ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೀಚಕ

ವಿಕಿಸೋರ್ಸ್ದಿಂದ

ಕೀಚಕ

ಮಹಾಭಾರತದ ಪ್ರಮುಖ ವ್ಯಕ್ತಿಗಳಲ್ಲೊಬ್ಬ. ಬಾಣಾಸುರನ ಅಂಶದಿಂದ ಕೇಕಯ ರಾಜ ಮತ್ತು ಮಾಲವಿಯರ ಮಗನಾಗಿ ಜನಿಸಿದವ. ಈತನಿಗೆ 105 ಮಂದಿ ಒಡಹುಟ್ಟಿದವರೂ ಸುದೇಷ್ಣೆಯೆಂಬ ಸೋದರಿಯೂ ಇದ್ದರು. ಸುದೇಷ್ಣೆ ವಿರಾಟರಾಜನ ರಾಣಿ. ಇವನೂ ಇವನ ತಮ್ಮಂದಿರಾದ 105 ಮಂದಿ ಉಪಕೀಚಕರೂ ವಿರಾಟರಾಜನಲ್ಲಿಯೇ ಇದ್ದರು. ಮಹಾ ಬಲಶಾಲಿಯಾದ ಕೀಚಕ ವಿರಾಟನ ಸೇನಾಪತಿಯಾಗಿದ್ದ. ಇವನಿಗೆ ಸಿಂಹಬಲನೆಂಬ ಬೇರೆಯ ಹೆಸರೂ ಇದ್ದಿತು. ಕೀಚಕನನ್ನು ಕಂಡು ಹೆದರಿದ ಕೌರವರು ವಿರಾಟನ ರಾಜ್ಯದ ಕಡೆಗೆ ತಲೆ ಮಾಡಿ ಮಲಗುವುದಿಲ್ಲವೆಂಬ ಅಂಶವನ್ನು ತಿಳಿದ ಪಾಂಡವರು ವಿರಾಟ ರಾಜಧಾನಿಯಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ನಿರ್ಧರಿಸಿದರು. ದ್ರೌಪದಿ ಸೈರಂಧ್ರಿಯಾಗಿ ಮಾಲಿನಿ ಎಂಬ ಹೆಸರಿನಲ್ಲಿ ರಾಣಿ ಸುದೇಷ್ಣೆಯ ಬಳಿ ಸೇವಕಿಯಾದಳು. 'ಇಲ್ಲಿಯ ಹೆಂಗಸರೂ ಇಲ್ಲಿ ಕಾಣುವ ಗಿಡಮರಗಳೂ ನಿನ್ನಲ್ಲಿ ಮೋಹಗೊಂಡಂತೆ ತೋರುತ್ತಿದೆ. ಇನ್ನು ಗಂಡಸರು ಕಂಡರೆ ಮೋಹಗೊಳ್ಳದೆ ಇರುತ್ತಾರೆಯೇ' ? ಎಂಬ ಸುದೇಷ್ಣೆಯ ಮಾತುಗಳಿಂದ, ದ್ರೌಪದಿ ಮರೆವೇಷದಲ್ಲಿದ್ದರೂ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳಲುಸಮರ್ಥಳಾಗಿದ್ದಾಳೆಂಬುದು ಸ್ಪಷ್ಟ. ಅಕ್ಕನ ಅಂತಃಪುರದಲ್ಲಿ ಓಡಾಡುತ್ತಿದ್ದ ಇವಳನ್ನು ಕೀಚಕ ಕಂಡು, 'ವಾಸನೆಗಟ್ಟಿದ ಮದ್ಯದಂತೆ ಉನ್ಮಾದಗೊಳಿಸುತ್ತಿದ್ದ' ಅವಳ ಪ್ರೇಮವನ್ನು ಯಾಚಿಸುತ್ತಾನೆ. ದ್ರೌಪದಿಯಿಂದ ತಿರಸ್ಕøತನಾದ ಕೀಚಕ ಅಕ್ಕನ ನೆರವನ್ನು ಬೇಡುತ್ತಾನೆ. ಮಧುವನ್ನು ತರುವಂತೆ ಒತ್ತಾಯ ಮಾಡಿ ಸುದೇಷ್ಣೆ ಮಾಲಿನಿಯನ್ನು ಕೀಚಕನ ಅರಮನೆಗೆ ಕಳುಹಿಸುತ್ತಾಳೆ. ಅವಳನ್ನು ಕಂಡ ಕೀಚಕ ಕಾಮೋದ್ರೇಕದಿಂದ ಮುಂದುವರಿಯುತ್ತಾನೆ. ದ್ರೌಪದಿ ಅವನಿಂದ ತಪ್ಪಿಸಿಕೊಂಡು ಬಂದು ರಾಜಸಭೆಯನ್ನು ಪ್ರವೇಶಿಸುತ್ತಾಳೆ. ಕೀಚಕ ಬೆನ್ನಟ್ಟಿ ಬಂದು ತುಂಬಿದ ಸಭೆಯಲ್ಲಿ ಅವಳ ಜುಟ್ಟು ಹಿಡಿದು ವಿರಾಟರಾಜ, ವೇಷಾಂತರದಲ್ಲಿದ್ದ ಧರ್ಮರಾಯ ಮತ್ತು ಭೀಮಾದಿಗಳೆದುರಿಗೆ ಒದ್ದು ಕೆಡವುತ್ತಾನೆ. ಅಪಮಾನ ಜರ್ಝರಿತಳಾದ ದ್ರೌಪದಿ ಭೀಮನ ನೆರವನ್ನು ಬೇಡುತ್ತಾಳೆ. ಭೀಮ ಭರವಸೆ ಕೊಟ್ಟಮೇಲೆ ದ್ರೌಪದಿ ಕೀಚಕನನ್ನು ರಾತ್ರಿ ನಾಟ್ಯಶಾಲೆಗೆ ಏಕಾಂಗಿಯಾಗಿ ಬರಲು ಆಹ್ವಾನ ಕೊಡುತ್ತಾಳೆ. ಇಚ್ಛಾಪೂರ್ಣತೆಯ ಭರವಸೆಯಿಂದ ಹಿಗ್ಗಿ ಕೀಚಕ ರಾತ್ರಿ ನಾಟ್ಯಶಾಲೆಗೆ ಗೋಪ್ಯವಾಗಿ ಬರುತ್ತಾನೆ. ಮರೆವೇಷದಲ್ಲಿದ್ದ ಭೀಮನಿಗೂ ಕೀಚಕನಿಗೂ ಮಲ್ಲಯುದ್ಧ ನಡೆದು ಕೀಚಕ ಸಾಯುತ್ತಾನೆ. ಅಣ್ಣನ ದುರ್ಮರಣಕ್ಕೆ ಮಾಲಿನಿಯೇ ಕಾರಣಳೆಂದು ತಿಳಿದ ಉಪಕೀಚಕರು ಅವಳನ್ನು ಹಿಡಿದು ಶವರಥಕ್ಕೆ ಕಟ್ಟಿ ಶ್ಮಶಾನಕ್ಕೆಳೆದೊಯ್ಯುತ್ತಿರುತ್ತಾರೆ. ದ್ರೌಪದಿ ಪಾಂಡವರ ಗೋಪ್ಯ ನಾಮವನ್ನು ಹಿಡಿದು ಕೂಗುತ್ತಾಳೆ. ಇದನ್ನು ಕೇಳಿಸಿಕೊಂಡ ಭೀಮ ದೊಡ್ಡ ಮರವೊಂದನ್ನು ಕಿತ್ತು ತಂದು ಉಪಕೀಚಕರನ್ನು ಸವರಿ ಹಾಕಿ, ದ್ರೌಪದಿಯನ್ನು ಬಂಧಮುಕ್ತಳನ್ನಾಗಿಸುತ್ತಾನೆ. ಕೀಚಕ ಹಾಗೂ ಅವನ ದುಷ್ಟ ಸೋದರರು ನಾಶವಾಗುತ್ತಾರೆ.

 ಸ್ವಾರಸ್ಯವೆಂದರೆ ಯಾರ ಬಲ ಮತ್ತು ಬೆಂಬಲವನ್ನು ನೆಚ್ಚಿ ಪಾಂಡದರು ಅಜ್ಞಾತವಾಸಕ್ಕಾಗಿ ವಿರಾಟನಗರಿಗೆ ಬಂದರೋ ಅಂಥವರಿಂದಲೇ ಅವರಿಗೆ ಇಷ್ಟೊಂದು ಕಷ್ಟಗಳು ಒದಗುತ್ತವೆ.

 ಕವಿಗಳು ಕೀಚಕನ ಸಾವಿನ ಚಿತ್ರವನ್ನು ರಮ್ಯವಾಗಿ ವರ್ಣಿಸಿದ್ದಾರೆ. ಕೈಕಾಲುಗಳನ್ನು ಒಳಕ್ಕೆ ಎಳೆದುಕೊಂಡು ಆಮೆಯಂತೆ ಕೀಚಕ ಒಂದು ಉಂಡೆಯಾಗಿ ರಕ್ತಮಯವಾಗಿ ಬಿದ್ದಿದ್ದನೆಂದು ಮಹಾಭಾರತದ ವರ್ಣನೆ. ಬಳೆಯ ರಾಶಿಯನ್ನು ಆನೆ ತುಳಿದಂತೆ ಮೆಟ್ಟಿ, ನುಚ್ಚು ನುರಿ ಮಾಡಿ, ಹಿಡಿದು ಕಂಭಗಳಿಗೆ ಆಸ್ಫೋಟಿಸಿ ಬಿಸುನೆತ್ತರು, ನೆಣ, ಅಡಗು, ಎಲುಬು-ಸಮಸ್ತಂ ಸುರಿಯೆ, ತುಂಬಿದ ಚೀಲವನ್ನು ಸುರಿದ ಮೇಲೆ ಬರಿದಾದ ಚೀಲ ಕೈಲುಳಿಯುವಂತೆ, ಭೀಮನ ಕೈಯಲ್ಲಿ ಚರ್ಮ ಮಾತ್ರ ಉಳಿಯಿತೆಂದು ಪಂಪ ಕೀಚಕನ ಸಾವನ್ನು ಬಣ್ಣಿಸಿದ್ದಾನೆ. ಕೀಚಕನ ತಲೆಯನ್ನು ಅವನ ಎದೆಯೊಳಕ್ಕೆ ಅಮುಕಿ, ಕೈಕಾಲುಗಳನ್ನು ಹೊಟ್ಟೆಯಲ್ಲಿ ಸೇರಿಸಿ ಖಳನನ್ನು ಒಂದುಂಡೆಯಾಗಿ ಮಾಡಿ ದ್ರೌಪದಿಗೆ ಭೀಮ ತೋರಿದನೆಂದು ಕುಮಾರ ವ್ಯಾಸನ ವರ್ಣನೆ ; ಖಳನ ಸ್ಥಿತಿ ಕಾಲನ ಕೋಣ ತುಳಿದಂತಿತ್ತು ಎಂದು ಕೀಚಕನ ಸಾವಿನ ರೀತಿಯನ್ನು ಕವಿ ಬಣ್ಣಿಸಿದ್ದಾನೆ.

 ವಿರಾಟ ಪರ್ವ ಮಹಾಭಾರತದಲ್ಲಿ ಒಂದು ಸುಂದರ ಭಾಗ. ಇಲ್ಲಿ ಎರಡು ಪ್ರಮುಖ ಘಟನೆಗಳು ನಡೆಯುತ್ತಿವೆ. ಒಂದು ಕೀಚಕ ವಧೆ ಮತ್ತೊಂದು ಗೋಹರಣ ಮತ್ತು ಕೌರವರ ಸೋಲು. ಪ್ರಾಸಂಗಿಕವಾಗಿ ಉತ್ತರನ ಕಥೆ ಬರುತ್ತದೆ, ಈ ಪ್ರಕರಣಗಳಿಂದ ಮಹಾಭಾರತದ ಕಥೆ ಮುಂದುವರಿಯುತ್ತದೆ. ಸುಂದರ ಸ್ತ್ರೀಯೊಬ್ಬಳ ಕಾರಣಕ್ಕಾಗಿ ಮಹಾ ಬಲಶಾಲಿ ಕೀಚಕ ಹಾಗೂ ಅವನ ಸೋದರರು ಗಂಧರ್ವನೊಬ್ಬನಿಂದ ನಾಶವಾದರೆಂಬ ಸುದ್ದಿಯನ್ನು ದುರ್ಯೋಧನಾದಿಗಳು ತಿಳಿದು, ಕೀಚಕಾದಿಗಳನ್ನು ಕೊಂದವ ಭೀಮನೆಂದೂ ಸ್ತ್ರೀ ದ್ರೌಪದಿಯೆಂದೂ ಸಕಾರಣವಾಗಿ ತರ್ಕಿಸಿ ಪಾಂಡವರನ್ನು ಪತ್ತೆ ಮಾಡುವ ಸಲುವಾಗಿ ಸರ್ವಸೈನ್ಯಸಮೇತರಾಗಿ ವಿರಾಟರಾಜ್ಯದ ಮೇಲೆ ಆಕ್ರಮಣಮಾಡಿ ಗೋಗ್ರಹಣ ಮಾಡುತ್ತಾರೆ. ಅರ್ಜುನನ ಮಹಾ ಪರಾಕ್ರಮದಿಂದಾಗಿ ಪಾಂಡವರ ಗುರುತು ಬಹಿರಂಗವಾಗುತ್ತದೆ. ಆದರೆ ಅಜ್ಞಾತವಾಸದ ಅವಧಿ ಮುಗಿದಿರುತ್ತದೆ. ಹೀಗೆ ಕಥೆ ಮುಂದುವರಿಯಲು ಈ ಪ್ರಕರಣಗಳು ಸಹಾಯಕವಾಗಿವೆ.

 ಕೀಚಕನನ್ನು ಕಥಾನಾಯಕನನ್ನಾಗಿಸಿಕೊಂಡು ಕೈಲಾಸಂರವರು ಕೀಚಕ ಎಂಬ ನಾಟಕವನ್ನು ರಚಿಸಿ, ಅಲ್ಲಿ ಅವನನ್ನು ದುರಂತ ನಾಯಕನನ್ನಾಗಿಸುವ ಪ್ರಯತ್ನ ಮಾಡಿದ್ದಾರೆ. ಕೃಷ್ಣಮೂರ್ತಿಪುರಾಣಿಕರು ವಿರಾಟಪರ್ವ ಪ್ರಸಂಗವನ್ನು ವಸ್ತುವಾಗಿಸಿಕೊಂಡು ಸೈರಂಧ್ರಿ ಎಂಬ ಸುಂದರ ನಾಟಕವನ್ನು ರಚಿಸಿದ್ದಾರೆ.       

(ಜಿ.ಎಸ್.ಪಿ.ಎಂ.)