್ಲೇ ಅವರು ಕಿಡಿ ಪತ್ರಿಕೆಯನ್ನು ಹೊರಡಿಸಿದರು.

ರಷ್ಯನ್ ಕ್ರಾಂತಿಯ ನಾಯಕ ಲೆನಿನನ ಇಸ್ಕ್ರಾ ಪತ್ರಿಕೆಯನ್ನು ಶೇಷಪ್ಪನವರು ಮೆಚ್ಚಿಕೊಂಡಿದ್ದರು. ಇಸ್ಕ್ರಾ ಎಂದರೆ ಕಿಡಿ ಎಂದರ್ಥ. ಆದ್ದರಿಂದ ಅವರು ತಮ್ಮ ಪತ್ರಿಕೆಗೂ ಕಿಡಿ ಎಂದು ನಾಮಕರಣ ಮಾಡಿದರು.

 ಪ್ರಕಟಣೆ ಆರಂಭವಾದ ಕೆಲವು ದಿನಗಳಲ್ಲೇ ಏಕೈಕ ರಾಜಕೀಯ ವಾರಪತ್ರಿಕೆಯಾಗಿ ಪರಿವರ್ತನೆಗೊಂಡ ಕಿಡಿ ಜನಪ್ರಿಯತೆ ಗಳಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ರಾಜ್ಯದ ರಾಜಕೀಯಕ್ಕೆ ಮೀಸಲಾಗಿದ್ದ ಕಿಡಿ ಅಂದಿನ ಸರ್ಕಾರದ ಮೇಲೆ ಹಾಗೂ ರಾಜಕೀಯದ ಮೇಲೆ ಪ್ರಭಾವ ಬೀರುತ್ತಿತ್ತು. ಪತ್ರಿಕೆ ಸತತವಾಗಿ ಕಾಂಗ್ರೆಸ್ ವಿರೋಧಿ ಧೋರಣೆಯನ್ನೇ ತಳೆದಿತ್ತು. 1948ರ ಪೋಲೀಸ್ ಮುಷ್ಕರದ ಸಂದರ್ಭದಲ್ಲಿ ಮತ್ತು 1950ರ ವಿಮಾನ ಕಾರ್ಖಾನೆಯ ಕೆಲಸಗಾರರ ಮುಷ್ಕರದ ಸಂದರ್ಭದಲ್ಲಿ ಶೇಷಪ್ಪನವರು ಕಾರಾಗೃಹವಾಸವನ್ನನುಭವಿಸಿದರು.

 ರಾಜಕೀಯ ಮತ್ತು ಆಡಳಿತದ ಒಳಮರ್ಮವನ್ನು ಶೋಧಿಸಿ ರಹಸ್ಯಗಳನ್ನು ಹೊರಗೆಡಹುತ್ತಿದ್ದ ಕಿಡಿಪತ್ರಿಕೆಯ ಪ್ರತಿ ಸಂಚಿಕೆಯ ಪ್ರಕಟಣೆಯನ್ನೂ ಆಸಕ್ತಿಯಿಂದ ಎದಿರು ನೋಡುತ್ತಿದ್ದರು. ಅದನ್ನು ಕೊಂಡು ಓದುತ್ತಿದ್ದರು. ಜನಪ್ರಿಯ ರಾಜಕೀಯ ವ್ಯಂಗ್ಯಚಿತ್ರಗಳು ಕಿಡಿಯ ಒಂದು ವೈಶಿಷ್ಟ್ಯ. ಶೇಷಪ್ಪ ಅವರ ಹರಿತವಾದ ಹಾಗೂ ನಿರ್ದಾಕ್ಷಿಣ್ಯವಾದ ಖಾರದ ಬರಹಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದುವು.

 ಕಿಡಿ ತುಳಿದ ಕಾಂಗ್ರೆಸ್ ವಿರೋಧಿ ಬರಹಗಳು 1952ರ ತರುವಾಯ ಅಧಿಕಾರಕ್ಕೆ ಬಂದ ಸರ್ಕಾರವನ್ನು ಕೆರಳಿಸಿದುವು. ಕಿಡಿಯಲ್ಲಿ ಕಾಣಿಸಿಕೊಂಡ ಲೇಖನಗಳ ವಿರುದ್ಧ ಹತ್ತಾರು ಮೊಕದ್ದಮೆಗಳನ್ನು ಹೂಡಲಾಯಿತು. ಒಂದೊಂದು ಮೊಕದ್ದಮೆಯಲ್ಲೂ ಮುದ್ರಕರಿಂದ ಮೂರು ಸಾವಿರ ರೂ. ಸಂಪಾದಕರು ಮತ್ತು ಪ್ರಕಾಶಕರಿಂದ ಮೂರು ಸಾವಿರ ರೂ. ಠೇವಣಿ ಕೇಳಲಾಯಿತು. ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವುದಕ್ಕೆ ಒಂದೆರಡು ದಿನಗಳಿಗೆ ಮೊದಲು ಎಲ್ಲ ಮೊಕದ್ದಮೆಗಳನ್ನೂ ಸರ್ಕಾರ ವಾಪಸು ತೆಗೆದುಕೊಂಡಿತು.

 ಕಿಡಿ ಪತ್ರಿಕೆ ಸರ್ಕಾರದ ರಹಸ್ಯಗಳನ್ನು ಬಯಲು ಮಾಡುತ್ತಿದ್ದರೂ ಅದರ ಸಂಪಾದಕರು ಅವುಗಳ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಳ್ಳದೆ ಪ್ರಕಟಿಸುತ್ತಿರಲಿಲ್ಲ. ಇದರಿಂದ ಶೇಷಪ್ಪನವರು ತಮ್ಮ ವಿರೋಧಿಗಳ ಗೌರವಕ್ಕೂ ಪಾತ್ರರಾಗಿದ್ದರು.

 10” 13” ಆಕಾರದ ನಾಲ್ಕು ಪುಟಗಳ ಸಂಚಿಕೆಯ ಬಿಡಿ ಪ್ರತಿಯ ಬೆಲೆ ಮೊದಲು ಆರು ಕಾಸು. ಅದು ಸಾಮಾನ್ಯ ಓದುಗನ ಕಿಸೆಗೂ ನಿಲುಕುವಂತಿರಬೇಕೆಂಬುದು ಅವರ ಉದ್ದೇಶವಾಗಿದ್ದುದರಿಂದ ಅದರ ಬೆಲೆಯನ್ನು ಎಂದೂ ಒಂದು ಆಣೆಗಿಂತ ಹೆಚ್ಚು ಏರಿಸಲೇ ಇಲ್ಲ. ಪೈಸೆ ಚಲಾವಣೆಗೆ ಬಂದ ಮೇಲೆ ಅದರ ಬೆಲೆ ಏಳು ಪೈಸೆ ಆಗಿತ್ತು.

 ಸರ್ಕಾರದ ಒಂದು ಜಾಹೀರಾತನ್ನೂ ಪ್ರಕಟಿಸದಿದ್ದುದು ಕಿಡಿಯ ಇನ್ನೊಂದು ವೈಶಿಷ್ಟ್ಯ. ಸರ್ಕಾರ ಅದಕ್ಕೆ ಜಾಹೀರಾತನ್ನು ಕೊಡಲೂ ಇಲ್ಲ; ಶೇಷಪ್ಪನವರು ಅಪೇಕ್ಷಿಸಲೂ ಇಲ್ಲ.

 1963 ಜನವರಿ 2ರಂದು ಶೇಷಪ್ಪನವರು ತಮ್ಮ 44ನೆಯ ವಯಸ್ಸಿನಲ್ಲಿ ತೀರಿಕೊಂಡರು.

 ದೇವನಹಳ್ಳಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿದ್ದ ಶೇಷಪ್ಪ ಅವರು ಪತ್ರಿಕೋದ್ಯಮವನ್ನೇ ನಂಬಿದ್ದರು. ತಮ್ಮ ಅನೇಕ ಆಕ್ಷೇಪಾರ್ಹ ಬರಹಗಳಿಗಾಗಿ ಅವರು ಹಲವು ಕಷ್ಟ ನಿಷ್ಠುರಗಳ ಜೊತೆಗೆ ಒಂದೆರಡು ಸಲ ತುರಂಗವಾಸವನ್ನೂ ಅನುಭವಿಸಿದರು. ಕೆಲವೊಮ್ಮೆ ಭೂಗತರಾಗಿಯೂ ಇರಬೇಕಾಗಿತ್ತು.

 ಹುಟ್ಟು, ಪತ್ರಿಕೋದ್ಯಮಿಯಾಗಿದ್ದ ಶೇಷಪ್ಪ ಮತ್ತು ಅವರ ಕಿಡಿ ಬೇರೆಬೇರೆಯಾಗಿರಲಿಲ್ಲ. ಅವರು ಕಿಡಿ ಶೇಷಪ್ಪ ಎಂದೇ ಹೆಸರು ಗಳಿಸಿದ್ದರು. ಶೇಷಪ್ಪನವರ ಅನಂತರ ಆ ಪತ್ರಿಕೆ ಅವರ ಕಿಡಿಯಾಗಿಯೇ ಉಳಿಯುವುದು ಸಾಧ್ಯವಿರಲಿಲ್ಲ.

           

   (ಎಸ್.ಪಿ.ಆರ್.)