ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೀಬಲ್, ಜಾನ್
ಕೀಬಲ್, ಜಾನ್
1792-1866. ಇಂಗ್ಲಿಷ್ ಕವಿ, ಕ್ರೈಸ್ತಗುರು. ಗ್ಲೌಸ್ಟರ್ ಷೈರ್‍ನ ಫೇರ್‍ಫರ್ಡ್‍ನಲ್ಲಿ ಜನಿಸಿದ. ಆಕ್ಸ್‍ಫರ್ಡಿನ ಕಾರ್‍ಪಸ್ ಕ್ರಿಸ್ಟಿ ಕಾಲೇಜಿಗೆ ಹೋಗುವ ಮುನ್ನ ಪಾದ್ರಿಯಾದ ತಂದೆಯ ಬಳಿಯೇ ವಿದ್ಯಾಭ್ಯಾಸ ಮಾಡಿದ. ಕಾಲೇಜಿನಲ್ಲಿ ಥಾಮಸ್ ಆರ್ನಲ್ಡ್ ಮತ್ತು ಜಾನ್ ಟೇಲರ್ ಕೋಲ್‍ರಿಜ್ ಈತನ ಸಹಪಾಠಿಗಳು. ಇವರೇ ಈತನ ಜೀವನ ಚರಿತ್ರೆಯನ್ನು ಬರೆದಿದ್ದಾರೆ. 1810 ರಲ್ಲಿ ಆಕ್ಸ್‍ಫರ್ಡಿನಲ್ಲಿ ಮೊದಲ ದರ್ಜೆಯ ಎರಡು ಆನರ್ಸ್ ಪದವಿಗಳನ್ನು ಪಡೆದ ಮೇಲೆ ಓರಿಯಲ್ ಕಾಲೇಜಿನಲ್ಲಿ ಕೀಬಲ್ ಫೆಲೊ ಆಗಿ ನೇಮಕಗೊಂಡ. ಈತನ ಜೀವಿತಾದರ್ಶವೆಲ್ಲ ಕ್ರೈಸ್ತಗುರುವಿನ ಕೆಲಸವಾಗಿತ್ತು. 1815ರಲ್ಲೀತ ತನ್ನ ತಂದೆಗೆ ಸಹಾಯಕನಾಗಿ ನೇಮಕಗೊಂಡ. ಏತನ್ಮಧ್ಯೆ, ಇ ಕ್ರಿಶ್ಚಿಯನ್ ಇಯರ್ (1827) ಎಂಬ ಪವಿತ್ರ ಗೀತೆಗಳನ್ನು ಬರೆದು ಪ್ರಕಟಿಸಿದ. ಈ ಗೀತೆಗಳು ಕೀಬಲಿಗೆ ಅಪಾರ ಕೀರ್ತಿಯನ್ನು ತಂದುವು. ಅಲ್ಲದೆ ಆಕ್ಸ್‍ಫರ್ಡ್‍ನಲ್ಲಿ (1831) ಕಾವ್ಯ ವಿಭಾಗದ ಮುಖ್ಯಸ್ಥನಾಗಿ ಈತ ನೇಮಕಗೊಂಡು ಆ ಪದವಿಯಲ್ಲಿ 1841ರವರೆಗೂ ಮುಂದುವರಿದ. 1833ರಲ್ಲಿ ಪ್ರಕಟವಾದ ಈತನ ಉಪದೇಶ ಭಾಷಣಗಳನ್ನೊಳಗೊಂಡ ನ್ಯಾಷನಲ್ ಅಪಾಸ್ಟಸಿ ಎಂಬ ಗ್ರಂಥ ಇಂಗ್ಲಿಷ್ ಚರ್ಚಿನ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಯಿತು. ತಂದೆಯ ಕಾಲಾನಂತರ ಈತ 1836ರಲ್ಲಿ ವಿಂಚೆಸ್ಟರ್ ಬಳಿಯಿರುವ ಹರ್‍ಸ್ಲೆಯ ಪಾದ್ರಿ ಪದವಿಯನ್ನು ಸ್ವೀಕರಿಸಿ ತನ್ನ ಜೀವಿತವನ್ನೆಲ್ಲ ಅಲ್ಲೇ ಕಳೆದ. 1846ರಲ್ಲಿ ಲೈರ ಇನೊಸೆಂಟಿಯಂ ಎಂಬ ಕವನ ಸಂಕಲನವನ್ನು ಪ್ರಕಟಿಸಿದ. ಈತನ ಮರಣಾನಂತರ ಲೆಟರ್ಸ್ ಆಫ್ ಸ್ಪಿರಿಚ್ಯುಯಲ್ ಕಾನ್ಸಲ್ ಮತ್ತು 12 ಸಂಪುಟಗಳ ಪ್ಯಾರಿಷ್ ಸರ್‍ಮನ್ಸ್ ಪ್ರಕಟಗೊಂಡುವು. 1869ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ಈತನ ಜ್ಞಾಪಕಾರ್ಥವಾಗಿ ಕೀಬಲ್ ಕಾಲೇಜನ್ನು ಸ್ಥಾಪಿಸಲಾಯಿತು. ಕೀಬಲ್ ಆಕ್ಸ್‍ಫರ್ಡಿನ ಕ್ರೈಸ್ರಗುರುಗಳಲ್ಲಿ ಋಷಿಯಂತೆ ಬಾಳಿದನಲ್ಲದೆ ಅಂದಿನ ಇಂಗ್ಲಿಷ್ ಜನಾಂಗಕ್ಕೆ ನಿಜವಾದ ಧರ್ಮಪ್ರವರ್ತಕನೆನಿಸಿದ್ದ.
*