ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಡುಜ್

ವಿಕಿಸೋರ್ಸ್ದಿಂದ

ಕುಂಡುಜ್ - ಪ್ರಾಚೀನ ಅಫ್ಘಾನಿಸ್ತಾನದ ಪ್ರಮುಖ ಕಲಾಕೇಂದ್ರ. ಟೊಖಾರಿಸ್ತಾನದ ರಾಜಧಾನಿಯಾಗಿತ್ತು. ಈಗ ಇದು ಒಂದು ಸಣ್ಣ ಗ್ರಾಮ. ಹಾಕಿನ್ ಎಂಬ ಪುರಾತತ್ವಜ್ಞ ಇಲ್ಲಿ ಅನೇಕ ಉತ್ಖನನಗಳನ್ನು ನಡೆಸಿ ಬೌದ್ಧಧರ್ಮಕ್ಕೆ ಸಂಬಂಧಿಸಿದ ಹಲವು ವಿಹಾರಗಳನ್ನು ಮತ್ತು ಸ್ತೂಪಗಳನ್ನು ಬೆಳಕಿಗೆ ತಂದ. ಇಲ್ಲಿಯ ಬೌದ್ಧ ವಿಹಾರಗಳಲ್ಲಿ ಭಾರತೀಯ ಮತ್ತು ಗ್ರೀಕ್ ಪ್ರಭಾವಗಳು ಸುಂದರವಾಗಿ ಮಿಳಿತವಾಗಿವೆ. ಇಲ್ಲಿಯ ಸ್ತಂಭಗಳು ತಕ್ಷಶಿಲೆಯಲ್ಲಿಯ ಕಂಬಗಳನ್ನು ವಿಶೇಷವಾಗಿ ಹೋಲುತ್ತವೆ. ಕುಷಾಣರ ಕಾಲದಲ್ಲಿ ಗಂಧಾರ ಶಿಲ್ಪಶೈಲಿ ಇಲ್ಲಿಯೂ ಅಭಿವೃದ್ಧಿ ಹೊಂದಿತು. ಇಲ್ಲಿಯ ಚತುರ್ಭುಜದ ಹೆರಾಕ್ಲಿಸ್-ಈಶ್ವರ ವಿಗ್ರಹದಲ್ಲಿ ಭಾರತೀಯ ಪ್ರಭಾವಗಳು ಚೆನ್ನಾಗಿ ಕಾಣುತ್ತವೆ. ಬೌದ್ಧ ಸ್ತೂಪದ ಸುತ್ತಲೂ ಉಪಯೋಗಿಸಿರುವ ಅಲಂಕಾರ ಪಟ್ಟಿಕೆಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದ ಕಥೆಗಳು ಶಿಲ್ಪತವಾಗಿವೆ. ಬೋಧಿ¸ತ್ತ್ವನ ವಿಗ್ರಹಗಳಲ್ಲಿ ಗ್ರೀಕ್ ಪ್ರಭಾವಗಳು ವಿಶೇಷವಾಗಿ ಕಂಡರೂ ಮುಖಭಾವದಲ್ಲಿ ಮಾತ್ರ ಭಾರತೀಯತೆ ಎದ್ದು ಕಾಣುವುದು ಇಲ್ಲಿಯ ವೈಶಿಷ್ಟ್ಯ. ಕಲ್ಲಿನ ಶಿಲ್ಪಗಳ ಜೊತೆಗೆ ಜೇಡಿಮಣ್ಣಿನ ಬೊಂಬೆಗಳೂ ಇಲ್ಲಿ ವಿಶೇಷವಾಗಿ ದೊರಕಿವೆ. ತಕ್ಷಶಿಲೆಯ ಕಲಾಕರರೇ ಇವನ್ನೂ ನಿರ್ಮಿಸಿದರೋ ಎನ್ನುವಷ್ಟು ಮಟ್ಟಿಗೆ ಇವುಗಳಲ್ಲಿ ಭಾರತೀಯತೆ ಕಾಣಬರುತ್ತದೆ. ಈ ಸಣ್ಣ ಬೊಂಬೆಗಳ ಕೇಶಾಲಂಕಾರ ಮತ್ತು ಆಭರಣಗಳು ವೈವಿಧ್ಯಮಪೂರ್ಣವೂ ಅಕರ್ಷಕವೂ ಆದ್ದು. ಪ್ರಾಚೀನ ಅಫ್ಘಾನಿಸ್ತಾನದಲ್ಲಿ ಭಾರತೀಯ ಕಲೆಯನ್ನು ಪೋಷಿಸಿದ ಕೇಂದ್ರಗಳಲ್ಲಿ ಕುಂಡುಜ್ó ಪ್ರಾಮುಖ್ಯ ಪಡೆದಿದೆ. (ಎ.ವಿ.ಎನ್.)