ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿತ್ತೂರು

ವಿಕಿಸೋರ್ಸ್ ಇಂದ
Jump to navigation Jump to search

ಕಿತ್ತೂರು

 ಬೆಳಗಾಂವಿ ಜಿಲ್ಲೆಯಲ್ಲಿರುವ ಒಂದು ಊರು. ಇಂದು ಇದು ಸಣ್ಣ ಗ್ರಾಮವಾಗಿದ್ದರೂ ಹಿಂದೆ ಕನ್ನಡನಾಡಿನ ಮಹಾನಗರಗಳಲ್ಲೊಂದಾಗಿತ್ತು. 12ನೆಯ ಶತಮಾನದಿಂದ ಕಿತ್ತೂರು ಎಂಬ ಹೆಸರು ಬಳಕೆಯಲ್ಲಿದೆ. ಗೋವೆಯ ಕದಂಬ ವಂಶದ ಮೂರನೆಯ ಜಯಕೇಶಿಯ ಕಾಲದ ಕನ್ನಡ ಶಾಸನವೊಂದು ಇಲ್ಲಿಯ ಬಸವದೇವಾಲಯದಲ್ಲಿದೆ. ಇದೇ ಇಲ್ಲಿ ದೊರಕಿರುವ ಪ್ರಾಚೀನವಾದ ಮತ್ತು ಈ ಊರನ್ನು ಹೆಸರಿಸುವ ಶಾಸನ. 1534ರಲ್ಲಿ ಬೆಳಗಾಂವಿಯ ನವಾಬ ಅಸದ್‍ಖಾನನ ಮಿತ್ರ ಯೂಸುಫ್ ಖಾನನ ಜಹಗಿರಿಯಲ್ಲಿ ಕಿತ್ತೂರು ಸೇರಿತು. 1586ರ ಸುಮಾರಿನಿಂದ ಇಲ್ಲಿ ದೇಸಾಯರ ಆಡಳಿತ ಪ್ರಾರಂಭವಾಯಿತು. ಈಮನೆತನದ ಸ್ಥಾಪಕರಾದ ಹಿರೇಮಲ್ಲ ಮತ್ತು ಚಿಕ್ಕಮಲ್ಲ ಮಲೆನಾಡಿನ ಗೌಡಕುಲಕ್ಕೆ ಸೇರಿದ ಸಹೋದರರು. ಇವರು ಬಿಜಾಪುರದ ಸೈನ್ಯದೊಂದಿಗೆ ಇಲ್ಲಿಗೆ ಬಂದು ಸಂಪಗಾವ್ ಎಂಬಲ್ಲಿ ನೆಲೆಸಿದರು. ಕಾಲಕ್ರಮದಲ್ಲಿ ದೊಡ್ಡಮಲ್ಲ ಬಿಜಾಪುರ ಸೈನ್ಯಕ್ಕೆ ಸಲ್ಲಿಸಿದ ಅಮೋಘ ಸೇವೆಯಿಂದ ಸರದೇಶಮುಖಿ ದತ್ತಿಯನ್ನು ಪಡೆದ. ಬಿಜಾಪುರದ ಸುಲ್ತಾನರ ಅವನತಿಯ ಅನಂತರ ಕಿತ್ತೂರು ಸವಣೂರಿನ ನವಾಬರ ಅಧೀನವಾಯಿತು. ಆದರೆ 1746ರಲ್ಲಿ ಸವಣೂರಿನ ನವಾಬ ಕಿತ್ತೂರನ್ನು ಮರಾಠರ ವಶಕ್ಕೆ ಕೊಡಬೇಕಾಗಿತ್ತು. 1778ರಲ್ಲಿ ಹೈದರೆ ಆಲಿ ಕಿತ್ತೂರು ದೇಸಾಯಿಯನ್ನು ಸೋಲಿಸಿ ಅವನಿಂದ ಕಪ್ಪಕಾಣಿಕೆಯನ್ನು ವಸೂಲಿ ಮಾಡಿದರೂ ಮುಂದಿನ ವರ್ಷದಲ್ಲಿ ಪರಶುರಾಮಭಾವು ಅದನ್ನು ವಶಪಡಿಸಿಕೊಂಡು ದೇಸಾಯಿಯನ್ನು ಸೆರೆಹಿಡಿದ. ಇತ್ತಕಡೆಯಿಂದ ಟಿಪ್ಪೂಸುಲ್ತಾನ್ ಕಿತ್ತೂರಿನ ಮೇಲೆ ಯುದ್ಧ ಮಾಡಿ ಆಗಿನ ದೇಸಾಯಿ ಮಲ್ಲ ಸರ್ಜನನ್ನು ಬಂಧಿಸಿ ಕಿತ್ತೂರಿನಲ್ಲಿ ಮೈಸೂರಿನ ಸೈನ್ಯದ ಭಾಗವೊಂದನ್ನು ಇರಿಸಿದ. ಕಾಲಕ್ರಮದಲ್ಲಿ ಕಿತ್ತೂರು ಮರಾಠರ ವಶವಾಯಿತು. ಪರಶುರಾಮಭಾವು ಕಿತ್ತೂರಿನಲ್ಲಿ ಮಮ್ಲತ್‍ದಾರನನ್ನು ನಿಯಮಿಸಿ ಅದನ್ನು ಧಾರವಾಡಕ್ಕೆ ಅಧೀನವನ್ನಾಗಿ ಮಾಡಿದ. 1802ರಲ್ಲಿ ಮಲ್ಲಸರ್ಜ ಪೇಷ್ವೆಗಳಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರೂ ವೆಲೆಸ್ಲಿಯ ಮೈತ್ರಿಯನ್ನು ಬೆಳೆಸಿಕೊಂಡು ಮರಾಠರಿಂದ ಸ್ವತಂತ್ರನಾಗಲು ಯೋಚಿಸಿ ವೆಲೆಸ್ಲಿಯ ಯುದ್ಧಗಳಲ್ಲಿ ಸಹಾಯಮಾಡಿದ. ಇದರಿಂದ ಸಂತೋಷಗೊಂಡ ವೆಲೆಸ್ಲಿ ಮರಾಠರಿಗೂ ಮಲ್ಲಸರ್ಜನಿಗೂ  ಮೈತ್ರಿ ಏರ್ಪಡಿಸಿದ. ಇದರ ಪ್ರಕಾರ ಮಲ್ಲಸರ್ಜ ಸ್ವತಂತ್ರವಾಗಿ ಆಳಿದರೂ ಪೇಷ್ವೆಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಬೇಕಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಮಲ್ಲಸರ್ಜ ಮರಾಠರಿಂದ ಸೆರೆಯಾಗಿ ಪುಣೆಯ ಕಾರಾಗೃಹದಲ್ಲಿ ಬಂಧಿಯಾದ. 1816ರಲ್ಲಿ ಬಂಧಮುಕ್ತನಾದ ಮಲ್ಲಸರ್ಜ ಕಿತ್ತೂರಿಗೆ ಹಿಂದಿರುಗುವ ಮಾರ್ಗದಲ್ಲಿ ಮೃತನಾದ. ಕಿತ್ತೂರಿನ ಅರಸರಲ್ಲಿ ಮಲ್ಲಸರ್ಜನೇ ಅತ್ಯಂತ ಮುಖ್ಯನಾದವ.

 ಮಲ್ಲಸರ್ಜನ ಅನಂತರ ಅವನ ಜ್ಯೇಷ್ಠಪುತ್ರ ಶಿವಲಿಂಗರುದ್ರಸರ್ಜ ದೊರೆಯಾದ. ಇವನ ಕಾಲದಲ್ಲಿ ಬ್ರಿಟಿಷರಿಗೂ ಮರಾಠರಿಗೂ ವೈಮನಸ್ಯ ವೃದ್ಧಿಯಾಗಿ, 1818ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಶಿವಲಿಂಗರುದ್ರಸರ್ಜ ಬ್ರಿಟಿಷರಿಗೆ ವಿಶೇಷವಾಗಿ ಸಹಾಯ ಮಾಡಿದ. ಇದರಿಂದ ಸಂತೋಷಗೊಂಡ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರನ್ನು  ಜಹಗೀರಿಯಾಗಿ ಕೊಟ್ಟರು. ಶಿವಲಿಂಗರುದ್ರಸರ್ಜ ಬ್ರಿಟಿಷರೊಡನೆ ಮೈತ್ರಿಯಿಂದಿದ್ದು 1824 ರವರೆಗೆ ರಾಜ್ಯವಾಳಿದ. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ಶಿವಲಿಂಗಪ್ಪನೆಂಬ ಬಾಲಕನನ್ನು ದತ್ತು ಸ್ವೀಕಾರಮಾಡಿದರೂ ಅವನು ಸಂಸ್ಥಾನದ ರಾಜನಾಗಲು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಒಪ್ಪಲಿಲ್ಲ. ಮಲ್ಲಸರ್ಜನ ವಿಧವೆ ಚೆನ್ನಮ್ಮನೂ ಇತರರೂ ಬ್ರಿಟಿಷ್ ಅಧಿಕಾರಿಗಳನ್ನು ಬಹುವಾಗಿ ಪ್ರಾರ್ಥಿಸಿದರೂ ಅದರಿಂದ ಉಪಯೋಗವಾಗಲಿಲ್ಲ. ಥ್ಯಾಕರೆಯ ಕುತಂತ್ರವನ್ನು ಗವರ್ನರ್ ಎಲ್‍ಫಿನ್‍ಸ್ಟನನೂ ಅರ್ಥಮಾಡಿಕೊಳ್ಳಲಿಲ್ಲ. ಸಂತತಿಹೀನವಾದ ಕಿತ್ತೂರು ಸಂಸ್ಥಾನ ಬ್ರಿಟಿಷರ ಆಳ್ವಿಕೆಗೆ ಒಳಪಡಬೇಕೆಂದು ಬ್ರಿಟಿಷರು ಹಠಹಿಡಿದರು. ಕಿತ್ತೂರಿನ ಅಭಿಮಾನಿ ಪ್ರಜೆಗಳು ತಮ್ಮ ಸಂಸ್ಥಾನ ಬ್ರಿಟಿಷರಿಗೆ ಸೇರುವುದನ್ನು ತಪ್ಪಿಸಲು ಚೆನ್ನಮ್ಮನ ನೇತೃತ್ವದಲ್ಲಿ ಪ್ರಾಣಾರ್ಪಣೆ ಮಾಡಲು ಸಿದ್ಧರಾದರು. ಚೆನ್ನಮ್ಮನ ನೇತೃತ್ವದಲ್ಲಿ ಬ್ರಿಟಿಷರಿಗೂ ಕಿತ್ತೂರು ಸೈನ್ಯಕ್ಕೂ 1824ರ ಅಕ್ಟೋಬರ್ 23ರಂದು ಯುದ್ಧ ನಡೆಯಿತು. ಯೋಧರು ಥ್ಯಾಕರೆಯನ್ನೂ ಅವನ ಸಹಾಯಕರನ್ನೂ ಕೊಂದರು. ನೂರಾರು ಬ್ರಿಟಿಷ್ ಸೈನಿಕರು ಸೆರೆ ಸಿಕ್ಕಿದರು. ಇದರಿಂದ ಕ್ರೋಧಗೊಂಡ ಬ್ರಿಟಿಷರು ಹೇಗಾದರೂ ಚೆನ್ನಮ್ಮನನ್ನು ಸೋಲಿಸಿ, ಕಿತ್ತೂರನ್ನು ವಶಮಾಡಿಕೊಳ್ಳಲು ನಿರ್ಧರಿಸಿದರು. ಮೈಸೂರು, ಶೋಲಾಪುರ ಮತ್ತು ಇತರ ದಂಡು ಪ್ರದೇಶಗಳಿಂದ ಬ್ರಿಟಿಷ್ ಸೈನ್ಯಗಳು ಬಂದು ಕಿತ್ತೂರಿನಲ್ಲಿ ಸೇರಿಕೊಂಡವು. ಶೂರಳಾದರೂ ಶಾಂತಿಪ್ರಿಯಳಾದ ಚೆನ್ನಮ್ಮ ರಕ್ತಪಾತವನ್ನು ನಿಲ್ಲಿಸುವ ಸಲುವಾಗಿ ಗವರ್ನರ್ ಎಲ್‍ಫಿನ್‍ಸ್ಟನನಿಗೆ ಪತ್ರ ಬರೆದು ಥ್ಯಾಕರೆಯ ಕುತಂತ್ರವನ್ನು ವಿವರಿಸಿದಳು. ಪ್ರಯೋಜನವಾಗಲಿಲ್ಲ. ಕಮಿಷನರಾಗಿದ್ದ ಚಾಪ್ಲಿನನ ಮೋಸದ ಮಾತನ್ನು ನಂಬಿ, ಸೆರೆಯಲ್ಲಿದ್ದ ಬ್ರಿಟಿಷ್‍ಯೋಧರನ್ನೆಲ್ಲ ಚೆನ್ನಮ್ಮ ವಿಮೋಚನೆಗೊಳಿಸಿದಳು. ಚಾಪ್ಲಿನ್ ಚೆನ್ನಮ್ಮನ ಮೇಲೆ ಯುದ್ಧ ಹೂಡಿದ. ಬ್ರಿಟಿಷ್ ಸೈನ್ಯಕ್ಕೂ ಕಿತ್ತೂರಿನ ಸೈನ್ಯಕ್ಕೂ ನಡೆದ ಘೋರ ಕದನದಲ್ಲಿ ಸ್ವತಃ ಚೆನ್ನಮ್ಮನೇ ಸೇನಾಧಿಪತ್ಯವನ್ನು ವಹಿಸಿಕೊಂಡು ಯುದ್ಧವನ್ನು ಎಚ್ಚರಿಕೆಯಿಂದ ನಿರ್ದೇಶಿಸಿದಳು. ದೇಶಾಭಿಮಾನಿಗಳೂ ಯೋಧರೂ ಆದ ಕಿತ್ತೂರಿನ ಸೈನಿಕರು ತಾಯಿನಾಡಿನ ರಕ್ಷಣೆಗೋಸ್ಕರ ಕಾದಾಡಿದರೂ ಹೆಚ್ಚು ಸಂಖ್ಯೆಯಲ್ಲಿದ್ದ ಮತ್ತು ಒಳ್ಳೆಯ ಆಯುಧಗಳನ್ನು ಹೊಂದಿದ್ದ ಬ್ರಿಟಿಷ್ ಸೈನ್ಯದ ಮುಂದೆ ಸೋತರು. ಕೊನೆಗೆ ಡಿಸೆಂಬರ್ 3ನೆಯ ದಿನಾಂಕದಂದು ಕಿತ್ತೂರು ಕೋಟೆ ಬ್ರಿಟಿಷರ ವಶವಾಯಿತು. ರಾಣಿ ಚೆನ್ನಮ್ಮ ಮತ್ತು ಅವಳ ಬಂಧುಗಳು ಬ್ರಿಟಿಷರ ಬಂಧಿಗಳಾದರು. ಅವಳನ್ನು ಬೈಲಹೊಂಗಲದ ಕಾರಗೃಹದಲ್ಲಿಡಲಾಯಿತು.

 ಕಿತ್ತೂರಿನ ಪ್ರಜೆಗಳಲ್ಲಿ ಅಡಗಿದ್ದ ದೇಶಾಭಿಮಾನ ನಶಿಸಿಹೋಗದೆ ಮತ್ತೊಂದು ಸ್ವಾತಂತ್ರ್ಯ ಸಮರಕ್ಕೆ ಎಡೆಮಾಡಿಕೊಟ್ಟಿತು. ಸಂಗೊಳ್ಳಿ ರಾಯಣ್ಣನೆಂಬ ಸಾಮಾನ್ಯ ಪ್ರಜೆ ಇದರ ಮುಖಂಡ. ತನ್ನ ಶೂರಮಿತ್ರರ ಸಹಾಯದಿಂದ ಒಂದು ಸಣ್ಣ ಸೈನ್ಯವನ್ನು ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ಧನಾದ. ದೇಸಾಯಿಯ ದತ್ತುಪುತ್ರ ಶಿವಲಿಂಗಪ್ಪನನ್ನು ಕಿತ್ತೂರಿನ ರಾಜನಾಗಿ ಮಾಡುವ ಉದ್ದೇಶವನ್ನು ಸಾರಿ ಬ್ರಿಟಿಷರ ಸರ್ಕಾರಿ ಕಟ್ಟಡಗಳನ್ನು ಸುಟ್ಟುಹಾಕಿ, ಕೈಗೆ ಸಿಕ್ಕಿದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದ. ಜನಪ್ರಿಯ ರಾಯಣ್ಣ ಸುಮಾರು ನಾಲ್ಕು ತಿಂಗಳುಗಳ ಕಾಲ ಬ್ರಿಟಿಷರ ಕಣ್ಣಿಗೆ ಬೀಳದೆ ವಿಧ್ವಂಸಕ ಕಾರ್ಯಗಳಲ್ಲಿ ತೊಡಗಿದ. ಇದರಿಂದ ಬ್ರಿಟಿಷರು ತತ್ತರಿಸಿದರು. ಆದರೆ ಹಣದ ಆಸೆಯಿಂದ ರಾಯಣ್ಣನನ್ನು ಪತ್ತೆ ಹಚ್ಚುವುದರಲ್ಲಿ ಕೆಲವರು ಸಹಾಯ ಮಾಡಿದರು. ರಾಯಣ್ಣ ಸೆರೆ ಸಿಕ್ಕಿದಾಗ ಬ್ರಿಟಿಷರು ರಾಯಣ್ಣನನ್ನು ದೇಶದ್ರೋಹಿಯೆಂದು ಗಲ್ಲಿಗೇರಿಸಿದರು. ಕಿತ್ತೂರು ಬ್ರಿಟಿಷರ ವಶವಾಯಿತು.

 ಕಿತ್ತೂರು ಇದು ಸಣ್ಣ ಗ್ರಾಮವಾಗಿದ್ದರೂ ಚೆನ್ನಮ್ಮ, ರಾಯಣ್ಣ ಮುಂತಾದ ವೀರರ ಕಥೆಯನ್ನು ಹೇಳಲು ಅಲ್ಲಿ ಪಾಳುಬಿದ್ದಿರುವ ಭವ್ಯ ಕೋಟೆಯ ಅವಶೇಷಗಳು ಇಂದಿಗೂ ನಿಂತಿವೆ. ಕೋಟೆಯ ಮಣ್ಣಿನ ಗೋಡೆ ಏಳು ಅಡಿ ದಪ್ಪವಿದೆ. ಎತ್ತರದ ದಿಬ್ಬದ ಮೇಲಿರುವುದರಿಂದ ಕೋಟೆ ಅನೇಕ ಮೈಲಿಗಳವರೆಗೆ ಎದ್ದು ಕಾಣುತ್ತದೆ. ಕೋಟೆ ಚೆನ್ನಾಗಿದ್ದ ಕಾಲದಲ್ಲಿ ಇದೊಂದು ಅಸಾಧಾರಣವಾದ ದುರ್ಗವಾಗಿದ್ದಿರಬಹುದೆಂದು ಬ್ರಿಟಿಷ್ ಚರಿತ್ರಕಾರರು ಒಪ್ಪಿದ್ದಾರೆ. ಈ ಕೋಟೆಗೆ ಬಹು ಸಮೀಪದಲ್ಲಿಯೇ ದೇಸಾಯರ ಅರಮನೆಯಿದ್ದ ಸ್ಥಳವಿದೆ. ಅರಮನೆಯ ಬಹುಭಾಗ ನಾಶವಾಗಿದ್ದರೂ ಅದರ ಭವ್ಯತೆ ಇನ್ನೂ ಎದ್ದುಕಾಣುತ್ತದೆ. ಅದರ ಹೊರ ಅಂಗಳದ ಉದ್ದ ಸುಮಾರು 100' ಅಗಲ 30' ತೇಗದ ಮರದ ಕಂಬಗಳ ಮೇಲಣ ಕೆತ್ತನೆಯ ಕೆಲಸ  ನಾಜೂಕಾದುದು. ದಿಮ್ಮಿಗಳನ್ನೇ ಛಾವಣಿಗಾಗಿ ಬಳಸಿದ್ದಾರೆ. ಇವೂ ಕೆತ್ತನೆಯ ಕೆಲಸದಿಂದ ಕೂಡಿವೆ. ನೆಲಕ್ಕೆ ಹಾಸಲು ಉಪಯೋಗಿಸಿದ್ದ ಹೊಳಪುಳ್ಳ  ಮತ್ತು ನಯಮಾಡಿದ ಕಲ್ಲು ಚಪ್ಪಡಿಗಳು ಅಲ್ಲಲ್ಲಿ ಬಿದ್ದಿವೆ. ಇವು ಆಗಿನ ಕಾಲದ ಶ್ರೀಮಂತಿಕೆ, ಕಲಾವಂತಿಕೆಗಳ ಮೂಕ ಸಾಕ್ಷಿಗಳಾಗಿವೆ.

(ಎ.ವಿ.ಎನ್.)