ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೀಟ್ಸ್‌, ಜಾನ್

ವಿಕಿಸೋರ್ಸ್ ಇಂದ
Jump to navigation Jump to search

ಕೀಟ್ಸ್, ಜಾನ್

1795-1821. ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿಗಳಲ್ಲಿ ವ್ಯಕ್ತಿತ್ವವೂ ಔನ್ನತ್ಯವೂ ಉಳ್ಳ ಗುಂಪಿಗೆ ಸೇರಲು ಅರ್ಹನಾದ ಕವಿ. ಹುಟ್ಟಿದ್ದು ಲಂಡನ್ನಿನಲ್ಲಿ, ಅಕ್ಟೋಬರ್ 31. 1795ರಂದು. ತಂದೆ ಥಾಮಸ್ ಕೀಟ್ಸ್ ಹೋಟೆಲೊಂದರ ಕುದುರೆ ಲಾಯದ ಮುಖ್ಯ ಕಾಸ್ತಾರನಾಗಿದ್ದು, ತನ್ನ ದಣಿಯ ಮಗಳನ್ನು ಮದುವೆಯಾಗಿ, ಪ್ರಯಾಣಿಕರ ಕುದುರೆಗಳನ್ನು ನೋಡಿಕೊಳ್ಳುವ ಮತ್ತು ಬೇಕೆಂದವರಿಗೆ ಕುದುರೆಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ಮಾಡುತ್ತಿದ್ದ. ಬಾಲ್ಯದಲ್ಲಿ ಜಾನ್ ಅಂದದ ಮುಖಚಹರೆಗೂ ಕೆಚ್ಚೆದೆಗೂ ಜಗಳಗಂಟೆತನಕ್ಕೂ ಹೆಸರಾಂತಿದ್ದ. ಒಮ್ಮೆ ಅವನ ತಾಯಿ ರೋಗಗೊಂಡಿದ್ದಾಗ ಅವಳಿಗೆ ಕೊಂಚವೂ ತೊಂದರೆ ಆಗಕೂಡದೆಂದು ವೈದ್ಯ ವಿಧಿಸಿದ್ದ. ಆಗ ಜಾನ್ ಹಳೆಯದೊಂದು ಕತ್ತಿ ಹಿಡಿದು ಆ ಕೋಣೆಯ ಬಾಗಿಲಲ್ಲಿ ಕಾವಲು ಕಾದ. ಅವನಿಗಿನ್ನೂ ಅಗ ಐದು ತುಂಬಿರಲಿಲ್ಲ. ಕಾಸ್ತಾರ ವೃತ್ತಿಯವನಾದರೂ ಥಾಮಸ್ ಕೀಟ್ಸ್, ವಿದ್ಯೆ ಸಭ್ಯತೆ ಸಂಸ್ಕøತಿಗಳ ಅಭಿಮಾನಿ. ಜಾನ್‍ನನ್ನೂ ಅವನ ತಮ್ಮಂದಿರನ್ನೂ ಹತ್ತಿರದ ಊರಾದ ಎನ್‍ಫೀಲ್ಡಿನ ಪ್ರಖ್ಯಾತ ಪಾಠಶಾಲೆಗೆ ಕಳಿಸಿದ. ಅಲ್ಲಿ ಜಾನನಿಗೆ ಓದಿಗಿಂತಲೂ ಹೆಚ್ಚಾಗಿ ಕದನವೆಂದರೆ ಪ್ರೀತಿ; 1804ರಲ್ಲಿ ತಂದೆ ತೀರಿಕೊಂಡ. ಆದರೂ ಹುಡುಗರ ವಿದ್ಯಾಭ್ಯಾಸಕ್ಕೆ ಚ್ಯುತಿ ಉಂಟಾಗಲಿಲ್ಲ. ಸುಲಭವಾಗಿ ಕೆರಳುವ ಜಾಯಮಾನದವನಾದರೂ ಜಾನ್ ವಿಪರೀತ ಉದಾರಿ; ಆದ್ದರಿಂದ ಅವನನ್ನು ಕಂಡು ಎಲ್ಲರಿಗೂ ವಿಶ್ವಾಸ. 1810ರಲ್ಲಿ ತಾಯಿ ಗತಿಸಿದಳು. ನಾಲ್ಕು ಕಿರಿಯರ ಪಾಲನೆ ಅಬ್ಬೆ ಎಂಬೊಬ್ಬ ವರ್ತಕನ ಜವಾಬ್ದಾರಿಯಾಯಿತು. ಸುಮಾರು 8,000 ಪೌಂಡು, ಅವರ ಪಿತ್ರಾರ್ಜಿತ ಆಸ್ತಿ.

 ಜಾನ್ ಕೀಟ್ಸ್‍ನ ಶಾಲಾ ವ್ಯಾಸಂಗ 1810ರಲ್ಲಿ ಮುಗಿಯಿತು. ಅಬ್ಬೆ ಅವನನ್ನು ಕೂಡಲೆ ಹತ್ತಿರದ ಎಡ್ಮಂಟನ್ ಎಂಬ ಊರಿನಲ್ಲಿ ಪ್ರಸಿದ್ಧನಾಗಿದ್ದ ಹ್ಯಾಮಂಡ್ ಎಂಬ ಶಸ್ತ್ರವೈದ್ಯನ ಕೈಕೆಳಗೆ ಐದು ವರ್ಷ ಕಲಿಕೆಯವನನ್ನಾಗಿ ಗೊತ್ತುಮಾಡಿದ. ವೈದ್ಯಕೀಯದಲ್ಲಿ ಜಾನನಿಗೆ ಪೂರಾ ಶ್ರದ್ಧೆ ಬಾರದಿದ್ದರೂ ಅದನ್ನು ಅಸಡ್ಡೆಗೆ ಈಡುಮಾಡಲಿಲ್ಲ. ಶಾಲೆಯಲ್ಲಿದ್ದಾಗ ಮೊದಮೊದಲು ಅಲಕ್ಷಿಸುತ್ತಿದ್ದ ಜ್ಞಾನಾರ್ಜನೆ ಕಡೆಯ ಎರಡು ವರ್ಷಗಳಲ್ಲಿ ಅವನ ಚಿತ್ತವನ್ನು ಬಲವಾಗಿ ಸೆಳೆದಿತ್ತು. ವರ್ಜಿಲ್ ಕವಿಯನ್ನು ಆತ ಪಠಿಸಿದ್ದ; ಕೈಪಿಡಿ ನಿಘಂಟುಗಳ ಮೂಲಕ ಪ್ರಾಚೀನ ಗ್ರೀಗರ ಪುರಾಣ ಕಥಾವಳಿಯನ್ನು ಪರಿಚಯ ಮಾಡಿಕೊಂಡಿದ್ದ ; ಅದಕ್ಕೆ ಮನಸೋತಿದ್ದ. 1812ರಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಗೆಳೆಯ ಕೌಡನ್ ಕ್ಲಾರ್ಕ್ ಅವನಿಗೆ ಸ್ವೆನ್ಸರ್ ಕವಿಯ ಫೇರಿ ಕ್ವೀನ್ ಎಂಬ ಮಹಾಕಾವ್ಯವನ್ನು ಓದಲು ಎರವಿತ್ತ. ಕೀಟ್ಸಿಗೆ ಯಾವುದೋ ಅಮೂಲ್ಯ ನಿಧಿ ದೊರಕಿದಂತಾಯಿತು. ಎಳೆಯ ಕುದುರೆ ವಸಂತದ ಹಸಿರು ಬಯಲಲ್ಲಿ ನೆಗೆನೆಗೆದು ಓಡಾಡುವಂತೆ ಆ ಅದ್ಭುತ ಕಾವ್ಯದಲ್ಲಿ ಆಸಕ್ತನಾದನಂತೆ. ತಾನೂ ಒಬ್ಬ ಕವಿ. ಪದ್ಯರಚನೆಯೇ ತನ್ನ ನೇಮಿತ ಕೃಷಿ ಎಂಬುದು ಆಗ ಅವನಿಗೆ ಮಂದಟ್ಟಾಯಿತು. ಸ್ವೆನ್ಸರನ್ನು ಅನುಕರಿಸಿ ಪದ್ಯ ಬರೆದ. 1814ರಲ್ಲಿ ಅವನಿಗೂ ಹ್ಯಾಮಂಡನಿಗೂ ನಡುವೆ ವೈಮನಸ್ಯ ಬೆಳೆಯಿತಾಗಿ, ಕಲಿಕೆಯನ್ನು ಕೊನೆಗೊಳಿಸಿ, ಲಂಡನ್ನಿಗೆ ನಡೆದು, ಆಸ್ವತ್ರೆಯಲ್ಲಿ ವೈದ್ಯ ಅಭ್ಯಾಸ ಮಾಡತೊಡಗಿದ. ಸಾಹಿತ್ಯದ ಪ್ರಭಾವ ಅವನ ಮೇಲೆ ಪ್ರಬಲವಾಗಿದ್ದರೂ ವೈದ್ಯ ಪರೀಕ್ಷೇಯಲ್ಲಿ ತೇರ್ಗಡೆಯಾದ, ಸಹಾಧ್ಯಾಯಿಗಳಿಗೆ ಅಚ್ಚರಿ ಹುಟ್ಟುವಂತೆ.

 ಲೀ ಹಂಟ್ ಎಂಬಾತ ಸಾಧಾರಣ ಕವಿ, ಒಳ್ಳೆಯ ಪ್ರಬಂಧಕಾರ. ಪರೀಕ್ಷಕ ಎಂಬ ಪತ್ರಿಕೆಯನ್ನು ನಡೆಸುತ್ತ ಸಾಹಿತ್ಯ ಸಮಾಜಗಳ ಟೀಕಾಕಾರನಾಗಿದ್ದ. ಅವನದ್ದು ತೀವ್ರಗಾಮಿಗಳ ಪಕ್ಷ; ರಾಜಕುಮಾರನ ವಿಚಾರವಾಗಿ ಕಟುವಿಮರ್ಶೆ ಪ್ರಕಟಿಸಿ ಸೆರೆಮನೆಗೆ ಹೋಗಿ ಬಂದ. ಆ ಶಿಕ್ಷೆ ಅವನಿಗೆ ಬಹಳ ಯಶಸ್ಸನ್ನು ತಂದುಕೊಟ್ಟಿತು. ಯುವಕ ಕವಿಗಳು ಅವನ ಹಿಂಬಾಲಕರಾದರು: ಅವರಲ್ಲಿ ಕೀಟ್ಸನೂ ಒಬ್ಬ. ವಿರೋಧ ಪಕ್ಷದವರು ಲೀ ಹಂಟನ ಗುಂಪನ್ನು ಕಾಕಿ ಮಠ ಎಂದು ಅಪಹಾಸ್ಯ ಗೈದರು. ಕೀಟ್ಸ್ 1817ರಲ್ಲಿ ತನ್ನ ಕೃತಿಗಳನ್ನು ಪ್ರಕಟಿಸಿದ; ಅದು ಜನಚಿತ್ತವನ್ನು ಆಕರ್ಷಿಸಲಿಲ್ಲ. ಮೂರನೆಯ ವರ್ಷ ಎಂಡಿಮಿಯಾನ್ ಎಂಬ ಕಥನಕಾವ್ಯವನ್ನು ಹೊರತಂದ. ತತ್‍ಕ್ಷಣವೇ ಸ್ಕಾಟ್ಲೆಂಡಿನ ಬ್ಲಾಕ್‍ವುಡ್ಸ್ ಮತ್ತು ಕ್ವಾರ್ಟರ್ಲಿ ಎಂಬ ಅವನ ಕವಿತ್ವವನ್ನು ಕಠೋರ ಖಂಡನೆಗೆ ಗುರಿ ಮಾಡುತ್ತ, ಹೊಟ್ಟೆಗೆ ಹಿಟ್ಟಿಲ್ಲದ ಕವಿಯಾಗಿ ಸಾಯುವುದಕ್ಕಿಂತ ಹೊಟ್ಟೆಗೆ ಹಿಟ್ಟಿಲ್ಲದ ವೈದ್ಯನಾಗಿ ಸಾಯುವುದು ಲೇಸು; ಗುಳಿಗೆ ಸೀಸೆಗಳ ಕಡೆಗೇ ಹಿಂದಿರುಗು-ಎಂದು ಮೂದಲಿಸಿದುವು. ಕೀಟ್ಸ್ ಮನನೊಂದರೂ ಪೂರ್ತಿ ಧೈರ್ಯಗೆಡಲಿಲ್ಲ. ಉತ್ಸಾಹ ಕಳೆದುಕೊಳ್ಳಲಿಲ್ಲ. ಎಂಡಿಮಿಯಾನ್ ಹೇಗೆ ತನಗೇ ಅತೃಪ್ತಿಕರವಾಗಿತ್ತು ಎಂಬುದನ್ನು ಅವನ ಚೆನ್ನಾಗಿ ಬಲ್ಲ. ಅದೇ ವರ್ಷ ಫ್ಯಾನಿ ಬ್ರೌನ್ ಎಂಬ ತರುಣಿಯನ್ನು ಕಂಡಾಗ ಗಾಢಪ್ರೇಮ ಅವನಲ್ಲಿ ಉದಯಿಸಿತು. ಅವನು ನಿರುದ್ಯೋಗಿ; ಇದ್ದ ಹಣ ಖರ್ಚಾಗಿ ಹೋಗಿತ್ತು. ಸಾಹಿತ್ಯದಿಂದಲೇ ಬದುಕುವ ಅವನ ಹಂಬಲಕ್ಕೆ ನಿರ್ದಯ ವಿಮರ್ಶಕರು ಕೊಡಲಿ ಹಾಕಿದ್ದರು. ಸ್ಥಿತಿ ಹೀಗೆ ವಿಷಮವಾಗಿದ್ದರೂ ಕಂಗೆಡದೆ, ಆಪ್ತಮಿತ್ರರ ಸಹಾಯದಿಂದ ದಿವಸ ನೂಕುತ್ತ ಕೀಟ್ಸ್ ಕಾವ್ಯ ಕಟ್ಟುತ್ತಲೇ ಹೋದ. 1820ರಲ್ಲಿ ಆತ ಪ್ರಕಟಿಸಿದ ಲೇಮಿಯಾ, ಇಸಾಬೆಲಾ ಮತ್ತು ಇತರ ಕವನಗಳು ಎಂಬ ಹೊತ್ತಗೆ ಅವನ ಋಜು ಆತ್ಮಪ್ರತ್ಯಯಕ್ಕೆ ಸಾಕ್ಷ್ಯವಾಯಿತು. ಅಷ್ಟು ಹೊತ್ತಿಗೆ ಕ್ಷಯರೋಗ ಅವನ್ನು ಬಲವಾಗಿ ಹಿಡಿದಿರುವ ಸಂಗತಿ ಸ್ವಷ್ಟವಾಗಿ ತಿಳಿಯಿತು. ಆ ರೋಗಕ್ಕೇ ಅವನ ತಾಯಿಯೂ ತಮ್ಮನೂ ತುತ್ತಾಗಿದ್ದರು; ತಮ್ಮನ ಆರೋಗ್ಯಕ್ಕೋಸ್ಕರ ಅವನೊಂದಿಗೆ ಅಲ್ಲಿ ಇಲ್ಲಿ ಪ್ರವಾಸ ಕೈಗೊಂಡರೂ ಏನೂ ಫಲ ದೊರೆಯಲಿಲ್ಲ. 1820ರ ಹಿಮಗಾಲದಲ್ಲಿ ಇಂಗ್ಲೆಂಡಿನಲ್ಲಿ ಉಳಿಯಲಾರನೆಂದು ತಿಳಿದ ಸ್ನೇಹಿತರು ಇಟಲಿಗೆ ಹೋಗುವಂತೆ ಅವನನ್ನು ಬಲಾತ್ಕರಿಸಿದರು. ಜೋಸೆಫ್ ಸೆವರ್ನ್ ಎಂಬ ಜೊತೆಗಾರನೊಡನೆ ಸೆಪ್ಟೆಂಬರಿನಲ್ಲಿ ಜಾನ್ ನೇಪಲ್ಸಿಗೆ ಹೊರಟ. ತನ್ನ ಬಾಳು ಸಮಾಧಿಯಾಚೆಯ ಬಾಳು ಎಂದು ಅವನೇ ಗಂಭೀರವಾಗಿ ಹೇಳಿಕೊಂಡ. ರೋಮ್ ನಗರ ತಲಪುವ ಹೊತ್ತಿಗೆ ಪ್ರಾಣಪಕ್ಷಿ ಹೊರಹಾರಲು ಸಿದ್ಧವಾಗಿತ್ತು. ಸೆವರ್ನ್ ಮತ್ತು ದೇವರಿಗೆ ಧನ್ಯವಾದ, ಅದು ಬಂದಿದೆ ಎಂದು ನುಡಿಯುತ್ತ, ಫೆಬ್ರವರಿ 23, 1821ರಂದು ಕೀಟ್ಸ್ ಮೃತ್ಯುವಶನಾದ.

 ಬೈರನ್ ಷೆಲ್ಲಿ ಕವಿಗಳು `ಪಾಪ, ಕೀಟ್ಸ್ ಕ್ರೂರ ಟೀಕಾಕಾರರ ಖಡ್ಗಕ್ಕೆ ಬಲಿಬಿದ್ದ` ಎಂಬ ಐತಿಹ್ಯ ಹರಡಿ, ಅವನ ವ್ಯಕ್ತಿ ತೇಜಸ್ಸಿಗೆ ಅನುದ್ದೇಶಿತವಾಗಿ ಅನ್ಯಾಯ ಎಸಗಿದರು. ಈಗ ಸತ್ಯಾಂಶ ಸಕಲರಿಗೂ ಗೊತ್ತು. ದೃಢಸಂಕಲ್ಪದ ಗಂಭೀರಭಾವನೆಗಳ ಸೌಂದರ್ಯೋಪಾಸಕ, ಕೀಟ್ಸ್ ಕಾವ್ಯಕ್ಕೆ ಅವನ ಶಕ್ತಿ ಭಕ್ತಿಯೆಲ್ಲವೂ ಮೀಸಲು. ದೊಡ್ಡ ಕವಿಗಳ ಸಾಲಿನಲ್ಲೇ ತನ್ನ ಜಾಗ ಕಾದಿರಿಸಲ್ಪಟ್ಟಿದೆಯೆಂದು ನಿರಹಂಕಾರದಿಂದ ಅವನೇ ಹೇಳಿಕೊಳ್ಳುತ್ತಿದ್ದ.

 ಕಾವ್ಯಚಕ್ರ : ಕೀಟ್ಸನ ಜೀವಿತಕಾಲದಲ್ಲಿ ಪ್ರಕಟಗೊಂಡ ಅವನ ಕೃತಿಗಳು 45. ಅವನ ಮರಣಾನಂತರದ ಪ್ರಕಟಗೊಂಡವು ಸುಮಾರು 63. ಈ 108 ಕೃತಿಗಳಲ್ಲಿ ಒಂದು ಪದ್ಯ ಟ್ರ್ಯಾಜಡಿ, 6 ಕಥನಕಾವ್ಯ, 9 ಪ್ರಗಾಥ, 46 ಸಾನೆಟ್ ಇವೆ. ಮಿಕ್ಕವು ಹಲವು ಬಗೆಯವು. ಅವುಗಳಲ್ಲಿ ಹಲಕೆಲವು ಅಸಮಗ್ರ. ಅನೇಕ ಕೃತಿಗಳು ಉತ್ಕøಷ್ಟತೆ ಸಾಮಾನ್ಯತೆ ನೀರಸತ್ವ ಅಕವಿತ್ವಗಳ ಬೆರಕೆಯಿಂದ ದೂಷ್ಯವಾಗಿವೆ. ನೈಜ ಕವಿತ್ವದ ಮಧುರ ವಾಣಿ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತದೆ. ಕೀಟ್ಸ್ ದಿಟವಾಗಿ ನಾಟಕಕಾರನಲ್ಲ, ಕಥನ ಕವಿಯೂ ಅಲ್ಲ. ನಿಜವಾಗಿ ಆತ ಭಾವಗೀತೆಯ ಕವಿ. ಅದರೆ ಬನ್ರ್ಸ್, ಷೆಲ್ಲಿ, ಕೋಲ್‍ರಿಜ್ಜರಂತೆ ಯಾವಾಗಲೂ ನಿರ್ದುಷ್ಟ ಭಾವಗೀತೆಯನ್ನು ಸಾಧಿಸಲು ಅವನಿಂದ ಆಗಲಿಲ್ಲ. ಸಾಧಿಸಲು ಆದಾಗ ಅವನು ಬಲು ಎತ್ತರವನ್ನು ಮುಟ್ಟಿದನೆಂದು ಒಪ್ಪಬೇಕು.

 ಮುಖ್ಯ ಕೃತಿಗಳ ವಿವರ : ಎಂಡಿಮಿಯಾನ್: ಸ್ಪೆನ್ಸರನಿಂದ ಸ್ಛೂರ್ತಿ ಪಡೆದು ಕೀಟ್ಸ್ ಈ ಕಥನಕಾವ್ಯಕ್ಕೆ ಕೈ ಹಾಕಿದ. ಅವನ ಉದ್ದೇಶ ಹಿರಿದಾದದ್ದೆ. ಗ್ರೀಕ್ ಪುರಾಣಕತೆಯ ಎಂಡಿಮಿಯಾನ್ ಒಬ್ಬ ಸುಂದರ ಕುರಬ ತರುಣ. ಆತ ಗುಹೆಯೊಂದರಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಸೆಮೀಲಿ ಎಂಬ ಚಂದ್ರದೇವತೆ ಮೋಹಗೊಂಡು ಕೆಳಕ್ಕಿಳಿದು ಬಂದು ಅವನಿಗೆ ಮುತ್ತು ಕೊಟ್ಟು ಅವನ ಜೊತೆ ಮಲಗಿದಳು. ಹೀಗೆಯೇ ಹಲವು ರಾತ್ರಿ ಕಳೆಯಿತು. ಕೊನೆಗೆ ಸೆಮೀಲಿ ಬೇಸರ ಪಟ್ಟೊ ಮಗುವಾದ ಮೇಲೆ ಮಗುವನ್ನು ಹೊರಲಾರದೆಯೋ ಎಂಡಿಮಿಯಾನ್ ಸತತವಾಗಿ ನಿದ್ರಿಸುತ್ತಿರುವಂತೆ ಮಾಡಿದಳಂತೆ; ಹಾಗು ಅವನ ಯುವಕ ಲಾವಣ್ಯ ಸ್ವಲ್ಪವೂ ಮಾಸದಂತೆ ವರವಿತ್ತಳಂತೆ. ಈ ಕಥೆಯ ಹಿಂದೆ ಅನ್ಯಾರ್ಥವನ್ನು ಕೂಡಿಡಬೇಕೆಂದೂ ಕೀಟ್ಸನ ಆಶಯ. ಎಂಡಿಮಿಯಾನ್ ಕವಿಯ ಅತ್ಮದ ಪ್ರತೀಕ; ಚಂದ್ರದೇವತೆ ಪರಿಪೂರ್ಣ ಸೌಂದರ್ಯದ ಪ್ರತೀಕ. ಆದರ್ಶ ಸೌಂದರ್ಯದ ಸನ್ನಿಧಿ ಕವಿಯ ಅತ್ಮಕ್ಕೆ ಲಭಿಸಬೇಕಾದರೆ ಅದು ಜೀವನದ ನಾನಾ ಗೂಢ ಸ್ಥಳಗಳಲ್ಲಿ ಅರಸುತ್ತ ತೊಳಲತಕ್ಕದ್ದು. ಸಂಕಟ ನಿರಾಶೆಗಳ ಅನುಭವವೂ ಅಗತ್ಯ. ಕಡೆಗೆ ಇನ್ನೇನು ಗುರಿ ಸಿಕ್ಕಲಾರದು ಎಂಬ ಘಳಿಗೆಯಲ್ಲಿ ಕುಸಿದುಬಿದ್ದಾಗ ಅದರ ಸನಿಯದಲೇ ಕವಿಯ ಆತ್ಮ ! ಇಂಥ ಅಭಿಪ್ರಾಯಗಳನ್ನು ಕಾರ್ಯವಳಿಯಲ್ಲಿ ರೂಪಿಸುವುದಾಗಲಿ ಅನ್ಯಾರ್ಥ ಸಂಕೇತವನ್ನು ಖಚಿತವಾಗಿ ಚಿತ್ರಿಸುವುದಾಗಲಿ ಕೀಟ್ಸನಿಂದ ಆಗಿಲ್ಲ . ನಾಲ್ಕು ಅಧ್ಯಾಯಗಳ ಅದ್ಭುತ ರಮ್ಯ ಕಥೆ (ರೊಮಾನ್ಸ್). ಒಟ್ಟಿನಲ್ಲಿ ಯುಕ್ತವಾಗಿ ನಿಯಂತ್ರಿತವಾಗಿಲ್ಲ. ಆ ಭಾಗ ಈ ಭಾಗದಲ್ಲಿ ಚೆಲುವಾದ ಹೇಳಿಕೆಗಳೂ ವಾಕ್ಯಗಳೂ ಇವೆ. ` ಂ ಣhiಟಿg oಜಿ beಚಿuಣಥಿ is ಚಿ ರಿoಥಿ ಜಿoಡಿ eveಡಿ ' ಎನ್ನುವ ಪ್ರಸಿದ್ಧ ಪಂಕ್ತಿ ಈ ಕಾವ್ಯದ ಮೊದಲ ಪಂಕ್ತಿ.

 ಹೈಪೀರಿಯನ್ : ಇದನ್ನು ರಚಿಸುವಾಗ ಕೀಟ್ಸನ ಆಶೆ ಮಹದಾಶೆಯಾಗಿತ್ತು. ಹತ್ತು ಪರಿಚ್ಛೇದಗಳ ಭವ್ಯಕಾವ್ಯವನ್ನು (ಎಪಿಕ್) ಬರೆದು ಮಿಲ್ಟನೊಂದಿಗೆ ಸ್ವರ್ಧೆ ನಿಲ್ಲುವ ಹೆಬ್ಬಯಕೆ ಅವನಲ್ಲಿತ್ತು. ಗ್ರೀಕ್ ಪುರಾಣದಂತೆ ಹೈಪೀರಿಯಾನ್ ಸೃಷ್ಟಿಯ ಆದಿಯಲ್ಲಿ ಬಂದ ಟೈಟನರಲ್ಲಿ ಒಬ್ಬ; ಸೂರ್ಯಮಂಡಲ ಅವನ ಕ್ಷೇತ್ರ. ದೇವತೆಗಳ ಚರಿತ್ರೆಯಲ್ಲಿ ಟೈಟನರ ಯುಗ ಒಂದು. ಕೋನಸ್ ಅಥವಾ ಸ್ಯಾಟರ್ನ್ ಅವರಲ್ಲಿ ಮುಖ್ಯಸ್ಥ. ಆಳರಸ, ಕ್ರೋನಸನ ಮಕ್ಕಳಲ್ಲಿ ಒಬ್ಬನಾದ ಜ್ಯೂಸ್ ತಂದೆಯನ್ನೂ ಇತರ ಟೈಟನರನ್ನೂ ಸೋಲಿಸಿ ಮೂಲೆಗೊತ್ತಿ ಒಲಿಂಪಿಯನ್ ದೇವತೆಗಳ ಯುಗವನ್ನು ಅರಂಭಗೊಳಿಸಿದ. ಒಲಿಂಪಿಯನ್ನರ ಸೂರ್ಯದೇವತೆ ಅಪಾಲೋ. ಆತನಿಂದ ಹೈಪೀರಿಯನ್ ಸ್ಥಾನಭ್ರಷ್ಟನಾದ. ಈ ಕಥೆಯ ಹಿಂದೆಯೂ ಅನ್ಯಾರ್ಥವನ್ನು ಇಡಬೇಕೆಂಬ ಅಪೇಕ್ಷೆ ಕೀಟ್ಸನದು. ಟೈಟನರು ಸೌಂದರ್ಯದ ದೃಷ್ಟಿಯಿಂದ ಅರ್ಧ ಪರಿಷ್ಕøತರು; ಅರ್ಧ ಸಂಸ್ಕøತರು; ಆದ್ದರಿಂದ ಲಾವಣ್ಯದಲ್ಲೂ ಸಂಸ್ಕøತಿಯಲ್ಲೂ ಅಧಿಕರಾದ ಒಲಿಂಪಿಯನರು ಎದ್ದು ಬಂದ ಕೂಡಲೆ ಟೈಟನರು ಹಿಂದೆ ಸರಿಯುವುದು ನ್ಯಾಯವೆ. ತನ್ನ ಶಕ್ತಿಗೂ ಸತ್ತ್ವಕ್ಕೂ ಮೀರಿದ ಭಾರಿ ಸಾಹಸಕ್ಕೆ ಕೀಟ್ಸ್ ಮನತಂದು ಪೇಚಾಡಿದ. ಸೋತ, ಕೆಲಸದಿಂದ ಪರಾಙ್ಮುಖನಾದ. ಮಿಲ್ಟನನ್ನನ್ನು ಅನುಕರಿಸಹೋದದ್ದು ಪೆಚ್ಚುತನವೆಂಬುದು ಬೇಗ ಮನವರಿಕೆಯಾಯಿತು, ಅವನಿಗೆ, ಅಗಾಧ ಭಾವನೆಗಳೆಲ್ಲಿ? ಪ್ರಚಂಡ ಭಾವಗಳೆಲ್ಲಿ? ಮಹಾ ಲೋಕಾನುಭವವೆಲ್ಲಿ? ಮಹಾ ಭಾವನೆಗಳೆಲ್ಲಿ? ಮಹಾ ಶೈಲಿಯ ಅಧಿಪತ್ಯವೆಲ್ಲಿ? ಆದರೂ ಮೂರು ಪರಿಚ್ಛೇದಗಳ ಈ ಕಾವ್ಯ ಕೀಟ್ಸ್ ಅಭಿವೃದ್ಧಿ ಹೊಂದಿದ ಮೇಲೆ ಏನು ಮಾಡಬಲ್ಲನೆಂಬುದನ್ನು ಸೂಚಿಸುತ್ತಿತ್ತು. ದೊಡ್ಡ ಕವಿಯ ಮುನ್ಸೂಚನೆ ಸ್ಛುಟವಾಗಿದೆ. ಇದರಲ್ಲಿ.

 ಇಸಾಬೆಲಾ : ಪ್ರೇಮದ ದಂತಕತೆ ವರ್ಣಿತವಾಗಿದೆ, ಇದರಲ್ಲಿ. ತನ್ನ ಶ್ರೀಮಂತ ಅಣ್ಣಂದಿರ ಕಾರಕೂನನನ್ನು ಇಸಾಬೆಲಾ ಪ್ರೀತಿಸುತ್ತಾಳೆ. ಸಹಿಸದೆ ಅವರು ಅವನನ್ನು ಕೊಂದು ಕಾಡಿನಲ್ಲಿ ಹೂತುಬಿಡುತ್ತಾರೆ. ಇಸಾಬೆಲಾ ಗುಟ್ಟಾಗಿ ನಡೆದು ಪ್ರಿಯನ ರುಂಡವನ್ನು ಕತ್ತರಿಸಿ ತಂದು, ತುಳಸಿಯಂಥ ಗಿಡದ ಕುಂಡದಲ್ಲಿ ಅದನ್ನು ಹುದುಗಿಸಿ, ಆ ಕುಂಡದ ಬಳಿ ಕುಳಿತು ಮಾತಿಲ್ಲದೆ ರೋದಿಸುತ್ತಾಳೆ. ಕುಂಡವೂ ಇಲ್ಲದಂತಾಗಿ ಅವಳಿಗೆ ಸಾವೇ ಗತಿಯಾಗುತ್ತದೆ. ಅಂದಚಂದಗೂಡಿದ ವಾಕ್ಯಗಳೂ ವರ್ಣನೆಗಳೂ ಬರುತ್ತವೆಯಾದರೂ ಸಡಿಲತೆಯೂ ರಾಗಾತಿರೇಕವೂ ಸಲ್ಲದ ಪದಗಳೂ ತುಂಬಿರುವುದರಿಂದ ಕವಿಯ ಪ್ರಥಮ ಪ್ರಯತ್ನವೆಂಬುದು ನಿಶ್ಚಿತವಾಗಿದೆ.

 ಸೇಂಟ್ ಅನಿಸ್ ಹಬ್ಬದ ಹಿಂದಿನ ರಾತ್ರಿ : ಸರಿಸುಮಾರಾಗಿ ದೋಷರಹಿತವಾದ ಕಾವ್ಯ ಇದು; ಕಥೆಗಾರಿಕೆ ಪಾತ್ರಚಿತ್ರಣ ವರ್ಣನೆ ಎಲ್ಲದರಲ್ಲೂ ಕೀಟ್ಸನ ಕೌಶಲ್ಯಕ್ಕಿಲ್ಲಿ ಕನ್ನಡಿ ಹಿಡಿದಿದೆ. ಪಾರ್‍ಫಿರೊ ಶತ್ರು ಗುಂಪಿನ ಕನ್ಯೆ ಮಾಡಲೀನಳನ್ನು ಪ್ರೇಮಿಸಿ, ಅವರ ದುರ್ಗಕ್ಕೆ ಗುಟ್ಟಾಗಿ ಅಗಮಿಸಿ, ಅವರು ಪಾನಾಮೋದದಲ್ಲಿ ಬಿದ್ದಿರುವಾಗ, ಅವಳನ್ನು ಕರೆದುಕೊಂಡು ಹೋಗಿಬಿಡುವುದೇ ಕಾವ್ಯದ ಕಥೆ. ಆ ಕಾರ್ಯಾವಳಿ ಬರಿ ಮೂಳೆಕಟ್ಟು; ಸನ್ನಿವೇಶ ಪರಿಸ್ಥಿತಿ ಕಾಲ ದೇಶಗಳ ಅನ್ಯಾದೃಶ ವರ್ಣನೆ ಅದಕ್ಕೆ ಮಾಂಸ, ರಜ್ಜು, ಪ್ರೇಮಿಗಳಿಗೆ ನೆರವು ನೀಡುವ ವೃದ್ಧಿ ದಾದಿ. ಕೊರೆಯುವ ಚಳಿ, ಸರಿರಾತ್ರಿಯ ಗಭೀರತೆ, ಮಾಡೆಲೀನಳ ಸಾಲಂಕೃತ ಕೊಠಡಿ ಮುಂತಾದುವು ಕಣ್ಣಿಗೆ ಕಟ್ಟುವಂತೆಯೂ ಅಂತ್ಯತ ರಮಣೀಯವಾಗಿಯೂ ನಿರೂಪಿತವಾಗಿವೆ. ಒಂಬತ್ತು ಸಾಲಿನ ಸ್ಪೆನ್ಸರ್‍ನ ಪದ್ಯದ ಮಾದರಿಯ ಪದ್ಯವನ್ನು ಇದಕ್ಕೆ ಅರಿಸಿಕೊಂಡದ್ದು ಸಾರ್ಥಕವಾಗಿದೆ.

 ಲೇಮಿಯಾ : ಗ್ರೀಕರ ಪುರಾಣದಂತೆ ಲೇಮಿಯಾ ಮೊದಲಲ್ಲಿ ಓರ್ವ ರಾಜಕುಮಾರಿ. ದೇವದೇವನಾದ ಜೂóಸನ ಕಣ್ಣು ಅವಳ ಮೇಲೆ ಬಿತ್ತು. ಅವಳೂ ಅವನಿಗೆ ಒಲಿದಳು. ಅವನಿಂದ ಅವಳಿಗೆ ವಿಚಿತ್ರವಾದೊಂದು ವರ ಬಂತು. ತನ್ನ ನೇತ್ರವನ್ನು ಬೇಕುಬೇಕಾದಾಗ ಕಿತ್ತುಕೊಳ್ಳುವ ಮತ್ತೆ ಇಟ್ಟುಕೊಳ್ಳುವ ಮನುಷ್ಯಾತೀತ ಚಾತುರ್ಯ ಅವಳದಾಯಿತು. ಹಲವು ಮಕ್ಕಳನ್ನು ಲೇಮಿಯಾ ಹೆತ್ತಳು; ಅದರೆ ಜೂóಸನ ಪಟ್ಟಮಹಿಷಿ ಹೀರಾ ಅವೆಲ್ಲವನ್ನೂ ಸಂಹರಿಸಿದಳು, ಸಿಲ್ಲಾ ಎಂಬೊಂದು ವಿಕೃತ ಹೆಣ್ಣು ವಿನಾ. ಬೆಂದ ಎದೆಯ ಲೇಮಿಯಾ ಕಟ್ಟುಗ್ರ ರೋಷದಿಂದ ಕಂಡಕಂಡಲ್ಲಿ ಮಕ್ಕಳನ್ನು ತಿನ್ನುವ ಕ್ರೂರಿಯಾದಳು. ಕೊನೆಗೆ ಎಂಪ್ಯೂಸೆ ಎಂಬ ಕಠೋರ ದೆವ್ವಗಳಲ್ಲಿ ಒಂದಾದಳು. ತರುಣರನ್ನು ಕಾಮ ಪ್ರವೃತ್ತಿಗೆ ಸೆಳೆದು ಅವರು ಮಲಗಿದ್ದಂತೆ ಅವರ ಅಸುಗಳನ್ನು ಹೀರಿ ಸಾಯಿಸುವುದೇ ಅವಳ ಕೆಲಸವಾಯಿತು. ಕೀಟ್ಸ್ ಈ ಕಥೆಯ ಸರಣಿಯನ್ನು ಸುರಮ್ಯವಾಗಿ ಬದಲಾಯಿಸಿದ. ಲೇಮಿಯಾ ಉಜ್ವಲ ಬಣ್ಣಗಳ ಒಂದು ಹಾವು; ಮನುಷ್ಯ ಸ್ತ್ರೀಯಾಗುವ ಉತ್ಕಟಾಭಿಲಾಷೆಯಿಂದ ಪರಿತಪಿಸುತ್ತಿರುವ ಹಾವು. ಇದ್ದಕ್ಕಿದ್ದಂತೆ ದೇವತೆಗಳ ದೂತ ಹೆರ್ಮಿಸ್ ತನ್ನ ಪ್ರೇಮದ ಒಬ್ಬ ವನದೇವಿಯನ್ನು ಹುಡುಕುತ್ತ ಬಂದ; ಲೇಮಿಯಾ ಅವಳನ್ನು ಅವರಿವರ ಕಾಟದಿಂದ ತಪ್ಪಿಸಲು ಮರೆಸಿಟ್ಟಿದ್ದಳು. ಹರ್ಮಿಸಿಗೆ ಅವಳನ್ನು ತೋರಿಸಿಕೊಟ್ಟು ಪ್ರತಿಯಾಗಿ ಅವನಿಂದ ಹೆಣ್ಣು ರೂಪನ್ನು ಪಡೆದಳು. ಲೋಕವನ್ನೇ ಮರುಳುಗೊಳಿಸುವ ರೂಪ ಅವಳದ್ದು . ಲೀಸಿಯಸ್ ಎಂಬ ವಿದ್ಯಾರ್ಥಿ ಅವಳನ್ನು ಕಂಡು ಮೋಹಪರವಶನಾದ, ಅವಳಿಗೂ ಅವನ ಮೇಲೆ ಮೋಹ. ಅವಳನ್ನು ಮದುವೆಯಾಗಲು ತನ್ನ ಕುಟೀರಕ್ಕೆ ಅತ ಕರೆದುತಂದ. ಬಂಧುಬಳಗಕ್ಕೆ ಔತಣ ಏರ್ಪಡಿಸುವ ಪದ್ಧತಿಯಿತ್ತು. ಲೇಮಿಯಾ ತನ್ನ ಅಮಾನುಷ ಬಲದಿಂದ ವಿಶಾಲ ಮಹಲು ಉಪವನ ಆಳುಕಾಳು ಎಲ್ಲವನ್ನೂ ನಿರ್ಮಿಸಿದಳು. ಲೀಸಿಯಸ್ ತನ್ನ ಉಪಾಧ್ಯಾಯ ಅಪಲೋನಿಯಸ್ಸಿಗೆ ಅಹ್ವಾನ ಕೊಟ್ಟಿರಲಿಲ್ಲ; ಏತಕ್ಕೆಂದರೆ ಆತನ ವದನ ಕಣ್ಣಿಗೆ ಬಿದ್ದೊಡನೆ ಲೇಮಿಯಾ ಹೆದರಿ ತತ್ತರಿಸಿ ಚೀರಿದ್ದಳು. ಆದರೇನು? ಅಪಲೋನಿಯಸ್ ಬಂದೇ ಬಂದ. ಊಟಕ್ಕೆ ಕುಳಿತಿದ್ದವರಿಗೆ ಲೀಸಿಯಸ್ ತನ್ನ ಅಪೂರ್ವ ಮದವಣಗಿತ್ತಿಯನ್ನು ಪ್ರಶಂಸಿಸಿ ಪರಿಚಯ ಮಾಡಿಸುತ್ತಿರುವಾಗ ಅಪಲೋನಿಯಸ್ ತತ್ತ್ವಙ್ಞನಂತೆ 'ಅದು ಹೆಣ್ಣಲ್ಲ. ಹಾವು' ಎಂದು ಕೂಗಿಬಿಟ್ಟ. ತಕ್ಷಣ ಲೇಮಿಯಾ ಅದೃಶ್ಯಳಾದಳು. ಲೀಸಿಯಸ್ಸನ್ನು ಕಡುದುಃಖಕ್ಕೆ ಈಡುಮಾಡಿ.

 ಲೇಮಿಯಾ ಕೀಟ್ಸನ ಕಾವ್ಯನೈಪುಣ್ಯ ಗರಿಗೆದರಿಕೊಂಡಿರುವುದಕ್ಕೆ ಸಾಕ್ಷ್ಯ.

 ಕರುಣೆಯಿಲ್ಲದ ನಾರಿ: ಇದೊಂದು ಆಶ್ಚರ್ಯಕರವಾದ ಲಾವಣಿ. ಮಧ್ಯಯುಗದ ರೊಮಾನ್ಸ್ ಕಾವ್ಯಗಳ ಸಾರವನ್ನೂ ಸೊಬಗನ್ನೂ ತನ್ನ ಚಿಕ್ಕ ಆಕಾರದಲ್ಲಿ ಹೃದಯಂಗಮವಾಗಿ ಅಡಕ ಮಾಡಿಕೊಂಡಿದೆ.

 ಪ್ರಗಾಥಗಳು : ಕೀಟ್ಸನ ಅತ್ಯುತ್ತಮ ಕಾವ್ಯಗುಣ ಅವನ ಪ್ರಗಾಥಗಳಲ್ಲಿ ಸ್ಛುಟವಾಗಿ ಮೂಡಿಬಂದಿದೆ. ಅದು ಪ್ರಾಯಶಃ ಅವನ ಅರಿವಿಗೆ ಗೋಚರವಾಗಿರಲಿಲ್ಲ. ನಿಸರ್ಗವನ್ನು ಅದರ ಶಾಂತಸ್ಥಿತಿಯಲ್ಲಿ ಚಿತ್ರಿಸುವುದರಲ್ಲೂ ಆಂತರ್ಯದ ಭಾವ ಭಾವನೆಗಳಿಗೆ ಮಧುರವೂ ಗಂಭೀರವೂ ಅದ ಅಭಿವ್ಯಕ್ತಿಯನ್ನು ಹೊಂದಿಸುವುದರಲ್ಲೂ ಅವನಿಗಿದ್ದ ಸಹಜ ಕೌಶಲ್ಯ ಶ್ಲಾಘನೀಯ. ಗ್ರೀಕರ ಭಸ್ಮಕರಂಡ, ಶರದೃತು. ಓಡ್‍ಆನ್‍ಎಗ್ರೀಷನ್ ಆನ್, ಓಡ್ ಟು ಆಟಮ್, ಓಡ್ ಟು ಮೆಲಾಂಕಲಿ, ಓಡ್ ಟು ಎ ನೈಟಿಂಗೇಲ್, ಓಡ್ ಟು ಪೈಕಿ, ದುಗುಡ, ಬುಲ್‍ಬುಲ್ ಹಕ್ಕಿ, ಅತ್ಮ ಮೊದಲಾದವಕ್ಕೆ ಇಂಗ್ಲಿಷ್ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಕೀಟ್ಸನ ಪ್ರಗಾಥಗಳಿಂದಾಗಿ ಸಲ್ಲುವಂತಾಗಿದೆ. ಎಲ್ಲೆಲ್ಲೂ ಮಾನವನ ಕ್ಷಣಿಕವೂ ಅನಿಶ್ಚಿತವೂ ಆತಂಕಮಯವೂ ಆದ ಬಾಳಿಗೂ ಪೂರ್ಣ ಸೌಂದರ್ಯ ಮತ್ತು ಶುದ್ದ ಆನಂದಗಳ ನಿರಂತರತ್ವಕ್ಕೂ  ಇರುವ ವ್ಯತ್ಯಾಸ ಕವಿಯನ್ನು ಪದೇ ಪದೇ ಚೋದಿಸುತ್ತಿರುವುದನ್ನು ಈ ಬರಹಗಳಲ್ಲಿ ಕಾಣುತ್ತೇವೆ. ಅಲ್ಲಲ್ಲಿ ಬಂದಿರುವ ಪದಗುಚ್ಛಗಳೂ ವಾಕ್ಯಗಳೂ ನಿಜವಾದ ಇಂಗ್ಲಿಷ್ ಕವನ ಯಾವುದು ಎಂಬುದನ್ನು ನಮಗೆ ತಿಳಿಸಬಲ್ಲವು.

 ಸಾನೆಟ್ಟುಗಳು: ಇವುಗಳಲ್ಲಿ ಒಳ್ಳೆಯವೂ ಅಷ್ಟೊಂದು ಒಳ್ಳೆಯವಲ್ಲದವೊ ಮಿಳಿತವಾಗಿವೆ. ಕೆಲವಂತೂ ಕೆಲಸವಿಲ್ಲದಿದ್ದಾಗ ಏನೋ ಬರೆಯಬೇಕೆಂದು ಬರೆದ ಪಂಕ್ತಿಗಳಾಗಿವೆ. ಕೀಟ್ಸನ ಕೈವಾಡವನ್ನು ಪ್ರದರ್ಶಿಸುವುವು ಕೆಲವೇ ಕೆಲವು. ಸಾನೆಟ್ಟನ್ನು ಭಾವಗೀತೆಯೆಂದು ಕರೆದರೂ ಅದಕ್ಕೆ ಭಾವಗೀತೆಯ ಸ್ವರೂಪ ತೊಡಿಸುವುದು ದಿಟವಾಗಿ ಇಲ್ಲಿ ಕಷ್ಟಸಾಧ್ಯ.

 ದರ್ಶನ, ತತ್ತ್ವಗಳು : ಕವಿಯಾದವನು ಕಾವ್ಯಕ್ಕೋಸ್ಕರವೇ ಹೇಗೆ ಜೀವಿಸಬಹುದೆಂಬುದಕ್ಕೆ ಉತ್ಕøಷ್ಟ ನಿದರ್ಶನ ಜಾನ್ ಕೀಟ್ಸ್. ತನ್ನ ಕಾಲದಲ್ಲಿ ಯೋಚನಾಪರರೆಲ್ಲರನ್ನೂ ಆಕರ್ಷಿಸಿ ಅವರ ಮನಸ್ಸು ಹೃದಯಗಳ ಮೇಲೆ ಒತ್ತಡ ಹೇರುತ್ತಿದ್ದ ರಾಜಕೀಯ ಸಾಮಾಜಿಕ ವೈಜ್ಞಾನಿಕ ಚಳವಳಿಗಳಿಂದ ಅವನು ಸದಾ ನಿರ್ಲಿಪ್ತನಾಗಿ ದೂರವಿರುತ್ತಿದ್ದ. ಕವಿಗೆ ಅವೆಲ್ಲ ಅಪ್ರಾಸಂಗಿಕ ಅಮುಖ್ಯ ಹೊರಗು-ಎಂದೇ ಅವನ ದೃಢನಿರ್ಧಾರ. ಹಾಗಾದರೆ ಕವಿ ಯಾವುದನ್ನು ಬಗೆಯಬೇಕು. ಯಾವುದರ ಧ್ಯಾನದಲ್ಲಿ ಮಗ್ನನಾಗಿರಬೇಕು? ಇದಕ್ಕೆ ಅವನ ಉತ್ತರ-ಸೌಂದರ್ಯ ಅವನ ಪ್ರಧಾನ ತತ್ತ್ವ ಎರಡು: ಸುಂದರ ವಸ್ತುವಿನಿಂದ ಸದಾ ಸಂತಸ; ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ. ಸೌಂದರ್ಯವನ್ನು ಕಂಡುಕೊಂಡು ಅದರ ಚಿಂತನೆಯಿಂದ ಸೌಖ್ಯ ಪಡೆಯಬೇಕಾದರೆ ಮನಸ್ಸಿಗಿಂತಲೂ ಹೆಚ್ಚಾಗಿ ಜ್ಞಾನೇಂದ್ರಿಯಗಳು ಕೆಲಸ ಮಾಡಬೇಕೆಂದು ಅವನ ಅಭಿಮತ. ಸಂವೇದನಾಪೂರಿತ ಜೀವನ ಬೇಕು, ಆಲೋಚನಾಮಯ ಜೀವನ ಬೇಡ ಎನ್ನುತ್ತಿದ್ದ, ಆತ.

 ಈ ದೃಷ್ಟಿ ಅಪೂರ್ಣವೆಂದು ಹೇಳಲೇಬೇಕಾಗಿಲ್ಲ. ಬರಬರುತ್ತ ಕೀಟ್ಸನ ಮನಸ್ಸು ಪ್ರಬುದ್ಧವಾಯಿತು. ತನ್ನ ಕಾವ್ಯಗಳ ದೊಡ್ಡ ಕೊರತೆ ಯಾವುದೆಂಬುದೂ ಅವನಿಗೆ ತೋಚುತ್ತ ಬಂತು. ಜೀವನದ ಇತರ ನಾನಾ ಮುಖಗಳ ಪರಿಚಯವಾದರೇ ಅದರ ಸತ್ಯಾಂಶದ ಇಣಿಕುನೋಟ ದೊರೆತೀತು ಎಂದು ಅವನು ಮನಗಂಡ. ಗ್ರಂಥಜ್ಞಾನ, ಪ್ರಪಂಚಜ್ಞಾನ ಎಷ್ಟು ಲಭ್ಯವಾದರೆ ಅಷ್ಟು ಒಳ್ಳೆಯದು ; ಆದ್ದರಿಂದ ಅವನ್ನು ಸಂಪಾದಿಸಲು ಹೆಣಗತಕ್ಕದ್ದು-ಎಂದು ಸಂಕಲ್ಪ ಮಾಡಿಕೊಂಡ. ಆತ ಮಿತ್ರರಿಗೂ ಸಹೋದರರಿಗೂ ಬರೆದ ಕಾಗದಗಳು ಉಳಿದುಬಂದಿದ್ದು ಉತ್ತಮ ಗದ್ಯಸಾಹಿತ್ಯವೆನಿಸಿವೆ. ಅವುಗಳಲ್ಲಿ ಮನೋದಾಢ್ರ್ಯ ವಿವೇಕ ವಚಕ್ಷಣೆ ಸಹಿಷ್ಣುತೆ ಸಹಾನುಭೂತಿ ಗಾಂಭೀರ್ಯ ಮುಂತಾದ ಗಂಡು ಗುಣಗಳು ಎದ್ದುಕಾಣುತ್ತವೆ; ಕಾವ್ಯಗಳಲ್ಲಿ ನಿಬಿಡವಾಗಿರುವ ರಾಗಾತಿರೇಕವಾಗಲಿ ಲಘುಕಲ್ಪನೆಯಾಗಲಿ ಅಲ್ಲಿ ತಲೆದೋರುವುದಿಲ್ಲ. ಕೀಟ್ಸನ ಕೆಲವು ಹೇಳಿಕೆಗಳಿಗೆ ಸಾಹಿತ್ಯ ವಿಮರ್ಶೆಯಲ್ಲಿ ಸೂತ್ರ ಸ್ಥಾನ ದೊರಕಿದೆ.          (ಎಸ್.ವಿ.ಆರ್.; ಎನ್.ಎಸ್.ಎಲ್.)

ಪ್ರಗಾಥಗಳು ಬಹು ಸ್ಪಷ್ಟವಾಗಿ ಕೀಟ್ಸ್‍ನ ಪ್ರತಿಭೆಯನ್ನು ಸಾರುತ್ತವೆ. ಮಾತಿನಲ್ಲಿ ಮರೆಯಲಾಗದ ಚಿತ್ರಗಳನ್ನು ಕೆತ್ತಬಲ್ಲವನು ಕೀಟ್ಸ್. ಛಂದಸ್ಸಿನ ಮೇಲೆ, ಭಾಷೆಯ ಮೇಲೆ, ಪದಗಳ ನಾದದ ಮೇಲೆ ಆತನಿಗಿರುವ ಪ್ರಭುತ್ವವನ್ನು ಇವು ಸಾರುತ್ತವೆ. ಯೌವನ, ಚೆಲುವು, ಪ್ರೇಮ ಎಲ್ಲ ಕ್ಷಣಿಕ ಎಂಬ ಕೊರಗು ಕವಿಯ ಮನಸ್ಸನ್ನು ಕಾಡುತ್ತಿದೆ. ಬದುಕಿನ ಎಲ್ಲ ಅನುಭವಗಳಲ್ಲಿ ಅನಿವಾರ್ಯವಾದ ದ್ವಿಮುಖತೆ (ಡ್ಯುಯಾಲಿಟಿ) ಯನ್ನು ಅವನು ಗುರುತಿಸುತ್ತಾನೆ. ಉದಾಹರಣೆ, `ಓಡ್ ಆನ್ ಎ ಗ್ರೀಷನ್ ಲಿಕ್ನ್' ನಲ್ಲಿ ಕಾಲ ಓಡುತ್ತಿದೆ, ಎಲ್ಲ ಕ್ಷಣಿಕ ಎಂಬ ನೋವಿದೆ. ಆದರೆ ಕಾಲದ ಅಸ್ತಿತ್ವದಲ್ಲಿ ಅನುಭವ ಸಾಧ್ಯ; ಅನುಭವ ಬೇಕೆಂದರೆ ಕಾಲದ ಓಟವನ್ನು ಸ್ವೀಕರಿಸಬೇಕು. ಒಂದು ವಿಶಿಷ್ಟವಾದ ಪ್ರಗಾಥ `ಟು ಆಟಮ್' ವಿಷಣ್ಣತೆ ಮತ್ತು ಸಂತೋಷ ಒಟ್ಟಿಗಿವೆ. ಬದುಕಿನ ಕ್ಷಣಭಂಗುರತೆ ಮತ್ತು ಅಮರತ್ವದ ನಮ್ಮ ಅಂತರ್ಬೋಧ ಇವುಗಳ ಕರ್ಷಣ ಕೀಟ್ಸ್‍ನ ಕಾವ್ಯದ ವಸ್ತು.

ಕೀಟ್ಸ್‍ನ ಪತ್ರಗಳು ಉಳಿದು ಬಂದಿವೆ. ಕಾವ್ಯವನ್ನು ಕುರಿತು, ಷೇಕ್ಸ್‍ಪಿಯರ್, ಮಿಲ್ಟನ್ ಮೊದಲಾದ ಕವಿಗಳನ್ನು ಕುರಿತು ಇಲ್ಲಿ ಅಪೂರ್ವ ಕೊಳಹುಗಳಿವೆ.        

     (ಎಲ್.ಎಸ್.ಎಸ್.)