ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಡ್, ವಿಲಿಯಂ
ಕಿಡ್, ವಿಲಿಯಂ
1645-1701. ಕಡಲು ದರೋಡೆಗಾರ. ಕ್ಯಾಪ್ಟನ್ ಕಿಡ್ ಎಂದು ಪ್ರಸಿದ್ಧ. ಈತ ಸ್ಕಾಟ್ಲೆಂಡಿನಲ್ಲಿ ಜನಿಸಿದ. ಈ ಕಸಬು ಹಿಡಿದಿದ್ದುದು 1689ರಿಂದ. ಫ್ರೆಂಚ್‍ರ ವಿರುದ್ಧ ಬ್ರಿಟಿಷ್ ಸರ್ಕಾರದಿಂದ ಸನ್ನದು ಪಡೆದು ವೆಸ್ಟ್ ಇಂಡೀಸ್ ಮತ್ತು ಉತ್ತರ ಅಮೇರಿಕನ್ ತೀರ ಪ್ರದೇಶಗಳಲ್ಲಿದ್ದ ಹಡಗಿನ ನಾಯಕನಾಗಿದ್ದ. ಈಸ್ಟ್ ಇಂಡಿಯಾ ಕಂಪನಿಯ ಹಡಗುಗಳನ್ನು ಕಡಲು ದರೋಡೆಗಾರರು ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಪೀಡಿಸುತ್ತಿದ್ದುದನ್ನು ತಪ್ಪಿಸಲು ಬ್ರಿಟಿಷ್ ಸರ್ಕಾರ ಈತನನ್ನೂ 1695ರಲ್ಲಿ ಅಧಿಕೃತವಾಗಿ ನೇಮಿಸಿತು. ಈತ 1695ರ ಜುಲೈ ನಾಲ್ಕರಂದು ಅಡ್ವೆಂಚರ್ ಗ್ಯಾಲಿ ಎಂಬ ಹಡಗಿನಲ್ಲಿ ನ್ಯೂಯಾರ್ಕಿಗೆ ಬಂದು ಅಲ್ಲಿ ಹಲವರನ್ನು ತನ್ನ ಹಡಗಿಗೆ ಸೇರಿಸಿಕೊಂಡು 1969ರ ಡಿಸೆಂಬರಿನಲ್ಲಿ ಗುಡ್‍ಹೋಪ್ ಭೂಶಿರವನ್ನು ಬಳಸಿ ಮಡಗಾಸ್ಕರ್ ದ್ವೀಪಕ್ಕೆ ಹೊರಟರೂ ಕ್ರಮೇಣ ಕಡಲು ದರೋಡೆಗಾರರ ಹಾದಿಯನ್ನು ಬಿಟ್ಟು. 1697ರ ಫೆಬ್ರವರಿಯಲ್ಲಿ ಕೋಮಾರೊ ದ್ವೀಪಗಳಿಗೆ ಹೋದ. ಬ್ರಿಟಿಷ್ ಸರ್ಕಾರದೊಡನೆ ಮಾಡಿಕೊಂಡ ಕರಾರಿನ ಪ್ರಕಾರ ವರಮಾನವನ್ನು ತರದಿದ್ದರೆ ಇವನಿಗೂ ನಾವಿಕರಿಗೂ ಸಂಬಳ ಕೊಡುವಂತಿರಲಿಲ್ಲ. ಆದ್ದರಿಂದ ಈತ ಕೊಳ್ಳೆ ಹೊಡೆಯಲು ತೀರ್ಮಾನಿಸಿದ. 1697ರ ಆಗಸ್ಟಿನಲ್ಲಿ ಎಮೆನ್‍ನಿಂದ ಬರುತ್ತಿದ್ದ ನೌಕೆಯ ಮೇಲೆ ದಾಳಿ ಮಾಡಿ ವಿಫಲನಾದರೂ ಅನಂತರ ಹಲವು ಸಣ್ಣ ಹಡಗುಗಳನ್ನು ವಶಪಡಿಸಿಕೊಂಡ. 1967ರ ಅಕ್ಟೋಬರಿನಲ್ಲಿ ಒಂದು ಡಚ್ ಹಡಗನ್ನು ಆಕ್ರಮಣ ಮಾಡಲು ಒಪ್ಪದಿದ್ದುದರಿಂದ ಇವನ ನಾವಿಕರು ದಂಗೆ ಏಳುವುದರಲ್ಲಿದ್ದಾಗ ಪರಸ್ವರ ವಾದದಲ್ಲಿ ಕೋಪಗೊಂಡು ವಿಲಿಯಂ ಮೂರ್ ಎಂಬ ತನ್ನ ಫಿರಂಗಿ ಅಧಿಕಾರಿಯನ್ನು ಗಾಯಗೊಳಿಸಿ ಅವನ ಮರಣಕ್ಕೆ ಕಾರಣನಾದ.
1698ರ ಜನವರಿ 30ರಂದು ಆರ್ಮೇನಿಯನರ ಕ್ವೆಡಾಫ್ ಮರ್ಚೆಂಟ್ ಎಂಬ ಹಡಗನ್ನು ವಶಪಡಿಸಿಕೊಂಡ. ಇದು ಕಿಡ್ಡನ ದರೋಡೆಗಳಲ್ಲಿ ಅತ್ಯಂತ ಪ್ರಸಿದ್ಧವಾದ್ದು, ಅತ್ಯಂತ ಅಮೂಲ್ಯವಾದ್ದು. ಸಮುದ್ರಯಾನಕ್ಕೆ ನಿಷ್ಟ್ರಯೋಜಕವಾಗಿದ್ದ ತನ್ನ ಅಡ್ವೆಂಚರ್ ಗ್ಯಾಲಿಯನ್ನು ನಾಶಪಡಿಸಿ ಕ್ವೆಡಾಫ್ ಮರ್ಚೆಂಟ್‍ನಲ್ಲಿ ಪ್ರಯಾಣ ಬೆಳೆಸಿದ. ಮಡಗಾಸ್ಕರ್ ದ್ವೀಪಕ್ಕೆ ಭೇಟಿಕೊಟ್ಟು ವೆಸ್ಟ್ ಇಂಡೀಸಿನ ಆಂಗ್ವಿಲ ದ್ವೀಪವನ್ನು ಏಪ್ರೀಲ್ 1699ರಲ್ಲಿ ತಲುಪಿದಾಗ, ತನ್ನನ್ನು ಕಡಲುದರೋಡೆಗಾರನೆಂದು ಅಪಾದಿಸಲಾಗಿದೆಯೆಂದು ತಿಳಿಯಿತು. ಕ್ವೆಡಾಫ್ ಮರ್ಚೆಂಟ್ ನೌಕೆಯನ್ನು ಬಿಟ್ಟು ಆಂಟೋನಿಯೊ ಎಂಬ ಹೊಸ ಹಡಗನ್ನು ಕೊಂಡು ನ್ಯೂ ಇಂಗ್ಲೆಂಡಿಗೆ ಹೋದ. ತಾನು ನಿರಪರಾಧಿಯೆಂಬುದನ್ನು ನ್ಯೂಯಾರ್ಕಿನ ಗವರ್ನರ್ ಬೆಲ್ಲೋಮೋಂಟಿನ ಮುಂದೆ ಸ್ಥಾಪಿಸಲು ಮಾಡಿದ ಪ್ರಯತ್ನದಲ್ಲಿ ಕಿಡ್ ಸಫಲನಾಗಲಿಲ್ಲ. ಅನಂತರ ಕಿಡ್‍ನನ್ನು ಇಂಗ್ಲೆಂಡಿಗೆ ಕಳುಹಿಸಲಾಯಿತು. ವಿಲಿಯಂ ಮೂರು ಕೊಲೆ ಮತ್ತು ಕಡಲು ದರೋಡೆಯ ಇತರ ಐದು ಆಪಾದನೆಗಳನ್ನು ಇವನ ಮೇಲೆ ಹೊರಿಸಿ 1701 ರ ಮೇ 9-10 ರಂದು ಇವನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಈತ ತಪ್ಪಿತಸ್ಥನೆಂಬುದು ರುಜುವಾಯಿತು. 1701ರ ಮೇ 23 ರಂದು ಕಿಡ್ ವಿಲಿಯಂನನ್ನು ಮರಣದಂಡೆನೆಗೆ ಗುರಿಪಡಿಸಲಾಯಿತು.
(ಎ.ವಿ.ವಿ.)